ಹೈದರಾಬಾದ್: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಖಾಸಗಿ ಕಂಪೆನಿಯೊಂದರ ಹೆಸರಿನಲ್ಲಿ ರೂ. 42 ಕೋಟಿ ಸಾಲ ಪಡೆದು ಮರುಪಾವತಿ ಮಾಡದೇ ಇರುವುದರಿಂದ ಮಾಜಿ ಸಂಸದೆ ಹಾಗೂ ಹಾಲಿ ಬಿಜೆಪಿ ನಾಯಕಿ ಕೊತಪಲ್ಲಿ ಗೀತಾ ಅವರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿ ಕೇಂದ್ರ ತನಿಖಾ ದಳ(ಸಿಬಿಐ) ವಿಶೇಷ ನ್ಯಾಯಾಲಯ ಆದೇಶಿಸಿದೆ.
ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದ್ದು, ಗೀತಾ ಜತೆ, ಅವರ ಪತಿ ಹಾಗೂ ವಿಶ್ವೇಶ್ವರ ಇನ್‌ಫ್ರಾಸ್ಟ್ರಕ್ಚರ್‌ನ ಎಂಡಿ ಪಿ. ರಾಮಕೋಟೇಶ್ವರ ರಾವ್ ಮತ್ತು ಬ್ಯಾಂಕ್ ಅಧಿಕಾರಿಗಳಾದ ಬಿ. ಕೆ ಜಯಪ್ರಕಾಶ್ ಮತ್ತು ಕೆ. ಕೆ ಅರವಿಂದಾಕ್ಷನ್ ಅವರಿಗೂ ಶಿಕ್ಷೆ ವಿಧಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಿರಿಯ ಅಧಿಕಾರಿಗಳು ಗೀತಾ ಅವರ ವಿರುದ್ಧ 42 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡಿಲ್ಲ ಎಂದು ದೂರು ನೀಡಿದ್ದು, ಅದರ ಆಧಾರದಲ್ಲಿ ಸಿಬಿಐ ಅಧಿಕಾರಿಗಳು ಗೀತಾ ಅವರ ವಿಚಾರಣೆ ನಡೆಸಿ ಜೂನ್ 2015ರಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು, ನಂತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಬಂಧನದ ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಗೀತಾ ಪರ ವಕೀಲರು ತೆಲಂಗಾಣ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
2014ರಲ್ಲಿ ವೈಎಸ್‌ಆರ್‌ಸಿಪಿಯಿಂದ ಅರಕು ಸಂಸದರಾಗಿ ಗೆದ್ದಿದ್ದ ಕೊತಪಲ್ಲಿ ಗೀತಾ ನಂತರ ಪಕ್ಷ ತೊರೆದಿದ್ದರು. 2018 ರಲ್ಲಿ ಜನಜಾಗೃತಿ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ನಂತರ ಅವರು ಬಿಜೆಪಿ ಸೇರಿದರು ಮತ್ತು ಅವರ ಪಕ್ಷವನ್ನು ಅದರಲ್ಲಿ ವಿಲೀನಗೊಳಿಸಲಾಯಿತು.