ಗುಜರಾತ್​​ನಲ್ಲಿ ಮತ್ತೆ ವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಡಿಕ್ಕಿ ಹೊಡೆದ ಹಸು; ರೈಲಿನ ಮುಂಭಾಗ ಜಖಂ, ಪ್ರಯಾಣಿಕರು ಸೇಫ್

ಮುಂಬೈ: ಇತ್ತೀಚೆಗಷ್ಟೇ ಎಮ್ಮೆಗಳು ಡಿಕ್ಕಿ ಹೊಡೆದಿದ್ದರಿಂದ, ವಂದೇ ಭಾರತ್ ಎಕ್ಸ್​ಪ್ರೆಸ್  ರೈಲಿನ ಮುಂಭಾಗ ಜಖಂ ಆಗಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಘಟನೆಯೊಂದು ನಡೆದಿದೆ. ಹಸುವಿಗೆ ಮುಂಬೈನಿಂದ ಅಹಮದಾಬಾದ್​ಗೆ ತೆರಳುತ್ತಿದ್ದ ವಂದೇ ಭಾರತ್​ ರೈಲು ಡಿಕ್ಕಿ ಹೊಡೆದಿದ್ದರಿಂದ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ.

ಗುಜರಾತ್​ನ ಅಟಲ್​ ಸ್ಟೇಷನ್​ಗೆ ತೆರಳುವಾಗ ಈ ಘಟನೆ ನಡೆದಿದೆ. ರೈಲ್ವೆ ಹಳಿ ಮೇಲೆ ನಿಂತಿದ್ದ ಹಸುವಿಗೆ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಈ ಘಟನೆ ನಡೆದ ನಂತರ ಕೆಲಕಾಲ ರೈಲನ್ನು ನಿಲ್ಲಿಸಲಾಯಿತು.

ಅತಿ ವೇಗದಲ್ಲಿ ಬರುತ್ತಿದ್ದ ವಂದೇ ಭಾರತ್ ರೈಲಿಗೆ ಹಸು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಇಂದು ವಂದೇ ಭಾರತ್ ರೈಲು ಗುಜರಾತ್‌ನ ವಲ್ಸಾದ್‌ನಿಂದ ಹಾದು ಹೋಗುತ್ತಿದ್ದಾಗ ಹಸುವೊಂದು ರೈಲಿಗೆ ಡಿಕ್ಕಿ ಹೊಡೆದಿದೆ. ಆದರೆ, ಇದರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಈ ಘಟನೆಯ ಬಳಿಕ ರೈಲು ಕೆಲಕಾಲ ಅದೇ ಸ್ಥಳದಲ್ಲಿ ನಿಂತಿತ್ತು. ಸ್ವಲ್ಪ ಸಮಯದ ನಂತರ ರೈಲನ್ನು ಮುಂದಕ್ಕೆ ಕಳುಹಿಸಲಾಯಿತು.

ಗುಜರಾತ್‌ನಲ್ಲಿ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು 1 ತಿಂಗಳಲ್ಲಿ ಮೂರನೇ ಬಾರಿಗೆ ಪ್ರಾಣಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಇದಕ್ಕೂ ಮೊದಲು ಈ ಹೈಸ್ಪೀಡ್ ರೈಲು ಅಕ್ಟೋಬರ್ 6ರಂದು ಗಾಂಧಿನಗರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಆನಂದ್ ನಿಲ್ದಾಣದಲ್ಲಿ ಹಸುವಿಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗದ ಭಾಗವು ಹಾನಿಗೊಳಗಾಗಿತ್ತು. ಆನಂದ್‌ನಲ್ಲಿ ಹಸುವಿಗೆ ಡಿಕ್ಕಿ ಹೊಡೆಯುವ ಎರಡು ದಿನಗಳ ಹಿಂದೆ, ಈ ರೈಲು ಅಹಮದಾಬಾದ್ ಬಳಿಯ ವತ್ವಾದಲ್ಲಿ 4 ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು. ಆಗಲೂ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು.

ಬಳಿಕ ಎಮ್ಮೆಗಳ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಗುಜರಾತ್‌ನಲ್ಲಿ ಹಸುಗಳು ಮತ್ತು ಎಮ್ಮೆಗಳನ್ನು ಸಾಕುತ್ತಿರುವವರಿಗೆ ವಂದೇ ಭಾರತ್ ಎಕ್ಸ್​ಪ್ರೆಸ್​​ನ ವೇಳಾಪಟ್ಟಿಯ ಬಗ್ಗೆ ತಿಳಿದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಇದೇ ಕಾರಣಕ್ಕೆ ಹಸು-ಎಮ್ಮೆಗಳ ಹಿಂಡು ಹಳಿಗಳ ಮೇಲೆ ಬಂದಿವೆ. ಈಗ ಅವರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಲಾಗುವುದು ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *