KSRTC ಹಾಗೂ KPTCL ನೌಕರರ ವೇತನ ಪರಿಷ್ಕರಣೆಗೆ ಸಿಎಂ ಸಮ್ಮತಿ

ಬೆಂಗಳೂರು: ಬಹುದಿನಗಳ ಬೇಡಿಕೆಯಂತೆ ರಾಜ್ಯ ರಸ್ತೆ ಸಾರಿಗೆ ನೌಕರರು(ಕೆಎಸ್‍ಆರ್ಟಿಸಿ) ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ವೇತನ ಪರಿಷ್ಕರಣೆಗೆ ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ.

ಗುರುವಾರದಿಂದಲೇ ಜಾರಿಯಾಗುವಂತೆ ಕೆಎಸ್‍ಆರ್ಟಿಸಿ ನೌಕರರ ಶೇ.15ರಷ್ಟು ಹಾಗೂ ಕೆಪಿಟಿಸಿಎಲ್ ನೌಕರರ ಶೇ.20ರಷ್ಟು ವೇತನವನ್ನು ಪರಿಷ್ಕರಣೆ ಮಾಡುವ ಮೂಲಕ ಎರಡೂ ಇಲಾಖೆಯ ನೌಕರರಿಗೆ ಯುಗಾದಿ ಹಬ್ಬದ ಉಡುಗೊರೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡುಮೂರು ವರ್ಷಗಳಿಂದ ಸಾರಿಗೆ ನೌಕರರು ತಮ್ಮ ವೇತನವನ್ನು ಪರಿಷ್ಕರಣೆ ಮಾಡಿಲ್ಲ ಎಂದು ಮನವಿ ಮಾಡಿಕೊಂಡಿದ್ದರು.

ಈ ಹಿನ್ನಲೆಯಲ್ಲಿ ನಿಗಮದ ಎಲ್ಲ ವ್ಯವಸ್ಥಾಪಕ ನಿರ್ದೇಶಕರು, ಮತ್ತಿತರ ಜೊತೆ ಸುದೀರ್ಘ ಚರ್ಚೆ ನಡೆಸಿ ಅಂತಿಮವಾಗಿ ಸಾರಿಗೆ ನೌಕರರ ಶೇ.15ರಷ್ಟು ವೇತನ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಹೊಸ ಆದೇಶ ಗುರುವಾರದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು. ಇನ್ನು ಕೆಪಿಟಿಸಿಎಲ್ ನೌಕರರ ವೇತನವನ್ನು ಪರಿಷ್ಕರಣೆ ಮಾಡಲಾಗಿದೆ. ಶೇ.20ರಷ್ಟು ಪರಿಷ್ಕರಣೆ ಮಾಡಲಾಗಿದ್ದು, ಪ್ರತಿಭಟನೆಯನ್ನು ನಡೆಸಬಾರದು ಎಂದು ಮನವಿ ಮಾಡಿಕೊಂಡರು.

ಮುಷ್ಕರ ವಾಪಸ್ ?
ಇನ್ನೂ ರಾಜ್ಯ ಸಾರಿಗೆ ಹಾಗೂ ಕೆಪಿಟಿಸಿಎಲ್ ಮತ್ತು ಎಸ್ಕಾಂ ನೌಕರರು ವೇತನ ಹೆಚ್ಚಳ ಮತ್ತು ಇನ್ನಿತರೆ ಬೇಡಿಕೆ ಇಡೇರಿಸುವಂತೆ ಒತ್ತಾಯಿಸಿ ಮುಷ್ಕರ ಮಾಡಲು ನಿರ್ಧರಿಸಿದ್ದವು. ಆದರೆ ಸರ್ಕಾರ ಮುಷ್ಕರ ಆರಂಭಕ್ಕೂ ಮುನ್ನವೇ ನೌಕರರ ಬೇಡಿಕೆ ಈಡೇರಿಸಿ ಆದೇಶ ಹೊರಡಿಸಿದೆ.

ಹೀಗಾಗಿ ಮಾರ್ಚ್ 21ರಿಂದ ಮುಷ್ಕರ ಮಾಡಲು ಸಾರಿಗೆ ನೌಕರರು ಮುಂದಾಗಿದ್ದರು, ಇದೇ ಮಾರ್ಚ್ 16ರಿಂದ ಕೆಪಿಟಿಸಿಎಲ್ ಮತ್ತು ಎಸ್ಕಾಂ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ನಿರ್ಧರಿಸಿದ್ದವು. ಇದೀಗ ಸರ್ಕಾರದ ಆದೇಶ ಹೊರ ಬಿದ್ದಿದ್ದು, ತಮ್ಮ ಮುಷ್ಕರವನ್ನ ಮಾಡುತ್ತಾರಾ ಇಲ್ಲ ವಾಪಸ್ ಪಡೆಯುತ್ತಾರಾ ಎನ್ನುವ ಅನುಮಾನ ಕಾಡಿದೆ. ಈ ಬಗ್ಗೆ ಯಾವುದೇ ಸಂಘಟನೆಗಳು ಮುಷ್ಕರ ಹಿಂತೆಗೆತದ ಬಗ್ಗೆ ಸ್ಪಷ್ಟಪಡಿಸಿಲ್ಲ.

ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ನೌಕರರ ಸಂಘದ ಜೊತೆಗೆ ಸರ್ಕಾರ ಸರಣಿ ಮಾತುಕತೆ ನಡೆಸಿತ್ತು. ನೌಕರರ ಬೇಡಿಕೆ ಹಿನ್ನೆಲೆಯಲ್ಲಿ ಶೇ. 10 ರಷ್ಟು ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಭರವಸೆ ಕೊಟ್ಟಿದ್ದರು. ಆದರೆ ಇದಕ್ಕೆ ಸಾರಿಗೆ ನೌಕರರು ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಶೇ.15 ರಷ್ಟು ಏರಿಕೆ ಮಾಡಲಾಗಿದೆ.

ಸಾರಿಗೆ ನೌಕರರಿಗೆ ಶೇ.14ರಷ್ಟು ವೇತನ ಹೆಚ್ಚಿಸುವ ರಾಜ್ಯ ಸರ್ಕಾರದ ಭರವಸೆಯನ್ನು ಸಾರಿಗೆ ಸಂಘಟನೆಗಳ ಮುಖಂಡರು ತಿರಸ್ಕರಿಸಿದ್ದು, ಶೇ.20ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದರು.

2ನೇ ಸಭೆಯೂ ವಿಫಲವಾದ ಕಾರಣ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾಗಿದ್ದು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಘಗಳು ಮಾ.21ರವರೆಗೆ ಸರ್ಕಾರಕ್ಕೆ ಗಡುವು ನೀಡಿತ್ತು.

ಮಾರ್ಚ್ 8 ರ ಸಭೆಯಲ್ಲಿ ಸಾರಿಗೆ ಸಚಿವರು ಶೇಕಡಾ 8-10 ರಷ್ಟು ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದ್ದರು, ಕೆಎಸ್‍ಆರ್ಟಿಸಿ ಎಂಡಿ ಶೇಕಡಾ 10-14 ರಷ್ಟು ಹೆಚ್ಚಳ ಭರವಸೆ ನೀಡಿದರು. “ನಮ್ಮ ಆರಂಭಿಕ ಬೇಡಿಕೆಯು ಕನಿಷ್ಟ 25 ಶೇಕಡಾ ಹೆಚ್ಚಳವಾಗಿದ್ದರೂ, ಅದನ್ನು ಶೇಕಡಾ 20 ಕ್ಕೆ ಇಳಿಸಿದ್ದೇವೆ. ಆದರೆ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರವು ಇನ್ನೂ ಆರ್ಥಿಕ ಚೇತರಿಕೆಯ ಹಂತದಲ್ಲಿದೆ ಎಂದು ಎಂಡಿ ಹೇಳಿದರು.

ಇದನ್ನೂ ಓದಿ ಕೆಪಿಟಿಸಿಎಲ್‌ ನೌಕರರು, ಅಧಿಕಾರಿಗಳ ವೇತನ ಶೇ 20ರಷ್ಟು ಪರಿಷ್ಕರಣೆಗೆ ಸರ್ಕಾರ ಒಪ್ಪಿಗೆ

ಆದರೆ, ಸರ್ಕಾರವು ಸರ್ಕಾರಿ ನೌಕರರಿಗೆ ಶೇ 17 ಮತ್ತು ಕೆಪಿಟಿಸಿಎಲ್ ಕಾರ್ಮಿಕರಿಗೆ ಶೇ 20 ರಷ್ಟು ಮಧ್ಯಂತರ ಪರಿಹಾರವನ್ನು ನೀಡಿದೆ ಹೀಗಾಗಿ ನಮ್ಮ ವೇತನವನ್ನು ಶೇ.20ರಷ್ಟು ಹೆಚ್ಚಳ ಮಾಡಬೇಕೆಂದು ಸಾರಿಗೆ ನೌಕರರ ಸಂಘಟನೆ ಪಟ್ಟು ಹಿಡಿದಿವೆ.

Donate Janashakthi Media

Leave a Reply

Your email address will not be published. Required fields are marked *