ಆಳಂದ ಕ್ಷೇತ್ರ ಮತ ಕಳ್ಳತನ: ಬಿಜೆಪಿ ಮಾಜಿ ಶಾಸಕ ಸೇರಿ 7 ಜನರ ಹೆಸರಿಸಿ ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭೆ ಚುನಾವಣೆ ವೇಳೆ ನಡೆದ ಮತ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಬಿಜೆಪಿಯ ಮಾಜಿ ಶಾಸಕ, ಅವರ ಮಗ ಮತ್ತು ಅವರ ಆಪ್ತ ಸಹಾಯಕ ಸೇರಿದಂತೆ ಏಳು ಜನರನ್ನು ಹೆಸರಿಸಿ ಚಾರ್ಜ್‌ಶೀಟ್ ಸಲ್ಲಿಸಿದೆ.

ವಿಶೇಷ ತನಿಖಾ ತಂಡ ನಗರದ ಮೊದಲ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಈ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. 5,994 ಮತದಾರರ ಹೆಸರುಗಳನ್ನು ತೆಗೆದುಹಾಕಲು ಮಾಡಿದ ಪ್ರಯತ್ನಗಳಿಗೆ ಸಂಬಂಧಿಸಿದೆ ಈ ಚಾರ್ಜ್‌ಶೀಟ್​ ಸಲ್ಲಿಕೆ ಆಗಿದೆ.

ಸಿಐಡಿ ಮೂಲಗಳ ಪ್ರಕಾರ, ಈ ಚಾರ್ಜ್‌ಶೀಟ್ 22,000ಕ್ಕೂ ಹೆಚ್ಚು ಪುಟಗಳನ್ನು ಹೊಂದಿದ್ದು, ಮತದಾರರ ಹೆಸರುಗಳನ್ನು ಡಿಲೀಟ್​ ಮಾಡಲು ಅಳವಡಿಸಿಕೊಂಡ ವಿಧಾನವನ್ನು ವಿವರಿಸುತ್ತದೆ.

ಇದನ್ನೂ ಓದಿ: ಬೆಂಗಳೂರು | ಮೇಕೆದಾಟು ಯೋಜನೆ : ಕೆಇಆರ್​​ಎಸ್ ನಿರ್ದೇಶಕರ ನೇತೃತ್ವದಲ್ಲಿ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ

ಆರೋಪ ಪಟ್ಟಿಯಲ್ಲಿ ನಾಲ್ಕು ಬಾರಿ ಆಯ್ಕೆ ಆಗಿದ್ದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಮಗ ಹರ್ಷಾನಂದ ಗುತ್ತೇದಾರ್, ಅವರ ಆಪ್ತ ಕಾರ್ಯದರ್ಶಿ ತಿಪ್ಪೇರುದ್ರ, ಕಲಬುರಗಿ ಮೂಲದ ಮೂವರು ಡೇಟಾ ಸೆಂಟರ್ ನಿರ್ವಾಹಕರಾದ ಅಕ್ರಮ್ ಪಾಷಾ, ಮುಕರಾಮ್ ಪಾಷಾ ಮತ್ತು ಮೊಹಮ್ಮದ್ ಅಶ್ಫಾಕ್ ಹಾಗೂ ಪಶ್ಚಿಮ ಬಂಗಾಳದ ಬಾಪಿ ಅದ್ಯಾ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಎಂದು ಎಸ್​​ಐಟಿ ಮೂಲಗಳಿಂ ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಆದ್ಯ ಎಂಬುವರನ್ನು ಮೊದಲಿಗೆ ಬಂಧನ ಮಾಡಲಾಗಿತ್ತು. ಈ ಆದ್ಯ ಒಟಿಪಿ ಬೈಪಾಸ್ ಸೌಲಭ್ಯವನ್ನು ಒದಗಿಸಲು ಅಮೆರಿಕ ಮೂಲದ ವೇದಿಕೆಯೊಂದಿಗೆ ಸಂಪರ್ಕ ಹೊಂದಿದ್ದ ಒಟಿಪಿ ಬಜಾರ್ ಎಂಬ ವೆಬ್‌ಸೈಟ್ ಅನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ನಡುವೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಕೂಡಾ ಮಾಡಲಾಗಿದೆ.

ನಿರೀಕ್ಷಣಾ ಜಾಮೀನಿನ ಮೇಲೆ ಹೊರಗಿರುವ ಗುತ್ತೇದಾರ್: ವಿಶೇಷ ನ್ಯಾಯಾಲಯವು ಈ ಹಿಂದೆ ಗುತ್ತೇದಾರ್ ಹಾಗೂ ಅವರ ಪುತ್ರ ಮತ್ತು ತಿಪ್ಪೇರುದ್ರ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು ಎಂದು ಮೂಲಗಳು ತಿಳಿಸಿವೆ.

2023 ಫೆಬ್ರವರಿ ತಿಂಗಳಲ್ಲಿ 6,018 ಮತಗಳ ರದ್ದತಿಗಾಗಿ ಅಕ್ರಮ್ ಪಾಷಾ ಹಾಗೂ ಆತನ ಸಹೋದರರು ಅರ್ಜಿ ಸಲ್ಲಿಸಿದ್ದರು. ಒಟಿಪಿ ಬಳಸಿಕೊಂಡು ಮತಪಟ್ಟಿಯಿಂದ ಹೆಸರು ಡಿಲೀಟ್ ಮಾಡಲಾಗಿತ್ತು ಎಂದು ಎಸ್ಐಟಿ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಪಟ್ಟಂತೆ ಗುತ್ತೇದಾರ್ ಅವರ ಮನೆ ಹಾಗೂ ಇನ್ನಿತರ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ವಿಚಾರಣೆ ಸಹ ನಡೆಸಿತ್ತು.

ಆರೋಪ ತಳ್ಳಿ ಹಾಕಿದ ಮಾಜಿ ಶಾಸಕರ ಪುತ್ರ: ಎಸ್​​ಐಟಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಮಾಜಿ ಶಾಸಕರ ಪುತ್ರ ಹರ್ಷಾನಂದ, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತಮ್ಮ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಮತ ಚೋರಿ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು: ಏತನ್ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಮತ ಚೋರಿ ಅಭಿಯಾನದ ವಿರುದ್ಧದ ಅಭಿಯಾನ ಪ್ರಾರಂಭವಾಗಿದೆ. ಭಾನುವಾರ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಮತ ಚೋರಿ ವಿರುದ್ಧ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿದ್ದು, ಸಾವಿರಾರು ಜನರು ಭಾಗವಹಿಸಲಿದ್ದಾರೆ. ರಾಜ್ಯಾದ್ಯಂತದ ಕಾಂಗ್ರೆಸ್ ನಾಯಕರು ಮತ್ತು 100ಕ್ಕೂ ಹೆಚ್ಚು ಶಾಸಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಆಳಂದ ಕ್ಷೇತ್ರದಲ್ಲಿ 2023ರಲ್ಲಿ ಮತಗಳವು ನಡೆದಿದೆ ಎಂದು ಆರೋಪಿಸಿ ಶಾಸಕ ಬಿ.ಆರ್. ಪಾಟೀಲ್ ದೂರು ನೀಡಿದ್ದರು. ಅಲ್ಲದೇ ರಾಷ್ಟ್ರ ಮಟ್ಟದಲ್ಲಿ ರಾಹುಲ್ ಗಾಂಧಿ ಅವರು ಆಳಂದದಲ್ಲಿ ವೋಟ್ ಚೋರಿ ನಡೆದಿದೆ ಎಂದು ಆಪಾದಿಸಿದ್ದರು. ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದಲ್ಲ ಎಸ್ಐಟಿ ರಚಿಸಿತ್ತು.

ಇದನ್ನೂ ನೋಡಿ: ಧರ್ಮಸ್ಥಳ| ಕೊಂದವರು ಯಾರು?ಏಕವ್ಯಕ್ತಿ ಪ್ರದರ್ಶನ Janashakthi Media

Donate Janashakthi Media