- ವಿದೇಶಕ್ಕೆ ಹಣ ವರ್ಗಾವಣೆ ಸಂಬಂಧ ಹೊಸ ಪ್ರಕರಣ
- ರಾಜ್ಯಸಭೆ ಸಚಿವ ಪಿ. ಚಿದಂಬರಂ ಮನೆಗಳ ಶೋಧ
- ನಿವಾಸಗಳು ಸೇರಿದಂತೆ 7 ಸ್ಥಳಗಳಲ್ಲಿ ಸಿಬಿಐ ದಾಳಿ
ನವದೆಹಲಿ: ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಮನೆ ಮತ್ತು ಕಛೇರಿ ಸೇರಿದಂತೆ ಅವರಿಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆದಿದೆ. ಚಿದಂಬರಂ ಮಗ ಕಾರ್ತಿ ಚಿದಂಬರಂಗೆ ಸಂಬಂಧಿಸಿದ ಪ್ರಕರಣವೊಂದರ ಸಂಬಂಧ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಸದ್ಯ ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ದೇಶದ 7 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯಕೈಗೊಂಡಿದ್ದಾರೆ. ಮೂಲಗಳ ಪ್ರಕಾರ, ಅವರ ಪುತ್ರ ಮತ್ತು ಲೋಕಸಭಾ ಸದಸ್ಯ ಕಾರ್ತಿ ಚಿದಂಬರಂ ಕೂಡ ಸಿಬಿಐ ತಪಾಸಣೆಗೊಳಪಟ್ಟಿದ್ದಾರೆ.
ಇದನ್ನು ಓದಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ನ್ಯಾಯಾಲಕ್ಕೆ ಖುದ್ದು ಹಾಜರಾತಿಗೆ ವಿನಾಯಿತಿ ಪಡೆದ ಪಿ ಚಿದಂಬರಂ
ಕಾರ್ತಿ ಚಿದಂಬರಂಗೆ ಸಂಬಂಧಿಸಿದ ಪ್ರಕರಣವೊಂದು ಸಿಬಿಐ ತನಿಖೆ ನಡೆಸುತ್ತಿದ್ದು, ದಾಳಿ ನಡೆಯಲು ಕಾರಣ ಎಂದು ತಿಳಿದುಬಂದಿದೆ. ಸಿಬಿಐ ದಾಳಿಯನ್ನು ಕಾರ್ತಿ ಚಿದಂಬರಂ ಕಚೇರಿ ಖಚಿತಪಡಿಸಿದೆ. ಮೂಲಗಳ ಪ್ರಕಾರ, ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಯು 2010–14ರ ನಡುವೆ ವಿದೇಶಕ್ಕೆ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ನನ್ನ ಮೇಲೆ ಎಷ್ಟು ಬಾರಿ ದಾಳಿ ನಡೆದಿದೆ ಎಂಬುದರ ಲೆಕ್ಕವೇ ಸಿಗುತ್ತಿಲ್ಲ. ಈ ಬಗ್ಗೆ ದಾಖಲಾತಿ ಇಡಬೇಕು ಎಂದಿದ್ದಾರೆ.
ಆಗಸ್ಟ್ 21, 2019 ರಂದು, ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಅಕ್ಟೋಬರ್ 16, 2019 ರಂದು ತನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅವರನ್ನು ಕಸ್ಟಡಿಗೆ ತೆಗೆದುಕೊಂಡಿತು. ಆರು ದಿನಗಳ ನಂತರ ಸಿಬಿಐ ದಾಖಲಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದರೂ, ಇಡಿ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಮುಂದುವರಿಯಬೇಕಾಗಿ ಬಂತು. ಅಂತಿಮವಾಗಿ, ಡಿಸೆಂಬರ್ 4, 2019 ರಂದು 100 ದಿನಗಳ ನಂತರ ಜಾಮೀನು ಪಡೆದು ಹೊರಬಂದರು.
ಇತ್ತೀಚೆಗೆ, ವಿಶೇಷ ನ್ಯಾಯಾಲಯವು ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಾರ್ಜ್ ಶೀಟ್ ನ್ನು ಪರಿಗಣನೆಗೆ ತೆಗೆದುಕೊಂಡಿತ್ತು. ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣದಲ್ಲಿ ಮುಂದುವರಿಯಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿತ್ತು. ಇದರೊಂದಿಗೆ ಈಗ ಸಿಬಿಐ ಮತ್ತೊಂದು ಪ್ರಕರಣದಲ್ಲಿ ದಾಳಿ ನಡೆಸಿದೆ.