ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಒಡೆತನದಲ್ಲಿನ ಶಿಕ್ಷಣ ಸಂಸ್ಥೆಗಳ ಮೇಲೆ ಕೇಂದ್ರೀಯ ತನಿಖಾ ದಳ(ಸಿಬಿಐ) ದಾಳಿ ಮಾಡಿದೆ. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಡಿ ಕೆ ಶಿವಕುಮಾರ್ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷರಾಗಿದ್ದು, ಪುತ್ರಿ ಐಶ್ವರ್ಯ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಕಾರ್ಯದರ್ಶಿಯಾಗಿದ್ದಾರೆ. ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ದಾಳಿ ನಡೆದಿದೆ ಎನ್ನಲಾಗಿದೆ.
ಆಸ್ತಿಗಳ ಮೌಲ್ಯಮಾಪನ ಕಾರ್ಯ ನಡೆಸಲಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆಯೂ ಸಹ ರಾಮನಗರದಲ್ಲಿ ಮೌಲ್ಯಮಾಪನ ಮಾಡಲಾಗಿತ್ತು. ಸಿಬಿಐ ಅಧಿಕಾರಿಗಳು ಈಗ ಡಿ ಕೆ ಶಿವಕುಮಾರ್ ಒಡೆತನದ ಎಲ್ಲಾ ಆಸ್ತಿಗಳ ಮೌಲ್ಯಮಾಪನ ಮಾಡುತ್ತಿದ್ದಾರೆ. ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಮಾಡಲಾಗುತ್ತಿದೆ.
ಸದ್ಯ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಡಿಕೆ ಶಿವಕುಮಾರ್ ಅವರು ಅಧಿವೇಶನದಲ್ಲಿ ಭಾಗಹಿಸಿದ್ದು, ಇದೇ ಸಂದರ್ಭದಲ್ಲಿ ಇತ್ತ ಬೆಂಗಳೂರಿನಲ್ಲಿ ಸಿಬಿಐ ದಾಳಿ ನಡೆಸಿದೆ. ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.
ಸಿಬಿಐ ದಾಳಿ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿ ಕೆ ಶಿವಕುಮಾರ್, ‘ಇಂದು ದಾಳಿ ಮಾಡಲಾಗಿದ್ದು, ಈ ವೇಳೆ ನಮ್ಮ ಟ್ರಸ್ಟಿಗಳನ್ನು ಭೇಟಿ ಮಾಡಿ, ಕೆಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನನ್ನ ವಕೀಲರಿಗೂ ನಾನು ನೀಡಿರುವ ಹಣಕ್ಕೆ ಸಂಬಂಧಪಟ್ಟಂತೆ ನೋಟಿಸು ನೀಡಿದ್ದಾರೆ. ಇದಲ್ಲದೇ ನಮ್ಮ ಊರಿಗೆ ತೆರಳಿ ಅಲ್ಲಿರುವ ಜಮೀನು ಹಾಗೂ ಮನೆಯನ್ನು ಸುತ್ತು ಹಾಕಿ ತಹಶೀಲ್ದಾರ್ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ನನ್ನ ವಿರುದ್ದ ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಎಲ್ಲಾ ಕಡೆಯಿಂದ ನನಗೆ ತೊಂದರೆ ಕೊಡಲಾಗುತ್ತಿದೆ ಎಂದರು.
ವಿರೋಧಿಗಳನ್ನು ಮಟ್ಟಹಾಕಲು ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ನವರಿಗೆ ತೊಂದರೆ ಕೊಡುವುದೇ ಮುಖ್ಯ ಉದ್ದೇಶವಾಗಿದೆ. ಐಟಿ, ಇಡಿ, ಸಿಬಿಐ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದಾರೆ. ನ್ಯಾಯಾಲಯ, ದೇವರ ಮೇಲೆ ಭಾರ ಹಾಕಿ ಮುನ್ನಡೆಯುತ್ತೇವೆ. ನಾನು ಯಾವುದೇ ತಪ್ಪು ಮಾಡಿಲ್ಲ ಧೈರ್ಯವಾಗಿದ್ದೇನೆ ಎಂದರು.
ಆಪರೇಷನ್ ಕಮಲದ ಸಂದರ್ಭದಲ್ಲಿಯೂ ಹಣದ ಅವ್ಯವಹಾರ ಹಗರಣ ನಡೆದಿದೆ. ಸ್ವತಃ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿಕೆ ನೀಡಿ, ಉಪಚುನಾವಣೆ ವೇಳೆ ಹೆಚ್.ವಿಶ್ವನಾಥ್ಗೆ ಹಣ ನೀಡಿದ್ದಾಗಿ ಹೇಳಿದ್ದಾರೆ. ಗವರ್ನರ್ ಮಾಡಬೇಕಾದರೆ 5-6 ಕೋಟಿ ಕೊಡಬೇಕೆಂದು ಹೇಳಿಕೆ ನೀಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಕೂಡ ಹಣ ನೀಡಬೇಕೆಂದು ಹೇಳಿದ್ದಾರೆ. ಇವರಿಗೆ ತನಿಖಾ ಸಂಸ್ಥೆಗಳು ಯಾವುದೇ ನೋಟಿಸ್ಸು ನೀಡಿಲ್ಲ. ಕೋಟಿ ಕೋಟಿ ಹಣ ನೀಡಿದ ಬಗ್ಗೆ ಹೇಳಿಕೆ ನೀಡಿದ್ದರೂ ಪ್ರಶ್ನಿಸಲಾಗುತ್ತಿಲ್ಲ ಎಂದರು.