12ನೇ ತರಗತಿ ಪಠ್ಯ : ಮಹಾತ್ಮ ಗಾಂಧಿ, ಹಿಂದೂ-ಮುಸ್ಲಿಂ ಏಕತೆ, ಆರ್‌ಎಸ್‌ಎಸ್‌ ನಿಷೇಧ ವಿಚಾರ ಕೈಬಿಟ್ಟ ಎನ್‌ಸಿಇಆರ್‌ಟಿ

ವದೆಹಲಿ : ನೂತನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ಮಹಾತ್ಮ ಗಾಂಧಿ, ಹಿಂದೂ-ಮುಸ್ಲಿಂ ಏಕತೆ, ಆರ್‌ಎಸ್‌ಎಸ್‌ ನಿಷೇಧ ಸೇರಿದಂತೆ ಹಲವು ವಿಷಯಗಳ ಕುರಿತ ಭಾಗಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕೈಬಿಟ್ಟಿದೆ.

‘ಗಾಂಧಿ ಅವರ ಹತ್ಯೆಯು ದೇಶದ ಕೋಮು ಸಾಮರಸ್ಯದ ಮೇಲೆ ಅಗಾಧ ಪರಿಣಾಮ ಬೀರಿತ್ತು’, ‘ಗಾಂಧೀಜಿ ಪ್ರತಿಪಾದಿಸಿದ ಹಿಂದೂ-ಮುಸ್ಲಿಂ ಏಕತೆಯು ಹಿಂದೂ ತೀವ್ರವಾದಿಗಳನ್ನು ಕೆರಳಿಸಿತ್ತು’, ಮತ್ತು ‘ಆರ್‌ಎಸ್‌ಎಸ್‌ನಂತಹ ಕೆಲ ಸಂಘಟನೆಗಳನ್ನು ಕೆಲ ಕಾಲ ನಿಷೇಧಿಸಲಾಗಿತ್ತು’ ಇವು ಕೈಬಿಡಲಾಗಿರುವ ಕೆಲವು ಭಾಗಗಳಾಗಿವೆ.

ಇದನ್ನೂ ಓದಿ : ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಹಳೆಯ ಪಠ್ಯವನ್ನೇ ಮುಂದುವರೆಸಲು ಆಗ್ರಹ

ಹಲವು ಅಂಶಗಳನ್ನು ಕೈಬಿಟ್ಟಿರುವ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್‌ ಸಹಿತ ಕೆಲವು ಪಕ್ಷಗಳ ಮುಖಂಡರು ಎನ್‌ಸಿಇಆರ್‌ಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದೆಡೆ, ಬಿಜೆಪಿ ನಾಯಕರು ಮಂಡಳಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ’12ನೇ ತರಗತಿಯ ಪಠ್ಯಕ್ರಮವನ್ನು ಕಡಿತಗೊಳಿಸಲಾಗಿಲ್ಲ. ಪಠ್ಯಕ್ರಮವನ್ನು ಕಳೆದ ವರ್ಷ್‌ ಜೂನ್‌ನಲ್ಲಿ ಸಂಕ್ಷೇಪಗೊಳಿಸಲಾಗಿದೆ’ ಎಂದು ಎನ್‌ಸಿಇಆರ್‌ಟಿ ಸಮಜಾಯಿಷಿ ನೀಡಿದೆ.

‘ಗುಜರಾತ್ ಗಲಭೆ, ಮೊಘಲರ ನ್ಯಾಯ ನಿರ್ಣಯ, ತುರ್ತು ಪರಿಸ್ಥಿತಿ, ಶೀತಲ ಸಮರ, ನಕ್ಸಲರ ಚಳವಳಿಗೆ ಸಂಬಂಧಿಸಿದ ಪಾಠಗಳಲ್ಲಿ ಕೆಲ ವಿಷಯಗಳು ಪುನರಾವರ್ತನೆ ಹಾಗೂ ಅಪ್ರಸ್ತುತವಾಗಿದ್ದವು ಎಂಬ ಕಾರಣಕ್ಕೆ ಹಲವು ಅಂಶಗಳನ್ನು ಕೈಬಿಡುವ ಮೂಲಕ ಪಠ್ಯಕ್ರಮವನ್ನು ಸಂಕ್ಷೇಪಗೊಳಿಸುವ ಕಾರ್ಯ ಮಾಡಲಾಗಿದೆ’ ಎಂದು ಎನ್‌ಸಿಇಆರ್‌ಟಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

‘ಈ ಸಂಕ್ಷೇಪಗೊಳಿಸುವ ಕಾರ್ಯ ಕಳೆದ ವರ್ಷವೇ ನಡೆದಿದೆ. ಈ ವರ್ಷ ಇಂಥ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಹೇಳಿದ್ದಾರೆ. ಆದರೆ, ಪಾಠಗಳಿಂದ ಕೈಬಿಡಲಾಗಿರುವ ಅಂಶಗಳ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಹೊರೆಯನ್ನು ಇಳಿಸಬೇಕಿದೆ. ಪಠ್ಯದ ಹೊರೆಯನ್ನು ಕಡಿಮೆ ಮಾಡಬೇಕು ಎಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ), 2020 ಕೂಡ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ತರಗತಿಗಳ ಎಲ್ಲ ವಿಷಯಗಳ ಪಠ್ಯಪುಸ್ತಕಗಳನ್ನು ಸಂಕ್ಷೇಪಗೊಳಿಸುವ ಕಾರ್ಯವನ್ನು ಎನ್‌ಸಿಇಆರ್‌ಟಿ ಕೈಗೆತ್ತಿಕೊಂಡಿದೆ’ ಎಂದು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

‘ಶಿಕ್ಷಕರ ಮಾರ್ಗದರ್ಶನ ಇಲ್ಲದೆಯೇ ವಿದ್ಯಾರ್ಥಿಗಳು ಸುಲಭವಾಗಿ ಕಲಿಯುವ ವಿಷಯಗಳು, ಸ್ವಪ್ರಯತ್ನ ಅಥವಾ ಹಿರಿಯರು ಹೇಳಿಕೊಡಬಲ್ಲ ವಿಷಯಗಳು, ಈಗಿನ ಸಂದರ್ಭದಲ್ಲಿ ‘ಅಪ್ರಸ್ತುತ’ ಎನಿಸುತ್ತವೆ. ಇಂಥ ಅಂಶಗಳನ್ನು ಪಠ್ಯದಿಂದ ಕೈಬಿಡಲಾಗಿದೆ’ ಎಂದೂ ತಿಳಿಸಲಾಗಿದೆ.

ಪ್ರತೀಕಾರದ ಕ್ರಮ : ಕಾಂಗ್ರೆಸ್
ಎನ್‌ಸಿಇಆರ್‌ಟಿ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಕೇಂದ್ರ ಸರ್ಕಾರವು ಪ್ರತೀಕಾರವಾಗಿ ಇಂಥ ಕ್ರಮ ಕೈಗೊಂಡಿದೆ. ಆ ಮೂಲಕ ತಿಪ್ಪೆ ಸಾರಿಸುವ ಕಾರ್ಯಕ್ಕೆ ಮುಂದಾಗಿದೆ’ ಎಂದು ಹೇಳಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು, ಪಠ್ಯದಲ್ಲಿ ಕೆಲ ಅಂಶಗಳನ್ನು ಕೈಬಿಟ್ಟಿರುವ ಕುರಿತ ವರದಿಗಳನ್ನು ತಮ್ಮ ಟ್ವೀಟ್‌ನೊಂದಿಗೆ ಹಂಚಿಕೊಂಡಿದ್ದಾರೆ. ಮೊಘಲರು ಹಾಗೂ ದಲಿತ ಲೇಖಕರ ಕುರಿತ ಪಾಠಗಳನ್ನು ಕೈಬಿಡಲಾಗಿದೆ ಎಂಬ ವರದಿಯನ್ನು ಹಂಚಿಕೊಂಡಿರುವ ಅವರು, ‘ಇದು ಸರ್ಕಾರದ ಮನಸ್ಥಿತಿಯನ್ನು ತೋರುತ್ತದೆ. ಆರ್‌ಎಸ್‌ಎಸ್‌ ಕೇವಲ ಗಾಂಧಿ ಅವರ ಮೇಲೆ ದಾಳಿ ನಡೆಸಲಿಲ್ಲ, ಅದು ಡಾ.ಅಂಬೇಡ್ಕರ್‌ ಅವರನ್ನು ಕೂಡ ಕಡುವಾಗಿ ವಿರೋಧಿಸುತ್ತಲೇ ಇತ್ತು’ ಎಂದಿದ್ದಾರೆ.

ಸಚಿವೆ ಶೋಭಾ ಸಮರ್ಥನೆ :
ಎನ್‌ಸಿಇಆರ್‌ಟಿ ಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಮರ್ಥಿಸಿಕೊಂಡಿದ್ದಾರೆ.’ಐತಿಹಾಸಿಕ ಸಂಗತಿಗಳನ್ನು ಕಾಂಗ್ರೆಸ್‌ ತಿರುಚಿತ್ತು. ಕಳೆದ ದಿನಗಳಲ್ಲಿ ಆಗಿರುವ ಇಂಥ ಲೋಪದೋಷಗಳನ್ನು ಸರಿಪಡಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಮೊಘಲರ ಕ್ರೌರ್ಯ, ತುರ್ತು ಪರಿಸ್ಥಿತಿ ದಿನಗಳು, ಕಾಶ್ಮೀರಿ ಪಂಡಿತರು ಹಾಗೂ ಸಿಖ್ಖರ ಹತ್ಯಾಕಾಂಡ, ಭ್ರಷ್ಟಾಚಾರದಂತಹ ವಿಷಯಗಳು ಕಾಂಗ್ರೆಸ್‌ಗೆ ಹೆದರಿಕೆ ಹುಟ್ಟಿಸಿದ್ದವು. ಹೀಗಾಗಿ, ಇವುಗಳನ್ನು ಕಾಂಗ್ರೆಸ್‌ ಪಠ್ಯಗಳಲ್ಲಿ ಸೇರಿಸಿರಲಿಲ್ಲ. ಈ ತಪ್ಪುಗಳನ್ನು ಬಿಜೆಪಿ ಈಗ ಸರಿಪಡಿಸುತ್ತಿದೆ’ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *