ಬರ್ಬರತೆಯ ಪ್ರಪಾತಕ್ಕೆ ಬಂಡವಾಳಶಾಹಿ

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ಬಂಡವಾಳಶಾಹಿಯು ಮಾನವೀಯ ಮೌಲ್ಯಗಳ ಒಂದು ಶಕ್ತಿ ಎಂಬ ಭ್ರಮೆಯೂ ಈಗ ಹರಿದಿದೆ. ಬಂಡವಾಳಶಾಹಿಯು ಬರ್ಬರತೆಯ ಸ್ಥಿತಿಗೆ ಇಳಿದಿರುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತಿದೆ. ಜಾಗತಿಕ ಸಾರ್ವಜನಿಕ ಅಭಿಪ್ರಾಯವನ್ನೂ ಲೆಕ್ಕಿಸದೆ, ತನ್ನ ಅನಾಗರಿಕ ಸ್ವಭಾವವನ್ನು ತೆರೆದು ತೋರಿಸುವಷ್ಟು ಧೈರ್ಯ ಸಾಮ್ರಾಜ್ಯಶಾಹಿಗೆ ಬಂದದ್ದಾದರೂ ಹೇಗೆ? ಮತ್ತು, ಅದನ್ನು ತೋರಿಸಲೇಬೇಕು ಎನ್ನುವಷ್ಟು ಹತಾಶೆ ಸಾಮ್ರಾಜ್ಯಶಾಹಿಗೆ ಉಂಟಾದದ್ದಾದರೂ ಏಕೆ? ಏಕೆಂದರೆ ಜಾಗತಿಕವಾಗಿ ಒಗ್ಗಟ್ಟಾಗಿರುವ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ನೀತಿಗಳಿಗೆ ಅದಕ್ಕೆ ಬಲಿಯಾಗುತ್ತಿರುವ ದುಡಿಯುವ ಜನಗಳಿಂದ ಎಲ್ಲ ದೇಶಗಳಲ್ಲೂ ತೀವ್ರ ಸವಾಲಿನ ಬೆದರಿಕೆ ಹೆಚ್ಚುತ್ತಿದೆ. ಬರ್ಬರತೆ

ಮೊದಲ ಮಹಾ ಯುದ್ಧದ ಸನ್ನಿವೇಶದಲ್ಲಿ ರೋಸಾ ಲಕ್ಸೆಂಬರ್ಗ್ ಅವರು 1915ರಲ್ಲಿ ಜೈಲಿನಿಂದ ಬರೆದ ಒಂದು ಕರಪತ್ರದಲ್ಲಿ, ಮಾನವ ಸಮಾಜವು ಇನ್ನು ಮುಂದೆ ಬರ್ಬರತೆ ಅಥವಾ ಸಮಾಜವಾದ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯ ಬಗ್ಗೆ ಉದಾರವಾದಿ ಅಭಿಪ್ರಾಯವು ತಕರಾರು ತೆಗೆಯುತ್ತದೆ. ಎರಡು ವಿಶ್ವ ಯುದ್ಧಗಳು ಮತ್ತು ಅವುಗಳ ನಡುವಿನ ಅವಧಿಯನ್ನು ಗುರುತಿಸುವ ಬರ್ಬರತೆಗೂ ಮತ್ತು ಬಂಡವಾಳಶಾಹಿಗೂ ಸಂಬಂಧವಿಲ್ಲ ಎಂದು ವಾದಿಸುತ್ತದೆ. ಬಂಡವಾಳಶಾಹಿ ವ್ಯವಸ್ಥೆಯ ಅಡಿಯಲ್ಲಿ ಎದ್ದು ಕಾಣುವ ಉದಾರವಾದಿ ಪ್ರವೃತ್ತಿಯು ಮಹಾ ಯುದ್ಧದ ಬರ್ಬರತೆಯ ವಿರುದ್ಧ ಹೋರಾಡಿದೆ ಎಂದು ಹೇಳುತ್ತದೆ. ಮಾನವೀಯ ಮೌಲ್ಯಗಳನ್ನು ಬಂಡವಾಳಶಾಹಿಯು ಉತ್ತುಂಗಕ್ಕೆ ಕೊಂಡೊಯ್ದಿತು ಎಂಬುದನ್ನು ಯುದ್ಧಾನಂತರದ ವರ್ಷಗಳು ಸಮರ್ಥಿಸುತ್ತವೆ ಎಂದು ಹೇಳುತ್ತದೆ. ಬರ್ಬರತೆ

1943ರ ಭೀಕರ ಬಂಗಾಳ ಕ್ಷಾಮ
ಚಿತ್ರ:ಚಿತ್ರಪ್ರಸಾದ್

 

