ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ, ಆಮ್ಲಜನಕ ಇರುವುದನ್ನು ಖಚಿತಪಡಿಸಿದ ಪ್ರಗ್ಯಾನ್ ರೋವರ್

ಬೆಂಗಳೂರು: ಚಂದ್ರನ ಮೇಲ್ಮೈನಲ್ಲಿ ವೈಜ್ಞಾನಿಕ ಅನ್ವೇಷಣೆ ನಡೆಸುತ್ತಿರುವ ಚಂದ್ರಯಾನ-3 ಮಿಷನ್‌, ದಕ್ಷಿಣ ಧ್ರುವದಲ್ಲಿ ಗಂಧಕ ಇರುವುದನ್ನು ದೃಢಪಡಿಸಿದೆ ಎಂದು ಇಸ್ರೋ  ತಿಳಿಸಿದೆ.

ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿರುವ ಇಸ್ರೋ,  ನಿರೀಕ್ಷಿಸಿದಂತೆ, ಪ್ರಗ್ಯಾನ್ ರೋವರ್‌, ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಪತ್ತೆ ಮಾಡಿದೆ ಎಂದು ಇಸ್ರೋ ಹೇಳಿದೆ.

“ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳು ಮುಂದುವರೆಯುತ್ತಿವೆ…ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್(LIBS) ಉಪಕರಣವು ದಕ್ಷಿಣ ಧ್ರುವದ ಸಮೀಪವಿರುವ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ (S) ಇರುವಿಕೆಯನ್ನು ದೃಢಪಡಿಸಿದೆ” ಎಂದು ಇಸ್ರೋ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.

ಪ್ರಾಥಮಿಕ ವಿಶ್ಲೇಷಣೆಗಳನ್ನು ಗ್ರಾಫ್ ಮೂಲಕ ನಿರೂಪಿಸಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇರುವಿಕೆಯನ್ನು ಅನಾವರಣಗೊಳಿಸಿದೆ. ಹೆಚ್ಚಿನ ಮಾಪನಗಳು ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವಿಕೆಯನ್ನು ಬಹಿರಂಗಪಡಿಸಿವೆ. ಹೈಡ್ರೋಜನ್ ಇರುವಿಕೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಇಸ್ರೋದ ಈ ಮಾಹಿತಿ ಇಡೀ ಜಗತ್ತಿಗೆ ಒಳ್ಳೆಯ ಸುದ್ದಿಯಾಗಿದೆ. ಇಲ್ಲಿಯವರೆಗೆ ಚಂದ್ರನ ದಕ್ಷಿಣ ಧ್ರುವವನ್ನು ತಲುಪಲು ಯಾವುದೇ ದೇಶಕ್ಕೆ ಸಾಧ್ಯವಾಗಿಲ್ಲ. ಮಿಷನ್ ಚಂದ್ರಯಾನ-3 ರ ಅಡಿಯಲ್ಲಿ, ಭಾರತವು ಚಂದ್ರನ ದಕ್ಷಿಣ ಧ್ರುವದ ರಹಸ್ಯಗಳನ್ನು ಜಗತ್ತಿಗೆ ಬಹಿರಂಗಪಡಿಸುತ್ತಿದೆ.

 

Donate Janashakthi Media

Leave a Reply

Your email address will not be published. Required fields are marked *