ಹವಾಮಾನದ ತಾಪಮಾನ ಹಾಗೂ ಅಸಮಾನತೆ

ಭೂಮಿಯ ತಾಪಮಾನ ಏರುತ್ತಿದೆ. ಅದನ್ನು ನಿಯಂತ್ರಿಸಬೇಕು ಅನ್ನುವುದು ಜಗತ್ತಿನ ಎಲ್ಲರ ಕಾಳಜಿ. ಅದಕ್ಕೆ ಫಾಸಿಲ್ ಇಂಧನ ಬಳಕೆ ಬಹುಮಟ್ಟಿಗೆ ಕಾರಣ ಅನ್ನುವುದು ಬಹುಮಟ್ಟಿಗೆ ಒಪ್ಪಿತವಾದ ವಿಷಯ. ಆದರೆ ಅದರ ಬಳಕೆಯನ್ನು ನಿಲ್ಲಿಸುವುದಿರಲಿ ಕಡಿಮೆ ಮಾಡುವುದೂ ಕಷ್ಟದ ಕೆಲಸವಾಗಿದೆ. ಆದರೂ ಎಲ್ಲಾ ದೇಶಗಳು ಇದನ್ನು ಕಡಿಮೆ ಮಾಡಲು ಸಭೆ ಸೇರುತ್ತಲೇ ಇದ್ದಾರೆ. ಅಂತಹ 29 ಸಭೆಗಳು ಈಗ ಮುಗಿದಿವೆ. ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇದ್ದಾರೆ. ಭೂಮಿಯ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ಸಿಗಿಂತ ಹೆಚ್ಚಾಗಲೂ ಬಿಡುವುದಿಲ್ಲ ಅಂತ ಹೇಳುತ್ತಲೇ ಇದ್ದಾರೆ. ಪ್ರತಿವರ್ಷ ಸುಮಾರು 40 ಶತಕೋಟಿ ಟನ್ ಸಿಒಟು ಅನಿಲ ವಾಯುಮಂಡಲವನ್ನು ಸೇರುತ್ತಲೇ ಇದೆ. ಕ್ರಮೇಣ ಇಳಿಸುತ್ತಾ ಸಾಧ್ಯವಾದರೆ ಸೊನ್ನೆಗೆ ತರಬೇಕು ಎನ್ನುವುದು ಕೇವಲ ಘೋಷಣೆ. ಅದಕ್ಕೆ ಯಾರೂ ಬದ್ಧರಾಗಿಲ್ಲ. ಅದು ಆದ್ಯತೆಯ ವಿಷಯವೂ ಆಗಿಲ್ಲ. ಅದರಿಂದ ಬರುವ ಆರ್ಥಿಕ ಲಾಭವನ್ನು ದೋಚಿಕೊಳ್ಳಲು ಹಲವು ದೇಶಗಳು ತುದಿಗಾಲಿನಲ್ಲಿ ಕಾದು ನಿಂತಿವೆ. ಟ್ರಂಪ್ ಅದನ್ನು ಸ್ಪಷ್ಟವಾಗಿ ಹೇಳಿಯಾಗಿದೆ.

ಟಿ.ಎಸ್.ವೇಣುಗೋಪಾಲ್

ಭೂಮಿಯ ತಾಪಮಾನ ಏರುತ್ತಿದೆ. ಹವಾಮಾನದಲ್ಲಿ ಇಂಗಾಲದ ಅನಿಲದ ಪ್ರಮಾಣ ಹೆಚ್ಚಿದಷ್ಟು ತಾಪಮಾನ ಕೂಡ ಹೆಚ್ಚುತ್ತದೆ. ಹವಾಮಾನವನ್ನು ಕೆಡಿಸುವ ಕೆಲಸ ಕೈಗಾರಿಕೀಕರಣದ ಜೊತೆಗೆ ಪ್ರಾರಂಭವಾಯಿತು. ಕೈಗಾರಿಕೀರಣಕ್ಕಿಂತ ಹಿಂದಿನ ಅವಧಿಯಲ್ಲಿ (ಸಾಮಾನ್ಯವಾಗಿ 1850-1900ರವರೆಗೆ ಅಂತ ಭಾವಿಸಲಾಗುತ್ತದೆ) ಸರಾಸರಿ ಜಾಗತಿಕ ತಾಪಮಾನ ಸುಮಾರು 13.7 ಡಿಗ್ರಿ ಸೆಲ್ಸಿಯಸ್ ಇತ್ತು ಎನ್ನುವ ಅಂದಾಜಿದೆ. ಅದಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾದರೆ ಪರವಾಗಿಲ್ಲ. 2.0ವರೆಗೂ ಕಷ್ಟಪಟ್ಟು ನಿಭಾಯಿಸಬಹುದು. ಅದಕ್ಕಿಂತ ಹೆಚ್ಚಬಾರದು ಎಂದು 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಎಲ್ಲಾ ಸರ್ಕಾರಗಳೂ ಒಪ್ಪಿಕೊಂಡಿವೆ. ತಾಪಮಾನವನ್ನು ನಿಯಂತ್ರಿಸಬೇಕಾದರೆ ಹೊರಚೆಲ್ಲುವ ಸಿಒ2 ಪ್ರಮಾಣವನ್ನು ನಿಯಂತ್ರಿಸಬೇಕು. ಈಗ ಸಧ್ಯಕ್ಕೆ 40 ಶತಕೋಟಿ ಟನ್ ಇಂಗಾಲದ ಅನಿಲವನ್ನು ಪ್ರತಿವರ್ಷ ಪ್ರಕೃತ್ತಿಗೆ ಸೇರಿಸುತ್ತಿದ್ದೇವೆ. ಇದು ಕ್ರಮೇಣ ಕಡಿಮೆಯಾಗುತ್ತಾ 2070ರ ವೇಳೆಗೆ ಸೊನ್ನೆಗೆ ಬರಬೇಕು. ಇದನ್ನು ನಿರ್ವಹಿಸಲು ಕಾರ್ಬನ್ ಬಜೆಟ್ಟನ್ನು ತಯಾರಿಸಲಾಗುತ್ತದೆ. ಅಂದರೆ ಪ್ರತಿವರ್ಷ ಬಳಸಿದ ಇಂಗಾಲದ ಅನಿಲದ ಪ್ರಮಾಣವನ್ನು ಕಳೆದು ನಾವು ಬಳಸಿಕೊಳ್ಳಲು ಉಳಿದಿರುವ ಇಂಗಾಲದ ಪ್ರಮಾಣವನ್ನು ಲೆಕ್ಕಹಾಕಲಾಗುತ್ತದೆ.

ನಾವು ವಿಸರ್ಜಿಸುತ್ತಿರುವ ಸಿಒ2 ಪ್ರಮಾಣಕ್ಕೂ ಹಾಗೂ ಜಾಗತಿಕ ತಾಪಮಾನಕ್ಕೂ ನೇರವಾದ ಸಂಬಂಧವಿದೆ. ಹಾಗಾಗಿ ವಿಸರ್ಜಿಸುವ ಕಾರ್ಬನ್ ಅನಿಲದ ಪ್ರಮಾಣವನ್ನು ಆಧರಿಸಿ ತಾಪಮಾನದ ಏರಿಕೆಯ ಪ್ರಮಾಣವನ್ನು ಲೆಕ್ಕ ಹಾಕಬಹುದು. ಅಂದರೆ ನಾವು ಜಾಗತಿಕ ತಾಪಮಾನವನ್ನು ಇನ್ನೂ 1.5 ಸೆಲ್ಸಿಯಸ್ಸಿಗಿಂತ ಹೆಚ್ಚದಂತೆ ನೋಡಿಕೊಳ್ಳಬೇಕು ಅಂತಾದರೆ ಎಷ್ಟು ಸಿಒ2 ಹೊರಹಾಕಬಹುದು ಅನ್ನುವುದನ್ನು ಲೆಕ್ಕಹಾಕಬಹುದು. ಸಧ್ಯದ ಒಂದು ಅಂದಾಜಿನ ಪ್ರಕಾರ 1000 ಜಿಗಾಟನ್ ಇಂಗಾಲದ ಅನಿಲ ಪರಿಸರಕ್ಕೆ ಸೇರ್ಪಡೆಯಾದರೆ 0.45 ಡಿಗ್ರಿ ಸೆಲ್ಸಿಯಸ್ ಅಷ್ಟು ತಾಪಮಾನ ಏರುತ್ತದೆ. ಹಾಗಾಗಿ 1.5 ಡಿಗ್ರಿ ಸೆಲ್ಸಿಯಸ್ಸಿಗಿಂತ ಹೆಚ್ಚಬಾರದು ಅಂತಾದರೆ ಸಿಒಟು ಏರಿಕೆಯ ಪ್ರಮಾಣ ಪ್ರತಿವರ್ಷ 8% ಕಡಿಮೆಯಾಗುತ್ತಾ ಹೋಗಬೇಕು. ಆದರೆ ಪ್ಯಾರಿಸ್ ಒಪ್ಪಂದವಾದ 2015ರ ನಂತರ ಅದರ ಏರಿಕೆಯ ದರ ಪ್ರತಿವರ್ಷ ಹಿಂದಿನ ವರ್ಷಕ್ಕಿಂತ ಶೇಕಡ 0.8%ರಷ್ಟು ಹೆಚ್ಚುತ್ತಾ ಹೋಗುತ್ತಿದೆ.

ಇಂಗಾಲದ ವಿಸರ್ಜನೆಯ ಪ್ರಮಾಣ ದೇಶದಿಂದ ದೇಶಕ್ಕೆ ಭಿನ್ನವಾಗಿದೆ. ಹಾಗೂ ದೇಶದೊಳಗೂ ವಿಭಿನ್ನ ಗುಂಪುಗಳ ನಡುವೆ ವ್ಯತ್ಯಾವಿದೆ. ಇಂಗಾಲವನ್ನು ಹೊರಹಾಕುವುದರಲ್ಲಿ ಶ್ರೀಮಂತ ರಾಷ್ಟ್ರಗಳದ್ದು ಸಿಂಹಪಾಲು. ಅದರಲ್ಲೂ ಅತಿ ಶ್ರೀಮಂತ 10% ಜನ 50% ಅಷ್ಟು ಇಂಗಾಲವನ್ನು ಪರಿಸರಕ್ಕೆ ಸೇರಿಸುತ್ತಿದ್ದಾರೆ. ನಾವು ಪ್ರತಿಯೊಬ್ಬರೂ ವರ್ಷಕ್ಕೆ ಎಷ್ಟು ಕಾರ್ಬನ್ ವಾತಾವರಣಕ್ಕೆ ಸೇರಿಸುತ್ತಿದ್ದೇವೆ ಅನ್ನುವುದು ಕಾರ್ಬನ್ ಫುಟ್ ಪ್ರಿಂಟ್ ಅಥವಾ ಇಂಗಾಲದ ಹೆಜ್ಜ್ಚೆ ಗುರುತು ಅಂತ ಕರೆಯಲಾಗುತ್ತದೆ. ಜಾಗತಿಕವಾಗಿ ಆ ಪ್ರಮಾಣ 4.5 ಟನ್ ಇದೆ. ಪ್ರತಿ ಅಮೇರಿಕನ್ 16 ಟನ್ ಕಾರ್ಬನ್‌ಅನ್ನು ವಾಯುಮಂಡಲಕ್ಕೆ ಸೇರಿಸುತ್ತಿರುತ್ತಾನೆ. ಭಾರತೀಯನ ಪಾಲು 1.8 ಟನ್ ಆಗುತ್ತದೆ.

ಇದನ್ನೂ ಓದಿ : ಅಂಬೇಡ್ಕರ್ ಅವರಿಗೆ “ಅಂಬೇಡ್ಕರ್” ಎಂಬ ವಾಸ್ತವವೇ ಉತ್ತರ….. ಪುರಾಣ ಹಿನ್ನೆಲೆಯ “ದೇವರು ” ಅಲ್ಲ…..!

ಇಂಗಾಲದ ಅನಿಲದ ಉತ್ಪಾದನೆಯಲ್ಲಿ ಬಡದೇಶಗಳ ಪಾಲು ಕಡಿಮೆ ಇದ್ದರೂ ಅದರ ಪರಿಣಾಮವನ್ನು ಬಡದೇಶಗಳು, ಅದರಲ್ಲೂ ಬಡಜನ ಅತಿ ಹೆಚ್ಚು ಅನುಭವಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿನ ಇತ್ತೀಚಿನ ಪ್ರವಾಹದಲ್ಲಿ 15,000 ಜನ ಸತ್ತಿದ್ದಾರೆ. 90 ಲಕ್ಷಕ್ಕಿಂತ ಹೆಚ್ಚು ಜನ ನಿರ್ಗತಿಕರಾಗಿದ್ದಾರೆ. ಪೂರ್ವಆಫ್ರಿಕಾದಲ್ಲಿ ತೀವ್ರ ಕ್ಷಾಮದಿಂದ ಜನ ಬಡತನದಲ್ಲಿ ನರಳುತ್ತಿರುವುದನ್ನು ಗಮನಿಸಿದ್ದೇವೆ. ನಮಗೆ ಈಗ ಜಾಗತಿಕ ತಾಪಮಾನದ ಕಾರಣಗಳೇನು, ಗರಿಷ್ಠ ತಾಪಮಾನ ಎಷ್ಟಿರಬೇಕು, ತಾಪಮಾನವನ್ನು ನಿಯಂತ್ರಿಸುವುದು ಹೇಗೆ ಇವೆಲ್ಲಾ ಸುಮಾರಾಗಿ ಸ್ಪಷ್ಟವಾಗಿವೆ. ಹಾಗಾಗಿ ಸಿಒಟು ವಿಸರ್ಜನೆಯನ್ನು ಮಿತಗೊಳಿಸುವುದು ಹೇಗೆ ಅನ್ನುವುದು ಈಗ ಪ್ರಶ್ನೆಯಲ್ಲ, ಅದನ್ನು ಸಾಧಿಸುವುದಕ್ಕೆ ಹಣವನ್ನು ಹೇಗೆ ಒಟ್ಟು ಮಾಡುವುದು ಮತ್ತು ಹೊರೆಯನ್ನು ಹೇಗೆ ಹಂಚಿಕೊಳ್ಳುವುದು ಎಂಬುದು ನಾವು ಪರಿಹರಿಸಿಕೊಳ್ಳಬೇಕಾದ ಪ್ರಶ್ನೆ.

ಜಾಗತಿಕವಾಗಿ ಹವಾಮಾನದ ವೈಪರೀತ್ಯವನ್ನು ನಿಭಾಯಿಸುವುದಕ್ಕೆ 4.2-5.7 ಟ್ರಿಲಿಯನ್ ಡಾಲರ್ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ ಹಿಂದುಳಿದ ರಾಷ್ಟ್ರಗಳಿಗೆ 1.9 ರಿಂದ 2.0 ಟ್ರಿಲಿಯನ್ ಅಷ್ಟು ವಾರ್ಷಿಕವಾಗಿ ಬೇಕಾಗಬಹುದು. ಅದನ್ನು ಹೊಂದಿಸಿಕೊಳ್ಳುವುದಕ್ಕೆ ಅವುಗಳಿಗೆ ಸಾಧ್ಯವಿಲ್ಲ. ವಿಪರೀತ ಸಾಲ, ಆರ್ಥಿಕ ಬಿಕ್ಕಟ್ಟು ಇತ್ಯಾದಿ ಕಾರಣಗಳಿಂದ ಅವುಗಳಿಗೆ ತಮ್ಮ ಆರ್ಥಿಕತೆಯನ್ನು ನಿಭಾಯಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕನಿಷ್ಠ ಒಂದು ಟ್ರಿಲಿಯನ್ ಡಾಲರ್‌ನಷ್ಟಾದರೂ ನೆರವನ್ನು ಪರಿಸರವನ್ನು ಹಾಳುಗೆಡವಿರುವ ಶ್ರೀಮಂತ ದೇಶಗಳು ಒದಗಿಸಬೇಕು. ಆದರೆ 29ನೇ ಜಾಗತಿಕ ಶೃಂಗ ಸಭೆಯಲ್ಲಿ ಮುಂದುವರಿದ ರಾಷ್ಟ್ರಗಳು ತುಂಬಾ ಚೌಕಾಸಿ ಮಾಡಿದವು. 200 ಬಿಲಿಯನ್ ಡಾಲರ್ ಕೊಡುವುದಾಗಿ ಚರ್ಚೆ ಆರಂಭಿಸಿದವು. ಹಿಂದುಳಿದ ರಾಷ್ಟ್ರಗಳು ಎಷ್ಟೇ ಪಟ್ಟು ಹಿಡಿದರೂ ಶ್ರೀಮಂತ ದೇಶಗಳು 300 ಬಿಲಿಯನ್ ಡಾಲರಿಗಿಂತ ಹೆಚ್ಚು ಕೊಡಲು ತಯಾರಿರಲಿಲ್ಲ. ಹಾಗಾಗಿ ಹಿಂದುಳಿದ ರಾಷ್ಟ್ರಗಳಿಗೆ ಇಡೀ ಸಭೆ ಒಂದು ಜೋಕಾಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ.

ಮುಂದುವರಿದ ರಾಷ್ಟ್ರಗಳು ನೀಡುತ್ತಿರುವ ಹಣ ತೀರಾ ಕಡಿಮೆ ಅನ್ನುವುದು ತುಂಬಾ ಸ್ಪಷ್ಟ. 2020ರಲ್ಲಿ ಕೊಡಲು ಒಪ್ಪಿಕೊಂಡಿದ್ದು 100 ಬಿಲಿಯನ್ ಡಾಲರ್. ಹಣದುಬ್ಬರದ ದರವನ್ನು ಕೇವಲ 4% ಅಂತ ಲೆಕ್ಕ ಹಿಡಿದರೂ 2035ರ ವೇಳೆಗೆ ಅದು 180 ಬಿಲಿಯನ್ ಡಾಲರ್ ಆಗುತ್ತದೆ. ಅದು ಅವರು ಹೇಳಿಕೊಳ್ಳುತ್ತಿರುವಂತೆ ಮೂರು ಪಟ್ಟು ಇರಲಿ, ದುಪ್ಪಟ್ಟು ಕೂಡ ಅಲ್ಲ. ಫಾಸಿಲ್ ಇಂಧನದ ಬಗ್ಗೆ ಬೊಬ್ಬೆ ಹಾಕುತ್ತಿದ್ದ ಶ್ರೀಮಂತ ರಾಷ್ಟ್ರಗಳು ಈಗ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ.

