ಕೇಂದ್ರ ಸರಕಾರದಿಂದ ಅತಿಕ್ರಮಣ ಎಂದ ಸಚಿವ ಮಾಧುಸ್ವಾಮಿ, ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ಮೈಸೂರು: ‘ರಾಜ್ಯಗಳ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಅತಿಕ್ರಮಣ ಮಾಡಿ, ಹಸ್ತಕ್ಷೇಪ ನಡೆಸುತ್ತಿದೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಶನಿವಾರ ಆಯೋಜಿಸಿದ್ದ ‘ರಾಷ್ಟ್ರೀಯ ಏಕತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಕೇಂದ್ರದ ಸರ್ವಾಧಿಕಾರಿ ಧೋರಣೆ ಹೆಚ್ಚುತ್ತಿದ್ದು, ಅಧಿಕಾರದ ಕೇಂದ್ರೀಕರಣಕ್ಕೆ ಮುಂದಾಗಿದೆ. ಈ ಧೋರಣೆಯಿಂದಲೇ ಪ್ರಾದೇಶಿಕ ಭಾವನೆ ಬೆಳೆಯುತ್ತಿದೆ. ಎಲ್ಲೋ ಕುಳಿತು ನಮ್ಮನ್ನು ಆಳುವವರ ಸರ್ವಾಧಿಕಾರಿ ಧೋರಣೆಯನ್ನು ನಿಗ್ರಹ ಮಾಡದಿದ್ದರೆ ಮುಂದೆ ಕಷ್ಟವಾಗಲಿದೆ’ ಎಂದರು.
ಕೊಡಗಿನವರು, ಉತ್ತರ ಕರ್ನಾಟಕದವರು, ದಕ್ಷಿಣ ಕನ್ನಡದವರು, ಮದ್ರಾಸ್‌ ಪ್ರಾಂತ್ಯದವರು ಪ‍್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕೊಡಗಿನಲ್ಲಿ ಕಂದಾಯ ದಾಖಲೆಗಳನ್ನು ಸರಿಪಡಿಸಲು ಈವರೆಗೆ ಸಾಧ್ಯವಾಗಿಲ್ಲ. ಸರಿಯಾದ ಸೌಲಭ್ಯ ಒದಗಿಸಿದ್ದರೆ ಅವರೇಕೆ ದನಿ ಎತ್ತುತ್ತಿದ್ದರು’ ಎಂದು ಪ್ರಶ್ನಿಸಿದರು.

‘ನೀಟ್‌ ಪರೀಕ್ಷೆಗೂ ನಮ್ಮ ರಾಜ್ಯಕ್ಕೂ ಏನು ಸಂಬಂಧ? ಇದನ್ನು ಸಂಸದ ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ಪ್ರಶ್ನಿಸಬೇಕು. ಉತ್ತರ ಭಾರತದವರಿಗೆ ರಾಜ್ಯದಲ್ಲಿ ಪ್ರವೇಶಾತಿ ಸಿಗುತ್ತದೆ. ನಾವು ಬಂಡವಾಳ ಹಾಕಿ, ಅಂಥವರಿಗೆ ರೆಡ್‌ ಕಾರ್ಪೆಟ್‌ ಹಾಕಿ ಸ್ವಾಗತಿಸುತ್ತಿದ್ದೇವೆ. 3-4 ವರ್ಷಗಳಲ್ಲಿ ರಾಜ್ಯದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಉಂಟಾಗಲಿದೆ’ ಎಂದು ಎಚ್ಚರಿಸಿದರು.

ಇದನ್ನೂ ಓದಿ :  ಒಂದು ದೇಶ, ಒಂದು ಚುನಾವಣೆ: ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಅಪಾಯ

‘ಈ ವಿಚಾರದಲ್ಲಿ ತಮಿಳುನಾಡು ರಾಜ್ಯದವರು ಹೋರಾಡಿ ಯಶಸ್ಸು ಕಂಡರು. ಆದರೆ, ಕನ್ನಡಿಗರಿಗೆ ಹೋರಾಟದ ಶಕ್ತಿ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ ಮಾಧುಸ್ವಾಮಿ, ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನ ಉದ್ಧಾರವೆಷ್ಟಾಯ್ತೊ?’ ಎಂಬ ಡಿವಿಜಿಯವರ ಮಂಕುತಿಮ್ಮನ ಕಗ್ಗ ವಾಚಿಸಿದರು.

‘ಬಹುರಾಷ್ಟ್ರೀಯ ಕಂಪನಿಗಳಿಂದ ರಾಜ್ಯಕ್ಕೇನು ಲಾಭ? ನಮ್ಮ ಸೌಲಭ್ಯಗಳನ್ನು ಪಡೆದು ನಮಗೇ ಉದ್ಯೋಗ ನೀಡುತ್ತಿಲ್ಲ. ಹಿಂದೆ ಒಮ್ಮೆ, ಪರಿಶೀಲನೆಗೆಂದು ಒರ‍್ಯಾಕಲ್‌ ಕಂಪನಿಗೆ ಹೋಗಿದ್ದೆ. ನನಗೆ ಕಾಫಿ ತಂದುಕೊಟ್ಟ ಹುಡುಗನಿಂದ ಹಿಡಿದು ಕಸ ಗುಡಿಸುವವನವರೆಗೆ ಒಬ್ಬ ಕನ್ನಡಿಗ ಉದ್ಯೋಗಿಯೂ ಅಲ್ಲಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತುಮಕೂರಿನಲ್ಲಿ 14 ಸಾವಿರ ಎಕರೆ ಜಮೀನನ್ನು ಕಿತ್ತುಕೊಂಡು ಕಾರಿಡಾರ್‌ ಮಾಡಲಾಗಿದೆ. ನಮ್ಮ ಅಂಕಿ ಅಂಶಗಳ ಪ್ರಕಾರ 88 ಸಾವಿರ ಉದ್ಯೋಗ ಸೃಷ್ಟಿಸಲಾಗುತ್ತಿದೆ. ಅದರಲ್ಲಿ ಸ್ಥಳೀಯವಾಗಿ 800 ಉದ್ಯೋಗವನ್ನೂ ಕೊಟ್ಟಿಲ್ಲ‌. ಪ್ರಧಾನಿ ಮೋದಿ ಉದ್ಘಾಟಿಸಿದ ಫುಡ್‌ ಪಾರ್ಕ್‌ನಲ್ಲಿ 10 ಮಂದಿ ಸ್ಥಳೀಯರಿಗೇ ಉದ್ಯೋಗ ನೀಡಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಅದೇ ವೇದಿಕೆಯಲ್ಲಿದ್ದ ಸಂಸದ ತೇಜಸ್ವಿ ಸೂರ್ಯ ಸಚಿವ ಮಾಧುಸ್ವಾಮಿಯವರ ಮಾತಿಗೆ ಪ್ರತಿಕ್ರಿಯಿಸಿ, ರಾಜ್ಯಗಳ ರಚನೆ ಸಂಬಂಧ ಸಚಿವ ಮಾಧುಸ್ವಾಮಿ ಮಂಡಿಸಿದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ : ಬಿಎಂಟಿಸಿ ಖಾಸಗೀಕರಣ ಸಮರ್ಥನೆ ತೇಜಸ್ವಿ ಸೂರ್ಯ ವಿರುದ್ಧ ಸಾರಿಗೆ ನೌಕಕರ ಸಂಘ ಗರಂ

ಆಡಳಿತಾತ್ಮಕ ಉದ್ದೇಶಕ್ಕಾಗಿ ರಾಜ್ಯಗಳನ್ನು ಹೊಸದಾಗಿ ರೂಪಿಸಲಾಗುತ್ತಿದೆಯೇ ಹೊರತು ರಾಜಕೀಯ ಕಾರಣಕ್ಕಾಗಿ ಅಲ್ಲ. 16 ರಾಜ್ಯಗಳು ಇದ್ದದ್ದು, ಈಗ 29 ಆಗಿರುವುದರಲ್ಲಿ ತಪ್ಪೇನಿದೆ? ಪರಿಣಾಮಕಾರಿ ಆಡಳಿತಕ್ಕಾಗಿ ಹೆಚ್ಚು ರಾಜ್ಯಗಳನ್ನು ರೂಪಿಸಿದರೆ ಸಮಸ್ಯೆ ಏನು’ ಎಂದು ಪ್ರಶ್ನಿಸಿದರು.

‘ಕನ್ನಡಿಗರು ಕೂಡ ವಿವಿಧ ರಾಜ್ಯಗಳಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಹೋಗಿ ಉನ್ನತ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸಬಹುದು’ ಎಂದು ತಿರುಗೇಟು ನೀಡಿದರು.

‘ದೇಶದ ಬಡತನಕ್ಕೆ ಮೂಲ ಕಾರಣ ಸಮಾಜವಾದ. ಖಾಸಗಿ ಉದ್ಯಮಕ್ಕೆ ಬೆಂಬಲ ನೀಡದೆ, ಸ್ವಂತ ಉದ್ದಿಮೆಗಳಿಗೆ ಅವಕಾಶ ನೀಡದೆ ಸಂಪನ್ಮೂಲ ಕೊರತೆ ಉಂಟಾಯಿತು’ ಎಂದರು

ಒಂದೇ ವೇದಿಕೆಯಲ್ಲಿ, ಒಂದೇ ಪಕ್ಷದ ಮುಖಂಡರು ಈ ರೀತಿ ವಿಭಿನ್ನ ಹೇಳಿಕೆ ನೀಡಿರುವು ಸಭಿಕರಲ್ಲಿ ಅಚ್ಚರಿ ಮೂಡಿಸಿತು. ಬಹುತೇಕರು ಸಚಿವ ಮಾಧುಸ್ವಾಮಿ ಮಾತುಗಳಲ್ಲಿ ‘ತೂಕ’ ಇತ್ತು ಎಂದು ಮಾತನಾಡಿಕೊಳ್ಳುತ್ತಿದ್ದರು.

Donate Janashakthi Media

Leave a Reply

Your email address will not be published. Required fields are marked *