ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರೆಂಟಿಗಳ ಅನುಷ್ಠಾನದ ಕುರಿತು ಪ್ರಶ್ನೋತ್ತರ ಬದಿಗೊತ್ತಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಧರಣಿ ಆರಂಭಿಸಿದ್ದು, ಕಲಾಪವನ್ನು15 ನಿಮಿಷ ಮುಂದೂಡಲಾಗಿದೆ.
ಮಂಗಳವಾರ ಬೆಳಿಗ್ಗೆ 11 ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಪ್ರಶ್ನೋತ್ತರ ಆರಂಭಿಸಿದರು. ಕಾಂಗ್ರೆಸ್ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಪ್ರಶ್ನೆಯನ್ನೂ ಕೇಳಿದರು. ಗೃಹ ಸಚಿವ ಜಿ.ಪರಮೇಶ್ವರ ಅದಕ್ಕೆ ಉತ್ತರ ನೀಡಿದರು. ತಕ್ಷಣ ಎದ್ದು ನಿಂತ ಬಿಜೆಪಿಯ ಬಸವರಾಜ ಬೊಮ್ಮಾಯಿ, ಗ್ಯಾರೆಂಟಿ ಕುರಿತು ಚರ್ಚೆ ಆರಂಭಿಸುವಂತೆ ಆಗ್ರಹಿಸಿದರು. ಪ್ರಶ್ನೋತ್ತರ ಬದಿಗೊತ್ತಿ ನಿಲುವಳಿ ಸೂಚನೆಯ ಪ್ರಸ್ತಾವ ಮಂಡಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಸುನೀಲ್‍ಕುಮಾರ್, ಡಾ. ಸಿ.ಎನ್. ಅಶ್ವಥನಾರಾಯಣ, ಆರ್.ಅಶೋಕ್, ಆರಗ ಜ್ಞಾನೇಂದ್ರ, ಪ್ರಭುಚೌವ್ಹಾಣ್, ಸಿ.ಸಿ.ಪಾಟೀಲ್ ಸೇರಿದಂತೆ ಅನೇಕ ಬಿಜೆಪಿ ಶಾಸಕರು ನಿಲುವಳಿ ಸೂಚನೆಯ ಪ್ರತಿಪಾದನೆಗೆ ಅವಕಾಶ ನೀಡುವಂತೆ ಸ್ಷೀಕರ್ ಜೊತೆಗೆ ಕೇಳಿಕೊಂಡರು.
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ಸಚಿವರ ಪ್ರಚೋದನಕಾರಿ ಹೇಳಿಕೆ; ಸದನದಲ್ಲಿ ಗದ್ದಲ-ಕೋಲಾಹ
ಬೇಡಿಕೆಯನ್ನು ತಿರಸ್ಕರಿಸಿದ ಸ್ಪೀಕರ್, ಪ್ರಶ್ನೋತ್ತರ ಮತ್ತು ಶೂನ್ಯ ವೇಳೆ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು. ಮಧ್ಯ ಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಪ್ರಶ್ನೋತ್ತರದ ಬಳಿಕ ಚರ್ಚೆಗೆ ಅವಕಾಶ ನೀಡಿ. ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದರು.
ಬಿಜೆಪಿ ಶಾಸಕರು ಪಟ್ಟು ಬಿಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಹಿಂದೆ ಯಾವತ್ತೂ ಪ್ರಶ್ನೋತ್ತರ ಬದಿಗೊತ್ತಿ ಚರ್ಚೆಗೆ ಅವಕಾಶ ನೀಡಿದ ನಿದರ್ಶನ ಇಲ್ಲ. ಈ ಮೊಂಡಾಟ ಬಿಡಿ ಇದರಿಂದ ಏನು ಆಗಲ್ಲ, ಮೊಂಡಾಟ ಮಾಡಬೇಡಿ. ಪ್ರಶ್ನೋತ್ತರದ ನಂತರ ಚರ್ಚೆಗೆ ಅವಕಾಶವಿದೆ. ಯಾವುದೇ ವಿಚಾರ ಪ್ರಸ್ತಾಪ ಮಾಡಿ ಎಲ್ಲಾ ವಿಚಾರಗಳಿಗೆ ಉತ್ತರ ಕೊಡುವುದಕ್ಕೆ ನಮ್ಮ ಸರ್ಕಾರ ತಯಾರಾಗಿದೆ. ಇದರಿಂದ ನಾವು ಓಡಿ ಹೋಗುವುದಿಲ್ಲ, ವಿರೋಧ ಪಕ್ಷದವರಿಗೆ ಎದುರಿಕೊಂಡು ಓಡಿ ಹೋಗುವುದಿಲ್ಲ, ಅವರು ಹೇಳುವ ವಿಚಾರಗಳಿಗೆ ಹೆದರಿಕೊಂಡು ಹೋಗುವುದಿಲ್ಲ. ಅವರೆಲ್ಲ ವಿಚಾರಗಳಿಗೂ ಉತ್ತರ ಕೋಡುತ್ತೇವೆ ಅದು ನಿಯಮಾವಳಿಯ ಪ್ರಕಾರ ನಡೆಯಬೇಕು. ನಂತರ ಚರ್ಚೆಗೆ ಅವಕಾಶ ನೀಡಿ. ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದರು.
ಚರ್ಚೆಗೆ ಪಟ್ಟು ಹಿಡಿದ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು. ಗದ್ದಲ ಜೋರಾಗುತ್ತಿದ್ದಂತೆ ಸ್ಪೀಕರ್ ಯು.ಟಿ ಖಾದರ್, 15 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.