ಚಳಿಗಾಲದ ಅಧಿವೇಶನದಂದು ಟ್ರ್ಯಾಕ್ಟರ್ ಜಾಥಾ ನಡೆಯಲಿದೆ: ಎಸ್‌ಕೆಎಂ

ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಆದರೂ ಸಹ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಜಾಥಾವನ್ನು ನಡೆಸಲಾಗುವುದು ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಮುಖಂಡರು ಸ್ಪಷ್ಟಪಡಿದಿದ್ದಾರೆ.

ಈ ಕುರಿತು ಭಾನುವಾರ ನಡೆಯಲಿರುವ ಸಭೆಯಲ್ಲಿ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿರುವ ರೈತರ ಮುಖಂಡರು, ಈ ಶಾಂತಿಯುತ ಜಾಥಾದಲ್ಲಿ 500 ರೈತರು ಭಾಗವಹಿಸಲಿದ್ದಾರೆ ಎಂದಿದ್ದಾರೆ.

ಈ ಹಿಂದೆ ಚಳಿಗಾಲದ ಅಧಿವೇಶನದ ಸಂದರ್ಭ ಪ್ರತಿದಿನವೂ ಸಂಸತ್ ಭವನದವರೆಗೂ ಟ್ರ್ಯಾಕ್ಟರ್ ಜಾಥಾ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಘೋಷಿಸಿತ್ತು. ಚಳಿಗಾಲದ ಅಧಿವೇಶನವು ನವೆಂಬರ್ 29ರಂದು ಆರಂಭವಾಗಲಿದೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆದಿರುವ ಪ್ರಧಾನಿ ಮೋದಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

‘ಸಂಸತ್ತಿಗೆ ನಮ್ಮ ಟ್ರ್ಯಾಕ್ಟರ್ ಜಾಥಾ ಇನ್ನೂ ಕೈಬಿಟ್ಟಿಲ್ಲ. ಅಂದೋಲನದ ಭವಿಷ್ಯ ಹಾಗೂ ಎಂಎಸ್‌ಪಿ ಸಮಸ್ಯೆಗಳ ಕುರಿತು ನಾಳೆ ಸಿಂಘು ಗಡಿಯಲ್ಲಿ ಸೇರಲಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ರೈತ ಮುಖಂಡ ದರ್ಶನ್ ಪಾಲ್ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *