ನವಲಗುಂದ: ಹೊಲದ ವ್ಯಾಜ್ಯದ ವಿಚಾರಣೆ ನಡೆಸುವ ವೇಳೆ ತಹಶೀಲ್ದಾರ್ ಸೇರಿ ಐವರು, ನನ್ನ ಸಹೋದರ ಹಾಗೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಿದ್ಲಿಂಗಪ್ಪ ಹಂಪಿಹೊಳಿ ಎಂಬುವರು ದೂರು ದಾಖಲಿಸಿದ್ದಾರೆ. ತಹಶೀಲ್ದಾರ್ ನವೀನ್ ಹುಲ್ಲೂರ ಹಲ್ಲೆ ಮಾಡಿದ ಆರೋಪಿ. ನವಲಗುಂದ ತಾಲೂಕಾ ತಹಶೀಲ್ದಾರ್ರಾಗಿ ಹುಲ್ಲೂರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಘಟನೆಯ ಹಿನ್ನಲೆ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಹಶೀಲ್ದಾರ್ ಕೋರ್ಟ್ಗೆ ಮಲ್ಲಿಕಾರ್ಜುನ ಹಂಪಿಹೋಳಿ ಬಂದಿದ್ದರು. ಈ ವೇಳೆ ಮಲ್ಲಿಕಾರ್ಜುನ ಮೇಲೆ ತಹಶೀಲ್ದಾರ್ ಸೇರಿದಂತೆ 5 ಜನ ಹಲ್ಲೆ ನಡೆಸಿದ್ದಾರೆ. ಜೊತೆಗೆ ಮಲ್ಲಿಕಾರ್ಜುನ ಸಹೋದರ ಸಿದ್ದಲಿಂಗಪ್ಪ ಹಾಗೂ ಆತನ ಸಹೋದರಿಗೂ ತಹಶೀಲ್ದಾರ್ ಬೂಟುಗಾಲಿನಿಂದ ಒದ್ದಿದ್ದರು.
ಮಲ್ಲಿಕಾರ್ಜುನ ಸಹೋದರಿ ಗೀತಾ ಹಂಪಿಹೋಳಿ ಬೂಟುಗಾಲಿನಿಂದ ಒದ್ದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೆ ಈ ಕುರಿತು ಠಾಣೆಯಲ್ಲಿ ತಹಶೀಲ್ದಾರ್ ವಿರುದ್ಧ ದೂರು ಕೊಡಲು ಹೋದಾಗ ಇನ್ಸ್ಪೆಕ್ಟರ್ ಧಮ್ಕಿ ಹಾಕಿದ್ದಾರೆ ಎಂದು ಗೀತಾ ಆರೋಪಿಸಿದ್ದಾರೆ. ಎಸ್ಪಿ ಕರೆ ಮಾಡಿದ ನಂತರ ಬೆಳಗಿನ ಜಾವ ಪ್ರಕರಣದ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ತಹಶೀಲ್ದಾರ ಜೊತೆ ಕೂಡಿ ಹಲ್ಲೆ ಮಾಡಿದ್ದ ಸೋಮವ್ವ ಹಂಪಿಹೋಳಿ, ಗುಳ್ಳಪ್ಪ ಹಂಪಿಹೋಳಿ, ಪ್ರೇಮವ್ವ, ನಾಗಪ್ಪ ಹಾಗೂ ಈರಪ್ಪ ಹೊಂಬಳ ಎಂಬವರ ವಿರುದ್ಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಯುತ ವಿಚಾರಣೆ ಸಹಿಸದೇ ದೂರು ದಾಖಲಿಸಲಾಗಿದೆ ಎಂದು ನವೀನ್ ಹುಲ್ಲೂರ ಪ್ರತಿಕ್ರಿಯೆ ನೀಡಿದ್ದಾರೆ. ಆರ್.ಟಿ.ಎಸ್. ಪ್ರಕರಣದ ಬಗ್ಗೆ ನ್ಯಾಯಯುತ ವಿಚಾರಣೆ ಮಾಡಿ ಆದೇಶ ಮಾಡಿದ್ದೆ. ಈ ಆದೇಶವನ್ನು ಸಹಿಸದೆ ದೂರುದಾರರಾದ ಶಿದ್ಲಿಂಗಪ್ಪ ಹಂಪಿಹೊಳಿ ಹಾಗೂ ಅವರ ಸಹೋದರ ಮಲ್ಲಿಕಾರ್ಜುನ ಹಂಪಿಹೊಳಿಯವರು ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ. ‘ಅಂದು ನಡೆದ ಘಟನೆಯ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಶಿದ್ಲಿಂಗಪ್ಪ ಹಂಪಿಹೊಳಿ ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.