ಚೈನಾದ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ: ಭಾರತೀಯ ಮುಖಂಡರು ಅದರ ಯಶಸ್ಸಿನಿಂದ ಕಲಿಯಬೇಕಾದ್ದು ಬಹಳ ಇದೆ-ಭಾಗ 3 – ಸುಧೀಂದ್ರ ಕುಲಕರ್ಣಿ

ಮೂಲ ಇಂಗ್ಲಿಷ್: ಸುಧೀಂದ್ರ ಕುಲಕರ್ಣಿ
(ಕೃಪೆ: scroll.in ಜೂನ್ 17, 2021)

ಇದೇ ಜುಲೈ 1ರಿಂದ ಚೈನಾ ಕಮ್ಯುನಿಸ್ಟ್ ಪಕ್ಷವು ಶತಮಾನೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಸುಧೀಂದ್ರ ಕುಲಕರ್ಣಿ ಅವರು scroll.in ನಲ್ಲಿ ದೀರ್ಘ ಲೇಖನ ಬರೆದಿದ್ದಾರೆ. ಅದರಲ್ಲಿ ಅವರು ವಿವರವಾಗಿ ಅದರ ಸಾಧನೆಗಳ ಕುರಿತು ಬರೆದಿದ್ದಾರೆ. “ಭಾರತದ ‘ಚೈನಾ ಬಹಿಷ್ಕರಿಸಿ’ ಬ್ರಿಗೇಡ್ ಕೂಡ ನಮ್ಮ ನೆರೆಹೊರೆಯ ದೇಶವು ಕಳೆದ ಕೆಲವು ದಶಕಗಳಲ್ಲಿ ಸಾಧಿಸಿದ ಅಸಾಧಾರಣ ಪ್ರಗತಿಯನ್ನು ಒಪ್ಪಲೇಬೇಕು.” ಎಂಬುದು ಅವರ ಒಟ್ಟು ಅಭಿಪ್ರಾಯ. ಇದನ್ನು ಸರಣಿ ಲೇಖನವಾಗಿ ಹಲವು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ಮೊದಲ ಎರಡು ಕಂತುಗಳಲ್ಲಿ, ಭಾರತದಲ್ಲಿ ಬರಿಯ ಘೋಷಣೆಗಳಾಗಿ ಉಳಿದಿರುವ, ಚೈನಾ ನಿಜವಾಗಿಯೂ ಸಾಧಿಸಿರುವ ‘ಆತ್ಮನಿರ್ಭರತೆ’ ಮತ್ತು ‘ಗರೀಬಿ ಹಟಾವೋ’ ಹಾಗೂ ವಿಜ್ಞಾನ-ತಂತ್ರಜ್ಞಾನ, ಪರಿಸರ-ಸ್ನೇಹಿ ಅಭಿವೃದ್ಧಿಯ ಸಾಧನೆ ಕುರಿತು ಬರೆದಿದ್ದಾರೆ. ಈಗ ಭಾಗ-3ನ್ನು ಓದಿ.

ಚೈನಾ ಹೇಗೆ ಇದನ್ನು ಸಾಧಿಸಿತು? ಇದಕ್ಕೆ ಉತ್ತರ ಕಂಡುಕೊಳ್ಳಲು ಈ ಕೆಳಗಿನ ಸತ್ಯವನ್ನು ನಾವು ಮೊದಲು ಅರಿಯಬೇಕು: ಜನರ ಐಕ್ಯತೆಯ, ಸಂಘಟಿತ ಹಾಗೂ ಸ್ಪಷ್ಟ ನಿರ್ದೇಶಿತ ಪ್ರಯತ್ನಗಳಿಲ್ಲದೇ ಅಷ್ಟು ಕಡಿಮೆ ಅವಧಿಯಲ್ಲಿ ಯಾವ ದೇಶವೂ ಅಂತಹ ಅದ್ಭುತವಾದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಸಿಂಗಪುರದ ಕನಸುಗಾರ ನಾಯಕ ಲೇ ಕೌನ್ ಯೂ ಒಮ್ಮೆ ಹೇಳಿದ್ದರು: “ಚೈನಾದಲ್ಲಿ ಕಮ್ಯುನಿಸಂ ವಿಫಲವಾಗಿದೆ, ಆದರೆ ಚೈನಾದ ಕಮ್ಯುನಿಸ್ಟ್ ಪಕ್ಷ ಗೆಲುವು ಸಾಧಿಸಿದೆ.” ಅವರು ಹೇಳಿದ್ದರ ಅರ್ಥವೇನೆಂದರೆ, ಚೈನಾದಲ್ಲಿ ಜನರ ಐಕ್ಯತೆಯನ್ನು ಬಲಪಡಿಸಿದ, ದೇಶಕ್ಕೆ ಕಾರ್ಯವಿಧಾನದ ಕಣ್ಣೋಟವನ್ನು ಒದಗಿಸಿದ, ಮತ್ತು ಒಂದು ರಾಜಕೀಯ ಮುಖಂಡತ್ವ ಹಾಗೂ ಎಲ್ಲವನ್ನೂ ಒಳಗೊಳ್ಳುವ ನಿರ್ವಹಣಾ ವಿಧಾನ ಈ ಎರಡೂ ಅಗತ್ಯಗಳನ್ನು ಪೂರೈಸಿದ ಸಂಘಟನೆ ಯಾವುದೆಂದರೆ, ಅದು ಚೈನಾ ಕಮ್ಯುನಿಸ್ಟ್ ಪಕ್ಷ. ಚೈನಾವು ತನ್ನದೇ ಆದ ಅಸಾಧಾರಣವಾದ ಪಕ್ಷ-ಪ್ರಭುತ್ವ ವ್ಯವಸ್ಥೆಯೊಂದನ್ನು ಸೃಷ್ಟಿಸಿಕೊಂಡಿದೆ, ಎಲ್ಲದಕ್ಕೂ ಎಲ್ಲ ಕಡೆಯೂ ಪಕ್ಷ ನಾಯಕತ್ವ ಕೊಡುತ್ತದೆ – ಈ ಅಪೂರ್ವವಾದ ಸಂಗತಿಯು ಘನೀಕರಿಸಿದ್ದು 2012 ರಲ್ಲಿ ಷಿ ಅವರು ಸಿಪಿಸಿಯ ಪ್ರಧಾನ ಕಾರ್ಯದರ್ಶಿಯಾಗಿ ಆದಾಗಿನಿಂದ. ಇದು ಬಹು ಪಕ್ಷಗಳ ಪ್ರಜಾಪ್ರಭುತ್ವದಲ್ಲಿ ಅಸಂಗತ ಹಾಗೂ ಒಪ್ಪಲಾಗದೆಂದು ಕಾಣುತ್ತದೆ.

ಇದನ್ನು ಓದಿ: ಚೈನಾದ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ: ಭಾರತೀಯ ಮುಖಂಡರು ಅದರ ಯಶಸ್ಸಿನಿಂದ ಕಲಿಯಬೇಕಾದ್ದು ಬಹಳ ಇದೆ : ಸುಧೀಂದ್ರ ಕುಲಕರ್ಣಿ : ಭಾಗ-1

ಆದರೆ ಭಾರತದ ಆಡಳಿತ ವ್ಯವಸ್ಥೆ ಅಂತರ್ಗತವಾಗಿ ಮೇಲ್ದರ್ಜೆಯದು ಎಂದು ನಾವು ಸೋಗು ಹಾಕಬೇಕಿಲ್ಲ. ಕಡುಬಿನ ರುಚಿ ತಿಳಿಯಬೇಕೆಂದರೆ ಅದನ್ನು ತಿನ್ನಬೇಕು ಹೇಗೋ, ಹಾಗೆಯೇ ಕಡುಬನ್ನು ಉತ್ತಮಪಡಿಸಲು ಭಾರತದ ಬಹು ಪಕ್ಷಗಳ ವ್ಯವಸ್ಥೆಯಲ್ಲಿ ಪ್ರಯತ್ನಗಳೇನು ಕಡಿಮೆ ಇಲ್ಲ. ನಿರ್ದಿಷ್ಟವಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಇತರ ಭಾರತೀಯ ರಾಜಕೀಯ ಪಕ್ಷಗಳ ಮುಖಂಡರುಗಳು ಸ್ವಲ್ಪಮಟ್ಟಿಗೆ ಮುಕ್ತ ಮನಸ್ಸಿನಿಂದ ಆಧ್ಯಯನ ಮಾಡಿ ಸಿಪಿಸಿಯು ಅವರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಲು ಕಾರಣವಾದ ಅಂಶಗಳೇನು ಎಂದು ತಿಳಿದುಕೊಳ್ಳಬೇಕು. ಅವರು ಲಾಭದಾಯಕವಾಗಿ ಈ ಕೆಳಗಿನ ಐದು ಪಾಠಗಳನ್ನು ಕಲಿಯಬಹುದು.

ಮೊದಲನೆಯದು: ಅತ್ಯಂತ ಪ್ರತಿಭಾವಂತರನ್ನೂ ಒಳಗೊಂಡಂತೆ ಬಹುತೇಕ ಭಾರತೀಯ ರಾಜಕಾರಣಿಗಳ ಸಮಯ ಹಾಗೂ ಬೌದ್ಧಿಕ ಶಕ್ತಿಯು ಚುನಾವಣಾ ಕಾದಾಟದಲ್ಲಿ ಅಥವಾ ಚುನಾವಣೆಗಳ ಮಧ್ಯೆ ತಮ್ಮ ವಿರೋಧಿಗಳ ಜತೆ ಹೆಣಗಾಡುವುದರಲ್ಲೇ ಕಳೆದುಹೋಗುತ್ತದೆ. ಯಾರೂ ಕೂಡ ಅದನ್ನು ಅನಿವಾರ್ಯವಾಗಿ ಇಷ್ಟಪಟ್ಟು ಮಾಡುವುದಿಲ್ಲ, ಆದರೆ ಅದು ಅವರ ಮೇಲೆ ಬಲವಂತವಾಗಿ ಹೇರಲ್ಪಟ್ಟ ವ್ಯವಸ್ಥೆಯ ಅವಶ್ಯಕತೆ. ವಾಸ್ತವವಾಗಿ, ವೈಯಕ್ತಿಕ ಗೆಲ್ಲುವ ಶಕ್ತಿ ಹಾಗೂ ಗರಿಷ್ಠ ಸಂಖ್ಯೆಯ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯವು ಭಾರತೀಯ ರಾಜಕೀಯದಲ್ಲಿ ಒಬ್ಬ ವ್ಯಕ್ತಿ ಮೇಲೆ ಬರಲು ಮಾನದಂಡವಾಗುತ್ತದೆ. ಸಹಜವಾಗಿಯೇ, ಹಣಬಲ, ಧಾರ್ಮಿಕ ಹಾಗೂ ಜಾತಿ ಭಾವನೆಗಳನ್ನು ಬಳಸಿಕೊಳ್ಳುವುದು, ಅಸಾಧ್ಯವಾದ ಜನಪ್ರಿಯ ಭರವಸೆಗಳನ್ನು ನೀಡುವುದು (“ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡುವುದು”) ಹಾಗೂ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳುವುದು ಮುಂತಾದವು ಬಹುಪಾಲು ರಾಜಕಾರಣಿಗಳ ಮತ್ತು ಅವುಗಳ ಪಕ್ಷಗಳ ಬತ್ತಳಿಕೆಯಲ್ಲಿರುವ ಬಾಣಗಳಾಗಿರುತ್ತವೆ.

ಇಡೀ ರಾಜಕೀಯ ವ್ಯವಸ್ಥೆಯೇ ಮತಭೇದ ಹಾಗೂ ನಿರಂತರ ಆಂತರಿಕ ತಿಕ್ಕಾಟಗಳ ಮೇಲೆ ನಿಂತಿರುವಾಗ, “ಭಗೀರಥ ಪ್ರಯತ್ನ”ಕ್ಕಾಗಿ ಜನರ ಶಕ್ತಿಸಾಮರ್ಥ್ಯಗಳನ್ನು ಒಟ್ಟುಗೂಡಿಸುವ, ಅಣಿನೆರೆಸುವ ಮತ್ತು ನಿರ್ದೇಶಿಸುವ ಸಲುವಾಗಿ ಇತಿಹಾಸದ ದಿಕ್ಕನ್ನೇ ಬದಲಾಯಿಸಬಹುದಾದಂತಹ ಕೆಲಸಕಾರ್ಯಗಳನ್ನು ಕೈಗೊಳ್ಳಬಹುದು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ, ನಮ್ಮ ಪಕ್ಷಗಳು ಹಾಗೂ ಮುಖಂಡರುಗಳು ತಮ್ಮ ಶಕ್ತಿಸಾಮರ್ಥ್ಯಗಳನ್ನು ವ್ಯರ್ಥಮಾಡುತ್ತಿರುವಾಗ, ಪ್ರಮುಖ ಸವಾಲುಗಳನ್ನು ಪರಿಹರಿಸಲು ಎಲ್ಲಾ ಪಕ್ಷಗಳ ಸಹಮತ ಹಾಗೂ ಸಹಕಾರಕ್ಕಾಗಿನ ಅವಕಾಶ ಬಹಳ ಕಡಿಮೆಯೇ ಸರಿ. ಆದ್ದರಿಂದ ನಮ್ಮ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಗಳು ಕೇಂದ್ರ ಹಾಗೂ ರಾಜ್ಯಗಳಲ್ಲಿ ರಾಷ್ಟ್ರೀಯ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕಾಗಿ ದೀರ್ಘಕಾಲೀನ ಗುರಿಗಳನ್ನು ನಿಗದಿಮಾಡಿ, ಮತ್ತು ಗುರಿ ಮುಟ್ಟುವವರೆಗೂ ಯಾವುದೇ ಅಡೆತಡೆಯಿಲ್ಲದೇ ಬದ್ಧತೆಯಿಂದ ಬೆನ್ನಟ್ಟಿ ಅನುಸರಿಸುವುದು ತೀರ ವಿರಳವೇ ಸರಿ. ಈ ವಿಷಯದಲ್ಲಿ ಚೈನಾದ ದಾಖಲೆ ಉತ್ತಮವಾಗಿದ್ದರೆ – ಮತ್ತು ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ – ಪಕ್ಷವ್ಯಾಪಿ, ಸರ್ಕಾರವ್ಯಾಪಿ, ಆರ್ಥಿಕವ್ಯಾಪಿ ಹಾಗೂ ದೇಶವ್ಯಾಪಿ ಪರಿವರ್ತನೆಯ ಕಾರ್ಯಕ್ರಮಗಳಿಗೆ ನೆರವಾಗುವ ವ್ಯವಸ್ಥೆಯೊಂದನ್ನು ಸಿಪಿಸಿ ನಿರೂಪಿಸಿರುವುದೇ ಮುಖ್ಯ ಕಾರಣ.

ಇದನ್ನು ಓದಿ: ಚೈನಾದ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ: ಭಾರತೀಯ ಮುಖಂಡರು ಅದರ ಯಶಸ್ಸಿನಿಂದ ಕಲಿಯಬೇಕಾದ್ದು ಬಹಳ ಇದೆ: ಭಾಗ-2 -ಸುಧೀಂದ್ರ ಕುಲಕರ್ಣಿ

ಎರಡನೆಯದು: ಬಹು ಮಟ್ಟಿಗೆ, ರಾಷ್ಟ್ರೀಯ ಹಾಗೂ ಪ್ರಾಂತೀಯ ಹಂತಗಳಲ್ಲಿ ಸಮರ್ಥ, ಅನುಭವಿ ಹಾಗೂ ಉತ್ತಮ ಶಿಕ್ಷಣ ಪಡೆದ ಸಿಬ್ಬಂದಿಗಳು ಉನ್ನತ ಸ್ಥಾನಕ್ಕೆ ಏರುವ ವ್ಯವಸ್ಥೆಯೊಂದನ್ನು ಕೂಡ ಸಿಪಿಸಿ ಸಿದ್ಧಪಡಿಸಿದೆ. ಕಾಲ ಕಾಲಕ್ಕೆ ಸಿಪಿಸಿ ನಿಗದಿಪಡಿಸುವ ನಿರ್ಧಾರಿತ ಗುರಿ ಹಾಗೂ ಉದ್ದೇಶಗಳನ್ನು ಸಾಧಿಸುವುದು ಅವರು ಉತ್ತರದಾಯಿತ್ವವಾಗಿರುತ್ತಾರೆ. ಹೀಗೆಂದ ಮಾತ್ರಕ್ಕೆ ಅಲ್ಲಿ ಗುಂಪುಗಾರಿಕೆ, ಸ್ವಜನಪಕ್ಷಪಾತ ಹಾಗೂ “ಸಂಪರ್ಕಗಳನ್ನು” ಬಳಸಿ ವ್ಯವಸ್ಥೆಯ ಏಣಿ ಏರುವುದಿಲ್ಲ ಅಂತೇನೂ ಅಲ್ಲ. ಆದರೆ, ಸಾಮಾನ್ಯವಾಗಿ, ವ್ಯವಸ್ಥೆಯು ಕಳಪೆ ಜನರನ್ನು ಜರಡಿ ಹಿಡಿದು ಹೊರ ಹಾಕುತ್ತದೆ.

ಅಲ್ಲಿ ಮತ್ತೊಂದು ಬಹು ಮುಖ್ಯವಾದ ವ್ಯತ್ಯಾಸ ಇದೆ. ಚೈನಾದಲ್ಲಿ, ಕಮ್ಯುನಿಸ್ಟ್ ಮುಖಂಡರು ಹಲವಾರು ಪ್ರಾಂತಗಳಲ್ಲಿ ಸೇವೆ ಸಲ್ಲಿಸದೆ ಮತ್ತು ತಳಮಟ್ಟದಿಂದ ಮೇಲಿನವರೆಗೆ ಅನೇಕ ವಿಷಯಗಳಲ್ಲಿ ಜವಾಬ್ದಾರಿ ಹೊತ್ತು ಅನುಭವವಿಲ್ಲದೆ ಉನ್ನತ ಸ್ಥಾನಕ್ಕೆ ಹೋಗುವುದಿಲ್ಲ. ಅದರ ಪರಿಣಾಮವಾಗಿ, ಅಖಿಲ ಚೈನಾ ಕಣ್ಣೋಟ, ವ್ಯಕ್ತಿತ್ವ ಹಾಗೂ ಸಾಮರ್ಥ್ಯವನ್ನು ಬೆಳೆಸುತ್ತಾರೆ. ಭಾರತದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ವ್ಯವಸ್ಥೆಯ ಸಣ್ಣ ವ್ಯತ್ಯಾಸವೊಂದನ್ನು ಹೊರತುಪಡಿಸಿದರೆ, ಬಹುತೇಕ ರಾಜಕಾರಣಿಗಳು ಇಡೀ ಭಾರತದ ಅನುಭವ ಹಾಗೂ ತಿಳುವಳಿಕೆಯನ್ನು ಬೆಳೆಸಿಕೊಂಡಿರುವುದಿಲ್ಲ. ಆ ಪರಿಣಾಮವಾಗಿ ನಾವು ನಮ್ಮ ದೇಶದಲ್ಲಿ ಅನೇಕ ವೇಳೆ ಕಾಣುವ ಕೇಂದ್ರ-ರಾಜ್ಯ ತಿಕ್ಕಾಟಗಳು ಚೈನಾದಲ್ಲಿ ದುರ್ಲಭ.

ಸಿಪಿಸಿಯ ಉನ್ನತ ನಾಯಕತ್ವವು ಸಾಮಾನ್ಯವಾಗಿ ತಿಳಿದಿರುವುದಕ್ಕಿಂತ ಹೆಚ್ಚು ತಿಳುವಳಿಕೆಯುಳ್ಳವರಾಗಿರುತ್ತಾರೆ. ಷಿ ಅವರು ಅದರ ಜೀವಾಳ, ಆದರೆ ಪೋಲಿಟ್ ಬ್ಯೂರೋದಲ್ಲಿರುವ (25 ಸದಸ್ಯರು) ಮತ್ತು ಅದರ ಸ್ಥಾಯಿ ಸಮಿತಿಯ (ಏಳು ಸದಸ್ಯರು ಮತ್ತು ಉಪಾಧ್ಯಕ್ಷರಾದ ವಾಂಗ್ ಕ್ವಿಷನ್ ಅವರು ಮತದಾನದ ಅವಕಾಶವಿರದ ಸದಸ್ಯರಾಗಿ) ಇತರರು, ಹೆಚ್ಚಿನ ಸಂದರ್ಭಗಳಲ್ಲಿ ಮೋದಿಯ ಸಂಪುಟದಂತೆ ಅಥವಾ ಬಿಜೆಪಿಯ ಪದಾಧಿಕಾರಿಗಳಂತೆ, ಅಪ್ರಸ್ತುತರಲ್ಲ ಅಥವಾ ಅನಾಮಧೇಯರಲ್ಲ. ಸಿಪಿಸಿಯು ಹಿರಿಯರ ಮಾರ್ಗದರ್ಶನವನ್ನು ಕೂಡ ಭಾರತಕ್ಕಿಂತ ಹೆಚ್ಚಾಗಿ ಗೌರವಿಸುತ್ತದೆ. ಅದರ ಅತ್ಯಂತ ಪ್ರಮುಖ ಮುಖಂಡರು ಒಂದು ವಾರ ಅಥವಾ ಎರಡು ವಾರ ತಮ್ಮ ಹಿಂದಿನ ಮುಖಂಡರುಗಳೊಂದಿಗೆ ವಾರ್ಷಿಕ ಚಿಂತನಾ ಸಭೆಯನ್ನು ಸಮುದ್ರ ತೀರದ ರೆಸಾರ್ಟಿನಲ್ಲಿ ನಡೆಸುತ್ತಾರೆ. ಇದು ದೇಶವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಾಂಗತ್ಯವನ್ನು ಮೂಡಿಸಲು ಸಹಾಯ ಮಾಡುವುದು ಮಾತ್ರವಲ್ಲ, ಪಕ್ಷದೊಳಗಡೆ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿನವರ ನಡುವೆ ಒಗ್ಗಟ್ಟನ್ನು ಹಾಗೂ ನಿರಂತರತೆಯನ್ನು ಬಲಪಡಿಸುತ್ತದೆ ಕೂಡ.

ಇದು ಭಾರತದಲ್ಲಿ ತೀರ ವಿರಳ. 2014 ರಲ್ಲಿ ಶುರುಮಾಡಿದ ಬಿಜೆಪಿಯಲ್ಲಿನ ಮಾರ್ಗದರ್ಶಕ ಮಂಡಳಿಯು ಒಂದು ಅರ್ಥದಲ್ಲಿ ಹಿರಿಯರನ್ನು ಸುಮ್ಮನಾಗಿಸುವ ತಂತ್ರವಷ್ಟೆ. ಅದು ಒಂದು ಸಭೆಯನ್ನೂ ನಡೆಸಲಿಲ್ಲ. ಬಿಜೆಪಿ ಸರ್ಕಾರದ ಸಚಿವರು ಹಿಂದೊಮ್ಮೆ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ ಕಾಂಗ್ರೆಸ್ಸಿನ ಹಿರಿಯರೊಡನೆ ಸಮಾಲೋಚಿಸುವ – ಮತ್ತು ಪ್ರತಿಯಾಗಿ ಅವರೂ ಕೂಡ ಹಾಗೆಯೇ ಸಮಾಲೋಚಿಸುವ – ಪರಿಪಾಟ ಯಾವುದೇ ಸಾಂಸ್ಥಿಕ ರೀತಿಯಲ್ಲಿ ಅಸ್ತಿತ್ವದಲ್ಲಿಲ್ಲ.

ಇದನ್ನು ಓದಿ: ‘ಬಡತನದ ವಿರುದ್ಧ ಚೀನಾದ ಪೂರ್ಣ ವಿಜಯ’

ಇಲ್ಲೊಂದು ಪ್ರಶ್ನೆ. ಜುಲೈ 1ನೇ ತಾರೀಕು, ಸಿಪಿಸಿಯ ಶತಮಾನೋತ್ಸವ ಆಚರಿಸಲು, ಷಿ ಜಿಂಗ್‌ಪಿಂಗ್ ಅವರು ತಿಯಾನನ್‌ಮೆನ್ ಚೌಕದಲ್ಲಿ ಇನ್ನಿತರ ಆರು ಪೋಲಿಟ್ ಬ್ಯೂರೋ ಸದಸ್ಯರು, ಸ್ಥಾಯಿ ಸಮಿತಿ ಸದಸ್ಯರು ಮಾತ್ರವಲ್ಲದೇ ನಿವೃತ್ತರಾದ ಪಕ್ಷದ ಹಿರಿಯ ಮುಖಂಡರೂ ಇರುತ್ತಾರೆ. ಆಗಸ್ಟ್ 15, 2022 ರಂದು ಭಾರತ ತನ್ನ 75 ನೇ ಸ್ವಾತಂತ್ರ್ಸೋತ್ಸವವನ್ನು ಆಚರಿಸುವಾಗ, ನರೇಂದ್ರ ಮೋದಿಯವರು ಕೆಂಪು ಕೋಟೆಯ ಮೇಲೆ ಇದೇ ರೀತಿಯಲ್ಲಿ ತಮ್ಮ ಜತೆಯಲ್ಲಿ ತಮ್ಮ ಪಕ್ಷದ ಹಿರಿಯ ಸಹೋದ್ಯೋಗಿಗಳು, ಇತರ ಪ್ರಮುಖ ಪಕ್ಷಗಳ ಮುಖಂಡರು, ಪ್ರಸ್ತುತ ಹಾಗೂ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಮತ್ತು ಮಾಜಿ ಪ್ರಧಾನ ಮಂತ್ರಿಗಳನ್ನು ಆಹ್ವಾನಿಸಿ ಗೌರವಿಸುತ್ತಾರೆಯೇ? ನೆನಪಿಡಿ: ಡಿಸೆಂಬರ್ 2020ರಲ್ಲಿ ನೂತನ ಪಾರ್ಲಿಮೆಂಟ್ ಭವನ ನಿರ್ಮಾಣದ ಭೂಮಿಪೂಜೆ ಮಾಡುವಾಗ ಮೋದಿ ಮಾತ್ರ ಇದ್ದರು. ಭಾರತದ ಪಾರ್ಲಿಮೆಂಟಿನ ಸಾಂವಿಧಾನಿಕ ಮುಖ್ಯಸ್ಥರಾಗಿರುವ ನಮ್ಮ ಈಗಿನ ರಾಷ್ಟ್ರಾಧ್ಯಕ್ಷ ರಾಮನಾಥ್ ಕೋವಿಂದ್ ಅವರನ್ನು ಕೂಡ ಮೋದಿ ಆಹ್ವಾನಿಸಿರಲಿಲ್ಲ.

ಅನುವಾದ : ಟಿ.ಸುರೇಂದ್ರ ರಾವ್

Donate Janashakthi Media

Leave a Reply

Your email address will not be published. Required fields are marked *