ಮೈಸೂರು: ಅಪರೇಷನ್ ಕಮಲದಲ್ಲಿ ಹೆಸರುವಾಸಿ ಆಗಿರುವ ಬಿಜೆಪಿ ಈ ಬಾರಿ ಚುನಾವಣೆಗೂ ಮೊದಲೇ ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಎಳೆಯುವ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಹಿಂದೆಯೆಲ್ಲಾ ಶಾಸಕರನ್ನು ಹಣ ಇತ್ಯಾದಿ ಆಮಿಷದ ಮೂಲಕ ಸೆಳೆಯುವ ಪ್ರಯತ್ನ ಬಿಜೆಪಿ ಮಾಡುತ್ತಿತ್ತು. ಆದರೆ ಪ್ರಸ್ತುತ ಪ್ರಭಾವಿ ನಾಯಕರನ್ನು ಸೆಳೆಯುವಂತೆ ಅಮಿತ್ ಷಾ ನಿನ್ನೆ ನಡೆದ ಸಭೆಯಲ್ಲಿ ಸೂಚಿಸಿದ್ದು, ಅದರಂತೆ ಮುಂದಿನ ದಿನಗಳಲ್ಲಿ ಅನೇಕರನ್ನು ಬಿಜೆಪಿಗೆ ಸೆಳೆಯುವ ಎಲ್ಲಾ ಪ್ರಯತ್ನ ನಡೆಯಲಿದೆ ಎಂದರು.
ಇದನ್ನು ಓದಿ: ಆಪರೇಷನ್ ಕಮಲ ಆಡಿಯೊ ಪ್ರಕರಣ ತನಿಖೆಗೆ ಸೂಚಿಸಿದ ಕೋರ್ಟ್
ಉತ್ತರ, ದಕ್ಷಿಣ ಎರಡರಲ್ಲೂ ಬಿಜೆಪಿ ಕಮಲ ಮುದುರಿದೆ. ಹೀಗಾಗಿ ಅನ್ಯ ಮಾರ್ಗದ ಮೂಲಕ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಯಾವ ಐಟಿ ರೇಡ್ ಮೂಲಕವೂ ಜೆಡಿಎಸ್ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಇನ್ನೂ ಜೆಡಿಎಸ್ ಈ ರಾಜ್ಯದ ಜನರ ಎಟಿಎಂ ಆಗಿದ್ದು, ಕಷ್ಟಕ್ಕೆ ಮರುಗುವ ಎಟಿಎಂ ಆಗಿದೆ ಎಂದರು.
ಬಿಜೆಪಿಯಲ್ಲಿ ಎಷ್ಟು ಕುಟುಂಬಗಳಿವೆ ಬಿಟ್ ಕಾಯಿನ್, ಆನ್‌ಲೈನ್ ಜೂಜಿನಂತೆ ಎಟಿಎಂ ಆಗಿ ದೇಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿಯಿಂದ ನಮ್ಮ ಬಗ್ಗೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಮಂಡ್ಯಕ್ಕೆ ಬಿಜೆಪಿ ಕೊಡುಗೆ ಎನೇಂಬುದನ್ನು ಬಹಿರಂಗ ಚರ್ಚೆಗೂ ಸಿದ್ಧವಾಗಿದ್ದೇನೆ. ಒಂದಲ್ಲಾ ಹತ್ತು ಬಾರಿ ಬಂದರೂ ಹಳೆ ಮೈಸೂರಲ್ಲಿ ಅಮಿತ್ ಷಾ ಆಟ ನಡೆಯಲ್ಲ. ಇದುವರೆವಿಗೂ ಜೆಡಿಎಸ್ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ರಾಜ್ಯದ ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳೇ ನಮ್ಮ ಬಳಿ ಬಂದಿವೆ. ಈ ಬಾರಿ ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಮುನ್ಸೂಚನೆ ಇರುವುದರಿಂದ ಬಿಜೆಪಿ ಹೀಗೆ ಟೀಕೆ ಮಾಡುತ್ತಿದೆ ಎಂದು ತಿಳಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