ಬಂಡವಾಳಶಾಹಿಯ ಅಡಿಯಲ್ಲಿ ಮಾನವೀಯ ಮೌಲ್ಯಗಳು ಪ್ರವರ್ಧಮಾನಕ್ಕೆ ಬರುವ ಬಗ್ಗೆ ಮಾತನಾಡುವುದು ಸಾಮ್ರಾಜ್ಯಶಾಹಿ ವಿದ್ಯಮಾನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದೇ ಆಗಿರುತ್ತದೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯು ಕ್ಷಾಮಗಳನ್ನು ಸೃಷ್ಟಿಸಿತು ಎಂಬುದು ಎಲ್ಲರಿಗೂ ಚೆನ್ನಾಗಿ ತಿಳಿದ ವಿಷಯವೇ: ತನ್ನ ಸುಲಿಗೆಕೋರ ಕಂದಾಯ ನೀತಿಯಿಂದಾಗಿ 1770ರಲ್ಲಿ ಬಂಗಾಳ ಪ್ರಾಂತ್ಯದ ಜನಸಂಖ್ಯೆಯ ಮೂರನೇ ಒಂದು ಭಾಗ (ಸುಮಾರು ಒಂದು ಕೋಟಿ) ಜನರನ್ನು ಕೊಂದ ಬಂಗಾಳದ ಕ್ಷಾಮದಿಂದ ಈ ಆಳ್ವಿಕೆ ಆರಂಭವಾಯಿತು. ತನ್ನ ಅಂತ್ಯದ ವರ್ಷಗಳಲ್ಲಿ, ಅದು ತೊಡಗಿಕೊಂಡಿದ್ದ ಮಹಾ ಯುದ್ಧಕ್ಕಾಗಿ ಹಣ ಒದಗಿಸಿಕೊಳ್ಳಲು ಸರ್ಕಾರವು ಅನುಸರಿಸಿದ ಕ್ರೂರ ನೀತಿಯಿಂದಾಗಿ 1943ರಲ್ಲಿ ಬಂಗಾಳದಲ್ಲಿ ಸೃಷ್ಟಿಯಾದ ಮತ್ತೊಂದು ಕ್ಷಾಮವು ಕನಿಷ್ಠ ಮೂವತ್ತು ಲಕ್ಷ ಜನರನ್ನು ಮತ್ತೊಮ್ಮೆ ಬಲಿ ತೆಗೆದುಕೊಂಡಿತು. ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನರನ್ನು ನಿರ್ನಾಮ ಮಾಡಿದ ಮತ್ತು 1930ರ ದಶಕದಲ್ಲಿ ಹಿಟ್ಲರನ ಸೆರೆಮನೆ-ಮತ್ತು-ಸಾವಿನ ಶಿಬಿರಗಳಿಗೆ “ಮಾದರಿ”ಗಳನ್ನು ರೂಪಿಸಿದ ಜರ್ಮನಿಯ ಆಳ್ವಿಕೆಯು (ಇಂದಿನ) ನಮೀಬಿಯಾದಲ್ಲಿ ಸಾವಿನ ಶಿಬಿರಗಳನ್ನು ಪರಿಚಯಿಸಿತು. ಕಾಂಗೋದಲ್ಲಿ ಎಲ್ಲರಿಗೂ ತಿಳಿದಿರುವ ಮನುಷ್ಯರ ಅಂಗಾಂಗಗಳನ್ನು ಊನಗೊಳಿಸಿದ ಮತ್ತು ವಿವರಿಸಲಾಗದ ಘನ ಘೋರ ದೌರ್ಜನ್ಯಗಳನ್ನು ಲಿಯೋಪೋಲ್ಡ್ ಆಳ್ವಿಕೆಯ ಅಡಿಯಲ್ಲಿ ಬೆಲ್ಜಿಯಂ ಎಸಗಿತು. ಯುರೋಪಿಯನ್ ವಲಸಿಗ ವಸಾಹತುಶಾಹಿಯು ವಿಶ್ವದ ಸಮಶೀತೋಷ್ಣ ಪ್ರದೇಶಗಳಲ್ಲಿ ಅಸಂಖ್ಯಾತ ಸ್ಥಳೀಯ ಜನರನ್ನು ಕೊಂದುಹಾಕಿತು ಮತ್ತು ಅಳಿದುಳಿದವರನ್ನು ಎತ್ತಂಗಡಿ ಮಾಡಿಸಿ ಅವರ ವಾಸದ ಸ್ಥಳವನ್ನು ಪ್ರತ್ಯೇಕಿಸಿತು ಮತ್ತು ಅವರ ಭೂಮಿ ಮತ್ತು ಆವಾಸ ಸ್ಥಾನಗಳನ್ನು ಸ್ವಾಧೀನಪಡಿಸಿಕೊಂಡಿತು. ಕ್ರೌರ್ಯದ ಈ ಕಥನವನ್ನು ಕೊನೆ ಇಲ್ಲದಂತೆ ಹೇಳುತ್ತಲೇ ಹೋಗಬಹುದು. ಸಂಕ್ಷಿಪ್ತವಾಗಿ ಈ ಎಲ್ಲವನ್ನೂ ಹೇಳುವುದಾದರೆ, ಸಾಮ್ರಾಜ್ಯಶಾಹಿಯ ಈ ಕ್ರೌರ್ಯದ ಉದ್ದೇಶವು ಕೇವಲ ಅಂದರೆ ಕೇವಲ ಲಾಭವೇ ಆಗಿತ್ತು. ಇದುವೇ ಬಂಡವಾಳಶಾಹಿಯ ಗುಣ ಲಕ್ಷಣ. ಬರ್ಬರತೆ

ಇದನ್ನು ಓದಿ : ಪತಂಜಲಿ ಜಾಹೀರಾತುಗಳ ಮೇಲೆ ನಿಷೇಧ; ಬಾಬಾ ರಾಮ್‌ದೇವ್ ವಿರುದ್ಧ ಸುಪ್ರೀಂ ವಾಗ್ದಾಳಿ

ಭ್ರಮನಿರಸನ

ಬಂಡವಾಳಶಾಹಿಯು ಅಸ್ತಿತ್ವಕ್ಕೆ ಬರುವ ಬಹಳ ಮೊದಲೇ ಸಂಪತ್ತನ್ನು ದೋಚುವ ಉದ್ದೇಶವೇ ಯುದ್ಧಗಳಿಗೆ ಪ್ರೇರಣೆಯಾಗಿತ್ತು. ಹಾಗಾಗಿ, ಬಂಡವಾಳಶಾಹಿಯನ್ನು ಏಕೆ ಈ ವಿವಾದದೊಳಗೆ ಎಳೆದು ತರಬೇಕು? ಎಂದು ಕೇಳಬಹುದು. ಉತ್ತರದಲ್ಲಿ ಎರಡು ಭಾಗಗಳಿವೆ: ಮೊದಲನೆಯದು, ಮಾನವೀಯ ಮೌಲ್ಯಗಳನ್ನು ಬಂಡವಾಳಶಾಹಿಯು ಪ್ರವರ್ಧಮಾನಕ್ಕೆ ತಂದಿತು ಎಂಬ ಎಲ್ಲಾ ಮಾತುಗಳೂ ಬರೀ ಉತ್ಪ್ರೇಕ್ಷೆಯೇ. ಬಂಡವಾಳಶಾಹಿಯು ಹೆಚ್ಚೆಂದರೆ, ಅದು ಅಸ್ತಿತ್ವಕ್ಕೆ ಬರುವ ಮೊದಲು ಏನಿತ್ತೋ ಅದಕ್ಕಿಂತ ಉತ್ತಮವೇನಲ್ಲ. ಎರಡನೆಯದು, ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಸುಲಿಗೆ, ಕೊಳ್ಳೆ, ಲೂಟಿ ಮುಂತಾದ ಸಂಪತ್ತನ್ನು ದೋಚುತ್ತಿದ್ದ ವಿಧಾನಗಳು ಬಂಡವಾಳಶಾಹಿಯ ಅಡಿಯಲ್ಲಿ ದೋಚುವ ವಿಧಾನಗಳಿಗಿಂತಲೂ ಬಹಳ ಭಿನ್ನವಾಗಿದ್ದವು. ಹಿಂದಿನ ಲೂಟಿಕೋರರು ಯಾರಿಂದ ಕೊಳ್ಳೆ ಹೊಡೆಯುತ್ತಿದ್ದರೋ ಅವರಿಗೆ ಸ್ವಲ್ಪವನ್ನಾದರೂ ಬಿಟ್ಟು ಹೋಗುತ್ತಿದ್ದರು ಅಥವಾ ಅವರಿಗೆ ಕಾಲಕ್ರಮದಲ್ಲಿ ತಮ್ಮ ನಷ್ಟವನ್ನು ತುಂಬಿಕೊಳ್ಳುವ ಅವಕಾಶವನ್ನು ಕೊಡುತ್ತಿದ್ದರು (ನಂತರ ಮತ್ತೊಮ್ಮೆ ಅದನ್ನು ಲೂಟಿ ಮಾಡುತ್ತಿದ್ದರು). ಆದರೆ, ಬಂಡವಾಳಶಾಹಿಯ ಅಡಿಯಲ್ಲಿ ತುಳಿತಕ್ಕೊಳಗಾದವರಿಂದ ಲಪಟಾಯಿಸುವುದು ಶಾಶ್ವತವೇ. ಬರ್ಬರತೆ

