ನವದೆಹಲಿ: ಟೊಮೇಟೊ ಕೆಜಿಗೆ 160 ರೂ ದರದಲ್ಲಿ ದೇಶದ ಹಲವೆಡೆ ಈಗಲೂ ಮಾರಾಟವಾಗುತ್ತಿದ್ದು, ಭಾನುವಾರದಿಂದ (ಜುಲೈ 16) ಪ್ರತಿ ಕೆಜಿ ಟೊಮೇಟೊವನ್ನು 80 ರೂ.ಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಹೇಳಿಕೆ ಪ್ರಕಾರ, ತನ್ನ ಮಧ್ಯಪ್ರವೇಶದಿಂದ ದೇಶದ ಹಲವಾರು ಸ್ಥಳಗಳಲ್ಲಿ ಪ್ರತಿ ಕೆಜಿಗೆ 90 ರೂ.ಗೆ ರಿಯಾಯಿತಿ ದರದಲ್ಲಿ ಟೊಮೇಟೊ ಮಾರಾಟ ಮಾಡಲಾಗುತ್ತಿದೆ. ಟೊಮೇಟೊ ಬೆಲೆಯಲ್ಲಿ ಕುಸಿತವಾಗಿದೆ ಎಂದು ತಿಳಿಸಿದೆ.
ದೇಶದ 500ಕ್ಕೂ ಹೆಚ್ಚು ಕಡೆಗಳಲ್ಲಿ ಬೆಲೆ ಏರಿಕೆ ಪರಿಸ್ಥಿತಿಯ ಮರು ಮೌಲ್ಯಮಾಪನ ನಡೆಸಿದ ನಂತರ, ಇಂದಿನಿಂದ (ಜು.16) ದೇಶದ ಹಲವೆಡೆ ಕೆಜಿ ಟೊಮೇಟೊವನ್ನು80 ರೂ.ನಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸಹಕಾರ ಕ್ಷೇತ್ರದ ಎನ್ಎಎಫ್ಇಡಿ ಮತ್ತು ಎನ್‌ಸಿಸಿಎಫ್ ಮೂಲದ ದೆಹಲಿ, ನೋಯ್ಡಾ, ಲಖನೌ, ಕಾನ್ಪುರ, ವಾರಣಾಸಿ, ಪಾಟ್ನಾ, ಮುಜಾಫರ್‌ಪುರ ಮತ್ತು ಅರಾಹ್ ಸೇರಿದಂತೆ ಹಲವು ಕಡೆಗಳಲ್ಲಿ ಇಂದು ಟೊಮೆಟೊ ಮಾರಾಟ ಪ್ರಾರಂಭವಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ದಾಳಿ ಮಾಡಿದ ಚಿರತೆಯನ್ನು ಬೈಕ್‌ಗೆ ಕಟ್ಟಿಕೊಂಡು ತಂದ ಯುವಕ!
ಆಯಾ ಸ್ಥಳಗಲ್ಲಿನ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳನ್ನು ಅವಲಂಬಿಸಿ ಸೋಮವಾರದಿಂದ ಹೆಚ್ಚಿನ ನಗರಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಸರ್ಕಾರ ಹೇಳಿದೆ.
ದೇಶದ ಹಲವೆಡೆ ಟೊಮೇಟೊ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಮತ್ತು ಕರ್ನಾಟಕದಿಂದ ಟೊಮೇಟೊ ಖರೀದಿ ಮಾಡುವಂತೆ ಬುಧವಾರ ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರದ ನಾಫೆಡ್ ಮತ್ತು ಎನ್‌ಸಿಸಿಎಫ್‌ಗೆ ಸೂಚಿಸಿತ್ತು.
ಟೊಮೊಟೊ ಸಂಗ್ರಹವನ್ನು ನವದೆಹಲಿಯಲ್ಲಿ ರಿಟೇಲ್ ಮಾರಾಟ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ತಲುಪಿಸಲಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯವು ತಿಳಿಸಿತ್ತು.ದೇಶದ ಕೆಲವು ಪ್ರದೇಶಗಳಲ್ಲಿ ಟೊಮೊಟೊ ದರವು ಕೆಜಿಗೆ 200ರೂ ಕ್ಕಿಂತ ದುಬಾರಿಯಾಗಿದೆ. .