ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ: ಎಸ್‌.ಆರ್‌. ಹಿರೇಮಠ

ಧಾರವಾಡ: ರೈತ ವಿರೋಧಿ ಮತ್ತು ಸಂವಿಧಾನ ವಿರೋಧಿಯಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ವನ್ನು ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಸೋಲಿಸಸಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕದ ಎಸ್‌.ಆರ್‌.ಹಿರೇಮಠ ಆಗ್ರಹಿಸಿದ್ದಾರೆ.

ಬೆಳಗಾವಿ ಲೋಕಸಭೆ ಮತ್ತು ಮಸ್ಕಿ,ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ರಾಜ್ಯದ ಜನತೆ ಪಣ ತೊಡಬೇಕೆಂದು ಕರೆ ನೀಡಿದ್ದಾರೆ.

ಇದನ್ನು ಓದಿ: ಮಸ್ಕಿ ಉಪಚುನಾವಣೆ : ಹಣ ಹಂಚಿಕೆ ಆರೋಪ, ಕೈ, ಕಮಲ ಕಾರ್ಯಕರ್ತರ ನಡುವೆ ಜಗಳ

ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಅದಕ್ಕಾಗಿ ಉಪಚುನಾವಣೆ ಸೂಕ್ತ ಸಮಯವಾಗಿದ್ದು, ಚುನಾವಣೆಯಲ್ಲಿ ಆ ಪಕ್ಷದ ಅಭ್ಯರ್ಥಿಗಳು ಸೋಲಲೇಬೇಕಾಗಿದೆ. ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆಸಬೇಕಿದೆ ಎಂದರು.

ಡಾ. ಎಂ.ಎಸ್‌. ಸ್ವಾಮಿನಾಥನ್‌ ವರದಿ ಪ್ರಕಾರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾನೂನನ್ನು ರೂಪಿಸಬೇಕು ಮತ್ತು ವಿದ್ಯುಚ್ಛಕ್ತಿ ಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು. ಇದು ಜಾರಿಯಾದರೆ ಖಾಸಗೀಕರಣಕ್ಕೆ ದಾರಿ ಮಾಡಿಕೊಟ್ಟು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆ ಎಂದರು.

ಇದನ್ನು ಓದಿ: ಸರ್ವಪಕ್ಷಗಳ ಸಭೆಗೆ ಆಹ್ವಾನ ನೀಡದ ಮುಖ್ಯಮಂತ್ರಿಗಳಿಗೆ ಸಿಪಿಐಎಂ ನಿಂದ ಬಹಿರಂಗ ಪತ್ರ

ಜನರಿಂದ ಆಯ್ಕೆಯಾದ ಸರಕಾರಗಳು ಜನರಿಗೆ ಕೇಳಿ ಕಾಯ್ದೆಗಳನ್ನು ರೂಪಿಸಬೇಕಾಗಿದೆ. ಆದರರೆ ಅವುಗಳನ್ನು ಮಾಡದ ಈಗಿನ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತದೆ ಎಂದು ಆರೋಪಿಸಿದರು.

ಹಿಂದೆ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನ ವಿರೋಧಿಯಾಗಿ ಕೈಗೊಂಡ ಕ್ರಮಗಳಂತೆ ಈಗಿನ ಕೇಂದ್ರದ ಬಿಜೆಪಿ ಸರಕಾರವು ನಡೆದುಕೊಳ್ಳುತ್ತಿದೆ. ಕೃಷಿ ಕಾಯ್ದೆಯು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಸುಪರ್ದಿಗೆ ಬರುತ್ತದೆ. ಆದರೆ, ಕೇಂದ್ರ ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ, ಕಾಯ್ದೆಗಳನ್ನು ಉಲ್ಲಂಘಿಸಿದೆ ಎಂದು ದೂರಿದ್ದಾರೆ.

ಬಿಜೆಪಿ ಸರ್ಕಾರ ಸರ್ವಾಧಿಕಾರತ್ವ ತೋರುತ್ತಿದೆ. ದಬ್ಬಾಳಿಕೆಯಿಂದ ಸಂವಿಧಾನ ವಿರೋಧಿ ಕಾಯ್ದೆಗಳನ್ನು ಹೇರುತ್ತಿದೆ. ಸರಕಾರಕ್ಕೆ ಸಂವೇದನಾಶೀಲತೆ ಇಲ್ಲ, ಇವರನ್ನು ರಾಜಕೀಯವಾಗಿ ಉಚ್ಛಾಟನೆ ಮಾಡುವ ಅವಶ್ಯಕತೆ ಇದೆ ಎಂದು ಅವರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *