ವಾರಕ್ಕೆ 90 ಗಂಟೆಗಳ ಕೆಲಸ ಅವೈಜ್ಞಾನಿಕ ಹಾಗೂ ಅಮಾನವೀಯ – ಸೈಯ್ಯದ್ ಮುಜೀಬ್

ಮಂಗಳೂರು :  ಇತ್ತೀಚಿಗೆ ಎಲ್ ಅಂಡ್ ಟಿ ಯ ಅಧ್ಯಕ್ಷರು ವಾರದಲ್ಲಿ 90 ಗಂಟೆಯ ಕೆಲಸ ಮಾಡಬೇಕೆಂದು ಹೊರಡಿಸಿರುವ ಫಾರ್ಮಾನು ಅವೈಜ್ಞಾನಿಕ, ಅಸಮರ್ಥನೀಯ ಹಾಗೂ ಅಮಾನವೀಯವಾಗಿದೆ. ಈಗಾಗಲೇ ನಿರುದ್ಯೋಗದಿಂದ ಬಳಲುತ್ತಿರುವ ದೇಶದಲ್ಲಿ ವಾರದಲ್ಲಿ 70 ಗಂಟೆ 90 ಗಂಟೆ ಕೆಲಸದ ಚರ್ಚೆಗಳು ಮತ್ತಷ್ಟು ನಿರುದ್ಯೋಗವನ್ನು ಹುಟ್ಟು ಹಾಕಲಿದೆ.ಮಾತ್ರವಲ್ಲದೆ ಅದು ಹಲವು ಸಾಮಾಜಿಕ ಸಮಸ್ಯೆಗಳನ್ನು ಹಾಗೂ ವಿವಿಧ ಆಯಾಮಗಳ ಸಮಸ್ಯೆಗಳನ್ನು ಉಲ್ಬಣಗೊಳಿಸಲಿದೆ. ಇದ್ಯಾವುದನ್ನು ಮುಂದಾಲೋಚಿಸದೆ ಕೇವಲ ತಮ್ಮ ಲಾಭಕಷ್ಟೇ ಸೀಮಿತವಾಗಿ ಬಂಡವಾಳಗಾರರು ಅಲೋಚಿಸುತ್ತಿರುವುದು ಸಮಾಜದ ಒಟ್ಟಾರೆ ಬೆಳವಣಿಗೆಗೆ ಪೂರಕವಲ್ಲ ಎಂದು ಸಿಐಟಿಯು  ರಾಜ್ಯ ಕಾರ್ಯದರ್ಶಿಗಳಾದ ಸೈಯ್ಯದ್ ಮುಜೀಬ್ ರವರು ಅಭಿಪ್ರಾಯಪಟ್ಟರು. ಸೈಯ್ಯದ್ ಮುಜೀಬ್

ಅವರು ಎರಡು ದಿನಗಳ ಕಾಲ ಮಂಗಳೂರಿನ ಬೋಳಾರದಲ್ಲಿ CITU ನೇತ್ರತ್ವದಲ್ಲಿ ನಡೆಯುತ್ತಿರುವ ಹಾಸನ ವಿಭಾಗ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು, ಹತ್ತಾರು ಕಾನೂನುಗಳನ್ನು ಬದಲಾವಣೆ ಮಾಡುತ್ತಿರುವ ಕೇಂದ್ರ- ರಾಜ್ಯ ಸರ್ಕಾರಗಳು ಹೊಸ ಕಾಯ್ದೆಗಳ, ನಿಯಮಾವಳಿಗಳ ಹಾಗೂ ನೀತಿಗಳ ಮೂಲಕ ಜನರಿಗಿದ್ದ ಅಧಿಕಾರವನ್ನು ಕಸಿಯುತ್ತಿದ್ದು ಜನರನ್ನು ಮತ್ತೆ ಗುಲಾಮರನ್ನಾಗಿಸುತ್ತಿವೆ. ಮಂಗಳೂರಿನಲ್ಲಿ ಜನರ ಧ್ವನಿಗಳಾದ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸ್ ಸರ್ವಾಧಿಕಾರಿ ನೀತಿಯನ್ನು ಅನುಸರಿಸುತ್ತಿದೆ.ರಾಜ್ಯದ ರಾಜಧಾನಿಯಲ್ಲೂ ಪ್ರತಿಭಟನೆಗಳಿಗೆ ಅವಕಾಶವೇ ಇಲ್ಲದಂತಹ ವಾತಾವರಣ ನಿರ್ಮಾಣ ಮಾಡಿದೆ.ಇದು ಜನರ ಪ್ರತಿಭಟನೆಯ ಹಕ್ಕನ್ನು ಕಸಿಯುತ್ತಿರುವುದರ ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿಸಾರ್ವತ್ರಿಕ ಸಾಮಾಜಿಕ ಭದ್ರತೆ ನೀಡುವುದು ಸರ್ಕಾರಗಳ ಹೊಣೆ – ವಿಜೆಕೆ ನಾಯರ್ ಸೈಯ್ಯದ್ ಮುಜೀಬ್

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜೆ ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, ರಾಜ್ಯದ ಕಾಂಗ್ರೆಸ್ ಸರಕಾರ ಈಗಲೂ ಗ್ಯಾರಂಟಿ ಯೋಜನೆಗಳ ಅಮಲಿನಲ್ಲಿ ತೇಲಾಡುತ್ತಿದೆಯೇ ಹೊರತು ದುಡಿಯುವ ವರ್ಗದ ಪ್ರಶ್ನೆಗಳ ಬಗ್ಗೆ ಚಕಾರ ಶಬ್ದವೆತ್ತುತ್ತಿಲ್ಲ. ಮಾತ್ರವಲ್ಲದೆ ಕಳೆದ ಬಿಜೆಪಿ ಸರಕಾರ ಕೈಗೊಂಡ ಕಾರ್ಮಿಕ ವಿರೋಧಿ ನೀತಿಗಳನ್ನೇ ಮುಂದುವರಿಸುತ್ತಿದೆ.ಇಂತಹ ಸರಕಾರದ ವಿರುದ್ಧ ಧ್ರಢವಾದ ಹೋರಾಟವನ್ನು ನಡೆಸಲು ಕಾರ್ಮಿಕ ವರ್ಗವನ್ನು ಸಜ್ಜುಗೊಳಿಸಲು ನಡೆಯುವ ಈ ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಕಾರ್ಮಿಕ ವರ್ಗದ ಹಕ್ಕುಗಳನ್ನು ರಕ್ಷಿಸಲು ದುಡಿಯುವ ವರ್ಗದ ಚಳುವಳಿಯನ್ನು ಬಲಿಷ್ಠಗೊಳಿಸಬೇಕೆಂದು ಹೇಳಿದರು.

ವೇದಿಕೆಯಲ್ಲಿ CITU ರಾಜ್ಯ ಉಪಾಧ್ಯಕ್ಷರುಗಳಾದ ವಸಂತ ಆಚಾರಿ,ಮಾಲಿನಿ ಮೇಸ್ತಾ, ರಾಧಾ ಮೂಡಬಿದ್ರೆ, ಧರ್ಮೇಶ್ ರವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *