ಬೆಂಗಳೂರು: ನಾನು ‘ಸಂತೋಷ’ದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಬೇರೆ ಯಾರಿಗೂ ಕೊಡದ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಪಕ್ಷದ ಮುಖಂಡರು ನನಗೆ ಕೊಟ್ಟಿದ್ದಾರೆ. ಯಾವುದೇ ದುಃಖವಿಲ್ಲದೆ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ” ಎಂದು ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಧನಾ ಸಮಾವೇಶದ ಭಾಷಣದ ಸಂದರ್ಭದಲ್ಲಿ ಹೇಳಿದರು.
ತಮ್ಮ ರಾಜೀನಾಮೆ ಪತ್ರವನ್ನು ಯಡಿಯೂರಪ್ಪ ಅವರು ಕೇವಲ ಎರಡೇ ಸಾಲಿನಲ್ಲಿ ಮುಗಿಸಿದ್ದಾರೆ. “I hereby tender my resignation as the Chief Minister of the state of Karnataka. The same may kindly accepted” ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. “ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜೀನಾಮೆ ಅಂಗೀಕರಿಸಿ” ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಅವರ ರಾಜಕೀಯ ಇತಿಹಾಸದಲ್ಲಿ ಈ ರಾಜೀನಾಮೆ ಪತ್ರದ ಸಂದೇಶ ಅತ್ಯಂತ ಚಿಕ್ಕದು ಎನ್ನಲಾಗುತ್ತಿದೆ.
ಇದನ್ನು ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ
ತಮ್ಮ ಸರಕಾರದ ಎರಡು ವರ್ಷದ ಸಾಧನ ಸಮಾವೇಶದಲ್ಲಿ “ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ” ಎಂದು ದುಖಃದಿಂದ ಮಾತನಾಡಿದರು. ಅದಾಗಲೇ ರಾಜೀನಾಮೆ ಪತ್ರವನ್ನು ಮೊದಲು ಸಿದ್ದಪಡಿಸಿಕೊಂಡಿದ್ದ ಬಿ ಎಸ್ ಯಡಿಯೂರಪ್ಪ ನವರು ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದ್ದರು.
ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಿಂದ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆ ಕೊಟ್ಟ ಬಳಿಕ ರಾಜಭವನದಿಂದ ಹೊರಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಹುದ್ದೆಗೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡುವುದು ಖಚಿತವಾಗಿತ್ತು. ಆದರೆ ಕಾದು ನೋಡುವ ತಂತ್ರಕ್ಕೆ ಮುಂದಾದ ಯಡಿಯೂರಪ್ಪ ನವರು ಜುಲೈ 25 ರಂದು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲು ತೀರ್ಮಾನ ಮಾಡಿದ್ದರು. ಆ ಮೂಲಕ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ಮಾಡಿದ್ದರು. ಆದರೆ ಅದಕ್ಕೂ ಹೈಕಮಾಂಡ್ ನಿರಾಕರಣೆ ಮಾಡಿತು. ಯಾವುದೇ ಕಾರಣಕ್ಕೂ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವಂತಿಲ್ಲ ಎಂದು ಸೂಚನೆ ಕೊಟ್ಟಿತ್ತು. ಹೀಗಾಗಿ ಯಡಿಯೂರಪ್ಪ ಅವರಿಗೆ ರಾಜೀನಾಮೆ ಕೊಡದೆ ಬೇರೆ ಯಾವುದೇ ದಾರಿ ಉಳಿದಿರಲಿಲ್ಲ.
ಇದನ್ನು ಓದಿ: ಮಾತು ಕೊಟ್ಟಂತೆ ನಡೆದುಕೊಂಡರು ಯಡಿಯೂರಪ್ಪ: ಬಸವರಾಜ ಬೊಮ್ಮಾಯಿ
ರಾಜೀನಾಮೆ ಬಳಿಕೆ ಯಡಿಯೂರಪ್ಪ ನವರು “ಯಾವುದೇ ಕಾರಣಕ್ಕೂ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ” ಎಂದರು. ರಾಜ್ಯಪಾಲರ ಹುದ್ದೆಯ ಆಕಾಂಕ್ಷಿಯಲ್ಲವೆಂದ ಅವರು ನಾನು ಸಾಮಾನ್ಯ ಕಾರ್ಯಕರ್ತನಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ಹೀಗಾಗಿ ನಾಳೆಯಿಂದಲೇ ಪಕ್ಷ ಸಂಘಟನೆ ಕೆಲಸ ಆರಂಭಿಸುತ್ತೇನೆ ಎಂದು ದೃಢವಾಗಿ ಹೇಳಿದರು.
ಕಳೆದ ಎರಡು ವರ್ಷಗಳ ಹಿಂದೆ ಸರಕಾರ ರಚನೆಯ ನಂತರವೂ ಸಂಪುಟ ರಚನೆಯ ಕಸರತ್ತಿನಲ್ಲಿ ಹಲವು ತೊಡಕುಗಳು ಎದುರಾಗಿದ್ದವು. ಹತ್ತು ವರ್ಷಗಳ ಹಿಂದೆ ಇಂತಹುದೇ ಪರಿಸ್ಥಿತಿಯನ್ನು ಯಡಿಯೂರಪ್ಪ ಎದುರಿಸಿದ್ದರು. ಸಾಧನಾ ಸಮಾವೇಶದಲ್ಲಿ ಮಾತನಾಡಿದ್ದು, ಕೇವಲ ಎರಡು ಸಾಲುಗಳ ರಾಜೀನಾಮೆ ಪತ್ರ ಕೊಟ್ಟಿದ್ದು ಹಾಗೂ ತಾವು ಸಕ್ರಿಯ ರಾಜಕಾರಣದಿಂದ ದೂರವಾಗುವುದಿಲ್ಲ ಎಂದಿರುವುದು ಮುಂದಿನ ನಡೆ ಬಗ್ಗೆ ತಿಳಿಸುತ್ತದೆ.