ಚೈನಾದ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ: ಭಾರತೀಯ ಮುಖಂಡರು ಅದರ ಯಶಸ್ಸಿನಿಂದ ಕಲಿಯಬೇಕಾದ್ದು ಬಹಳ ಇದೆ : ಸುಧೀಂದ್ರ ಕುಲಕರ್ಣಿ : ಭಾಗ-1

ಮೂಲ ಇಂಗ್ಲಿಷ್: ಸುಧೀಂದ್ರ ಕುಲಕರ್ಣಿ (ಕೃಪೆ: scroll.in ಜೂನ್ 17, 2021)

ಅನುವಾದ : ಟಿ.ಸುರೇಂದ್ರ ರಾವ್

ಇದೇ ಜುಲೈ 1ನೇ ತಾರೀಕಿನಿಂದ ಚೈನಾ ಕಮ್ಯುನಿಸ್ಟ್ ಪಕ್ಷವು ತನ್ನ ಸ್ಥಾಪನೆಯ ಶತಮಾನೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಸುಧೀಂದ್ರ ಕುಲಕರ್ಣಿ ಅವರು scroll.in ನಲ್ಲಿ ದೀರ್ಘ ಲೇಖನ ಬರೆದಿದ್ದಾರೆ. ಅದರಲ್ಲಿ ಅವರು ವಿವರವಾಗಿ ಅದರ ಸಾಧನೆಗಳ ಕುರಿತು ಬರೆದಿದ್ದಾರೆ.

“ಭಾರತದ #ಚೈನಾ_ಬಹಿಷ್ಕರಿಸಿ ಬ್ರಿಗೇಡ್ ಕೂಡ ನಮ್ಮ ನೆರೆಹೊರೆಯ ದೇಶವು ಕಳೆದ ಕೆಲವು ದಶಕಗಳಲ್ಲಿ ಸಾಧಿಸಿದ ಅಸಾಧಾರಣ ಪ್ರಗತಿಯನ್ನು ಒಪ್ಪಲೇಬೇಕು.” ಎಂಬುದು ಅವರ ಒಟ್ಟು ಅಭಿಪ್ರಾಯ. ಇದನ್ನು ಸರಣಿ ಲೇಖನವಾಗಿ 5 ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ.

ಜುಲೈ 1ನೇ ತಾರೀಖು ಚೈನಾ ಕಮ್ಯುನಿಸ್ಟ್ ಪಕ್ಷವು ಶತಮಾನೋತ್ಸವವನ್ನು ಆಚರಿಸುತ್ತಿದೆ. ಉತ್ಸವದ ಸಾವಿರಾರು ಕಾರ್ಯಕ್ರಮಗಳ ನಡುವೆ ಚೈನಾದ ರಾಷ್ಟ್ರೀಯ ಬ್ಯಾಲೆ ತಂಡದಿಂದ ಎರಡು ಪ್ರಖ್ಯಾತ ಚೈನಾದ ಪುರಾಣಕತೆಗಳನ್ನು ಚಿತ್ರಿಸುವ ಬ್ಯಾಲೆಯೊಂದು ಪ್ರದರ್ಶನವಾಗುತ್ತಿದೆ. ಒಂದರಲ್ಲಿ, ಯುಗಾಂಗ್ ಎಂಬ ಹೆಸರಿನ ತೊಂಭತ್ತು ವರ್ಷದ “ತಿಳಿಗೇಡಿ ಮನುಷ್ಯ”ನೊಬ್ಬ ಹಳ್ಳಿಗರು ಸಂಪರ್ಕ ಪಡೆಯಲು ರಸ್ತೆ ನಿರ್ಮಿಸಲು ಮತ್ತು ಉಳುಮೆ ಮಾಡುವ ಜಮೀನಿನ ವಿಸ್ತೀರ್ಣ ಹೆಚ್ಚಿಸಲು ಎರಡು ಬೃಹತ್ ಪರ್ವತಗಳನ್ನು ಕಿತ್ತುಹಾಕುವ ಅಸಾಧ್ಯವಾದ ಕೆಲಸವನ್ನು ಮಾಡುತ್ತಾನೆ. ಇನ್ನೊಂದು ಪುರಾಣಕತೆಯಲ್ಲಿ, ವರುಣದೇವರು ಮತ್ತು ಅಗ್ನಿದೇವರ ನಡುವಿನ ಯುದ್ಧದಿಂದಾಗಿ ಅಂತರಿಕ್ಷದಲ್ಲಿ ಉಂಟಾದ ಕಂದಕವೊಂದನ್ನು ಸರಿಪಡಿಸುವ ಮೂಲಕ ನುವಾ ಎಂಬ ಕರುಣಾಮಯಿ ದೇವತೆಯೊಂದು ಮಾನವಕುಲವನ್ನು ರಕ್ಷಿಸುತ್ತದೆ.

ಈ ಪುರಾಣಕತೆಗಳನ್ನು ಬೂಟಾಟಿಕೆಯೆಂದು ತಳ್ಳಿಹಾಕಬಾರದು. ಎಲ್ಲಾ ಸಂಸ್ಕೃತಿಗಳಲ್ಲೂ ಹಾಗೂ ನಾಗರೀಕತೆಗಳಲ್ಲೂ ಅವು ಅಸ್ತಿತ್ವದಲ್ಲಿವೆ, ಮತ್ತು ಅಸಾಧ್ಯವಾದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅಸಂಖ್ಯಾತ ತಲೆಮಾರುಗಳಿಗೆ ಅವು ಪ್ರೇರಣೆ ನೀಡಿವೆ. ಚೈನಾದಂತೆ ಭಾರತದಲ್ಲಿ ಕೂಡ ಅವು ತುಂಬಿತುಳುಕುತ್ತಿವೆ. ಪವಿತ್ರ ಗಂಗಾ ನದಿಯ ಪುರಾಣದ ಮೂಲವು ಭಗೀರಥ ರಾಜನಿಗೆ ಋಣಿಯಾಗಿದೆ, ಅವನು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿ ಶಿವನ ಸಹಾಯ ಪಡೆದು ಆ ನದಿಯನ್ನು ಸ್ವರ್ಗದಿಂದ ಭೂಮಿಗೆ ತಂದ ಎಂದು ನಂಬಲಾಗುತ್ತದೆ.

“ಭಗೀರಥ ಪ್ರಯತ್ನ”, ಭಾರತೀಯ ಭಾಷೆಗಳಲ್ಲಿ ಒಂದು ಸಮಾನ ನುಡಿಗಟ್ಟು; ಅದು ಅತಿಮಾನುಷ ಶಕ್ತಿ ಹಾಗೂ ಸಾಹಸಗಳಿಗೆ ಹೆಸರಾಗಿರುವ ರೋಮನ್ನಿನ ಪೌರಾಣಿಕ ನಾಯಕ ಹರ್ಕ್ಯುಲಸ್‌ನ ಹೆಸರನ್ನು ನೆನಪಿಸುವ “ಹರ್ಕ್ಯೂಲಿಯನ್ ಎಫರ್ಟ್”ಗೆ ಸರಿಸಮಾನವಾದುದು. ನಾಡಿನ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರು ಭಾವಪೂರ್ಣವಾಗಿ ಹಾಡಿರುವ ಆವೋ ಫಿರ್ ಸೆ ದಿಯಾ ಜಲಾಯೆಂ (ಬನ್ನಿ, ಮತ್ತೊಮ್ಮೆ ಜ್ಯೋತಿ ಬೆಳಗೋಣ) ಎಂಬ ತಮ್ಮ ಪ್ರಖ್ಯಾತ ದೇಶಭಕ್ತಿ ಗೀತೆಯ ಬಗ್ಗೆ ಅಟಲ್ ಬಿಹಾರಿ ವಾಜಪೇಯಿಯವರು ಹೀಗೆ ಬರೆಯುತ್ತಾರೆ: “ಅಂತಿಮ್ ಜಯ್ ಕಾ ವಜ್ರ ಬನಾನೆ/ನವ ದಧೀಚಿ ಹದ್ದಿಯಾಂ ಗಲಾಯೇಂ”(ಅಂತಿಮ ವಿಜಯ ಸಾಧಿಸಲು, ನಮ್ಮ ಮೂಳೆಗಳನ್ನು ಕರಗಿಸೋಣ ಹಾಗೂ ಆಧುನಿಕ ದಧೀಚಿಗಳಾಗೋಣ). ದೇವತೆಗಳು ರಾಕ್ಷಸರನ್ನು ಸೋಲಿಸಲು ಅಗತ್ಯವಾದ ವಜ್ರಾಯುಧವನ್ನು ಸೃಷ್ಟಿಸಲು ಮಹರ್ಷಿ ದಧೀಚಿ ತನ್ನ ಮೂಳೆಗಳನ್ನು ಕರಗಿಸಿ ತನ್ನ ಜೀವವನ್ನೇ ಅರ್ಪಿಸಿದ ಎಂದು ನಂಬಲಾಗುತ್ತದೆ.

1949 ರಲ್ಲಿ ಮಾವೋ ತ್ಸೆ ತುಂಗ್ ಅವರ ನೇತೃತ್ವದಲ್ಲಿ ಸ್ಥಾಪನೆಯಾದಂದಿನಿಂದಲೂ ಮತ್ತು ಬಹಳ ಮುಖ್ಯವಾಗಿ 1978 ರಿಂದ, ಡೆಂಗ್ ಶಿಯೋಪಿಂಗ್ ಅವರು ಸುಧಾರಣೆಗಳೊಂದಿಗೆ ಅದರ ಪ್ರಗತಿಯನ್ನು ಧೈರ್ಯವಾಗಿ ಪುನರ್‌ನಿರ್ದೇಶನ ಮಾಡಿದಾಗ, ಚೈನಾದ ಜನತಾ ಗಣತಂತ್ರ (ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ)ವು ಗಳಿಸಿದ ಮಹತ್ವದ ಪ್ರಮಾಣದ ಸಾಧನೆಯನ್ನು ಕಮ್ಯುನಿಸಂನ ಟೀಕಾಕಾರರು ಕೂಡ ಒಪ್ಪಲೇಬೇಕಾಗುತ್ತದೆ. ವಿದೇಶಿ ಶಕ್ತಿಗಳು(ಬಹಳವಾಗಿ, ಪಾಶ್ಚಿಮಾತ್ಯರು ಮತ್ತು ಜಪಾನ್ ಕೂಡ) ದಾಳಿಮಾಡಿ, ವಸಾಹತು ಮಾಡಿಕೊಂಡು, ಛಿದ್ರಗೊಳಿಸಿ ಮತ್ತು ಚೈನಾವನ್ನು ಆಕ್ರಮಿಸಿಕೊಂಡಿದ್ದ ಆ “ಅಪಮಾನಗಳ ಶತಮಾನ”(1839-1949)ದಿಂದ ಹೊರಬಂದ, ಮತ್ತು 1950 ರ ವಿಫಲಗೊಂಡ ಮಹಾನ್ ಮುನ್ನೆಗೆತ (ಗ್ರೇಟ್ ಲೀಪ್ ಫಾರ್ವರ್ಡ್), ಸಂಪೂರ್ಣ ಅಸ್ತವ್ಯಸ್ತಗೊಂಡ ಮಹಾನ್ ಶ್ರಮಿಕರ ಸಾಂಸ್ಕೃತಿಕ ಕ್ರಾಂತಿ (ಗ್ರೇಟ್ ಪ್ರೋಲಿಟೇರಿಯನ್ ಕಲ್ಚರಲ್ ರೆವಲ್ಯೂಷನ್) (1966-1976), ಮತ್ತು 1989 ರಲ್ಲಿ ಟಿಯಾನನ್ಮಿನ್ ಮೈನ್ ಚೌಕದಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಯ ಮೇಲೆ ನಡೆಸಿದ ಭೀಕರ ಮಿಲಿಟರಿ ದಾಳಿ ಮುಂತಾದ ಸ್ವಯಂಕೃತ ಗಾಯಗಳಿಂದ ಚೇತರಿಸಿಕೊಂಡ, ಚೈನಾವು ರೂಪಕಾರ್ಥದಲ್ಲಿ ಬೆಟ್ಟವನ್ನೇ ಸರಿಸಿ ಸಮೃದ್ಧಿಯ ಹಾದಿಯಲ್ಲಿ ಹಾಗೂ ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆದಿದೆ.

ಆತ್ಮನಿರ್ಭರ್ ಚೈನಾ

ಚೈನಾದ ಜನತಾ ಗಣತಂತ್ರ ಜನ್ಮತಳೆದಾಗ ಅದೊಂದು ಬಡ ದೇಶವಾಗಿತ್ತು, ಸಾಮ್ರಾಜ್ಯವಾದದಿಂದ ಮತ್ತು ಅಂತರ್ಯುದ್ಧಗಳಿಂದ ಜರ್ಝರಿತವಾಗಿತ್ತು. 1976 ರಲ್ಲಿ ಮಾವೋ ಮಡಿದಾಗ ಕೂಡ ಅದರ ತಲಾ ಜಿಡಿಪಿಯು ಬಾಂಗ್ಲಾದೇಶಕ್ಕೆ ಹೋಲಿಸುವಷ್ಟಿತ್ತು ಅಷ್ಟೆ. ಇವತ್ತು ಅದು ಜಗತ್ತಿನ ಎರಡನೇ ಅತ್ಯಂತ ದೊಡ್ಡ ಆರ್ಥಿಕತೆಯಾಗಿದೆ, ಮತ್ತು 2030 ಕ್ಕೆ ಮುಂಚೆ ಅಮೆರಿಕಾವನ್ನು ಉನ್ನತ ಸ್ಥಾನದಿಂದ ಕದಲಿಸುವತ್ತ ಸಾಗುತ್ತಿದೆ. ವರ್ಷ ಕಳೆದಂತೆಲ್ಲಾ ಹೊಸ ಜಾಗತಿಕ ವ್ಯವಸ್ಥೆಯನ್ನು ರೂಪಿಸಲು ಹೆಚ್ಚೆಚ್ಚು ಶಕ್ತಿಯನ್ನು ಗಳಿಸುತ್ತಿದೆ. ಅದರ ಮೂಲ ಸೌಕರ್ಯಗಳು ಪಾಶ್ಚಾತ್ಯ ದೇಶಗಳಿಗಿಂತ ಉತ್ತಮವಾಗಿವೆ. ಇದನ್ನು ಪರಿಗಣಿಸಿ. ಅತಿ ವೇಗದ ರೈಲು ವ್ಯವಸ್ಥೆ (ಗಂಟೆಗೆ 250 ಕಿ.ಮಿ.ಗಿಂತಲೂ ಹೆಚ್ಚಿನ ವೇಗದ) ಜಪಾನಿನಲ್ಲಿ ಆರಂಭವಾಗಿದ್ದು 1965 ರಲ್ಲಿ. ಹಲವಾರು ಯೂರೋಪಿಯನ್ ದೇಶಗಳಲ್ಲಿ ಆ ನಂತರ ಶುರುವಾಯಿತು. ಚೈನಾದ ಮೊದಲ ಅತಿ ವೇಗದ ರೈಲು ವ್ಯವಸ್ಥೆ 2007 ರಲ್ಲಾಗಿದೆ. ಈಗ, ಅದರ 37,900 ಕಿಮೀ. ಒಟ್ಟು ಉದ್ದವು ಜಗತ್ತಿನ ಎಲ್ಲಾ ದೇಶಗಳ ಅತಿ ವೇಗದ ರೈಲು ವ್ಯವಸ್ಥೆಯ ಮೂರನೇ ಎರಡರಷ್ಟಕ್ಕಿಂತಲೂ ಹೆಚ್ಚಿದೆ. ಈಗ ಅದು ಗಂಟೆಗೆ 600 ಕಿ.ಮೀ. ವೇಗದ ಅಯಸ್ಕಾಂತ ಪ್ರಭಾವದಿಂದ ನಡೆಯುವ ಮೂಲರೂಪದ ರೈಲ(prototyped a maglev train)ನ್ನು ಹೊಂದಿದೆ.

