ಜೈಪುರ: ಗಡಿಯಲ್ಲಿ ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ಒಪ್ಪಿಕೊಳ್ಳುತ್ತಿಲ್ಲ- ಬದಲಾಗಿ ನಿದ್ರಿಸುತ್ತಿದೆ. ಅವರು ಲಡಾಖ್ ಮತ್ತು ಅರುಣಾಚಲ ಪ್ರದೇಶದ ಕಡೆಯಿಂದ ನುಗ್ಗಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತ ಐಕ್ಯತಾ ಯಾತ್ರೆ ರಾಜಸ್ಥಾನದಲ್ಲಿ ಸಂಚರಿಸುತ್ತಿದ್ದು, ತವಾಂಗ್ ವಲಯದ ಯಾಂಗ್ಸ್ಟೆ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ಸೈನಿಕರು ಮುಖಾಮುಖಿಯಾದ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಅತಿಕ್ರಮಣಕ್ಕೆ ಅಲ್ಲ ಯುದ್ಧಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಇಲ್ಲಿ ಬೆದರಿಕೆ ಇರುವುದು ಸ್ಪಷ್ಟವಾಗಿದ್ದರೂ, ಸರ್ಕಾರ ಕಡೆಗಣಿಸುತ್ತಿದೆ. ಕೇಂದ್ರ ಸರ್ಕಾರವು ಸತ್ಯವನ್ನು ಮುಚ್ಚಿಡಲು ಯತ್ನಿಸುತ್ತಿದೆ. ಚೀನಾ ಬಗ್ಗೆ ಜಾಗರೂಕರಾಗಿರಿ ಎಂದು ನಾನು ಈ ಸರ್ಕಾರಕ್ಕೆ ಹೇಳಿದ್ದೆ ಎಂದು ತಿಳಿಸಿದರು.
ಈಗಾಗಲೇ 300ಕ್ಕೂ ಹೆಚ್ಚು ಚೀನಿ ಸೈನಿಕರು 17,000 ಅಡಿ ಎತ್ತರದ ಶಿಖರದ ತುದಿಗೆ ಪ್ರವೇಶಿಸಲು ಪ್ರಯತ್ನಿಸಿ, ಭಾರತೀಯ ಪೋಸ್ಟ್ ಅನ್ನು ಕಿತ್ತುಹಾಕಲು ಯತ್ನಿಸಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದಲ್ಲಿ ತವಾಂಗ್‍ನ ವಾಸ್ತವಿಕ ನಿಯಂತ್ರಣ ರೇಖೆಯ(ಎಲ್‌ಎಸಿ) ಬಳಿ ಚೀನಿಯರು ಭೂಸ್ವಾಧೀನಕ್ಕೆ ಯತ್ನಿಸಿದ್ದು, ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ್ದರು. ಆ ಬಳಿಕ ಎರಡೂ ದೇಶಗಳ ಗಡಿ ಬಿಕ್ಕಟ್ಟು ಮತ್ತಷ್ಟು ಉದ್ವಿಗ್ನಗೊಂಡಿದೆ.
ಸೆಪ್ಟೆಂಬರ್ 7ರಂದು ಆರಂಭವಾಗ ಭಾರತ ಐಕ್ಯತಾ ಯಾತ್ರೆ ಸುಮಾರು 2,600 ಕಿಮೀ ಕ್ರಮಿಸಿ ಶುಕ್ರವಾರಕ್ಕೆ 100 ದಿನಗಳನ್ನು ಪೂರೈಸಿದೆ. ರಾಜಸ್ಥಾನದ ನಂತರ ಡಿಸೆಂಬರ್ 21 ರಂದು ಹರಿಯಾಣ ಪ್ರವೇಶಿಸಲಿದೆ. ರಾಜಸ್ಥಾನದಲ್ಲಿ ಈ ಯಾತ್ರೆ ಸುಮಾರು 500 ಕಿ.ಮೀ ಕ್ರಮಿಸಲಿದ್ದಾರೆ.