ಕಲ್ಲಿದ್ದಲು ಕಳ್ಳಸಾಗಣೆ ಹಗರಣ: ಪಶ್ಚಿಮ ಬಂಗಾಳ ಕಾನೂನು ಸಚಿವರ ನಿವಾಸಕ್ಕೆ ಸಿಬಿಐ ದಾಳಿ

ನವದೆಹಲಿ: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಚಿವ ಮೋಲೊಯ್ ಘಾಟಕ್ ಅವರಿಗೆ ಸೇರಿದ ಸ್ಥಳಗಳ ಮೇಲೆ ಕೇಂದ್ರ ತನಿಖಾ ದಳ(ಸಿಬಿಐ) ಅಧಿಕಾರಿಗಳು ದಾಳಿ ನಡೆಸಿ, ತನಿಖೆ ಕೈಗೊಂಡಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ  ಇಂದು(ಸೆಪ್ಟಂಬರ್‌ 07) ಮತ್ತೆ ಸಿಬಿಐ ಅಧಿಕಾರಿಗಳಿ ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಸಿದೆ.

ಕಲ್ಲಿದ್ದಲು ಕಳ್ಳಸಾಗಣೆ ಹಗರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಈ ವೇಳೆ ಮೋಲೊಯ್ ಘಾಟಕ್ ಅವರ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಹಗರಣದಲ್ಲಿ ಅವರು ಪಾಲ್ಗೊಂಡಿರುವ ಬಗ್ಗೆ ಪೂರಕ ಸಾಕ್ಷ್ಯಗಳು ಇವೆ ಎನ್ನಲಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಪಶ್ಚಿಮ ಬರ್ಧಮಾನ್ ಜಿಲ್ಲೆಯ ಅಸನ್ಸೋಲ್‌ನಲ್ಲಿರುವ ಮೋಲೊಯ್ ಘಾಟಕ್ ಅವರಿಗೆ ಸೇರಿದ  ಮೂರು ಮನೆಗಳು ಹಾಗೂ  ಕೋಲ್ಕತ್ತಾದ ಲೇಕ್ ಗಾರ್ಡನ್ಸ್ ಪ್ರದೇಶದಲ್ಲಿರುವ ಒಂದು ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಅಕ್ರಮವಾಗಿ ಗಣಿಗಾರಿಕೆ ಮಾಡಲಾದ ಸಾವಿರಾರು ಕೋಟಿ ರೂ ಮೌಲ್ಯದ ಕಲ್ಲಿದ್ದಲನ್ನು, ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಹಲವು ಗಣಿಗಳನ್ನು ನಡೆಸುವ ಪಶ್ಚಿಮ ಬಂಗಾಳದ ಪಶ್ಚಿಮ ಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಜಾಲವೊಂದು ಅನೇಕ ವರ್ಷಗಳವರೆಗೆ ‘ಕಪ್ಪು ಮಾರುಕಟ್ಟೆ’ಯಲ್ಲಿ ಮಾರಾಟ ಮಾಡಿದೆ ಎಂದು ಸಿಬಿಐ ಆರೋಪಿಸಿದೆ.

ದೊಡ್ಡ ಸಂಖ್ಯೆಯ ಅರೆಸೇನಾ ಪಡೆ ಸಿಬ್ಬಂದಿಗಳೊಂದಿಗೆ ಆಗಮಿಸಿದ ಅಧಿಕಾರಿಗಳು, ಶೋಧ ಕಾರ್ಯ ನಡೆಸುತ್ತಿದ್ದಾರೆ. ತಂಡದಲ್ಲಿ ಮಹಿಳಾ ಅಧಿಕಾರಿಗಳು ಸೇರಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾದ ಇನ್ನೂ ನಾಲ್ಕು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಅಸನ್ಸೋಲ್ ಉತ್ತರ ಕ್ಷೇತ್ರದ ಶಾಸಕರಾಗಿರುವ ಮೋಲೊಯ್‌ ಘಾಟಕ್ ಈ ಹಿಂದೆ ಕಲ್ಲಿದ್ದಲು ಕಳವು ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ದಿಲ್ಲಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗಿದ್ದರು. ಆದರೆ ಈ ಹಗರಣದ ಕುರಿತು ಇ.ಡಿ ನಂತರ ನೀಡಿದ ಸಮನ್ಸ್‌ಗಳನ್ನು ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಸಿಬಿಐ ದಾಳಿ ವೇಳೆ ಸಚಿವ ಮೋಲೊಯ್ ಘಾಟಕ್ ಇರಲಿಲ್ಲ. ಅವರ ಕುಟುಂಬ ಸದಸ್ಯರ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಎಲ್ಲರನ್ನೂ ಕೊಠಡಿಯೊಂದರಲ್ಲಿ ಕೂಡಿ ಹಾಕಿ ತನಿಖೆ ಕೈಗೊಂಡಿದ್ದಾರೆ. ನಿವಾಸಗಳ ಸುತ್ತಲೂ ಕೇಂದ್ರ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸಿಬಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *