ಚಳಿಗಾಲ ಅಧಿವೇಶನ; 9 ದಿನದಲ್ಲಿ 41 ಗಂಟೆ 21 ನಿಮಿಷ ಮಾತ್ರ ಚರ್ಚೆ

ಬೆಳಗಾವಿ: ಹತ್ತು ದಿನಗಳು ಎಂದು ನಿಗದಿಯಾಗಿ ಒಂದು ದಿನ ಮೊಟಕುಗೊಂಡು ಒಂಭತ್ತು ದಿನಗಳು ಮಾತ್ರ ನಡೆದ ವಿಧಾನ ಮಂಡಲ ಅಧಿವೇಶನದ ಬಗ್ಗೆ ಮಾಹಿತಿ ನೀಡಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವ ಹೆಗಡೆ ಕಾಗೇರಿ ಅವರು, ಒಟ್ಟು ಒಂಬತ್ತು ದಿನಗಳ ಅಧಿವೇಶನದಲ್ಲಿ ಸುಮಾರು 41 ಗಂಟೆ 21 ನಿಮಿಷಗಳ ಕಾಲ ಕಲಾಪ ನಡೆದಿದೆ ಎಂದರು.

ಬೆಳಗಾವಿ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ 13 ಮಸೂದೆ ಮಂಡಿಸಲಾಗಿದ್ದು, ಒಂಬತ್ತು ವಿಧೇಯಕ ಅಂಗೀಕಾರಗೊಂಡಿದೆ ಎಂದರು.

ಇದನ್ನು ಓದಿ: ವಿಧಾನಮಂಡಲ ಅಧಿವೇಶನ; ಉತ್ತರ ಕರ್ನಾಟಕ ಭಾಗದ ವಿಷಯಗಳ ಚರ್ಚೆ ಎಂದು?

ಕಲಾಪದಲ್ಲಿ ಒಟ್ಟು 2125 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ ಸದನದಲ್ಲಿ ಉತ್ತರಿಸಬೇಕಿದ್ದ 150 ಪ್ರಶ್ನೆಗಳ ಪೈಕಿ 146 ಪ್ರಶ್ನೆಗಳಿಗೆ ಮತ್ತು ಲಿಖಿತ ಮೂಲಕ ಉತ್ತರಿಸಬೇಕಿರುವ 1923 ಪ್ರಶ್ನೆಗಳ ಪೈಕಿ 1614 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನಸೆಳೆಯುವ 289 ಸೂಚನೆಗಳ ಪೈಕಿ 85 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ಹೇಳಿದರು.

ಅಧಿವೇಶನದಲ್ಲಿ ಶಾಸಕರ ಹಾಜರಾತಿಯೂ ತೃಪ್ತಿ ತಂದಿಲ್ಲ ಎಂದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪೂರ್ಣ ಹಾಜರಾತಿ ಕಡ್ಡಾಯವೆಂದು ನಾನು ಹೇಳಿದ್ದೆ. ಆದರೂ ಕೆಲವರು ಬೇಜವಾಬ್ದಾರಿ ತೋರಿ ಸದನದಿಂದ ದೂರ ಉಳಿದಿದ್ದಾರೆ. ಒಟ್ಟು ಪ್ರತಿಶತ 74 ರಷ್ಟು ಹಾಜರಾತಿ ಇತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದವರು ತಾವು ಎಂಬುದನ್ನು, ಗೈರಾದವರು ಅರ್ಥ ಮಾಡಿಕೊಳ್ಳವೇಕು. ಇದು ಸರಿಯಾದ ಬೆಳವಣಿಗೆಯಲ್ಲ ಎಂದರು.

ಇದನ್ನು ಓದಿ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಇಲ್ಲ: ಸಚಿವ ಮಾಧುಸ್ವಾಮಿ

ದಿನೇಶ ಗುಂಡೂರಾವ್‌, ಡಿ.ಸಿ.ಗೌರಿಶಂಕರ, ಹರೀಶ್‌ ಪೂಂಜಾ, ಎಂ.ಕೃಷ್ಣಪ್ಪ, ಶರತ್‌ಕುಮಾರ್ ಬಚ್ಚೇಗೌಡ, ಸಿ.ಎಸ್‌.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಜಮೀರ್‌ ಅಹಮದ್‌ ಖಾನ್‌ ಹಾಗೂ ಅನಿತಾ ಕುಮಾರಸ್ವಾಮಿ ಅವರು ಅನುಮತಿ ಪಡೆಯದೇ ಗೈರಾಗಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಎ.ಎಸ್‌.ರಾಮದಾಸ, ರವೀಂದ್ರನಾಥ, ಡಿ.ಸಿ. ತಮ್ಮಣ್ಣ ಅನುಮತಿ ಪಡೆದು ಗೈರಾಗಿದ್ದಾರೆ ಎಂದು ತಿಳಿಸಿದರು.

ಮುಖ್ಯವಾಗಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಚರ್ಚೆಯಾಗಬೇಕಿತ್ತು. ಇದು ಎಲ್ಲರ ನಿರೀಕ್ಷೆಯೂ ಆಗುತ್ತು. ಆದರೆ, ಹೆಚ್ಚಿನ ಕಾಲಾವಕಾಶ ಸಿಗದಿದ್ದರೂ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ನಡೆಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಮೊದಲ ವಾರದ ಕಲಾಪದಲ್ಲೇ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಗಡಿ ವಿಚಾರವಾಗಿ ಮಹಾರಾಷ್ಟ್ರ ಅನಾವಶ್ಯಕವಾಗಿ ಸೃಷ್ಟಿಸಿರುವ ಗೊಂದಲಗಳು ವಿವಾದಗಳಿಗೆ ಖಂಡಿಸಲಾಗಿದ್ದು, ರಾಜ್ಯದ ಹಿತರಕ್ಷಣೆ ಗೆ ಕಟಿಬದ್ಧರಾಗಿರುವುದಾಗಿ ಸದನ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಇದೇ ವೇಳೆ 80 ಬೃಹತ್‌ ಪ್ರತಿಭಟನೆಗಳು, 20 ಮನವಿಗಳು ಸೇರಿ 100 ಹೋರಾಟಗಳು ಎದುರಾಗಿವೆ. ಅಧಿವೇಶನ ವೀಕ್ಷಕರ ಸಂಖ್ಯೆಯಲ್ಲಿಯೂ ದಾಖಲೆಯಾಗಿದೆ. ಬೆಂಗಳೂರಿನಲ್ಲಿ ನಡೆದ ಅಧಿವೇಶನವನ್ನು 15000 ಜನರು ವೀಕ್ಷಿಸಿದ್ದರು. ಆದರೆ ಬೆಳಗಾವಿ ಅಧಿವೇಶನವನ್ನು 20 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದೊಂದು ದಾಖಲೆ ಎಂದು ಕಾಗೇರಿ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *