ಮಂಗಳೂರು : ಸಿಐಟಿಯುನ 53 ನೇ ಸಂಸ್ಥಾಪನಾ ದಿನಾಚರಣೆಯನ್ನು ಅಲಲ್ಲಿ ಆಚರಿಸಿದ ಬಗ್ಗೆ ವರದಿಯಾಗಿದೆ.
ಸಿಐಟಿಯು ದ.ಕ ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಸಿಐಟಿಯು ಜಿಲ್ಲಾ ಕೇಂದ್ರ ಕಛೇರಿಯಾದ ಬೋಳಾರದಲ್ಲಿ ಧ್ವಜಾರೋಹಣದ ಮೂಲಕ ಸಿಐಟಿಯುನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿದರು. ನಂತರ ಮಾತನಾಡಿದ ಅವರು, ಐಕ್ಯತೆ ಮತ್ತು ಹೋರಾಟದ ನಿನಾದದೊಂದಿಗೆ,ತ್ಯಾಗ ಬಲಿದಾನದ ಪರಂಪರೆಯೊಂದಿಗೆ ಕಾರ್ಮಿಕ ಚಳುವಳಿಯ ಧ್ರುವತಾರೆಯಾಗಿ ಸಿಐಟಿಯು ಹೊರಹೊಮ್ಮಿದೆ ಎಂದರು.
ಸಿಐಟಿಯು ಕಳೆದ 53 ವರ್ಷಗಳಲ್ಲಿ ಧೀರೋದಾತ್ತವಾದ ಹೋರಾಟಗಳನ್ನು ನಡೆಸಿ ದೇಶದ ಕಾರ್ಮಿಕ ವರ್ಗವನ್ನು ಒಂದಾಗಿ ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಆಳುವ ವರ್ಗಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಿ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡಲು ಕಟಿಬದ್ದ ಹೋರಾಡುತ್ತಿದೆ ಎಂದು ಹೇಳಿದರು.
ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ದೇಶಕ್ಕೆ ಸ್ವಾತಂತ್ರ್ಯ ದೊರೆಯುವಲ್ಲಿ ಕಾರ್ಮಿಕ ವರ್ಗದ ಪಾತ್ರ ಪ್ರಧಾನವಾಗಿದ್ದು,ಇಂದಿಗೂ ದೇಶದ ಅಭಿವೃದ್ಧಿಯಲ್ಲಿ ಹಾಗೂ ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವಲ್ಲಿ ದೊಡ್ಡ ಕೊಡುಗೆ ನೀಡಿದೆ.ಇಂತಹ ಕಾರ್ಮಿಕ ವರ್ಗವನ್ನು ವರ್ಗ ಸಂಘರ್ಷದ ದಾರಿಯಲ್ಲಿ ಮುನ್ನಡೆಸಿ ಸಮಾಜದ ಬದಲಾವಣೆಗಾಗಿ ಸಿಐಟಿಯು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೋಗರು, ಭಾರತಿ ಬೋಳಾರ,ನಾಗೇಶ್ ಕೋಟ್ಯಾನ್, ವಿಧ್ಯಾರ್ಥಿ ನಾಯಕರಾದ ಮಾಧುರಿ ಬೋಳಾರ ಮುಂತಾದವರು ಉಪಸ್ಥಿತರಿದ್ದರು.