ಬೆಂಗಳೂರು: ಹಿಂದಿನ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರ ಒಳ ಸಂಚಿನ ರೀತಿಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹರನೂರು ಹೈಟೆಕ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಹಂತ – 2 ರ ಕೈಗಾರಿಕಾ ಪ್ರದೇಶದಲ್ಲಿ ಚಾಣಕ್ಯ ವಿಶ್ವವಿದ್ಯಾನಿಲಯಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎಂ.ಕೆ. ಶ್ರೀಧರ್ ರವರ ಸೆಂಟರ್ ಫಾರ್ ಸೋಷಿಯಲ್ ಸ್ಟಡೀಸ್ ಸಂಸ್ಥೆಗೆ 116.16 ಎಕರೆ ಜಮೀನನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಬಲವಾಗಿ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ಕಳೆದ ವರ್ಷ ಕೋವಿಡ್ ಎರಡನೆಯ ಅಲೆಯ ಎಪ್ರಿಲ್ – ಮೇ ತಿಂಗಳ ಲಾಕ್ಡೌನ್ ಸಂದರ್ಭದಲ್ಲಿ ಇಡೀ ರಾಜ್ಯವೇ ಅತ್ಯಂತ ಸಂಕಷ್ಟದಲ್ಲಿ ಹಾಗೂ ಆತಂಕದಲ್ಲಿರುವಾಗ ಸಂದರ್ಭದಲ್ಲಿಯೇ ಅಂದು ರಾಜ್ಯ ಸರ್ಕಾರ ಕೈಗೊಂಡ ಕ್ರಮವನ್ನು ವಿರೋಧಿಸುತ್ತೇವೆ ಎಂದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 207 ರಿಂದ ನೇರ ಪ್ರತ್ಯೇಕ ರಸ್ತೆ ಹೊಂದಿರುವ ಸದರಿ ಭೂಮಿಗೆ ಸಂಬಂಧಿಸಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ತಲಾ ಎಕರೆ ಬೆಲೆಯು 1.16 ಕೋಟಿ ರೂಪಾಯಿಗಳೆಂದು ಸೂಚಿಸಿದ್ದರೂ ಅದನ್ನು ಧಿಕ್ಕರಿಸಿ ಆರ್ಎಸ್ಎಸ್ ಒಲೈಸುವ ದುರುದ್ದೇಶದಿಂದ ಒಟ್ಟು ಜಾಗವನ್ನು ಕೇವಲ 50 ಕೋಟಿಗೆ ಮಾರಾಟ ಮಾಡಲು ಕ್ರಮವಹಿಸಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಅಪಾರ ನಷ್ಟಯುಂಟು ಮಾಡಲಾಗಿದೆ. ಆದ್ದರಿಂದ ಸಾರ್ವಜನಿಕ ಸಂಸ್ಥೆಗುಂಟಾದ ಅಪಾರ ನಷ್ಟ ತಡೆಯಲು ಕೂಡಲೇ ಸೆಸ್ ಸಂಸ್ಥೆಗೆ ನೀಡಲಾಗುವ ಭೂಮಿಯನ್ನು ವಾಪಾಸು ಪಡೆಯಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಸದರಿ ಇಲಾಖೆಯು ಈ ಸಂಸ್ಥೆಗೆ ಇಷ್ಟೊಂದು ಪ್ರಮಾಣದಲ್ಲಿ ಭೂಮಿ ಒದಗಿಸುವ ಅವಶ್ಯಕತೆ ಇದೆಯೇ ಮತ್ತು ಕಡಿಮೆ ಬೆಲೆಗೆ ನೀಡಿದಲ್ಲಿ ಇಲಾಖೆಗೆ ನಷ್ಟವಾಗುವುದಿಲ್ಲವೇ? ಎಂದು ಮರು ಪರಿಶೀಲಿಸುವಂತೆ ಆರ್ಥಿಕ ಇಲಾಖೆ ಕೇಳಿದ್ದಾಗಲೂ ಈ ರೀತಿಯಲ್ಲಿ ಅಗ್ಗದ ದರಕ್ಕೆ ಮಾರಾಟ ಮಾಡುವ ಮೂಲಕ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಂತೆ ಸುಮಾರು 135 ಕೋಟಿ ನಷ್ಟ ಉಂಟು ಮಾಡಲಾಗಿದೆ.
ಆದರೇ, ವಾಸ್ತವಿಕವಾಗಿ ಅಭಿವೃದ್ಧಿಪಡಿಸಲ್ಪಟ್ಟ ಜಮೀನಿನ 2021 ರ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ನಷ್ಟವು ಹಲವು ಹತ್ತು ಪಟ್ಟು ಹೆಚ್ಚಾಗಲಿದೆ. ರೈತರಿಂದ ಖರೀದಿಸುವಾಗ ಕೆಐಎಡಿಬಿಯು ತಲಾ ಎಕರೆಗೆ 1.5 ಕೋಟಿ ಪಾವತಿಸಿದೆ ಎನ್ನಲಾಗಿದೆ. ಖರೀದಿ ನಷ್ಟವೇ ಸಂಸ್ಥೆಗೆ 125 ಕೋಟಿ ರೂ.ಗಳಿಗೂ ಅಧಿಕವಾಗುತ್ತದೆ.
ಕರ್ನಾಟಕದಲ್ಲಿ ಮುಖ್ಯವಾಗಿ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಗಳ ಮೇಲೆ ಧಾಳಿ ನಡೆಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಅಪರಾಧದಲ್ಲಿ ತೊಡಗಿರುವ ರಾಜ್ಯ ಸರಕಾರ, ಈ ರೀತಿ ಕನ್ನಡ ಭಾಷೆ ಹಾಗೂ ಜನಗಳ ಮೇಲೆ ಧಾಳಿ ಮಾಡಲು, ಕನ್ನಡದ ನೆಲವನ್ನು ಬೇಕಾಬಿಟ್ಟಿ ದರಕ್ಕೆ ಮಾರಲಾಗುತ್ತಿರುವುದು ಮತ್ತೊಂದು ಅಪರಾಧವಾಗಿದೆ.
ಆದ್ದರಿಂದ, ರೈತರಿಂದ ಸ್ವಾಧೀನಪಡಿಸಿಕೊಂಡು, ಕೈಗಾರಿಕಾಭಿವೃದ್ಧಿಗಾಗಿ ಮೀಸಲಿಟ್ಟ ಈ ಜಮೀನುಗಳನ್ನು ಕನ್ನಡ ಹಾಗೂ ಕನ್ನಡಿಗರ ವಿರೋಧಿ ಕಾರ್ಯಕ್ಕಾಗಿ ಒದಗಿಸಿರುವುನ್ನು ರದ್ದುಪಡಿಸಿ ವಾಪಾಸ್ಸು ಪಡೆಯಲು ಮತ್ತು ಇಂತಹ ಅಗ್ಗದರದ ಮಾರಾಟಕ್ಕೆ ಮುಂದಾದ ಕಾರ್ಯವನ್ನು ತನಿಖೆಗೊಳಪಡಿಸಲು ಅಪರಾಧಿಗಳನ್ನು ಶಿಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಿಪಿಐ(ಎಂ) ಪಕ್ಷವು ತಿಳಿಸಿದೆ.