ಜೈಪುರ: ರಾಜಾಸ್ಥಾನದ 16 ಜಿಲ್ಲೆ ಹಾಗೂ ಗುಜರಾತಿನ 20 ಜಿಲ್ಲೆಗಳಲ್ಲಿ ಹಸುಗಳಲ್ಲಿ ಲಿಂಪಿ ಚರ್ಮರೋಗ (ಎಲ್‌ಎಸ್‌ಡಿ) ಕಾಣಿಸಿಕೊಂಡಿದ್ದು, 5 ಸಾವಿರಕ್ಕೂ ಹೆಚ್ಚು ಹಸುಗಳ ಮಾರಣಹೋಮ ನಡೆದಿದೆ ಎಂದು ವರದಿಯಾಗಿದೆ.
ರಾಜಾಸ್ಥಾನದ 16 ಜಿಲ್ಲೆಗಲ್ಲಿ ಲಿಂಪಿ ವೈರಸ್ ಕಾಣಿಸಿಕೊಂಡಿದ್ದು ಸುಮಾರು 4,000 ಹಸುಗಳು ಮೃತಪಟ್ಟಿವೆ. ಗುಜರಾತ್ 20 ಜಿಲ್ಲೆಗಳಲ್ಲೂ ಈ ಕಾಯಿಲೆ ಕಾಣಿಸಿಕೊಂಡಿದ್ದು, 1,431 ಹಸುಗಳು ಮೃತಪಟ್ಟಿವೆ. 54,161 ಹಸುಗಳು ವೈರಸ್ ಭೀತಿ ಎದುರಿಸುತ್ತಿವೆ. ಕಾಯಿಲೆ ವಿರುದ್ಧ ಹೋರಾಡಲು ಹಸುಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಈಗಾಗಲೇ 8 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.
ಲಿಂಪಿ ವೈರಸ್ ಹರಡುವಿಕೆಯಿಂದ ಹಲವಾರು ಹಸುಗಳು, ಎತ್ತುಗಳು ಮತ್ತು ಎಮ್ಮೆಗಳೂ ಸಾವನ್ನಪ್ಪಿವೆ, ಅವುಗಳನ್ನು ಹೂಳಲು ಸ್ಥಳಾವಕಾಶದ ಕೊರತೆಯಾಗಿದೆ ಎಂದು ವರದಿಗಳು ಹೇಳುತ್ತಿವೆ.
ಲಿಂಪಿ ಚರ್ಮರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ, ಸತ್ತ ದನಗಳ ಮೃತದೇಹಗಳಿಂದ ವಿಪರೀತ ದುರ್ವಾಸನೆ ಬರುತ್ತಿದೆ. ಇದರಿಂದಾಗಿ ಜನರು ತಮ್ಮ ಮನೆಗಳನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಜೋಧ್‌ಪುರದ ಸಮೀಪದಲ್ಲಿರುವ ಹಲವು ಹಳ್ಳಿಗಳಲ್ಲಿ ಈಗಾಗಲೇ ನೂರಾರು ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ. ಮಳೆಗಾಲ ಇರುವುದರಿಂದ ಇದು ಕೃಷಿಗೆ ಸೂಕ್ತವಾದ ಸಮಯ. ಆದರೆ ಕೆಲಸ ಮಾಡಲು ಯಾರೂ ಸಿದ್ಧರಿಲ್ಲ. ಹೊರಗಿನಿಂದ ಯುವಕರನ್ನು ಕೆಲಸ ಮಾಡಲು ಕರೆಸಲಾಗುತ್ತಿದೆ. ಆದರೆ ಇಲ್ಲಿನ ಪರಿಸ್ಥಿತಿ ನೋಡುತ್ತಿದ್ದಂತೆ ತಾವೂ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂಬ ಆತಂಕದಿಂದ ಹಿಂದೇಟು ಹಾಕುತ್ತಿದ್ದಾರೆ.
ಹಸುವಿನ ಹಾಲಿನ ಬೇಡಿಕೆ ಭಾರೀ ಇಳಿಕೆ
ಹಸುಗಳಲ್ಲಿ ಲಿಂಪಿ ಚರ್ಮರೋಗ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜನರು ಹಸುವಿನ ಹಾಲು ಕುಡಿಯುವುದನ್ನೇ ಬಿಟ್ಟಿದ್ದಾರೆ. ಇದರಿಂದ ಪ್ಯಾಕೆಟ್ ಹಾಲಿನ ಪೌಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮಕ್ಕಳಿಗೂ ಇದನ್ನೇ ಕುಡಿಸಲಾಗುತ್ತಿದೆ ಎಂದು ವರದಿಯಾಗಿದೆ.