‘ಹಿರಿಯ ಅಧಿಕಾರಿಗಳ ಉದ್ಧಟತನ, ಸರ್ಕಾರದ ನಡವಳಿಕೆಗೆ ಸಾಮಾನ್ಯ ಅಧಿಕಾರಿಗಳು ಬಲಿʼ

  • ಸರ್ಕಲ್ ಇನ್ಪೆಕ್ಟರ್ ನಂದೀಶ್ ಸಾವು, ಹೃದಯಾಘಾತದಿಂದ ಅಲ್ಲ ಬದಲಾಗಿ ಇದೊಂದು ಕೊಲೆ ಎಂದು ಮಾಜಿ‌ ಸಿಎಂ ಎಚ್ ಡಿ ಕುಮಾರಸ್ವಾಮಿ‌ ಆರೋಪ
  • ನನ್ನ ಮುಂದೆ ಹಣದ ಆಮಿಷ ಒಡ್ಡಿದ್ದವರು ಈಗ ಬಿಜೆಪಿ ಸರ್ಕಾರದಲ್ಲಿ ದೊಡ್ಡ ಪೋಸ್ಟ್ ಗಳನ್ನು ಪಡೆದುಕೊಂಡಿದ್ದಾರೆ
  • ನಗರದಲ್ಲಿ ಎಷ್ಟು ಬಾರ್ ಎಷ್ಟು ಅವಧಿಯ ವರೆಗೆ ತೆರೆದಿಡಲಾಗುತ್ತಿದೆ ಎಂಬ ಬಗ್ಗೆ ತನಿಖೆ ಆಗಬೇಕು

ಬೆಂಗಳೂರು : ಅಮಾನತುಗೊಂಡಿದ್ದ ಸರ್ಕಲ್ ಇನ್ಪೆಕ್ಟರ್ ನಂದೀಶ್ ಸಾವು, ಹೃದಯಾಘಾತದಿಂದ ಅಲ್ಲ ಬದಲಾಗಿ ಇದೊಂದು ಕೊಲೆ ಎಂದು ಮಾಜಿ‌ ಸಿಎಂ ಎಚ್ ಡಿ ಕುಮಾರಸ್ವಾಮಿ‌ ಆರೋಪ ಮಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಉತ್ತರ ಭಾರತದ ಅಧಿಕಾರಿಗಳು ಹಾಗೂ ಸರ್ಕಾರವೇ ಮಾಡಿರುವ ಕಗ್ಗೊಲೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಇನ್ಸ್​​ಪೆಕ್ಟರ್ ನಂದೀಶ್ ಹಿನ್ನೆಲೆ ತಿಳಿದುಕೊಂಡಿದ್ದೇನೆ. ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ. ಸಸ್ಪೆನ್ಶನ್‌ ರಿವೋಕ್​ಗಾಗಿ ಹಲವು ಮುಖಂಡರ ಮನೆಗೂ ಹೋಗಿದ್ದರಂತೆ. ಮಾನಸಿಕ ಒತ್ತಡಕ್ಕೆ ಒಳಗಾಗಿ ಹೀಗಾಗಿದೆ ಎಂದು ನಂದೀಶ್​ ಪತ್ನಿ ಹೇಳಿದ್ದಾರೆ ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅನಧಿಕೃತವಾಗಿ ಕ್ಯಾಸಿನೊ, ಮಟ್ಕಾ ದಂಧೆ ಕೂಡ ನಡೆಯುತ್ತಿದೆ. ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಕೆಆರ್​ ಪುರಂ ಭಾಗದಲ್ಲಿ ಯಾವುದೋ ಒಂದು ಪಬ್ ನಂದೀಶ್ ಅವರ ವ್ಯಾಪ್ತಿಯಲ್ಲಿದ್ದು, ಬೆಳಗಿನ ಜಾವದವರೆಗೆ ತೆರೆದಿತ್ತು. ಇದಕ್ಕೆ ಈ ಪೊಲೀಸ್ ಅಧಿಕಾರಿಯ ಸಹಕಾರವಿತ್ತೆಂದು ಆರೋಪಿಸಿ ಅವರನ್ನು ಅಮಾನತು ಮಾಡಿದ್ದಾರಂತೆ.

ತನಿಖೆಗೆ ಆಗ್ರಹ: ಸರ್ಕಾರ ಮಧ್ಯರಾತ್ರಿ ಒಂದು ಗಂಟೆಯವರೆಗೆ ರೆಸ್ಟೋರೆಂಟ್ ಓಪನ್ ಮಾಡುವ ಅವಕಾಶ ಕೊಟ್ಟಿದ್ದಾರೆ. ಆ ಪಬ್ ಎಷ್ಟೊತ್ತು ತೆಗೆದಿತ್ತು?, ಅಲ್ಲಿ ಯಾರಿದ್ದರು?, ರಾಜಕಾರಣಿ ಬೆಂಬಲಿಗರು ಎಷ್ಟು ಜನ ಇದ್ದರು. ಪೊಲೀಸ್ ಅಧಿಕಾರಿಗಳು ಕೂಡ ಡ್ಯಾನ್ಸ್ ಮಾಡಿದ್ದಾರೆ ಅಂತಾ ರಿಪೋರ್ಟ್ ಇದೆ. ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಪೊಲೀಸ್ ಅಧಿಕಾರಿ ಬಳಿ 70-80 ಲಕ್ಷ ರೂ ಕೊಟ್ಟು ಪೋಸ್ಟಿಂಗ್ ಮಾಡಿ, ನಂತರ ಹೀಗೆ ಆದಾಗ ಅವರು ಎಲ್ಲಿ ಹಣ ವಸೂಲಿ ಮಾಡಬೇಕು. ತಪ್ಪು ನಿಮ್ಮದೇ ಇಟ್ಟುಕೊಂಡರೆ ಹೇಗೆ?. ಸರ್ಕಾರದ ನಡವಳಿಕೆಯಿಂದ ಆದ ಕಗ್ಗೊಲೆ ಎಂದು ಆರೋಪಿಸಿದರು.

ಇನ್ನು ಹಲವಾರು ಪ್ರಕರಣಗಳಲ್ಲಿ ಐಎಎಸ್ ಅಧಿಕಾರಿ ಮನೆಯಲ್ಲಿ ಐದು ಕೋಟಿ ರೂ ಸಿಗುತ್ತದೆ. ಇವರೇ ರೈಡ್ ಮಾಡ್ತಾರೆ. ಅಂತಹ ವ್ಯಕ್ತಿಗಳಿಗೆ ಒಳ್ಳೊಳ್ಳೆ ಪೋಸ್ಟಿಂಗ್ ನೀಡುತ್ತಾರೆ ಎಂದು ಹೆಚ್​ಡಿಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಸರ್ಕಾರದಲ್ಲಿ ಹೀಗೆ ಆಗಿಲ್ಲ. ಯಾಕೆಂದರೆ ಮೈತ್ರಿ ಸರ್ಕಾರ ಇತ್ತು. ಸಣ್ಣ ಪುಟ್ಟ ಅಧಿಕಾರಿಗಳಿಗೆ ತೊಂದರೆ ಕೊಡ್ತೀರಾ?, ಬೆಂಗಳೂರು ನಗರದಲ್ಲಿ ಎಷ್ಟೊತ್ತು ಬಾರ್, ರೆಸ್ಟೋರೆಂಟ್, ಪಬ್ ಓಪನ್ ಇರುತ್ತದೆ?, ಅಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ತನಿಖೆ ಆಗಲೇಬೇಕು. ನಂದೀಶ್ ವಿಧಾನ ಪರಿಷತ್ ಸದಸ್ಯರೊಬ್ಬರ ಸಂಬಂಧಿ ಎಂದು ಹೇಳಲಾಗುತ್ತಿದೆ. ‌ಇವರ ಪರಿಸ್ಥಿತಿ ಹೀಗಾದರೆ ಸಣ್ಣ ಹುದ್ದೆಯಲ್ಲಿ ಇರುವವರ ಕತೆ ಏನು?. ಗೃಹ ಸಚಿವರು ಇದಕ್ಕೆ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *