ಬೆಂಗಳುರು ಫೆ 06 : ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದಾದ್ಯಂತ ರೈತರು ರಸ್ತೆ ತಡೆಯುವ ಮೂಲಕ ಚಕ್ಕಾ ಜಾಮ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗೆ ರಾಜ್ಯವ್ಯಾಪಿ ವ್ಯಾಪಲ ಬೆಂಬಲ ವ್ಯಕ್ತವಾಗಿದೆ.
ವಿಜಯಪುರದ ಸಿಂದಗಿ ಬೈಪಾಸ್ ಬಳಿ ಹುಬ್ಬಳ್ಳಿ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 218 ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಪ್ರಾಂತರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆ, ಸಿಐಟಿಯು, ಎಐಯುಟಿಯುಸಿ ಸೇರಿದಂತೆ ಮತ್ತಿತರ ಸಂಘಟನೆಗಳು ಸಂಯುಕ್ತ ಕರ್ನಾಟಕ ಹೆಸರಿನಲ್ಲಿ ಹೆದ್ದಾರಿ ತಡೆಯಲ್ಲಿ ಭಾಗವಹಿಸಿವೆ. ಜೈಜವಾನ್, ಜೈಕಿಸಾನ್ ಘೋಷಣೆಗಳು ಮೊಳಗುತ್ತಿವೆ. ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿಗೇಟ್ ಬಳಿ ರೈತ ಸಂಘ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ರೈತ, ಕಾರ್ಮಿಕ ಮುಖಂಡರನ್ನು ಬಂಧಿಸಿದರು. ಚಿಕ್ಕಮಗಳೂರಿನಲ್ಲಿ ರೈತಸಂಘ- ಹಸಿರು ಸೇನೆ, ಕಿಸಾನ್ ಮೋರ್ಚಾ ಘಟಕ, ಬಿಎಸ್ಪಿ ಜಿಲ್ಲಾ ಘಟಕದವರು ನಗರದ ಹೊರವಲಯದ ಹಿರೇಮಗಳೂರು ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಹಾಸನದಲ್ಲಿ ಕರ್ನಾಟಕ ಪ್ರಾಂತರೈತ ಸಂಘಟನೆ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಸಿಐಟಿಯು, ದಲಿತ ಸಂಘಟನೆಗಳು ರಸ್ತೆ ತಡೆ ನಡೆಸಿದರು, ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು. ರಸ್ತೆಯಲ್ಲಿಯೇ ರೈತರು ಊಟಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ರಾಮನಗರದ ಎಪಿಎಂಸಿ ವೃತ್ತದಲ್ಲಿ ರೈತ ಸಂಘಟನೆಗಳು ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಿದವು. ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಮಳುವಳ್ಳಿಯಲ್ಲಿ, ಮಂಡ್ಯದಲ್ಲಿ ಕರ್ನಾಟಕ ಪ್ರಾಂತರೈತ ಸಂಘದ ಹಾಗೂ ಜನವಾದಿ ಮಹಿಳಾ ಸಂಘಟನೆ ಮತ್ತು ಸಿಐಟಿಯು ನೇತೃತ್ವದಲ್ಲಿ ಮಂಡ್ಯದ ಹೊರವಲಯ ವಿ.ಸಿ.ಫಾರಂ ಗೇಟ್ ಬಳಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿ ಟೋಲ್ ಬಳಿ ಹೆದ್ದಾರಿ ತಡೆದು ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ನಿಚ್ಚಣಕಿ ರೈತರು ರಸ್ತಾರೋಕೋ ನಡೆಸಿದ್ದಾರೆ. ಕಿತ್ತೂರು, ತಡಕೋಡ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಪ್ರಯಾಣಿಕರು ಮತ್ತು ರೈತ ಸಂಘಟನೆ ಕಾರ್ಯಕರ್ತರ ಮಧ್ಯ ಮಾತಿನ ಚಕಮಕಿ ನಡೆದಿದ್ದು, ನಮ್ಮ ಮೇಲೆ ವಾಹನ ಚಲಿಸಿಕೊಂಡು ಹೋಗಿ ಎಂದು ರೈತರು ಹಠ ಹಿಡಿದು ಕೇಂದ್ರ ಸರ್ಕಾರದ ವಿರದ್ಧ ಘೋಷಣೆ ಕೂಗಿ ಆಕ್ರೋಶ. ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ಮೈಸೂರು ಬೆಂಗಳೂರು ಹೆದ್ದಾರಿ ಹಾಗೂ ರಿಂಗ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಯಲಹಂಕದ ಬಳಿ ರಸ್ತೆ ತಡೆ ನಡೆಸುತ್ತಿದ್ದ ರೈತರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ದೇವನಹಳ್ಳಿ ಬಳಿ ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಂಗಳೂರು – ಹೈದ್ರಾಬಾದ್ ರಸ್ತೆ ತಡೆ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ರೈತರು, ಕಾರ್ಮಿಕರು ರಸ್ತೆ ತಡೆ ನಡೆಸಿದ್ದರಿಂದ ಶಿವಮೊಗ್ಗ ಸಾಗರ ರಸ್ತೆ ಸಂಪೂರ್ಣವಾಗಿ ಬಂದಾಗಿತ್ತು. ಕೊಪ್ಪಳ, ರಾಯಚೂರು, ಗದಗ್, ಹಾವೇರಿ, ದಾವಣಗೆರೆ ಸೇರಿದಂತೆ ಇತರ ಕಡೆಗಳಲ್ಲಿ ಚೆಕ್ ಜಾಮ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.