ಸೆಕ್ಷನ್‌ 124ಎ ದೇಶದ್ರೋಹ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದ್ರೋಹದಂತಹ ಅಪರಾಧೀಕರಣಗೊಳಿಸುವಂತಹ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್‌ 124ಎ ಪ್ರಶ್ನಿಸಿರುವ ಮನವಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ವಿಸ್ತರಿಸಬೇಕೆಂದು ಕೇಂದ್ರ ಸರ್ಕಾರವು ಅರ್ಜಿ ಸಲ್ಲಿಸಿದೆ. ಆಕ್ಷೇಪಣೆಯ ಕರಡು ಸಿದ್ಧವಾಗಿದ್ದು, ಸಕ್ಷಮ ಪ್ರಾಧಿಕಾರದ ಒಪ್ಪಿಗೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಇದನ್ನು ಓದಿ: ದೇಶದ್ರೋಹ ಕಾನೂನು: ವಾರದೊಳಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭವಾಗಿದ್ದು, ಏಪ್ರಿಲ್‌ 27ರ ವಿಚಾರಣೆ ಸಂದರ್ಭದಲ್ಲಿ ಏಪ್ರಿಲ್‌ 30ರೊಳಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ, ಮೇ 5ರಂದು ಅಂತಿಮ ವಿಚಾರಣೆ ನಡೆಸುವುದಾಗಿ ಹೇಳುವ ಮೂಲಕ ಪ್ರಕರಣ ಮುಂದೂಡಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಆದರೀಗ ಕೇಂದ್ರ ಸರ್ಕಾರ ಮತ್ತೆ ಕಾಲಾವಕಾಶವನ್ನು ಕೋರಿದೆ.

ಸಾಮಾಜಿಕ ಜಾಲತಾಣದಲ್ಲಿ ಕಿಶೋರ್‌ಚಂದ್ರ ವಾಂಗ್‌ಖೇಮ್ಚ ಮತ್ತು ಕನ್ಹಯ್ಯ ಲಾಲ್‌ ಶುಕ್ಲಾ ಎಂಬ ಇಬ್ಬರು ಪತ್ರಕರ್ತರು ಕಾರ್ಟೂನ್‌ ಮತ್ತು ಪೋಸ್ಟ್‌ ಹಂಚಿಕೊಂಡಿದ್ದಕ್ಕೆ ಅವರ ವಿರುದ್ಧ ಕಳೆದ ವರ್ಷದ ಏಪ್ರಿಲ್‌ನಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೋರೆ ಹೋದರು.

ಇದನ್ನು ಓದಿ: ವಸಾಹತುಶಾಹಿ ದೇಶದ್ರೋಹ ಕಾಯ್ದೆ ರದ್ದಾಗಲಿ: ನ್ಯಾ ಎಚ್‌.ಎನ್‌.ನಾಗಮೋಹನ್‌ ದಾಸ್

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕಳೆದ ವರ್ಷದ ಜುಲೈನಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಸ್ವಾತಂತ್ರ್ಯ ಬಂದ 75 ವರ್ಷಗಳಾದರೂ ಈ ಕಾನೂನು ಅಗತ್ಯವಿದೆಯೇ ಎಂದು ಪ್ರಶ್ನಿಸಿತ್ತು.

Donate Janashakthi Media

Leave a Reply

Your email address will not be published. Required fields are marked *