ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರು ಕೇಳಿಬಂದಿರುವುದಕ್ಕೆ ಮಾಜಿ ಪತ್ರಕರ್ತರಾದ ನರೇಶ್ ಗೌಡ ಮತ್ತು ಭವಿತ್ ಎಂಬುವರು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ.
ವಿಡಿಯೋದಲ್ಲಿ ಮಾತನಾಡಿರುವ ಭವಿತ್ ” ಸಿಡಿ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿರುವುದು ಆಘಾತ ಉಂಟು ಮಾಡಿದೆ. ನಾನು ಪ್ರಕರಣದ ಸೂತ್ರದಾರನೂ ಅಲ್ಲ, ಭಾಗಿಯೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ವಿರುದ್ಧದ ಆರೋಪಗಳು ಸುಳ್ಳು. ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿರುವುದು ನನ್ನ ತೇಜೋವಧೆ ಆಗುತ್ತಿದೆ. ನನ್ನ ತಾಯಿ ಹಾರ್ಟ್ ಪೇಶೆಂಟ್, ನನ್ನ ಮನೆಗೆ ಹೋಗಿ ನೋಡಿ, ನನ್ನ ಪರಿಸ್ಥಿತಿ ನಿಮಗೆ ಅರ್ಥವಾಗುತ್ತದೆ. ಕುಟುಂಬದ ಗೌರವ ಹಾಳು ಮಾಡುವುದು ಎಷ್ಟು ಸರಿ? ಪ್ರಕರಣದಲ್ಲಿ ನನ್ನ ಪಾತ್ರ ಇದ್ದಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿಡಿ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್, ಸಿಡಿ ಹಿಂದೆ ಇದ್ದಾರೆ ನಾಲ್ವರು ಪತ್ರಕರ್ತರು?!
ಇನ್ನು ನರೇಶ್ ಗೌಡ ಸಹ ವಿಡಿಯೋ ಮಾಡಿದ್ದು ಅದರಲ್ಲಿ, ನಾನು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಬಂದರೆ ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಲು ಎಲ್ಲ ಪ್ರಯತ್ನಗಳು ನಡೆದಿರುವುದು ತಿಳಿದಿದೆ. ಈ ಕಾರಣಕ್ಕೆ ನಾನು ಈಗ ಬಂದಿಲ್ಲ. ಕೆಲ ದಿನಗಳ ಒಳಗಡೆ ನಾನೇ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.
ಪತ್ರಕರ್ತನಾಗಿರುವ ಕಾರಣ ಸಂತ್ರಸ್ತ ಯುವತಿ ನನಗೆ ನಾಲ್ಕೈದು ತಿಂಗಳ ಹಿಂದೆ ಕರೆ ಮಾಡಿದ್ದರು.
ರಮೇಶ್ ಜಾರಕಿಹೊಳಿಯಿಂದ ನನಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಕೇಳಿದ್ದರು. ನಾನು ಸಾಕ್ಷ್ಯಗಳು ಇಲ್ಲದೇ ಸಹಾಯ ಮಾಡಲು ಆಗಲ್ಲ ಎಂದು ಹೇಳಿದ್ದೆ. ಫೋಟೋ, ವಿಡಿಯೋ ಏನಾದರೂ ಇದ್ದರೆ ತೆಗೆದುಕೊಂಡು ಬನ್ನಿ ಅಂತ ಹೇಳಿದ್ದೆ. ಈ ನಡುವೆ ನನ್ನ ತಾಯಿಗೆ ಹುಷಾರಿರಲಿಲ್ಲ, ನನ್ನ ಮಗಳ ನಾಮಕರಣ ಇತ್ತು. ಹೀಗಾಗಿ ಆಕೆಗೆ ನ್ಯಾಯ ಕೊಡಿಸಲು ಆಗಲಿಲ್ಲ ಎಂದು ಹೇಳಿದ್ದಾರೆ.
ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರ ಹಿಂದೆ ರಾಜಕಾರಣಿಗಳು ಇರುವ ಕೈವಾಡವೂ ಗೊತ್ತಾಗುತ್ತಿದೆ. ಎಸ್.ಐ.ಟಿ ಪ್ರಕರಣವನ್ನು ಚುರುಕೊಗೊಳಿಸುತ್ತಿದ್ದು, ಪ್ರಕರಣದ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದು ಶೀಘ್ರವಾಗಿ ಹೊರ ಬರುವ ಸಾಧ್ಯತೆ ಇದೆ.