ಈಗ ಮುಂದುವರಿದ ದೇಶಗಳಿಗೆ ಫಾಸಿಲ್ ಇಂಧನದ ಬಳಕೆಯನ್ನು ನಿಲ್ಲಿಸುವಲ್ಲಿ ಯಾವ ಉತ್ಸಾಹವೂ ಇಲ್ಲ. ಇಂದು ಅಮೇರಿಕೆ ಫಾಸಿಲ್ ಇಂಧನದ ಅತಿ ದೊಡ್ಡ ಉತ್ಪಾದಕ ಹಾಗೂ ರಫ್ತು ದೇಶವಾಗಿ ರೂಪುಗೊಳ್ಳುತ್ತಿದೆ. ಸೌದಿ ಅರೇಬಿಯ ಹಾಗೂ ಅಜೆರ್ಬೈಜಾನ್ ಅಂತಹ ತೈಲ ರಫ್ತು ದೇಶಗಳು ಫಾಸಿಲ್ ಇಂಧನವನ್ನು ಕಡಿಮೆ ಮಾಡುವ ಒಪ್ಪಂದದಿಂದ ಬಕುವಿನಲ್ಲಿ ಹಿಂದೆ ಸರಿಯುತ್ತಾರೆ ಅನ್ನುವ ಅನುಮಾನ ಇತ್ತು. ಆ ಅನುಮಾನ ಇನ್ನಷ್ಟು ಹೆಚ್ಚಾಗಿದೆ. ಅಮೇರಿಕೆಯಲ್ಲಿ ಟ್ರಂಪ್ ಬಂದ ಮೇಲಂತೂ ಪರಿಸರ ಸಂರಕ್ಷಣೆಯ ಒಪ್ಪಂದದಿಂದ ಹಿಂದಕ್ಕೆ ಸರಿಯುವ ಪ್ರಕ್ರಿಯೆ ಇನ್ನಷ್ಟು ತ್ವರಿತಗೊಳ್ಳಬಹುದು.

ನಿಜ ಜಗತ್ತು ಬದುಕುವುದಕ್ಕೆ ಯೋಗ್ಯವಾಗಬೇಕಾದರೆ ನಮ್ಮೆಲ್ಲರ ಉತ್ಪಾದನೆಯ ಹಾಗೂ ಬಳಕೆಯ ಶೈಲಿ ಬದಲಾಗಬೇಕು. ಆದರೆ ಶ್ರೀಮಂತರು, ಶ್ರೀಮಂತ ದೇಶಗಳು ಹೆಚ್ಚಿನ ಹೊರೆ ಹೊರಲು ತಯಾರಿಲ್ಲದೇ ಹೋದರೆ, ಬಡವರು ಹಾಗೂ ಬಡರಾಷ್ಟ್ರಗಳು ಅಂತಹ ಚಿಂತನೆಗೆ ಒಪ್ಪುವುದು ಕಷ್ಟ. ಶ್ರೀಮಂತರು ಖಾಸಗಿ ಜೆಟ್‌ನಲ್ಲಿ ಒಡಾಡುತ್ತಿರುವಾಗ ನಡೆದು ಹೋಗುತ್ತಿರುವವರಿಗೆ ಇಂಧನ ಉಳಿಸಿ ಅನ್ನುವುದಾದರೂ ಹೇಗೆ?

ಪಿಕೆಟ್ಟಿಯವರು ಹೇಳುವಂತೆ ಪರಿಸರದ ಸಮಸ್ಯೆ ವಿವಿಧ ಸಾಮಾಜಿಕ ಆರ್ಥಿಕ ವರ್ಗಗಳ ನಡುವಿನ ಅಸಮಾನತೆಯ ಪ್ರಶ್ನೆಯೊಂದಿಗೆ ತೆಕ್ಕೆ ಹಾಕಿಕೊಂಡಿದೆ. ಅದನ್ನು ಗಮನಿಸದೆ ಪರಿಸರದ ಸಮಸ್ಯೆಯನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ. ಅದು ಸಾಧ್ಯವಾಗದೇ ಹೋದರೆ ಬಹುಸಂಖ್ಯಾತ ಜನರನ್ನು ಪರಿಸರ ಸಂರಕ್ಷಣೆ ಪರವಾದ ಒಂದು ಪ್ರಬಲ ಕ್ರಿಯೆಗೆ ಒಗ್ಗೂಡಿಸುವುದಕ್ಕೆ ಸಾಧ್ಯವಿಲ್ಲ. ಪರಿಸರ ಅಂದೋಲನದ ಒಂದು ದೊಡ್ಡ ನ್ಯೂನತೆಯೆಂದರೆ ಅದು ವರ್ಗದ ಆಯಾಮವನ್ನು ಹಾಗೂ ಸಾಮಾಜಿಕ ಅಸಮಾನತೆಯನ್ನು ನಿರ್ಲಕ್ಷಿಸಿದೆ. ಯಾಕೆಂದರೆ ಬಡವರ ವರಮಾನದ ಬಹುಭಾಗ ಇಂಧನ, ಆಹಾರ, ವಸತಿ ಇತ್ಯಾದಿ ಅವಶ್ಯಕತೆಗಳಿಗೆ ಖರ್ಚಾಗುತ್ತಿರುತ್ತದೆ. ಅವರು ಅದನ್ನು ಕನಿಷ್ಠ ಪ್ರಮಾಣದಲ್ಲಿ ಬಳಸುತ್ತಿರುತ್ತಾರೆ. ಅತಿ ಅವಶ್ಯಕವಾದ ಕನಿಷ್ಠ ಇಂಧನ ಬಳಕೆಯಲ್ಲೂ ಕಡಿತ ಮಾಡಬೇಕೆಂದರೆ ಅವರಿಂದ ವಿರೋಧ ಬರುವುದು ಸ್ವಾಭಾವಿಕ. ನಾವು ಐಷಾರಾಮಿ ಜೀವನ ನಡೆಸುತ್ತಿರುವ ಜನರನ್ನು ಮುಟ್ಟದೆ ಸಾಮಾನ್ಯ ಜನರನ್ನು ಪ್ರಶ್ನಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ಪಿಕೆಟ್ಟಿಯವರು ಪ್ರಗತಿಪರ ಕಾರ್ಬನ್ ತೆರಿಗೆಯನ್ನು ಸೂಚಿಸುತ್ತಾರೆ. ಜೀವನಾವಶ್ಯಕತೆಯನ್ನು ಬಿಟ್ಟು ಹೆಚ್ಚೆಚ್ಚು ಹವಾಮಾನ ಕೆಡಿಸುತ್ತಿರುವ ಚಟುವಟಿಕೆಗಳಿಗೆ ಅವು ಹೊರ ಹಾಕುತ್ತಿರುವ ಸಿಒ2 ಪ್ರಮಾಣವನ್ನು ಆಧರಿಸಿ ಹೆಚ್ಚೆಚ್ಚು ತೆರಿಗೆಯನ್ನು ವಿಧಿಸುತ್ತಾ ಹೋಗಬೇಕೆನ್ನುವ ಥಾಮಸ್ ಪಿಕೆಟ್ಟಿ ಹಾಗೂ ಗೆಳೆಯರ ಸಲಹೆ ಚಿಂತನೆಗೆ ಯೋಗ್ಯವಾಗಿದೆ. ಮೇಲಿನ 10% ಜನ ಪರಿಸರಕ್ಕೆ ಸೇರಿಸುತ್ತಿರುವ ಸಿಒ2 ಪ್ರಮಾಣದಲ್ಲಿ ಕನಿಷ್ಠ ಶೇಕಡ 30ರಷ್ಟಾದರೂ ಕಡಿತ ಸಾಧ್ಯವಾಗಬೇಕು. ಅದಾಗದೆ ಶೂನ್ಯ ಸಿಒ2 ವಿಸರ್ಜನೆಯ ಮಾತು ಕೇವಲ ಘೋಷಣೆಯಾಗುತ್ತದೆ.

ಇದನ್ನೂ ನೋಡಿ : ಪರಿಸರ ಅರಿವು ಅಭಿಯಾನ ಉಪನ್ಯಾಸ|ಹವಾಮಾನ ಬದಲಾವಣೆ : ಕೃಷಿ ಮತ್ತು ಆಹಾರ ಭದ್ರತೆ Janashakthi Media

Donate Janashakthi Media

Leave a Reply

Your email address will not be published. Required fields are marked *