ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ಠಾಣೆಯ ಪೊಲೀಸರು ಚಿನ್ನದ ವ್ಯಾಪಾರಿಯನ್ನು ಬೆದರಿಸಿ ದರೋಡೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂಪಾಯಿ ದೋಚಿರುವ ಘಟನೆ ನಡೆದಿದೆ.
ಕಾರಿನಲ್ಲಿ ಹೋಗುತ್ತಿದ್ದ ಚಿನ್ನದ ವರ್ತಕನಿಗೆ ತಡೆದು ಬೆದರಿಕೆ ಹಾಕಿರುವ ಪೊಲೀಸರು ವಸೂಲಿ ಮಾಡಿರುವ ಘಟನೆಗೆ ನಡೆದಿದೆ. ಈ ಸಂಬಂಧ ಚಿನ್ನದ ವರ್ತಕ ನೀಡಿರುವ ದೂರಿನನ್ವಯ ಅಜ್ಜಂಪುರ ಪೊಲೀಸ್ ಠಾಣೆಯ ಎಸ್‌ಐ ಲಿಂಗರಾಜು ಸೇರಿದಂತೆ, ಮೂವರನ್ನು ಅಮಾನತುಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಮೂವರು ಪೊಲೀಸರನ್ನು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ದಾವಣಗೆರೆ ಮೂಲದ ಚಿನ್ನದ ವ್ಯಾಪಾರಿ ಭಗವಾನ್ ಸಾಂಕ್ಲ ಎಂಬವರನ್ನು ಬೆದರಿಸಿ ಅಜ್ಜಂಪುರ ಠಾಣಾಧಿಕಾರಿ ಲಿಂಗರಾಜು ಸೇರಿದಂತೆ ದರೋಡೆ ಮಾಡಿದ್ದಾರೆ. ಪ್ರಕರಣದಲ್ಲಿ ಠಾಣಾಧಿಕಾರಿ ಲಿಂಗರಾಜು ಮುಖ್ಯ ಆರೋಪಿಯಾಗಿದ್ದು, ಸಖರಾಯಪಟ್ಟಣ ಠಾಣೆಯ ಧನಪಾಲ ನಾಯಕ್, ಕುದುರೆಮುಖದ ಓಂಕಾರ ಮೂರ್ತಿ, ಲಿಂಗದಹಳ್ಳಿಯ ಶರತ್ ರಾಜ್ ಉಳಿದ ಆರೋಪಿಗಳಾಗಿದ್ದಾರೆ.
ಕಳೆದ ಮೇ 11 ರಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಚನ್ನಗಿರಿ- ಅಜ್ಜಂಪುರದ ಮಾರ್ಗವಾಗಿ ಕಾರಿನಲ್ಲಿ ಚಿನ್ನಾಭರಣದ ವ್ಯಾಪಾರಿ ಭಗವಾನ್ ಸಾಂಕ್ಲ ಅವರ ಪುತ್ರ ರೋಹಿತ್ ಸಾಂಕ್ಲ ಅವರು ಪ್ರಯಾಣಿಸುತ್ತಿದ್ದರು. ಅವರು 2ಕೆ.ಜಿ. 450 ಗ್ರಾಂ ಬಂಗಾರದ ಆಭರಣಗಳನ್ನು ಬೇಲೂರಿಗೆ ಹೋಗುವಾಗ ಬುಕ್ಕಾಂಬೂದಿ ಸಮೀಪದ ಟೋಲ್‌ನಿಂದ ಸುಮಾರು 100 ಮೀಟರ್ ದೂರದಲ್ಲಿ ಇಬ್ಬರು ಕಾರನ್ನು ನಿಲ್ಲಿಸಿದರು. ಕಾರನ್ನು ನಿಲ್ಲಿಸುತ್ತಿದ್ದಂತೆ ಕಾರಿನ ಹಿಂಬದಿಯ ಸೀಟಿನಲ್ಲಿ ಇಬ್ಬರು ಪೊಲೀಸರು ಕುಳಿತುಕೊಂಡು ಏರು ಧ್ವನಿಯಲ್ಲಿ ಕಾರನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ.
ಅಲ್ಲೇ ಸ್ವಲ್ಪ ದೂರದಲ್ಲಿ ನಿಂತಿದ್ದ ಎಸ್‌ಐ ಲಿಂಗರಾಜು ಕಾರಿನ ಮುಂಭಾಗದಲ್ಲಿ ಕುಳಿತುಕೊಂಡಿದ್ದಾರೆ. ಹೀಗೆ ಮಾತನಾಡುತ್ತಾ, ಹಿಂಬದಿಯ ಸೀಟಿನಲ್ಲಿದ್ದ ಚೀಲದಲ್ಲಿ ಏನಿದೆ ಎಂದು ವಿಚಾರಿಸಿ, ಚಿನ್ನಾಭರಣದ ಕಳ್ಳ ಸಾಗಾಣಿಕೆಯ ಕೇಸ್ ಹಾಕುವುದಾಗಿ ಹೇಳಿ ಬೆದರಿಕೆ ಹಾಕಿದ್ದಾರೆ. 10 ಲಕ್ಷ ರುಪಾಯಿ ಕೊಟ್ಟರೆ ಮಾತ್ರ ಬಿಟ್ಟು ಕಳುಹಿಸುವುದಾಗಿ ಹೇಳಿದ್ದಾರೆ, ಆಗ ಅಜ್ಜಂಪುರದ ಚಿನ್ನಾಭರಣದ ವ್ಯಾಪಾರಿಯಿಂದ 5 ಲಕ್ಷ ರುಪಾಯಿ ಪಡೆದು ಪೊಲೀಸರಿಗೆ ಕೊಟ್ಟ ಬಳಿಕ ಬಿಟ್ಟು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಾನು ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದು, ಆಭರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಿದರೂ ಬಿಡದೆ ಹಣಕ್ಕೆ ಒತ್ತಾಯಿಸಿದ್ದಾರೆ. ಕೊನೆಗೆ ರೋಹಿತ್ ಅಜ್ಜಂಪುರದಲ್ಲಿರುವ ವರ್ತಕರೊಬ್ಬರಿಂದ ಹಣವನ್ನು ಪಡೆದು ಪೊಲೀಸರಿಗೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ವರ್ತಕರ ದೂರಿನ ಮೇರೆಗೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆದಿದ್ದು, ಆರೋಪಿಗಳ ವಿರುದ್ಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.