ಬೆಂಗಳೂರು : ಒಂದು ದೇಶ- ಒಂದು ಚುನಾವಣೆಯು ಒಕ್ಕೂಟ ವ್ಯವಸ್ಥೆಯ ಮೇಲಿನ ಇನ್ನೊಂದು ದಾಳಿ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೆ. ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
ಚಿಂತನ ಕರ್ನಾಟಕ ವೇದಿಕೆಯ ವತಿಯಿಂದ ಸೆ.16ರಂದು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನ ಕೆ ಆರ್ ವಿ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಆರೆಸ್ಸೆಸ್‌ನ ಹಿಂದೂ ರಾಷ್ಟ್ರದ ಗುರಿಯನ್ನು ಇದು ಹೊಂದಿದೆ. ಪ್ರಾದೇಶಿಕ ಆಶಯಗಳನ್ನು ಇದು ನಾಶ ಮಾಡುತ್ತದೆ ಹಾಗೂ ಏಕ ದೇಶ ಏಕ ಸಂಸ್ಕೃತಿಗೆ ಪೂರಕವಾಗಿ ಇದನ್ನು ಮಾಡುತ್ತಿದ್ದಾರೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಲಕಾಲಕ್ಕೆ ಚುನಾವಣಾ ಸುಧಾರಣೆಗಳು ನಡೆದಿವೆ. ‘ಒಂದು ದೇಶ- ಒಂದು ಚುನಾವಣೆ’ ೬೦ ರ ದಶಕದಲ್ಲೇ ಚರ್ಚೆಗೆ ಬಂದಿತ್ತು. ಇದರಲ್ಲಿ ಹತ್ತು ಹಲವು ಲಾಭಗಳಿವೆ, ಹಾಗೆಯೇ ನಷ್ಟಗಳೂ ಇವೆ ಎನ್ನುವುದನ್ನು ತಜ್ಞರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೆ, ಬಿಜೆಪಿಯವರು ಇರುವ ಚುನಾವಣಾ ವ್ಯವಸ್ಥೆಯನ್ನೇ ವಿರೂಪಗೊಳಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದರು.
ಚಿಂತಕ ಎ ನಾರಾಯಣ ಮಾತನಾಡಿ, ಇದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನದ ಭಾಗವಾಗಿದೆ. ಇದು ಹತ್ತು ವರ್ಷಗಳಿಂದ ದೇಶದ ಸರ್ಕಾರದ ವೈಫಲ್ಯ ಮತ್ತು ದ್ವೇಷವನ್ನು ಆಳಿದ, ಒಡೆದಾಳಿದ ಕತೆಯಾಗಿದೆ. ಇವನ್ನೆಲ್ಲಾ ಮಾತಾಡುತ್ತಲೆ ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾತಾಡಬೇಕಿದೆ. ನಾವು ವಿರೋಧಿಸುವುದು ಕೇವಲ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸುವುದಕ್ಕೆ ಮಾತ್ರವಲ್ಲ, ದೇಶವನ್ನು ಅತ್ಯಂತ ಹೆಚ್ಚು ಪ್ರೀತಿಸುವುದಕ್ಕಾಗಿದೆ ಎಂಬುದನ್ನು ದೇಶದ ಜನರಿಗೆ ಸಾರಿ ಸಾರಿ ಹೇಳಬೇಕಾಗಿದೆ. ಸಂವಿಧಾನದ ಮೊದಲ ವಾಕ್ಯ ಭಾರತ ಒಂದು ರಾಜ್ಯಗಳ ಒಕ್ಕೂಟ ಹಾಗೂ ಎಂಬ ವಿಧಿಯ ಮೇಲಿನ ಪ್ರಹಾರ. ರಾಜ್ಯಗಳ ಮೇಲೆ ಪ್ರಹಾರ ಮಾಡುವ ಮೊದಲ ಹೆಜ್ಜೆಯಾಗಿದೆ. ಒಂದು ವೇಳೆ ರಾಜ್ಯಗಳ ಮೇಲೆ ಪ್ರಹಾರಕ್ಕೆ ಮುಂದಾದರೆ ಈ ದೇಶ ಒಂದಾಗಿ ಇರುವುದಿಲ್ಲ. ಇದು ದೇಶದ ಭದ್ರತೆಯನ್ನು ನಾಶ ಮಾಡುವ ಒಂದು ಪ್ರಸ್ಥಾಪವಾಗಿದೆ ಎಂದರು.
ಇದನ್ನೂ ಓದಿ : ಒಂದು ದೇಶ, ಒಂದು ಚುನಾವಣೆ : ಸಂಸದೀಯ ಪ್ರಜಾಪ್ರಭುತ್ವದಿಂದ ಅಧ್ಯಕ್ಷೀಯ ಸರ್ವಾಧಿಕಾರದೆಡೆಗೆ
ಹಿರಿಯ ಚಿಂತಕ ಶಿವಸುಂದರ್ ಮಾತನಾಡಿ, ಬೇರೆ ಪಕ್ಷಗಳು ಬೆಳೆಯಬಾರದು ಎಂಬ ಕಾರಣಕ್ಕಾಗಿ ಒಂದು ದೇಶ ಒಂದು ಚುನಾವಣೆಯನ್ನು ಬಿಜೆಪಿ ಮುಂದಿಟ್ಟಿದೆ. ಒಂದು ದೇಶ ಒಂದು ಚುನಾವಣೆ ನಡೆದರೆ ಹಣ ಉಳಿತಾಯ ಆಗುತ್ತದೆ ಎಂಬ ಸಮರ್ಥನೆ ಮಾತು ಹಾಸ್ಯಾಸ್ಪದ ವಿಷಯವಾಗಿದೆ. ಯಾಕೆಂದರೆ ಚುನಾವಣೆಗಾಗಿ ಇಡೀ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಹಣ ಖರ್ಚು ಮಾಡಿರುವ ಪಕ್ಷ ಬಿಜೆಪಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಿಜೆಪಿ ನಾಳೆಗಾಗಿ ಎಂದಿಗೂ ಮಾತಾಡುವುದಿಲ್ಲ, ಅವರಿಗೆ ನೂರು ವರ್ಷಗಳ ಅಜೆಂಡಾವಿದೆ. ಒಂದು ದೇಶ ಒಂದು ಚುನಾವಣೆ ಕೇವಲ ಪೊಲಿಟಿಕಲ್ ಉದ್ದೇಶ ಮಾತ್ರವಲ್ಲ, ಸೈದ್ಧಾಂತಿಕ ಉದ್ದೇಶವಿದೆ ಎಂದರು.
ಜೆಡಿಎಸ್ ವಕ್ತಾರ ಸಿಎಂ ಫೈಜ್ ಮಾತನಾಡಿ, ಒಂದು ದೇಶ ಒಂದು ಚುನಾವಣೆ, ಆಧುನಿಕ ಹಿಟ್ಲರ್ ಪಡೆಗಳು ತಂದಿರುವ ಒಂದು ಪ್ರಸ್ತಾಪವಾಗಿದೆ. ಸಂವಿಧಾನದ ಹಲವು ಆರ್ಟಿಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಖರ್ಚು ಉಳಿತಾಯ ಎಂಬುವುದು ದೊಡ್ಡ ಸುಳ್ಳು. ಪದೇ ಪದೇ ಚುನಾವಣೆ ನಡೆದರೆ ಸಮಯ ಹಾಳು ಎಂದು ಹೇಳುವವರ ಮುಂದೊಂದು ದಿನ 15 ವರ್ಷಗಳಿಗೊಮ್ಮೆ ನಡೆಸುವ ಬಗ್ಗೆ ಕೂಡಾ ಸಮಿತಿ ರಚಿಸಲು ಮುಂದಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಎಎಪಿಯ ಪೃಥ್ವಿ ರೆಡ್ಡಿ ಮಾತನಾಡಿ, ಬಿಜೆಪಿಯ ಅಜೆಂಡಾ ಇರೋದೇ ಒಂದು ನಾಯಕ, ಒಂದು ಪಕ್ಷ ಎಂಬುದಾಗಿದೆ. ರಾಷ್ಟ್ರೀಯ,ರಾಜ್ಯ, ಮುನ್ಸಿಪಲ್, ಹಾಗೂ ಪಂಚಾಯತ್ ಚುನಾವಣೆಗಳ ವಿಷಯಗಳೇ ಬೇರೆ ಬೇರೆಯಾಗಿದೆ. ಆದರೆ ಬಿಜೆಪಿಗೆ ಯಾವುದೇ ವಿಷಯ ಮತ್ತು ನಾಯಕನಿಲ್ಲದ ಕಾರಣ ಈ ರೀತಿಯಾಗಿ ಗೊಂದಲ ಸೃಷ್ಠಿಸಲು ಮುಂದಾಗಿದೆ ಎಂದರು.
ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಸಾರಿಯೊ ಮಾತನಾಡಿ, ಒಂದು ದೇಶ ಒಂದು ಚುನಾವಣೆ , ತಮಗೆ ಬೇಕಾದ ವರದಿ ಬರೆದುಕೊಡಲು ಹೊಸ ಸಮಿತಿ ರಚನೆ ಮಾಡಿದ್ದಾರೆ. ಸಂಪೂರ್ಣವಾಗಿ ಸಂವಿಧಾನದ ಆಶಯಗಳನ್ನು ಬದಿಗಿಟ್ಟು ಸರ್ಜರಿ ಮಾಡಲಾಗುತ್ತಿದೆ. ಸಂವಿಧಾನ ಒಪ್ಪದ ಆರೆಸ್ಸೆಸ್ ನಾಯಕ ಗೋಲ್ವಾಕರ್ ಅವರ ಆಶಯದಂತೆ ಪೊಲಿಟಿಕಲ್ ಹೆಜೆಮನಿಗಾಗಿ ಇದನ್ನು ಮಾಡುತ್ತಿದ್ದಾರೆ ಎಂದರು
ಸಿನಿಮಾ ನಟಿ, ರಂಗಭೂಮಿ ಕಲಾವಿದೆ ಸುಷ್ಮಾವೀರ್, ಸರ್ವೋದಯ ಕರ್ನಾಟದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರರಾದ ಮಂಜುನಾಥ್ ಅದ್ದೆ, ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಪ್ರಸಾದ್, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಚೇತನ್ ಜೀರಾಳ್, ಚಿಂತನ ಕರ್ನಾಟಕದ ಡಾ.ರಮೇಶ್ ಬೆಲ್ಲಂಕೊಂಡ, ಸುರಭಿ ರೇಣುಕಾಂಬಿಕೆ, ಹರ್ಷ ಕುಮಾರ್ ಕುಗ್ವೆ, ದಿನೇಶ್ ಕುಮಾರ್ ಸೇರಿ ಹಲವು ಗಣ್ಯರು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವಿಡಿಯೋ ನೋಡಿ : ಒಂದು ದೇಶ, ಒಂದು ಚುನಾವಣೆ : ಬಿಜೆಪಿ ಸರ್ಕಾರದ ಗುಪ್ತ ಅಜೆಂಡವೇನು? ಈ ವಾರದ ನೋಟ ಕಾರ್ಯಕ್ರಮದಲ್ಲಿ