ಮಹಾ ಯುದ್ದಾನಂತರದ ಅವಧಿಯಲ್ಲಿ, ಬಂಡವಾಳಶಾಹಿಯು ತನ್ನನ್ನು ಎಲ್ಲ ಅನಾಗರಿಕ ಪ್ರವೃತ್ತಿಗಳ ವಿರುದ್ಧ ಹೋರಾಡಿದ ಮಾನವೀಯ ಮೌಲ್ಯಗಳ ಒಂದು ಶಕ್ತಿಯಾಗಿ ಬಿಂಬಿಸಿಕೊಂಡಿತು. ನಿರ್ದಿಷ್ಟವಾಗಿ ಹಾಲಿವುಡ್ ಚಲನಚಿತ್ರಗಳನ್ನು ಬಳಸಿಕೊಂಡು, ಎರಡನೆಯ ಮಹಾ ಯುದ್ಧವು ಮೂಲಭೂತವಾಗಿ ಪಾಶ್ಚ್ಯಾತ್ಯ ಉದಾರವಾದಿ ಪ್ರಜಾಪ್ರಭುತ್ವ ಮತ್ತು ಫ್ಯಾಸಿಸಂ ನಡುವಿನ ಹೋರಾಟವೆಂದು ಬಿಂಬಿಸಿತು ಮತ್ತು ಈ ಯುದ್ಧದಲ್ಲಿ ಸೋವಿಯತ್ ಒಕ್ಕೂಟವು ವಹಿಸಿದ ನಿರ್ಣಾಯಕ ಪಾತ್ರವನ್ನು ನಗಣ್ಯಗೊಳಿಸಿತು. ಪರಿಣಾಮವಾಗಿ, ವಿಶ್ವಾದ್ಯಂತ ಸೋವಿಯತ್ ಒಕ್ಕೂಟದ ಬಗ್ಗೆ ಮೂಡಿದ್ದ ಅಪಾರ ಸಹಾನುಭೂತಿಯು ಬಂಡವಾಳಶಾಹಿ ದೇಶಗಳ ಜನರಲ್ಲಿ ವ್ಯವಸ್ಥಿತವಾಗಿ ಕಾಣದಾಯಿತು. ತಾವು ಹಿಂದೆಂದೂ ಕಂಡಿರದ ಮಾನವೀಯ ವ್ಯವಸ್ಥೆಯೊಳಗೆ ಬದುಕುತ್ತಿದ್ದೇವೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಲಾಯಿತು. ರೋಸಾ ಲಕ್ಸೆಂಬರ್ಗ್ ಅವರ ಟೀಕೆಯು, ಯುದ್ಧಾನಂತರದ ಅವಧಿಯಲ್ಲಿ ಘಟಿಸಿದ ವಿಯೆಟ್ನಾಂ ಯುದ್ಧ ಮತ್ತು ಇತರ ಯುದ್ಧಗಳ ಹೊರತಾಗಿಯೂ, ಮತ್ತು, ಆ ವರ್ಷಗಳಲ್ಲಿ ವಿಶ್ವಾದ್ಯಂತ  ಆಯೋಜಿಸಿದ ಆಳ್ವಿಕೆಗಳ ಬದಲಾವಣೆ ಮತ್ತು ಭಯೋತ್ಪಾದಕ ಕೃತ್ಯಗಳು ಬೀರಿದ ಪರಿಣಾಮಗಳನ್ನು ಉಲ್ಲೇಖಿಸದ ಹೊರತಾಗಿಯೂ, ಪ್ರಸ್ತುತವಲ್ಲ ಎಂದು ಬಿಂಬಿಸಲಾಯಿತು.

ಬರ್ಬರತೆಯ ಪ್ರಪಾತಕ್ಕೆ ಬಂಡವಾಳಶಾಹಿ

ಇಸ್ರೇಲಿ ಬರ್ಬರತೆ-ಕ್ರೂರ ಉದಾಹರಣೆ

ಬಂಡವಾಳಶಾಹಿಯು ಮಾನವೀಯ ಮೌಲ್ಯಗಳ ಒಂದು ಶಕ್ತಿ ಎಂಬ ಭ್ರಮೆ ಈಗ ನಿರಸನವಾಗಿದೆ. ಬಂಡವಾಳಶಾಹಿಯು ಅನಾಗರಿಕ ಸ್ಥಿತಿಗೆ ಇಳಿದಿರುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅತ್ಯಂತ ಹೃದಯ ವಿದ್ರಾವಕವೂ ಮತ್ತು ಅತ್ಯಂತ ಕ್ರೂರವೂ ಆಗಿರುವ ಒಂದು ಪ್ರಸ್ತುತ ಉದಾಹರಣೆಯೆಂದರೆ, ಮುಂದುವರಿದ ಎಲ್ಲ ಬಂಡವಾಳಶಾಹಿ ದೇಶಗಳ ಕೃಪೆ ಮತ್ತು ಆಶೀರ್ವಾದದೊಂದಿಗೆ ನಡೆಯುತ್ತಿರುವ ಪ್ಯಾಲೆಸ್ಟೀನಿಯನ್ನರ ನರಮೇಧವೇ. ಕನಿಷ್ಠ 28,000 ಪ್ಯಾಲಸ್ತೀನಿ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ ಸುಮಾರು ಶೇ. 70ರಷ್ಟು ಮಹಿಳೆಯರೇ ಮತ್ತು ಮಕ್ಕಳೇ. ವಾಸ್ತವವಾಗಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಕೊಲ್ಲಲ್ಪಟ್ಟಿದ್ದಾರೆ ಎಂದು ನಂಬಲಾಗಿದೆ. ಹಾಗಾಗಿ, ಸತ್ತವರ ಸಂಖ್ಯೆಯು 28,000ಕ್ಕಿಂತಲೂ ಹೆಚ್ಚು. ಒಂದು ಬಹು ದೊಡ್ಡ ಸಂಖ್ಯೆಯ ಜನರ ಮನೆಗಳ ಮೇಲೆ ಬಾಂಬ್ ಸ್ಫೋಟಿಸಲಾಗಿದೆ. ಬಂಡವಾಳಶಾಹಿ ದೇಶಗಳು  ನಿಧಿಯನ್ನು ಸ್ಥಗಿತಗೊಳಿಸುವುದರಿಂದಾಗಿ ಪರಿಹಾರ ಕಾರ್ಯಾಚರಣೆಗಳು ನಿಂತು ಹೋಗಿವೆ. ವಿಶ್ವ ಸಂಸ್ಥೆಯ ಪಶ್ಚಿಮ ಏಷ್ಯಾ ವಿಭಾಗದ ಆರ್ಥಿಕ ಮತ್ತು ಸಾಮಾಜಿಕ ಆಯೋಗವು ಗಾಜಾದಲ್ಲಿ ಏನಾಗುತ್ತಿದೆ ಎಂಬುದನ್ನು “21ನೇ ಶತಮಾನದ ಅತ್ಯಂತ ಮಾರಣಾಂತಿಕ 100 ದಿನಗಳು” ಎಂದು ಕರೆದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಶಕ್ತಿಶಾಲಿ ಬಂಡವಾಳಶಾಹಿ ದೇಶಗಳ ಸಕ್ರಿಯ ಬೆಂಬಲದೊಂದಿಗೆ ಒಂದು ಸಂಪೂರ್ಣ ಅಮಾನವೀಯ ಮತ್ತು ಆಕ್ರಮಣಕಾರಿ ಯಹೂದಿ ರಾಷ್ಟ್ರವಾದಿ (ಝಿಯೋನಿಸ್ಟ್) ಆಳ್ವಿಕೆಯು ಸ್ವೇಚ್ಛೆಯಾಗಿ ಹರಿಯಬಿಟ್ಟ ಮಾನವ ದುರಂತಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಬರ್ಬರತೆ

ಝಿಯೋನಿಸ್ಟ್ ಪ್ರಭುತ್ವದ ಆಕ್ರಮಣಶೀಲತೆಯು ಅದೆಷ್ಟು ಲಜ್ಜಾಹೀನವಾಗಿದೆ ಎಂದರೆ, ಇಸ್ರೇಲ್ ಜನಾಂಗೀಯ ಹತ್ಯೆಯಲ್ಲಿ ತೊಡಗಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾವು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದಾಗ, ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವೆಗೆ ಮತ್ತು ಅವಳ ಕುಟುಂಬದ ಮೇಲೆ ಇಸ್ರೇಲ್ ಘೋರ ಪರಿಣಾಮಗಳ ಬೆದರಿಕೆಯನ್ನು ಹಾಕಿತು. ನ್ಯಾಯಾಲಯವು ದಕ್ಷಿಣ ಆಫ್ರಿಕಾದ ಆರೋಪದ ಸಾರಾಂಶವನ್ನು ಎತ್ತಿಹಿಡಿಯಿತು ಮತ್ತು ಗಾಜಾದಲ್ಲಿ ಯುದ್ಧವನ್ನು ತಕ್ಷಣವೇ ಅಂತ್ಯಗೊಳಿಸಲು ಆದೇಶ ನೀಡುವ ವರೆಗೂ ಹೋಗದಿದ್ದರೂ ನರಮೇಧದ ಕ್ರಮಗಳಿಂದ ದೂರವಿರುವಂತೆ ಇಸ್ರೇಲನ್ನು ಕೇಳಿಕೊಂಡಿತು. ಗಮನಾರ್ಹ ಸಂಗತಿಯೆಂದರೆ, ಮುಂದುವರಿದ ಎಲ್ಲ ಬಂಡವಾಳಶಾಹಿ ದೇಶಗಳೂ ಇಸ್ರೇಲನ್ನು ಬೆಂಬಲಿಸಿದವು. ಇಸ್ರೇಲ್ ವಿರುದ್ಧವಾಗಿ ಜರುಗಿಸಬಹುದಾದ ಕಾನೂನು ಕ್ರಮಗಳನ್ನು “ಅಕಾರಣವಾದವುಗಳು” ಎಂದು ಅಮೆರಿಕಾ ವಾದಿಸಿತು. ಇಸ್ರೇಲ್‌ನಲ್ಲಿ ನರಮೇಧ ನಡೆಯುತ್ತಿದೆ ಎಂದು ಆರೋಪಿಸುವುದು “ನೈತಿಕ ಮಿತಿ”ಯನ್ನು ದಾಟುವ ಕ್ರಮವಾಗುತ್ತದೆ ಎಂಬ ವಾದವನ್ನು ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಮಂಡಿಸಿದವು. ಬರ್ಬರತೆ

ಗಮನಿಸಬೇಕಿರುವುದು ಏನೆಂದರೆ, ರೋಸಾ ಲಕ್ಸೆಂಬರ್ಗ್ ಬರೆಯುತ್ತಿದ್ದ 1915ರಲ್ಲಿ ಇದ್ದಂತೆಯೇ, ಇಂದೂ ಸಹ ಮುಂದುವರಿದ ಬಂಡವಾಳಶಾಹಿ ದೇಶಗಳ ದುಷ್ಕಾರ್ಯದಲ್ಲಿ ಸೋಷಿಯಲ್ ಡೆಮಾಕ್ರಸಿಯು ಸಂಪೂರ್ಣವಾಗಿ ಭಾಗಿಯಾಗಿದೆ ಎಂಬುದು. ವಿಶ್ವದ ಎಲ್ಲೆಡೆಯೂ ಬೀದಿ ಬೀದಿಗಳಲ್ಲಿ ಜನ ಸಾಮಾನ್ಯರು ಇಸ್ರೇಲಿ ಆಕ್ರಮಣದ ವಿರುದ್ಧ ಒಂದು ಬಹು ದೊಡ್ಡ ಮತ್ತು ಮನ ತಟ್ಟುವ ಸಂಖ್ಯೆಯಲ್ಲಿ ಪ್ರದರ್ಶನಗಳನ್ನು ನೆಡೆಸಿದ್ದಾರೆ. ಆದರೆ, ಉಗ್ರ ಬಲಪಂಥದಿಂದ ಹಿಡಿದು ಸೋಷಿಯಲ್ ಡೆಮಾಕ್ರಸಿ, ಸೋಷಿಯಲ್ ಡೆಮಾಕ್ರಸಿಯ ಎಡಕ್ಕಿರುವ ಒಂದು ಭಾಗ (ಉದಾಹರಣೆಗೆ ಜರ್ಮನಿಯಲ್ಲಿ ಡಿ ಲಿಂಕ್) ಮತ್ತು ಗ್ರೀನ್ಸ್ ವರೆಗೆ, ಪಶ್ಚಿಮದ ದೇಶಗಳ ಇಡೀ ರಾಜಕೀಯ ವ್ಯವಸ್ಥೆಯು ಸಾಮ್ರಾಜ್ಯಶಾಹಿಯ ಹಿಂದೆ ಮತ್ತು ಅದರ ಕೃಪಾಪೋಷಿತ ಇಸ್ರೇಲಿ ವಲಸಿಗ ವಸಾಹತುಶಾಹಿಯ ಹಿಂದೆ ಸಾಲುಗಟ್ಟಿ ನಿಂತಿದೆ.

ಭಂಡತನ ಹೇಗೆ? ಏಕೆ?

ತಕ್ಷಣವೇ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ: ಈ ಬರ್ಬರತೆಯ ಬಗ್ಗೆ ವಿಶ್ವದಲ್ಲಿ, ಅದರಲ್ಲೂ ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿ, ಸಾರ್ವಜನಿಕ ಅಭಿಪ್ರಾಯವು ತನ್ನ ಜುಗುಪ್ಸೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೂ ಸಹ, ಅದರ ಅನಾಗರಿಕ ಸ್ವಭಾವವನ್ನು ತೆರೆದು ತೋರಿಸುವಷ್ಟು ಧೈರ್ಯ ಸಾಮ್ರಾಜ್ಯಶಾಹಿಗೆ ಬಂದದ್ದಾದರೂ ಹೇಗೆ? ಮತ್ತು, ತನ್ನ ಅನಾಗರಿಕ ಸ್ವಭಾವವನ್ನು ತೋರಿಸಲೇಬೇಕು ಎನ್ನುವಷ್ಟು ಹತಾಶೆ ಸಾಮ್ರಾಜ್ಯಶಾಹಿಗೆ ಇದ್ದಕ್ಕಿದ್ದಂತೆ ಉಂಟಾದದ್ದಾದರೂ ಏಕೆ? ಮೊದಲ ಪ್ರಶ್ನೆಗೆ ಉತ್ತರವು, ಇತರ ವಿಷಯಗಳ ನಡುವೆ, ಸೋವಿಯತ್ ಒಕ್ಕೂಟದ ಪತನದಲ್ಲಿದೆ ಮತ್ತು ಸಾಮಾನ್ಯವಾಗಿ ಸಮಾಜವಾದವು ಒಡ್ಡುತ್ತಿದ್ದ ಸವಾಲಿನಲ್ಲಿದೆ. ಸೋವಿಯತ್ ಯೂನಿಯನ್ ಅಸ್ತಿತ್ವದಲ್ಲಿದ್ದಷ್ಟು ಸಮಯದ ವರೆಗೂ, ಜಾಗತಿಕ ದಕ್ಷಿಣಕ್ಕೆ ಸಂಬಂಧಿಸಿದಂತೆ ಸಾಮ್ರಾಜ್ಯಶಾಹಿಯ ಅನಾಗರಿಕ ನಡತೆ ಮಿತಿಮೀರದಂತೆ ನೋಡಿಕೊಳ್ಳುವಲ್ಲಿ ಸಮಾಜವಾದಿ ರಷ್ಯಾದ ಪ್ರಭಾವವಿತ್ತು. ವಿಷಯವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸಮಾಜವಾದದ ಬಗ್ಗೆ ಇದ್ದ ಹೆದರಿಕೆಯು ಸಾಮ್ರಾಜ್ಯಶಾಹಿಯನ್ನು ಸಂಯಮಿಯಾಗಿರುವಂತೆ ಮಾಡಿತ್ತು. ಇದು ರೋಸಾ ಲಕ್ಸೆಂಬರ್ಗ್ ಅವರ ಹೇಳಿಕೆಯನ್ನು ಒಂದು ಹಿಂದಿನ ಅನಿಸಿಕೆಯ  ಅರ್ಥದಲ್ಲಿ ಸಮರ್ಥಿಸುತ್ತದೆ. ಆದರೆ, ಸಾಮ್ರಾಜ್ಯಶಾಹಿಯು ತೋರಿಸುತ್ತಿದ್ದ ಆ ಸಂಯಮ ಈಗ ಇಲ್ಲವಾಗಿದೆ.

