‘ಎಲ್ಲರ ಸಮಾನ ಸಮೃದ್ಧಿಗೆ’ ಮತ್ತು ‘ವಿಪರೀತ ಆದಾಯಗಳನ್ನು ನಿಗ್ರಹಿಸಲು’ ಹೊಸ ಕ್ರಮಗಳನ್ನು ಕೈಗೊಳ್ಳುವುದಾಗಿ ಚೀನಾದ ಅಧ್ಯಕ್ಷ ಮತ್ತು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕ್ಸಿ ಪಿಂಗ್ ಘೋಷಿಸಿದ್ದಾರೆ. ಅವರು ಅಗಸ್ಟ್ 17ರಂದು ನಡೆದ ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಕೇಂದ್ರ ಸಮಿತಿಯ ಸಭೆಯ ನಂತರ ಅದರ ಮುಖ್ಯ ನಿರ್ಣಯಗಳ ಕುರಿತು ತಿಳಿಸುತ್ತಿದ್ದರು. ಇದಕ್ಕಿಂತ ಮೊದಲು ಪ್ರಸಕ್ತ ಮತ್ತು ಹಿಂದಿನ ನಾಯಕತ್ವಗಳ ವಾರ್ಷಿಕವಾಗಿ ಜರುಗುವ ಸಭೆ ಸಹ ನಡೆದಿತ್ತು. ನಾಲ್ಕು ದಶಕಗಳ ಪವಾಡ-ಸದೃಶ ಆರ್ಥಿಕ ಬೆಳವಣಿಗೆ, ಕಡು ಬಡತನದ ನಿರ್ಮೂಲನದ ಘೋಷಣೆ ಮತ್ತು ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಇದು ಜಗತ್ತಿನಾದ್ಯಂತ ಗಮನ ಸೆಳೆದಿದೆ.
ಕಡಿಮೆ ಆದಾಯದವರ ಆದಾಯವನ್ನು ಹೆಚ್ಚಿಸುವ ಮತ್ತು ಮಧ್ಯಮ ಆದಾಯ ಹೊಂದಿರುವವರ ಸಂಖ್ಯೆಯನ್ನು ವಿಸ್ತರಿಸುವ, ಹೆಚ್ಚೆಚ್ಚು ಉಚಿತ ಅಥವಾ ಕಡಿಮೆ ದರದ ಸಾರ್ವತ್ರಿಕ ಸೇವೆಗಳನ್ನು ವಿಸ್ತರಿಸುವುದರ ಮತ್ತು ಇತರ ಕ್ರಮಗಳ ಮೂಲಕ ಸಮೃದ್ಧಿಯನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೊಳ್ಳುವ ಹೊಸ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಾಕಷ್ಟು ಆರ್ಥಿಕ ಸಮೃದ್ಧಿಯನ್ನು ಸಾಧಿಸಿರುವ ಈ ಹಂತದಲ್ಲಿ ಬರಿಯ ‘ಸಮಾನತಾವಾದ ಅಥವಾ ಕೆಲವರು ಸಮೃದ್ದರಾಗುವುದಕ್ಕೆ ತದ್ವಿರುದ್ಧವಾಗಿ, ಎಲ್ಲರೂ ಸಮಾನವಾಗಿ ಭೌತಿಕ ಮತ್ತು ಸಾಂಸ್ಕೃತಿಕ ಸಮೃದ್ಧಿಯನ್ನು ಹಂಚಿಕೊಳ್ಳುವಂತೆ ಹಂತ ಹಂತವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದೂ ಹೇಳಲಾಗಿದೆ.
“ಕಾನೂನುಬದ್ಧ ಆದಾಯಕ್ಕೆ ರಕ್ಷಣೆ ಕೊಡುತ್ತಲೇ ಅತ್ಯಧಿಕ ಆದಾಯಗಳನ್ನು ನಿಬಂಧನೆ, ಹೊಂದಾಣಿಕೆಗೆ ಒಳಪಡಿಸುವ, ಉದ್ಯಮಗಳು ಮತ್ತು ಅಧಿಕ ಆದಾಯದ ವ್ಯಕ್ತಿಗಳು ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡುವ” ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದೂ ಇದೇ ಸಮಯದಲ್ಲಿ ಘೋಷಿಸಿರುವುದು ಹೆಚ್ಚಿನ ಗಮನ ಸೆಳೆದಿದೆ.
ಝೇಜಿಯಾಂಗ್ ಪ್ರಾಂತದ ಮೊದಲ ಪ್ರಯೋಗ
ಈ ಕ್ರಮಗಳನ್ನು ತೆಗೆದುಕೊಳ್ಳುವತ್ತ ಕಳೆದ ತಿಂಗಳಲ್ಲೇ ಪೂರ್ವ ಚೀನಾದ ಝೇಜಿಯಾಂಗ್ ಪ್ರಾಂತದಲ್ಲಿ ಮೊದಲ ಪ್ರಯೋಗವನ್ನು ಆರಂಭಿಸಲಾಗಿದೆ. ಇದು ಅಲಿ ಬಾಬಾ (ಅಮೆಜಾನ್ ನಂತಹ ಚೀನಾದ ದೈತ್ಯ ಇ-ವಾಣಿಜ್ಯ ಕಂಪನಿ) ಮುಂತಾದ ಪ್ರಮುಖ ಖಾಸಗಿ ಕಂಪನಿಗಳ ತಾಯ್ನಾಡಾಗಿದೆ. ಮುಂದಿನ 5 ವರ್ಷಗಳಲ್ಲಿ ಪ್ರಾಂತದ ತಲಾ ಆದಾಯವನ್ನು ಶೇ.45ರಷ್ಟು ಹೆಚ್ಚಿಸಿ 75 ಸಾವಿರ ಯುವಾನ್ (11,563 ಡಾಲರ್) ಮಾಡುವ ಯೋಜನೆ ಹಾಕಲಾಗಿದೆ. ಪ್ರಾಂತದ ಅರ್ಧದಷ್ಟು ಆದಾಯ ಕಾರ್ಮಿಕರ ವೇತನದ್ದಾಗಿರಬೇಕು ಎಂಬ ಗುರಿಯನ್ನೂ ಈ ಯೋಜನೆಯಲ್ಲಿ ಇಟ್ಟುಕೊಳ್ಳಲಾಗಿದೆ.
ಝೇಜಿಯಾಂಗ್ ಪ್ರಾಂತದ ಈ ಯೋಜನೆಯ ಭಾಗವಾಗಿ ಕಾರ್ಮಿಕರ ವೇತನದ ಸಾಮೂಹಿಕ ಚೌಕಾಶಿಗೆ ವಿಶೇಷ ಉತ್ತೇಜನ ಕೊಡಲಿದೆ. ಅದರಲ್ಲೂ ಹೊಸ ಮಾದರಿಯ ವಸ್ತುಗಳ ಡೆಲಿವರಿ, ಟ್ಯಾಕ್ಸಿ ಮುಂತಾದ ಕಡಿಮೆ ಆದಾಯದ ಕಾರ್ಮಿಕರ ಹಕ್ಕು ರಕ್ಷಿಸುವ ಮತ್ತು ಆದಾಯ ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಲಿದೆ. ಶೇರು ಮಾರುಕಟ್ಟೆಯಲ್ಲಿರುವ ಕಂಪನಿಗಳು ಶೇರುದಾರರ ಡಿವಿಡೆಂಡ್ ಹೆಚ್ಚಿಸಲು ಉತ್ತೇಜನ, ರೈತರ ಆದಾಯ ಹೆಚ್ಚಿಸುವ ಉದ್ಯಮಗಳಿಗೆ ಉತ್ತೇಜನ, ವಿವಿಧ ಸಾಮಾಜಿಕ ಕ್ರಮಗಳಿಗೆ ಕೊಡುವ ನಿಧಿಗೆ ತೆರಿಗೆ ವಿನಾಯಿತಿ ಮುಂತಾದ ಕ್ರಮಗಳು ಯೋಜನೆಯಲ್ಲಿ ಸೇರಿವೆ.
ಅಸಮಾನತೆ ಕಡಿಮೆ ಮಾಡುವತ್ತ
‘ಎಲ್ಲರ ಸಮಾನ ಸಮೃದ್ಧಿಗೆ’ ಮತ್ತು ‘ವಿಪರೀತ ಆದಾಯಗಳನ್ನು ನಿಗ್ರಹಿಸಲು’ ಹೊಸ ಕ್ರಮಗಳ ಈ ಎರಡು ಘೋಷಣೆಗಳನ್ನು ಚೀನಾದಲ್ಲಿ ನಡೆಯುತ್ತಿರುವ ಪವಾಡ ಸದೃಶ ನಾಗಾಲೋಟದ ಆರ್ಥಿಕ ಬೆಳವಣಿಗೆಗಳ ಪರಿಣಾಮಗಳ ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ಚೀನಾ ಸರಕಾರದ ಖಾಸಗಿ ಉದ್ಯಮವನ್ನು ಅದರಲ್ಲೂ ದೈತ್ಯ ತಂತ್ರಜ್ಞಾನ ಕಂಪನಿಗಳನ್ನು ನಿಬಂಧನೆಗೊಳಪಡಿಸುವ ಹಲವು ಕ್ರಮಗಳ ಹಿನ್ನೆಲೆಯಲ್ಲಿ ನೋಡಬೇಕು.
ಎಲ್ಲರಿಗೂ ಸಾಕಷ್ಟು ನೆಮ್ಮದಿಯ ಜೀವನಮಟ್ಟ ಕೊಡಲು ಆರ್ಥಿಕ ಸಮೃದ್ಧಿಯನ್ನು ಬೆಳೆಸುವ ಸಲುವಾಗಿ ಕಳೆದ ನಾಲ್ಕು ದಶಕಗಳಲ್ಲಿ ಉತ್ಪಾದಕ ಶಕ್ತಿಗಳನ್ನು ಬೆಳೆಸುವತ್ತ ಮತ್ತು ಕಡು ಬಡತನದ ನಿರ್ಮೂಲನದತ್ತ ಮುಖ್ಯ ಒತ್ತು ಇತ್ತು. ಇದಕ್ಕಾಗಿ ಒಡೆತನದ ವಿವಿಧ ರೂಪಗಳು, ವಿದೇಶ ಮತ್ತು ಖಾಸಗಿ ಬಂಡವಾಳಕ್ಕೆ ತೆರೆದ ಅವಕಾಶ, ಮಾರುಕಟ್ಟೆ ಮತ್ತು ಯೋಜನೆಗಳ ಸಂಯೋಜನೆಗಳನ್ನು ಅವಲಂಬಿಸಲಾಗಿತ್ತು. ಆದರೆ ಇದು ಸಮೃದ್ಧಿ ಮತ್ತು ಸರಾಸರಿ ಜೀವನ ಮಟ್ಟ ಏರಿಸುವ ಜೊತೆಗೆ ಸಾಮಾಜಿಕ, ಪ್ರಾದೇಶಿಕ ಅಸಮಾನತೆಗಳನ್ನೂ ಹೆಚ್ಚಿಸಿದೆ ಎಂಬ ಅರಿವು ಕಮ್ಯುನಿಸ್ಟ್ ಪಕ್ಷಕ್ಕಿತ್ತು. ಈಗ ಈ ಅಸಮಾನತೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒತ್ತು ಕೊಡಲಾಗಿದ್ದು, ಈ ಎರಡು ಕ್ರಮಗಳನ್ನು ವಹಿಸಲಾಗುತ್ತಿದೆ.
ಈಗ ಚೀನಾದ ಅತ್ಯಂತ ಶ್ರೀಮಂತ ಶೇ.1 ಜನ ದೇಶದ ಶೇ. 31 ಸಂಪತ್ತನ್ನು ಹೊಂದಿದ್ದಾರೆ. ಇದು ಎರಡು ದಶಕಗಳ ಹಿಂದೆ ಶೇ. 21ರಿಂದ ಹೆಚ್ಚಿದೆ. ವಿದೇಶ ಮತ್ತು ಖಾಸಗಿ ಬಂಡವಾಳಕ್ಕೆ ತೆರೆದ ಅವಕಾಶ, ಇದರ ಜೊತೆಗೆ ಬಂದ ಭ್ರಷ್ಟಾಚಾರಗಳಿಂದಾಗಿ, ಈ ಶ್ರೀಮಂತರ ಒಂದು ವಿಭಾಗ ಕಾನೂನುಬಾಹಿರ ಮತ್ತು ಭ್ರಷ್ಟ ಕ್ರಮಗಳನ್ನು ಅನುಸರಿಸಿದೆ ಎಂಬುದೂ ವಾಸ್ತವ. ಇದರ ವಿರುದ್ಧ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ದಶಕದಲ್ಲಿ 14 ಶತಕೋಟ್ಯಾಧಿಪತಿ (100 ಕೋಟಿ ಯುವಾನ್ ಆಸ್ತಿವಂತರು) ಗಳನ್ನು ಕಾನೂನುಬಾಹಿರ ಮತ್ತು ಭ್ರಷ್ಟ ಕ್ರಮಗಳಿಗಾಗಿ ಗಲ್ಲಿಗೇರಿಸಲಾಗಿತ್ತು. ಇನ್ನೂ ಹಲವರು ಆರ್ಥಿಕ ಅಪರಾಧಗಳಿಗೆ ಶಿಕ್ಷೆಗೊಳಗಾಗಿದ್ದಾರೆ.
ಇದಲ್ಲದೆ ಕಾನೂನುಬದ್ಧವಾಗಿಯೇ ಅತ್ಯಧಿಕ ಆದಾಯ ಇರುವ ವ್ಯಕ್ತಿಗಳು ಮತ್ತು ಕಂಪನಿಗಳ ಸಂಖ್ಯೆ ಹೆಚ್ಚುತ್ತಲಿದ್ದು ಈ ಸಮೃದ್ಧಿಯನ್ನು ಸಾಮಾಜಿಕವಾಗಿ ತೊಡಗಿಸುವ ಅಸಮಾನತೆಯನ್ನು ಕಡಿಮೆ ಮಾಡುವ ಕೆಲವು ಕ್ರಮಗಳನ್ನು ಚೀನಾ ಸರಕಾರ ಯೋಜಿಸುತ್ತಿದೆ. ಈ ಸಂಪತ್ತಿನ ಒಂದು ಭಾಗವನ್ನು ಎಲ್ಲರ ಸಮೃದ್ಧಿ ಹೆಚ್ಚಿಸಲು ಬಳಸಲು ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ. ಅತ್ಯಧಿಕ ಆದಾಯ ಗುಂಪಿಗೆ ಆದಾಯ ತೆರಿಗೆಯನ್ನು ಹೆಚ್ಚಿಸುವ, ಶೇ.70ರಷ್ಟು ಆದಾಯ ಅಸಮಾನತೆಗೆ ಕಾರಣವಾದ ರೀಯಲ್ ಎಸ್ಟೇಟ್ ವಲಯದ ಅಸಮಾನತೆ ನಿವಾರಿಸಲು ಆಸ್ತಿ ತೆರಿಗೆಯನ್ನು ಹಾಕುವ, ಅತ್ಯಧಿಕ ಲಾಭ ಆದಾಯ, ಸಂಪತ್ತು ಗಳಿಸುತ್ತಿರುವ ಇಂಟರ್ ನೆಟ್ ಕಂಪನಿಗಳ ಮೇಲಿನ ತೆರಿಗೆಯನ್ನು ಶೇ. 10ರಿಂದ ಶೇ.25ಕ್ಕೆ ಏರಿಸಲು ಯೋಜಿಸುತ್ತಿದೆ.
ಸಮಾಜವಾದಿ ದಾರಿಗೆ ಕಂಟಕಗಳ ನಿವಾರಣೆ
ಇದಲ್ಲದೆ ಹಲವು ಕ್ಷೇತ್ರಗಳಲ್ಲಿ ಖಾಸಗಿ ಹೂಡಿಕೆಯನ್ನು ಸಾಮಾಜಿಕ-ರಾಜಕೀಯ ಅಗತ್ಯಗಳ ನಿರ್ಬಂಧಗಳಿಗೆ ಒಳಪಡಿಸುವ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಒಳ್ಳೆಯ ಉದಾಹರಣೆ ಆನ್-ಲೈನ್ ಶಿಕ್ಷಣ ನೀಡುವ ಮತ್ತು ಖಾಸಗಿ ಟ್ಯೂಶನ್ ನೀಡುವ ಶಿಕ್ಷಣ ಕಂಪನಿಗಳನ್ನು ‘ಲಾಭದ ಉದ್ದೇಶವಿಲ್ಲದ ಕಂಪನಿ’ಗಳಾಗಿ ಪರಿರ್ತಿಸಬೇಕೆಂಬ ನಿಬಂಧನೆ ಜಾರಿಗೆ ತಂದಿದ್ದು. ಇದರಿಂದಾಗಿ ಅಮೆರಿಕದ ಶೇರು ಮಾರುಕಟ್ಟೆಗಳಲ್ಲಿ ಭಾರಿ ಮೌಲ್ಯವಿದ್ದ ಹಲವು ಇ-ಶಿಕ್ಷಣ ಕಂಪನಿಗಳ ಮೌಲ್ಯ ಬಿದ್ದು ಹೋಗಿದ್ದನ್ನು ಲೆಕ್ಕಿಸದೆ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದು ‘ಸಮಾಜವಾದಿ ಶಿಕ್ಷಣ’ ಗುರಿಯನ್ನು ಮುಟ್ಟಲು ಅಗತ್ಯವೆಂದು ಹೇಳಲಾಗಿದೆ.
ಇದನ್ನು ಓದಿ: ‘ಬಡತನದ ವಿರುದ್ಧ ಚೀನಾದ ಪೂರ್ಣ ವಿಜಯ’
ಇದೇ ರೀತಿ ಚೀನಾದಲ್ಲೂ, ಅಮೆಜಾನ್, ಗೂಗಲ್, ಫೇಸ್ ಬುಕ್, ಟ್ವಿಟರ್, ವಾಟ್ಸಪ್, ನಂತಹ ನೆಟ್ ಆಧಾರಿತ ಸೇವೆಗಳ ಮೂಲಕ, ಒಂದು ಕಡೆ ಗ್ರಾಹಕರ ಕುರಿತ ಅಪಾರ ಖಾಸಗಿ ಮಾಹಿತಿ ಹೊಂದಿದ್ದು ಅದರ ವಾಣಿಜ್ಯದಲ್ಲಿ ಇನ್ನಷ್ಟು ಪ್ರಭಾವ ಮತ್ತು ಆದಾಯ-ಆಸ್ತಿ ಗಳಿಸಿದ ಭಾರೀ ಏಕಸ್ವಾಮ್ಯ ಕಂಪನಿಗಳು ಬೆಳೆದಿದ್ದವು. ಎಲ್ಲೆಡೆಯಂತೆ ಅವು ಸರಕಾರಗಳಿಗಿಂತಲೂ ಪ್ರಭಾವಶಾಲಿಯಾಗಿ ಸರಕಾರಗಳ ಸಾಮಾಜಿಕ-ರಾಜಕೀಯ-ಆರ್ಥಿಕ ನೀತಿಗಳನ್ನೇ ಬುಡಮೇಲು ಮಾಡುವ, ನಾಗರಿಕರ ಖಾಸಗಿತನಕ್ಕೆ ಧಕ್ಕೆ ತರುವ, ಸರಕಾರಗಳಿಗೆ ಸವಾಲು ಹಾಕುವಷ್ಟು ಬೆಳೆದಿದ್ದವು. ಇದು ಅಮೆರಿಕ, ಯುರೋಪುಗಳಲ್ಲೂ ತೀವ್ರ ಸಮಸ್ಯೆಯಾಗಿದ್ದು ಇಂತಹ ಏಕಸ್ವಾಮ್ಯಗಳನ್ನು ಇನ್ನಷ್ಟು ದೊಡ್ಡ ಏಕಸ್ವಾಮ್ಯ ಆಗದಂತೆ ತಡೆಯುವ, ಹಲವು ಕಂಪನಿಗಳಾಗಿ ಒಡೆಯುವ ಕ್ರಮ ಅನಿವಾರ್ಯವಾಗಿತ್ತು. ಆದರೆ ಅಮೆರಿಕ, ಯುರೋಪಿನ ಸರಕಾರಗಳು ತೋರದ ಧೈರ್ಯ, ದೂರದರ್ಶಿತನ ವನ್ನು ಚೀನಾ ಸರಕಾರ ತೋರಿದೆ.
ಇತ್ತೀಚೆಗೆ ಅಲಿಬಾಬಾ ಗುಂಪಿನ ಶೇರು ಮಾರುಕಟ್ಟೆ ಪ್ರವೇಶಿಸಿ 37 ಶತಕೋಟಿ ಡಾಲರು ಮೌಲ್ ಪಡೆಯುವ ಪ್ರಯತ್ನವನ್ನು ತಡೆಹಿಡಿದಿತ್ತು. ಅದೇ ರೀತಿ, ದಿದಿ ಚುಕ್ಸಿಂಗ್ (ಓಲಾದಂತಹ) ಎಂಬ ಟ್ಯಾಕ್ಸಿ ಸೇವೆಯ 4.4 ಶತಕೋಟಿ ಡಾಲರು ಶೇರು ಮಾರಾಟವನ್ನು ತಡೆ ಹಿಡಿದಿತ್ತು. ಇತರ ಏಕಸ್ವಾಮ್ಯಗಳಾದ ಟೆನ್ ಸೆಂಟ್, ಬೈದು ಗಳ ಮೇಲೂ ಈ ರೀತಿಯ ನಿರ್ಬಂಧಗಳನ್ನು ಹೇರಲಾಗಿದೆ. ಈ ದೈತ್ಯ ಟೆಕ್ ಕಂಪನಿಗಳು ಜನತಾ ಪ್ರಭುತ್ವದ ಮತ್ತು ಅದರ ನಾಯಕತ್ವ ವಹಿಸಿರುವ ಕಮ್ಯುನಿಸ್ಟ್ ಪಕ್ಷದ ಸಮಾಜವಾದಿ ದಾರಿಯನ್ನು ಪ್ರಶ್ನಿಸಬಲ್ಲವು ಮತ್ತು ಅಸಾಧ್ಯ ಮಾಡಬಲ್ಲವು ಎಂಬ ಎಚ್ಚರಿಕೆಯೂ ಇಲ್ಲಿದೆ. ಇದು ಅಮೆರಿಕ, ಯುರೋಪುಗಳಲ್ಲಿ ಸಾಧ್ಯವಾಗದಿರುವುದಕ್ಕೆ ಆರ್ಥಿಕ ಏಕಸ್ವಾಮ್ಯ ಹೊಂದಿರುವ ಹಣಕಾಸು ಬಂಡವಾಳವು ಪ್ರಭುತ್ವವನ್ನೂ ನಿಯಂತ್ರಿಸುತ್ತಿರುವುದು ಕಾರಣ. ಆದರೆ ಚೀನಾದಲ್ಲಿ ಪ್ರಭುತ್ವವು, ದುಡಿಯುವ ಜನತೆಯ ಪರವಾಗಿ ಆರ್ಥಿಕ ವ್ಯವಸ್ಥೆಯ ನಿಬಂಧನೆ ಮಾಡುತ್ತಿದೆ.. ಈ ವ್ಯತ್ಯಾಸ ತಿಳಿಯದ ಹಲವು ವಿಮರ್ಶಕರು ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಚೀನಾದ ಕಂಪನಿಗಳನ್ನು ಒಡೆಯುತ್ತಿದೆ ಎಂದು ತಪ್ಪಾಗಿ ಆಪಾದಿಸುತ್ತಿದ್ದಾರೆ.