ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಮುನ್ನಾದಿನ ದೇಶಾದ್ಯಂತ ಮತಪ್ರದರ್ಶನ: ಸಿಐಟಿಯು ಕರೆ
ಜನರ ಮತ್ತು ನಿರ್ದಿಷ್ಟವಾಗಿ ಕಾರ್ಮಿಕ ವರ್ಗದ ಜೀವನದ ಅಗತ್ಯಗಳ ಮೇಲೆ ಜಿಎಸ್‌ಟಿ ಹೇರಲಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಬಲವಾಗಿ ಖಂಡಿಸಿದೆ, ಅದನ್ನು ತಕ್ಷಣವೇ ಹಿಂಪಡೆಯಲು ಒತ್ತಾಯಿಸಿದೆ.
ಮೋದಿ ನೇತೃತ್ವದ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಗೃಹಬಳಕೆಯ ಅನಿಲದ ವ್ಯವಸ್ಥಿತ ಬೆಲೆ ಏರಿಕೆಯ ಮೂಲಕ ಅನುಸರಿಸುತ್ತಿರುವ ವಿಧ್ವಂಸಕ ನೀತಿಯಿಂದಾಗಿ ಈಗಾಗಲೇ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು ಮತ್ತು ಜನಸಾಮಾನ್ಯರ ಮೇಲೆ ಈ ಆಕ್ರಮಣ ಮತ್ತಷ್ಟು ದಾಳಿ ಮಾಡುತ್ತದೆ ಎಂದು ಅದು ಹೇಳಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಕ್ಕಿ, ಗೋಧಿ, ಬೇಳೆಕಾಳುಗಳಂತಹ ಅಗತ್ಯ ಆಹಾರ ಪದಾರ್ಥಗಳು ಮತ್ತು ಮೊಸರು, ಪನೀರ್, ಮಾಂಸ, ಮೀನು, ಬೆಲ್ಲದಂತಹ ಡೈರಿ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗಿಲ್ಲ. ಜನರು ಬ್ಯಾಂಕ್‌ಗಳಿಂದ ಉಳಿತಾಯದ ಹಣವನ್ನು ಹಿಂತೆಗೆದುಕೊಳ್ಳಲು ಬಳಸುವ ಬ್ಯಾಂಕ್ ಚೆಕ್‌ಗಳ ಮೇಲೆ 18% ಜಿಎಸ್‌ಟಿ ವಿಧಿಸಲಾಗುತ್ತದೆ. ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕವು ವ್ಯವಸ್ಥೆಯ ಬಿಕ್ಕಟ್ಟನ್ನು ಪ್ರತಿಬಿಂಬಿಸುವ ಪ್ರಸ್ತುತ ಹಣದುಬ್ಬರದ ಹಂತದಲ್ಲಿ ನಿಜವಾದ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಈ ಪರಿಸ್ಥಿತಿಯನ್ನು ಗಮನಿಸಿದರೆ, ಜೀವನದ ಅಗತ್ಯ ವಸ್ತುಗಳ ಮೇಲಿನ ಪ್ರಸ್ತುತ ಹೇರಿಕೆಗಳು ಮತ್ತು ಏರಿಕೆಗಳು ಸೂಚ್ಯಂಕದಲ್ಲಿ ಎಂದಿಗೂ ಬಿಂಬಿತವಾಗುವುದಿಲ್ಲ, ಆದ್ದರಿಂದ ಇದನ್ನು ಆಧರಿಸಿದ ವಿ.ಡಿ.ಎ. ತುಟ್ಟಿಭತ್ಯೆ, ಅದು ರಾಜ್ಯ ಅಥವಾ ಕೇಂದ್ರ ವಲಯದಲ್ಲಿರಬಹುದು, ಬೆಲೆ ಏರಿಕೆಯನ್ನು ಎಂದಿಗೂ ಸಂಪೂರ್ಣವಾಗಿ ಸರಿದೂಗಿಸಲು ಸಾಧ್ಯವಿಲ್ಲ. ಸಂಘಟಿತ ವಲಯದಲ್ಲಿ ಹೀಗಾದರೆ, ನಿಯಮಿತ ಆದಾಯವಿಲ್ಲದ ಮತ್ತು ದಿನನಿತ್ಯದ ಆದಾಯವನ್ನು ಅವಲಂಬಿಸಿರುವ ಅಸಂಘಟಿತ ವಲಯದ ಕಾರ್ಮಿಕರಂತೂ ಅತಿ ಹೆಚ್ಚು ಬಾಧೆಯನ್ನು ಅನುಭವಿಸುತ್ತಾರೆ.
ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಹೇರಿದ ಕುಸಿತದಿಂದ ಇನ್ನೂ ಚೇತರಿಸಿಕೊಳ್ಳದ ಕಾರ್ಮಿಕರು, ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳು ಮತ್ತು ಅರ್ಥ ವ್ಯವಸ್ಥೆಯು ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತದೆ, ಇದರಿಂದಾಗಿ ವೆಚ್ಚದ ಪ್ರಮಾಣ ಮತ್ತಷ್ಟು ಕುಗ್ಗುವಂತಾಗುತ್ತದೆ. ಇದು ಮತ್ತಷ್ಟು ಉದ್ಯೋಗ ನಷ್ಟಕ್ಕೆ ಮತ್ತು ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಕನಿಷ್ಠ ವೇತನ ಹೆಚ್ಚಿಸಲು ಮತ್ತು ಉದ್ಯೋಗ ನಷ್ಟವನ್ನು ನಿಲ್ಲಿಸಲು ಹಿಂದೇಟು ಹಾಕುತ್ತಿರುವ ಕೇಂದ್ರ ಮತ್ತು ರಾಜ್ಯಗಳ ಬಿಜೆಪಿ ಸರ್ಕಾರಗಳು ಜನರ ಮೇಲೆ ಮತ್ತಷ್ಟು ಹೊರೆಗಳನ್ನು ಹೇರುತ್ತಿವೆ. ಇದು ಗಾಯಕ್ಕೆ ಉಪ್ಪನ್ನು sಸವರುವುದಲ್ಲದೆ ಬೇರೇನೂ ಅಲ್ಲ.
ಕಾರ್ಮಿಕರು ಮತ್ತು ಒಟ್ಟಾರೆಯಾಗಿ ಎಲ್ಲ ಜನಗಳು ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ಮತ್ತು ಬೆಲೆ ಏರಿಕೆಯ ಮೂಲಕ ತಮ್ಮ ಜೀವನದ ಮೇಲಿನ ನಡೆಯುತ್ತಿರುವ ಈ ಘೋರ ದಾಳಿಯನ್ನು ತಮ್ಮೆಲ್ಲ ಬಲವನ್ನು ಹಾಕಿ ಪ್ರತಿರೋಧಿಸಬೇಕು, ಅಗಸ್ಟ್ 1 ರಿಂದ 14 ರವರೆಗೆ ಎರಡು ವಾರಗಳ ಪ್ರಚಾರಾಂದೋಲನದಲ್ಲಿ ಮತ್ತು ಈ ಪ್ರಚಾರಾಂದೋಲನದ ಕೊನೆಯ ದಿನ, ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಮುನ್ನಾದಿನ, ಆಗಸ್ಟ್ 15ರಂದು ದೇಶದಾದ್ಯಂತ ನಡೆಯುವ ಬೃಹತ್ ಪ್ರತಿಭಟನೆಗಳಲ್ಲಿ ಒಟ್ಟಾಗಿ ಭಾಗವಹಿಸಬೇಕು ಎಂದು ಸಿಐಟಿಯು ಕರೆ ನೀಡಿದೆ.