– ಮಹೇಶ ಬಳ್ಳಾರಿ, ಕೊಪ್ಪಳ
ಮಹಾದಾಯಿ ಯೋಜನೆ ಈ ಭಾಗದ ಬಹು ಮಹತ್ವಾಕಾಂಕ್ಷೆಯ ಯೋಜನೆ. ಮಹದಾಯಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ಹೊಳೆಗಳ ವಿರುದ್ಧ ಅಣೆಕಟ್ಟುಗಳನ್ನು ನಿರ್ಮಿಸಿ, ಈ ಭಾಗದ ಬರಡು ಜಿಲ್ಲೆಗಳ ಕಡೆಗೆ ನೀರನ್ನು ತಿರುವು ಮಾಡಿ ನೀರಿನ ಕೊರತೆಯನ್ನು ನಿವಾರಿಸುವ ಉದ್ದೇಶಕ್ಕಾಗಿ ನಡೆದ ಹೋರಾಟ ಇದು. ಒಂದು ಸಾವಿರ ದಿನಗಳಷ್ಟು ನಿರಂತರವಾಗಿ ಹೋರಾಟ ನಡೆದರೂ ಸರಿಯಾದ ಬೆಂಬಲ ಸಿಗಲಿಲ್ಲ.
ಕಾವೇರಿ ಸಮಸ್ಯೆ ಬಹುಹಿಂದಿನದ್ದು. ಕಾವೇರಿ ನೀರು ತಮಿಳುನಾಡಿಗೆ ಬಿಟ್ಟಾಗಲೆಲ್ಲ ಇಡೀ ನಾಡು ಕಾವೇರಿ ಪರವಾಗಿ, ಕರ್ನಾಟಕದ ಪರವಾಗಿ ನಿಂತು ಹೋರಾಡಿದ ಇತಿಹಾಸವಿದೆ. ರಾಜ್ಯ ಬಂದ್ಗೆ ಕರೆ ಕೊಟ್ಟಾಗಲೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಭಾಗಶಃ ಉತ್ತಮವಾಗಿ ಸ್ಪಂದನೆ ವ್ಯಕ್ತವಾಗುತ್ತಿತ್ತು. ‘ಕಾವೇರಿ’ ಎಂದರೆ ನಮ್ಮ ತಾಯಿ ಎಂಬ ತುಂಬು ಭಾವನಾತ್ಮಕ ನೆಲೆಯಲ್ಲಿ ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಜನತೆ ವಿಪರೀತ ಅಭಿಮಾನ ಮೆರೆಯುತ್ತಿದ್ದರು.
ವಾಸ್ತವವಾಗಿ ವಿಚಾರಿಸಿದರೆ ನಮ್ಮ ಈ ಭಾಗದವರು ಕಾವೇರಿಗಾಗಿ ಗಟ್ಟಿಯಾದ, ತೀವ್ರತರವಾದ, ನಷ್ಟ ಅನುಭವಿಸಿಕೊಂಡು ಮಾಡಿದ ಹೋರಾಟಗಳಿಂದ ಯಾವುದೇ ಪ್ರಯೋಜನ ಪಡೆಯುವುದಿಲ್ಲ ಎನ್ನುವುದು ಕಟು ವಾಸ್ತವ. ಕಾವೇರಿ ನೀರಿನ ಸಮಸ್ಯೆಗಳು ಮತ್ತು ಪ್ರಯೋಜನಗಳು ಈ ಭಾಗದವರಿಗೆ ಲಾಭವನ್ನಾಗಲೀ, ನಷ್ಟವನ್ನಾಗಲೀ ಉಂಟು ಮಾಡುವುದಿಲ್ಲ. ಆದರೆ ನೆಲ-ಜಲದ ಭಾವನಾತ್ಮಕ ಸಂಬಂಧ, ಅಭಿಮಾನ, ನಮ್ಮದು-ನಮ್ಮವರೆಂಬ ಹಚ್ಚಿಕೊಳ್ಳುವ ಈ ನೆಲದ ಹುಟ್ಟುಗುಣ ಕಾವೇರಿಗಾಗಿನ ಹೋರಾಟಕ್ಕೆ ಬಲ ತುಂಬುತ್ತಿತ್ತು. ‘ಕನ್ನಡ ನಾಡಿನ ಜೀವನದಿ ಈ ಕಾವೇರಿ’ ಹಾಡು ಕೇಳಿದಾಕ್ಷಣ ಹುಚ್ಚೆದ್ದು ಕುಣಿಯುವವರ ಸಂಖ್ಯೆಯಲ್ಲಿ ನಮ್ಮ ಭಾಗದವರೇ ಹೆಚ್ಚು.
ನಿನ್ನೆ ಮೈಸೂರು ಭಾಗದ ಸ್ನೇಹಿತರೊಬ್ಬರು “ನಿಮ್ಮಲ್ಲಿ ‘ಕಾವೇರಿ ಬಂದ್’ ಹೇಗಿದೆ? ಯಾಕೆ ಬಹಳ ನೀರಸವಾಗಿದೆ?” ಎಂದು ಕೇಳಿದರು.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕರ್ನಾಟಕ ಬಂದ್ ಯಶಸ್ಸು ಪಡೆಯುತ್ತದೆ. ಇದರಲ್ಲಿ ಸಂಶಯವೇ ಇಲ್ಲ. ಆದರೆ ಈ ಮೊದಲಿನಂತೆ ಉತ್ತರ ಮತ್ತು ಕಲ್ಯಾಣ ಕರ್ನಾಟಕಗಳಲ್ಲಿ ಕಾವೇರಿ ಹೋರಾಟ ಯಶಸ್ಸನ್ನು ಪಡೆಯುತ್ತಿಲ್ಲ. ನಿರ್ದಿಷ್ಟ ಪ್ರದೇಶಗಳಿಗೆ ಹೋರಾಟಗಳು ಸೀಮಿತವಾದರೆ ಸಂಕುಚಿತತೆಗೆ ಕಾರಣವಾಗಿ ಅಖಂಡತೆಯ ಪರಿಕಲ್ಪನೆಗೆ ಧಕ್ಕೆ ಉಂಟಾಗಬಹುದೆಂಬ ಆತಂಕ ಸೃಷ್ಟಿಯಾಗಬಹುದಾದರೂ ವಾಸ್ತವ ಅರಿಯದೇ ಯಾರನ್ನೂ ಸಮರ್ಥಿಸಲು, ಯಾರನ್ನೂ ದೂಷಿಸಲು ಸಾಧ್ಯವಿಲ್ಲ.
ಮಂಡ್ಯ, ಮೈಸೂರು, ಬೆಂಗಳೂರುಗಳಂತಹ ಮುಂದುವರೆದ ಭಾಗಗಳವರ ಸಮಸ್ಯೆಗಳಿಗೆ ನಾವು ಸ್ಪಂದಿಸಿದಷ್ಟು ನಮ್ಮ ನೋವುಗಳಿಗೆ ಅಲ್ಲಿನವರು ಸ್ಪಂದಿಸಿಲ್ಲ ಎನ್ನುವುದು ನೂರಕ್ಕೆ ನೂರರಷ್ಟು ನಿಜ.
ಇದನ್ನೂ ಓದಿ: ಕಾವೇರಿ ನೀರಿಗಾಗಿ| ಬುರ್ಖಾ ಧರಿಸಿ ಖಾಲಿ ಬಿಂದಿಗೆ ಹಿಡಿದು ವಾಟಾಳ್ ನಾಗರಾಜ್ ಪ್ರತಿಭಟನೆ
ಮಹಾದಾಯಿ ಯೋಜನೆ ಈ ಭಾಗದ ಬಹು ಮಹತ್ವಾಕಾಂಕ್ಷೆಯ ಯೋಜನೆ. ಮಹದಾಯಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ಹೊಳೆಗಳ ವಿರುದ್ಧ ಅಣೆಕಟ್ಟುಗಳನ್ನು ನಿರ್ಮಿಸಿ, ಈ ಭಾಗದ ಬರಡು ಜಿಲ್ಲೆಗಳ ಕಡೆಗೆ ನೀರನ್ನು ತಿರುವು ಮಾಡಿ ನೀರಿನ ಕೊರತೆಯನ್ನು ನಿವಾರಿಸುವ ಉದ್ದೇಶಕ್ಕಾಗಿ ನಡೆದ ಹೋರಾಟ ಇದು. ಒಂದು ಸಾವಿರ ದಿನಗಳಷ್ಟು ನಿರಂತರವಾಗಿ ಹೋರಾಟ ನಡೆದರೂ ಸರಿಯಾದ ಬೆಂಬಲ ಸಿಗಲಿಲ್ಲ. ನೂರು ದಿನಗಳ ಕಾಲ ಚಲನಚಿತ್ರ ಪ್ರದರ್ಶನವಾದರೆ, ನೂರು ರನ್ನುಗಳನ್ನು ಕ್ರಿಕೆಟ್ ಆಟಗಾರನೊಬ್ಬ ಹೊಡೆದರೆ, ನೂರು ದಿನಗಳ ಅಧಿಕಾರವನ್ನು ರಾಜಕಾರಣಿ ಪೂರೈಸಿದರೆ ಹಬ್ಬದ ವಾತಾವರಣ ಸೃಷ್ಟಿಸಿ ವಿಜೃಂಭಿಸುವ ಜನರು ಸಾವಿರ ದಿನಗಳ ಹೋರಾಟ ನಡೆದರೂ ಅತ್ತ ಕಡೆ ಹೊರಳಿ ನೋಡಲಿಲ್ಲ. ಚಲನಚಿತ್ರ ನಟರ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಚಲನಚಿತ್ರಗಳನ್ನು ಬಹಿಷ್ಕರಿಸುವ ಮಾತುಗಳು ಕೇಳಿಬಂದವು. ಚಲನಚಿತ್ರ ನಟರ ಆರಾಧನೆ, ಚಲನಚಿತ್ರಗಳ ನೋಡುವಿಕೆ ನಮ್ಮ ಭಾಗದವರಲ್ಲೇ ಹೆಚ್ಚು. ಹೋರಾಟದ ತೀವ್ರತೆ ಹೆಚ್ಚಿದಾಗ ಕೆಲವು ದೊಡ್ಡ ನಟರು ಹೋರಾಟಕ್ಕೆ ಬಂದು ಬೆಂಬಲ ಸೂಚಿಸಿದರು. ಮಹಾದಾಯಿ ಅನುಷ್ಠಾನಕ್ಕೆ ನಡೆದ ಬಂದ್ಗೆ ಆ ಭಾಗಗಳವರು ಸರಿಯಾಗಿ ಸ್ಪಂದಿಸಲಿಲ್ಲ.
ಈ ಭಾಗದ ಹಲವು ಸಮಸ್ಯೆಗಳಿಗೂ ಮುಂದುವರಿದ ಭಾಗಗಳು ನಿರ್ಲಕ್ಷ್ಯ ಧೋರಣೆ ತಾಳಿದರು. ಹೀಗಾಗಿ ಉತ್ತರ ಮತ್ತು ಕಲ್ಯಾಣ ಕರ್ನಾಟಕಗಳ ಅಭಿವೃದ್ಧಿಗೆ ಪೂರಕವಾದ ಬೆಂಬಲ ಸಿಗುತ್ತಿಲ್ಲವೆಂಬ ಮಾತು ಜನಜನಿತವಾಗತೊಡಗಿತು. ಜನರ ಮಾತುಗಳಿಗೆ ವೇಗ ಬಹಳಷ್ಟಿರುತ್ತದೆ. ಹೀಗಾಗಿ ಈ ಸಲ ಕಾವೇರಿ ನದಿಯ ವಿಚಾರದಲ್ಲಿ ನಮ್ಮ ಭಾಗದಲ್ಲಿ ಹೇಳಿಕೊಳ್ಳುವ ಹೋರಾಟ ಆಗಲಿಲ್ಲ. ಸಣ್ಣ ಸಣ್ಣ ಹೋರಾಟಗಳು ಕನ್ನಡಪರ ಸಂಘಟನೆಗಳಿಂದ ನಡೆದರೂ ಈ ಹಿಂದೆ ಆದಷ್ಟು ಗಟ್ಟಿಯಾಗಿ ಆಗಲಿಲ್ಲ.ಮೂಗು ಹಿಡಿಯುವ ತಂತ್ರವನ್ನು ನಮ್ಮ ಭಾಗದ ಹಿರಿಯರು ಅನುಸರಿಸಿದ್ದರಿಂದಲೇ ಕಲ್ಯಾಣ ಕರ್ನಾಟಕಕ್ಕೆ 371 ನೇ ಜೆ ಕಲಮು ಜಾರಿಗೆ ಬಂತು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವೇಗ ಇನ್ನಷ್ಟು ಹೆಚ್ಚಾಗಬೇಕಿದೆ. 371 ಜೆ ಕಲಮಿನ ಹೋರಾಟದಲ್ಲಿ ನಿರ್ಲಿಪ್ತ ಭಾವನೆ ಹೊಂದಿದ್ದ ಕೆಲವು ಹೈದರಾಬಾದ್ ಕರ್ನಾಟಕದ ಪ್ರದೇಶಗಳಲ್ಲದ ಜನರು 371 ಜೆ ಕಲಮು ಅನುಷ್ಠಾನವಾದ ಮೇಲೆ ತಮಗೂ ಇದು ಅನ್ವಯವಾಗುವಂತೆ ವ್ಯರ್ಥ ಹೋರಾಟ ಮಾಡಿದರು.
ಹೋರಾಟಗಳು ಒಗ್ಗಟ್ಟಿಗೆ ಧಕ್ಕೆ ತರದ ರೀತಿಯಲ್ಲಿ ಸಾಗಬೇಕು. ನಾಡಿನ ಯಾವುದೇ ಮೂಲೆಯಲ್ಲಿ ಜನಪರ ಹೋರಾಟಗಳು ಜರುಗಿದರೆ ಸ್ಪಂದಿಸುವ ಔಧಾರ್ಯವನ್ನು ಎಲ್ಲ ಸಂಘ-ಸಂಘಟನೆಗಳು, ಪ್ರಗತಿಪರರು ತೋರಿಸಬೇಕು. ಅಮೇರಿಕ, ಬ್ರಿಟನ್ ಮಾದರಿಯಲ್ಲಿ ತತ್ವ-ಸಿದ್ಧಾಂತಗಳಾಚೆಯೂ ಬಂದು
ತಮ್ಮವರದೇ ಆಗಿದ್ದರೂ ತಪ್ಪನ್ನು ತಪ್ಪೆಂದು ಹೇಳುವ, ವಿರೋಧಿಸುವ ಪಕ್ಷದ ಒಳ್ಳೆಯ ಕೆಲಸಗಳನ್ನು ಪ್ರಶಂಸಿಸುವ ಗುಣ ಬರಬೇಕಿದೆ.
ವಿಡಿಯೋ ನೋಡಿ: ಅಕ್ರಮವಾಗಿ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ನೈಸ್ ಕಂಪನಿವಿರುದ್ಧ ಗುಡುಗಿದ ರೈತರು Janashakthi Media