ಚೈನಾದ ಮೊದಲ ಅತಿ ವೇಗದ ರೈಲು ವ್ಯವಸ್ಥೆ 2007 ರಲ್ಲಾಗಿದೆ. ಈಗ, ಅದರ 37,900 ಕಿಮೀ. ಒಟ್ಟು ಉದ್ದವು ಜಗತ್ತಿನ ಎಲ್ಲಾ ದೇಶಗಳ ಅತಿ ವೇಗದ ರೈಲು ವ್ಯವಸ್ಥೆಯ ಮೂರನೇ ಎರಡರಷ್ಟಕ್ಕಿಂತಲೂ ಹೆಚ್ಚಿದೆ. (ಕೃಪೆ: ಎಎಫ್‌ಪಿ Credit: AFP)

ಇನ್ನೂ ಎರಡು ಉದಾಹರಣೆಗಳು ಚೈನಾದ ಕಳೆದ ನಾಲ್ಕು ದಶಕಗಳ ಅಮೋಘ ಸಾಧನೆಗಳನ್ನು ದೃಷ್ಟಾಂತ ಸಹಿತ ತೋರಿಸುತ್ತವೆ. ವಿಶ್ವ ಬ್ಯಾಂಕ್ ಪ್ರಕಾರ, 1978 ರಿಂದ 80 ಕೋಟಿ ಜನರನ್ನು ದಟ್ಟ ದಾರಿದ್ರ್ಯದಿಂದ ಮೇಲಕ್ಕೆತ್ತಿದೆ – ಮಾನವ ಚರಿತ್ರೆಯಲ್ಲೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಬಡತನ ನಿವಾರಣೆ ಅದಾಗಿದೆ. 2012 ರಲ್ಲಿ ಷಿ ಜೆನ್‌ಪಿಂಗ್ ಅವರು ಚೈನಾ ಕಮ್ಯುನಿಸ್ಟ್ ಪಕ್ಷ(ಸಿಪಿಸಿ)ದ ಪ್ರಧಾನ ಕಾರ್ಯದರ್ಶಿ ಆದಾಗ, ಬಡತನ ರೇಖೆ(ಒಂದು ದಿನಕ್ಕೆ 1.9 ಡಾಲರ್)ಯ ಕೆಳಗಿರುವ 10 ಕೋಟಿ ಜನರನ್ನು ಚೈನಾ ಇನ್ನೂ ಹೊಂದಿತ್ತು. 2020 ರ ಹೊತ್ತಿಗೆ ಚೈನಾವು ಸಂಪೂರ್ಣವಾಗಿ ಬಡತನ ಮುಕ್ತವಾಗುತ್ತದೆ ಎಂದು ಆಗ ಅವರು ಶಪಥ ಮಾಡಿದರು. ಆ ಗುರಿಯನ್ನು ಚೈನಾ ತಲುಪಿದೆ ಎಂದು ಅವರು ಕಳೆದ ಡಿಸೆಂಬರ್‌ನಲ್ಲಿ ಪ್ರಕಟಿಸಿದರು. ಈ ಗುರಿಯನ್ನು ತಲುಪಲು, ಸಿಪಿಸಿಯು ಇಡೀ ಪಕ್ಷದ ಶಕ್ತಿಯನ್ನು, ಒಟ್ಟಾರೆ ಆರ್ಥಿಕತೆಯನ್ನು ಹಾಗೂ ಇಡೀ ಸಮಾಜವನ್ನು ಅಣಿನೆರೆಸಿತು. ಪ್ರತಿಯೊಂದು ಬಡ ಕುಟುಂಬವನ್ನು ಹಾಗೂ ಬಡ ಹಳ್ಳಿಯನ್ನು ಕರಾರುವಾಕ್ಕಾಗಿ ಗುರುತಿಸುವ, ಅವರ ಬದುಕು ಮತ್ತು ಜೀವನೋಪಾಯವನ್ನು ಸಮಗ್ರವಾಗಿ ಉತ್ತಮಪಡಿಸುವ ಕೇಂದ್ರೀಕೃತ ಹಾಗೂ ಸುಸ್ಥಿರ ಕಾರ್ಯನೀತಿಯನ್ನು ಜಾರಿ ಮಾಡುವ ಸಲುವಾಗಿ “ಉದ್ದೇಶಿತ ಬಡತನ ತಗ್ಗಿಸುವ” ಈ ಹೊಸ ಪರಿವರ್ತನೆ ತರುವ ಕಾರ್ಯಕ್ರಮವನ್ನು ಜಾರಿಮಾಡಲು 30 ಲಕ್ಕಕ್ಕಿಂತಲೂ ಹೆಚ್ಚು ಪಕ್ಷದ ಕಾರ್ಯಕರ್ತರನ್ನು ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಕಳಿಸಿಕೊಡಲಾಯಿತು. “ದೇಶದ ಇತರರೊಂದಿಗೆ ತಕ್ಕ ಮಟ್ಟಿಗೆ ಉತ್ತಮವಾದ ಏಳಿಗೆ ಹೊಂದುತ್ತಿರುವ ಸಮಾಜವನ್ನು ಬಡ ಜನರು ಹಾಗೂ ಬಡ ಪ್ರದೇಶಗಳು ಪ್ರವೇಶಿಸುವುದನ್ನು ಖಾತ್ರಿಪಡಿಸಬೇಕು ಎನ್ನುವುದು ನಮ್ಮ ಪಕ್ಷ ನೀಡಿದ ಹೃತ್ಪೂರ್ವಕ ವಾಗ್ದಾನ” ಎನ್ನುತ್ತಾರೆ ಷಿ.

ಇದು ಪ್ರಚಾರವಲ್ಲ. ಚೈನಾದ ಹಲವಾರು ಪ್ರದೇಶಗಳನ್ನು ಪದೇ ಪದೇ ಭೇಟಿ ಮಾಡುವವನಾಗಿ, ಅಲ್ಲಿ ಸಂಪತ್ತಿನ ಅಸಮಾನತೆಯು (ಭಾರತದಲ್ಲಿರುವಂತೆ) ಕಣ್ಣಿಗೆ ರಾಚುವಂತೆ ಆತಂಕ ಹುಟ್ಟಿಸುತ್ತದೆಯಾದರೂ, ಸಾಮಾನ್ಯ ಜನರ ಬದುಕಿನ ಗುಣಮಟ್ಟ ಹೇಗೆ ಹೆಚ್ಚಿದೆ ಎನ್ನುವುದನ್ನು ನಾನು ನೋಡಿದ್ದೇನೆ. ಗ್ರಾಮೀಣ ಬಡತನ ಅಂದರೆ ಏನು ಎನ್ನುವುದನ್ನು ಸಾಂಸ್ಕೃತಿಕ ಕ್ರಾಂತಿಯ ಸಂದರ್ಭದಲ್ಲಿ ಒಬ್ಬ ಯುವ ಸಿಪಿಸಿಯ ತಳಮಟ್ಟದ ಕಾರ್ಯಕರ್ತನಾಗಿ ಅನುಭವಿಸಿರುವ ಚೈನಾದ ಅಧ್ಯಕ್ಷರು, ಚೈನಾದ ರೂಪಾಂತರವಾದ ಗರೀಬಿ ಹಟಾವೋ ಕಾರ್ಯಕ್ರಮವನ್ನು ಕಣ್ಣಾರೆ ಕಾಣಲು 80 ಕ್ಕೂ ಹೆಚ್ಚು ಆ ಬಡ ಹಾಗೂ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ, ತಾನೊಬ್ಬ ಬಡ ಚಹಾ ಮಾರುವವನಾಗಿದ್ದೆ ಎಂದು ಹೇಳಕೊಳ್ಳುವ ನಮ್ಮ ಪ್ರಧಾನಿಗಳು, ಕಳೆದ ಏಳು ವರ್ಷಗಳಲ್ಲಿ ಎಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ, ಎಂದು ಕೇಳುವುದು ದೇಶದ್ರೋಹವಾಗುತ್ತದೆಯೇ?

Donate Janashakthi Media

Leave a Reply

Your email address will not be published. Required fields are marked *