ಮುಜಾಫರ್‌ನಗರ : ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸುವಾಗ ತ್ರಿವರ್ಣ ಧ್ವಜಕ್ಕೆ ಅವಮಾನಿಸಿದ ಆರೋಪದ ಮೇಲೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಿರುದ್ಧ ಪ್ರಕರಣ ದಾಖಲಾಗಿದೆ.
ಲಖನೌದಲ್ಲಿ ಆಗಸ್ಟ್ 22ರಂದು ಕಲ್ಯಾಣ್ ಸಿಂಗ್ ಅವರ ಅಂತ್ಯಕ್ರಿಯೆಗೂ ಮುನ್ನ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರ ಧ್ವಜದ ಮೇಲೆ ಅಧ್ಯಕ್ಷರು ಬಿಜೆಪಿ ಧ್ವಜವನ್ನು ಇಟ್ಟಿದ್ದು ಅವರು ತ್ರಿವರ್ಣ ಧ್ವಜಕ್ಕೆ ಮಾಡಿದ ಅಗೌರವ ಎಂದು ಆರೋಪಿಸಿ ಸಿಕಂದರ್‌ಪುರದ ನಿವಾಸಿ ಚಂದ್ರ ಕಿಶೋರ್ ಪರಾಶರ್ ಮುಜಾಫರ್‌ಪುರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
‘ಉದ್ದೇಶಪೂರ್ವಕವಾಗಿ ಬಿಜೆಪಿ ಇದನ್ನು ಮಾಡಿದೆ. ನಡ್ಡಾ ಅವರ ಈ ಕೃತ್ಯವು ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನ” ಎಂದು ಅರ್ಜಿದಾರರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟ ಕೆಲ ಚಿತ್ರಗಳನ್ನು ಸಹ ಸಲ್ಲಿಸಿದ್ದಾರೆ.
ಸಿಂಗ್ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ಪಕ್ಷದ ಧ್ವಜವನ್ನು ಇರಿಸಿದ್ದಕ್ಕೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಸದ್ಯ ಪ್ರಕರಣ ದಾಖಲಾಗಿರುವುದು ಬಿಜೆಪಿಯ ಹುಸಿ ರಾಷ್ಟ್ರಪ್ರೇಮವನ್ನು ಬಯಲು ಮಾಡಲಿದೆ. ಬಿಜೆಪಿಗೆ ಯಾವಾಗಲೂ ದೇಶದ ಧ್ವಜಕ್ಕಿಂತ ತಮ್ಮ ಧ್ವಜವೇ ಹೆಚ್ಚಾಗಿರುತ್ತದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನು ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಕುರಿತು ದಿನಾಂಕ ನಿಗದಿಪಡಿಸಿಲ್ಲ.