ಮದುರೈ: ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ತಮ್ಮ ಪ್ರವೇಶ ಸಮಾರಂಭದಲ್ಲಿ ಬಿಳಿ ಕೋಟು ಸ್ವೀಕರಿಸುವ ವೇಳೆ ಸಾಂಪ್ರದಾಯಿಕ ‘ತೋರಿಕೆ ಪ್ರತಿಜ್ಞೆ’ ಬದಲಾಗಿ ‘ಮಹರ್ಷಿ ಚರಕ ಶಪಥ’ ಮಾಡಿರುವುದು ಕಂಡುಬಂದಿದೆ.
ಶನಿವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ದೃಶ್ಯಗಳಿರುವ ವೀಡಿಯೋ ವೈರಲ್ ಆಗಿತ್ತು. ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಮತ್ತು ವಾಣಿಜ್ಯ ತೆರಿಗೆ ಸಚಿವ ಪಿ ಮೂರ್ತಿ ಭಾಗವಹಿಸಿದ್ದರು. ಹಿಂದಿ ಹೇರಿಕೆ ವಿವಾದ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ತಿಕ್ಕಾಟದ ನಡುವೆ ಈ ಘಟನೆ ನಡೆದಿದೆ.
ಇದನ್ನು ಓದಿ: ನೀಟ್ ರದ್ದತಿ: ಮಸೂದೆ ಅಂಗೀಕಾರಕ್ಕೆ ತಮಿಳುನಾಡು ವಿಧಾನಸಭೆ ವಿಶೇಷ ಅಧಿವೇಶನ
ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, “ಶಿಷ್ಟಾಚಾರವನ್ನು ಅನಗತ್ಯ ವಿಮುಖಗೊಳಿಸುವ ಕ್ರಮ” ಎಂದು ಹೇಳಿದೆ.
ಚರಕ ಶಪಥ್ ಎಂಬುದು ಆಯುರ್ವೇದದ ಸಂಸ್ಕೃತ ಪಠ್ಯವಾದ ಚರಕ ಸಂಹಿತೆಯ ಪಠ್ಯದ ಒಂದು ನಿರ್ದಿಷ್ಟ ಭಾಗವಾಗಿದೆ. ಈ ಪ್ರತಿಜ್ಞೆ ಕೆಲ ಪುರೋಗಾಮಿ ಮತ್ತು ಪ್ರಸ್ತುತವಲ್ಲದ ಅಂಶಗಳನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ವ್ಯಾಪಕ ಟೀಕೆಗೆ ಒಳಗಾಗಿದೆ. ಶಪಥದ ಒಂದು ಸಾಲಿನಲ್ಲಿ “ನಾನು (ವಿಶೇಷವಾಗಿ ಪುರುಷ ವೈದ್ಯ) ಮಹಿಳಾ ರೋಗಿಗಳಿಗೆ ಆಕೆಯ ಪತಿ ಅಥವಾ ಇತರ ನಿಕಟ ಸಂಬಂಧಿಗಳ ಸಮ್ಮುಖದಲ್ಲಲ್ಲದೇ ಚಿಕಿತ್ಸೆ ನೀಡುವುದಿಲ್ಲ” ಎಂಬ ಉಲ್ಲೇಖವಿದೆ.
“ವಿದ್ಯಾರ್ಥಿ ಸಂಪುಟದ ಕಾರ್ಯದರ್ಶಿ ವೆಬ್‍ನಿಂದ ಮಾಹಿತಿ ಪಡೆದು ಈ ಪ್ರತಿಜ್ಞೆಯನ್ನು ಸಿದ್ಧಪಡಿಸಿದ್ದಾರೆ. ನಮ್ಮ ಜತೆ ಈ ವಿಷಯವನ್ನು ಚರ್ಚಿಸಿರಲಿಲ್ಲ”ಎಂದು ಮದುರೈ ವೈದ್ಯಕೀಯ ಕಾಲೇಜಿನ ಡೀನ್ ಡಾ.ಎ.ರತಿನವೇಲು ಹೇಳಿದ್ದಾರೆ.
ಇದನ್ನು ಓದಿ: ‘ಹಿಂದಿ-ಭಾರತ’ದ ಕರೆ ಈಗೇಕೆ? : ಡಾ.ಜಿ.ಎನ್.ದೇವಿ
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಬೇಕು ಎಂದಿರುವ ರಾಜ್ಯ ಸರ್ಕಾರ, ಡೀನ್ ಎ.ರತ್ನವೇಲ್ ಅವರನ್ನು ಪದಚ್ಯುತಗೊಳಿಸುವಂತೆ ಆದೇಶಿಸಿತ್ತು. ಕಾಲೇಜಿನ ನಿಯಮ ಹಾಗೂ ಆಚರಣೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ ತಿಳಿಸಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಇತ್ತೀಚೆಗೆ, ವೈದ್ಯಕೀಯ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ʼಹಿಪೊಕ್ರೆಟಿಕ್ ಪ್ರಮಾಣʼಕ್ಕೆ ಬದಲಾಗಿ ‘ಚರಕ ಶಪಥ’ವನ್ನು ನೀಡುವಂತೆ ಸೂಚಿಸಿತ್ತು. ಬಿಜೆಪಿ ನೇತೃತ್ವದ ಸರ್ಕಾರದ ಹಿಂದುತ್ವದ ಅಜೆಂಡಾದ ಭಾಗವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಆಕ್ಷೇಪಗಳು ಸಹ ವ್ಯಕ್ತವಾಗಿದ್ದವು.