ನವದೆಹಲಿ: ಭಾರತದಲ್ಲಿ ನಿಯಮ ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ 15 ವಿದೇಶಿ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳಿಗೆ ಹಣಕಾಸು ಗುಪ್ತಚರ ಘಟಕ (FIU) ಎಚ್ಚರಿಕೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಭಾರತದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಲಭ್ಯವಿರುವ ಈ ಸಂಸ್ಥೆಗಳ ಆ್ಯಪ್‌ಗಳು ಮತ್ತು ಯುಆರ್‌ಎಲ್‌ಗಳನ್ನು ನಿರ್ಬಂಧಿಸುವಂತೆ ಪ್ರತ್ಯೇಕ ಆದೇಶ ನೀಡಲಾಗಿದೆ.
ಹಣ ಅಕ್ರಮ ವರ್ಗಾವಣೆ ಹಾಗೂ ಹಣಕಾಸು ಅಪರಾಧಗಳ ಮೇಲೆ ನಿಗಾ ವಹಿಸುವ FIU, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಸೆಕ್ಷನ್ 13ರ ಅಡಿಯಲ್ಲಿ ಈ ನೋಟಿಸ್‌ಗಳನ್ನು ನೀಡಿದೆ.
Weex, Blofin, Rezorex, Bitunix, DigiFinex, Toobit, XT.com, Latoken, WOO X, Pionex, ChangeNow, SimpleSwap, FixedFloat, WhiteBIT ಮತ್ತು Guardarian ಸಂಸ್ಥೆಗಳು FIU ಕ್ರಮಕ್ಕೆ ಒಳಗಾಗಿರುವ 15 ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಾಗಿವೆ.
ಇದನ್ನೂ ಓದಿ : ಬಿಜೆಪಿ ಎಸ್‌ಟಿ ನಾಯಕರನ್ನು ಗುರಿಯಾಗಿಸಿಕೊಂಡಿದೆ: ಬಿ.ಕೆ. ಹರಿಪ್ರಸಾದ್ ಆರೋಪ
ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ ವರ್ಚುವಲ್ ಡಿಜಿಟಲ್ ಆಸ್ತಿಗಳ (VDA) ಖರೀದಿ, ಮಾರಾಟ, ವರ್ಗಾವಣೆ ಅಥವಾ ಸಂಗ್ರಹಣೆಗೆ ಸೇವೆ ಒದಗಿಸುವ ಸಂಸ್ಥೆಗಳು ಮಾರ್ಚ್ 2023ರಿಂದ FIUನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ನಿಯಮ ಭಾರತದಲ್ಲಿ ಕಚೇರಿ ಹೊಂದಿರುವ ಸಂಸ್ಥೆಗಳಿಗೆ ಮಾತ್ರವಲ್ಲದೆ, ವಿದೇಶದಿಂದ ಭಾರತದಲ್ಲಿರುವ ಗ್ರಾಹಕರಿಗೆ ಸೇವೆ ನೀಡುವ ಸಂಸ್ಥೆಗಳಿಗೂ ಅನ್ವಯಿಸುತ್ತದೆ.
ವರ್ಚುವಲ್ ಆಸ್ತಿಯನ್ನು ಫಿಯಾಟ್ ಕರೆನ್ಸಿಗೆ ವಿನಿಮಯ ಮಾಡುವುದು, ಒಂದು ವರ್ಚುವಲ್ ಆಸ್ತಿಯಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡುವುದು, ವರ್ಚುವಲ್ ಆಸ್ತಿಗಳ ವರ್ಗಾವಣೆ ಅಥವಾ ಸಂರಕ್ಷಣಾ ಸೇವೆ ನೀಡುವುದು ಸೇರಿದಂತೆ ಹಲವು ಚಟುವಟಿಕೆಗಳು ಈ ನಿಯಂತ್ರಣದ ವ್ಯಾಪ್ತಿಗೆ ಬರುತ್ತವೆ.
ಕ್ರಿಪ್ಟೋ ಉತ್ಪನ್ನಗಳು ಹಾಗೂ ನಾನ್-ಫಂಜಿಬಲ್ ಟೋಕನ್‌ಗಳು (NFTs) ಭಾರತದಲ್ಲಿ ಇನ್ನೂ ನಿಯಂತ್ರಿತ ಹಣಕಾಸು ಉತ್ಪನ್ನಗಳಲ್ಲ. ಇಂತಹ ವಹಿವಾಟುಗಳಲ್ಲಿ ನಷ್ಟ ಉಂಟಾದರೆ ನಿಯಂತ್ರಣಾತ್ಮಕ ಪರಿಹಾರದ ಅವಕಾಶ ಸೀಮಿತವಾಗಿದ್ದು, ಹೆಚ್ಚಿನ ಅಪಾಯವಿದೆ ಎಂದು FIU ಎಚ್ಚರಿಸಿದೆ.
ಇದನ್ನೂ ನೋಡಿ : ಕನಿಷ್ಠ ವೇತನ ಜಾರಿ ಮಾಡಿ, ನಮ್ಮ ಬದುಕು ಉಳಿಸಿ! | 20 ಸಾವಿರ ಕಾರ್ಮಿಕರ ಬೃಹತ್ ಹೋರಾಟJanashakthi Media