ಎರಡನೆಯ ಪ್ರಶ್ನೆಗೆ ಉತ್ತರವನ್ನು ಸಾಮ್ರಾಜ್ಯಶಾಹಿ ವ್ಯವಸ್ಥೆಯು ಹಿಂದೆ ಅಸ್ಥಿರಗೊಂಡ ಅಂಶದಲ್ಲಿ ಕಾಣಬಹುದು. ಬದಲಾದ ಸನ್ನಿವೇಶದಲ್ಲಿ, ನಿರ್ವಸಾಹತೀಕರಣದ ಚಾಲನೆಗೆ ಮತ್ತು ಮೂರನೆಯ ಜಗತ್ತಿನ ನಿಯಂತ್ರಣ ನೀತಿಗಳ ಆಳ್ವಿಕೆಗೆ  ಸಾಮ್ರಾಜ್ಯಶಾಹಿಯು ಸಮ್ಮತಿಸಬೇಕಾಗಿ ಬಂತು. ಆದರೆ, ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎನ್ನುವ ಹಾಗೆ ನವ ಉದಾರವಾದಿ ಆಳ್ವಿಕೆಯನ್ನು ಹೇರುವ ಮೂಲಕ ಮರು ಹುಟ್ಟು ಪಡೆದ ಸಾಮ್ರಾಜ್ಯಶಾಹಿಯು ಈಗ ಮತ್ತೊಮ್ಮೆ ಒಂದು ಮಾರಣಾಂತಿಕ ಬೆದರಿಕೆಯನ್ನು ಎದುರಿಸುತ್ತಿದೆ. ಹಿಂದಿನ ಸಾಮ್ರಾಜ್ಯಶಾಹಿ ವ್ಯವಸ್ಥೆ ಮತ್ತು ಇಂದಿನ ವ್ಯವಸ್ಥೆಯ ನಡುವೆ ಒಂದು ಅತಿ ಮುಖ್ಯವಾದ ವ್ಯತ್ಯಾಸವಿದೆ. ಹಿಂದಿನ ಮಹಾ ಯುದ್ಧ-ಪೂರ್ವ ವ್ಯವಸ್ಥೆಯು ಅಂತರ್-ಸಾಮ್ರಾಜ್ಯಶಾಹಿ ಪೈಪೋಟಿಯಿಂದ ನಿರೂಪಿಸಲ್ಪಟ್ಟಿತ್ತು. ಇಂದಿನ ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ಪೈಪೋಟಿಯು ಮಸುಕಾಗಿದೆ ಮತ್ತು ಸಾಮ್ರಾಜ್ಯಶಾಹಿಗಳ ನಡುವೆ ಒಂದು ಅಭೂತಪೂರ್ವ ಮಟ್ಟದ ಐಕ್ಯತೆ ಏರ್ಪಟ್ಟಿದೆ. ಏಕೆಂದರೆ, ಇಂದಿನ ವ್ಯವಸ್ಥೆಯ ಅಧ್ಯಕ್ಷತೆ ವಹಿಸಿರುವ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಜಗತ್ತನ್ನು ವಿಭಜಿಸಲು ಬಯಸುವುದಿಲ್ಲ. ಹಾಗಾಗಿ, ಇಂದಿನ ವ್ಯವಸ್ಥೆಯು ವಿಶ್ವದ ದುಡಿಯುವ ಜನರಿಗೆ ಎದುರಾಗಿ ಜಾಗತಿಕ ಬಂಡವಾಳವನ್ನು ಒಗ್ಗೂಡಿಸಿದೆ. ಮತ್ತು, ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳ ಕಾರ್ಮಿಕರು ಮಾತ್ರವಲ್ಲ, ಜಾಗತಿಕ ದಕ್ಷಿಣದ ಎಲ್ಲ ಕಾರ್ಮಿಕರು ಮತ್ತು ರೈತರೂ ಈ ಹೊಸ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಬಲಿಪಶುಗಳಾಗಿದ್ದಾರೆ.

ವಿಶ್ವದ ದುಡಿಯುವ ಜನರ ಆರ್ಥಿಕ ಹಿತಾಸಕ್ತಿಗಳನ್ನು ಬಲಿಕೊಡುವ ಅಂಶವೇ ಈ ವ್ಯವಸ್ಥೆಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಏಕೆಂದರೆ, ಈ ಅಂಶವು (ಅಂದರೆ, ದುಡಿಯುವ ಜನರ ಹಿಂಡುವಿಕೆಯು) ವಿಶ್ವದ ಅರ್ಥವ್ಯವಸ್ಥೆಯಲ್ಲಿ ಬಳಕೆಯನ್ನು ಇಳಿಕೆ ಮಾಡಿದೆ ಮತ್ತು ಆ ಮೂಲಕ ಮಾರುಕಟ್ಟೆಗಳ ಬೆಳವಣಿಗೆಯನ್ನು ಅಡಗಿಸಿಬಿಟ್ಟಿದೆ ಮತ್ತು ಒಂದು ಅತಿ-ಉತ್ಪಾದನೆಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈ ಬಿಕ್ಕಟ್ಟಿಗೆ ನವ ಉದಾರವಾದಿ ಆಳ್ವಿಕೆಯ ವ್ಯವಸ್ಥೆಯಲ್ಲಿ ಯಾವ ಪರಿಹಾರವೂ ಇಲ್ಲ. ಏಕೆಂದರೆ, ಪ್ರಭುತ್ವವು ಕ್ರಿಯಾಶೀಲವಾಗಿ ಮಧ್ಯಪ್ರವೇಶ ಮಾಡುವುದನ್ನು (ಅಂದರೆ, ಸರ್ಕಾರವು ತನ್ನ ವೆಚ್ಚಗಳಿಗಾಗಿ ಬಜೆಟ್‌ನಲ್ಲಿ ಕೊರತೆಯನ್ನು ಹೆಚ್ಚಿಸಿಕೊಳ್ಳುವುದನ್ನು) ನವ ಉದಾರವಾದವು ಸಹಿಸುವುದಿಲ್ಲ. ಪರಿಣಾಮವಾಗಿ, ಜಾಗತಿಕವಾಗಿ ಒಗ್ಗಟ್ಟಾಗಿರುವ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ನೀತಿಗಳಿಗೆ ಈಗಾಗಲೇ ಬಲಿಯಾಗಿರುವ ವಿಶ್ವದ ದುಡಿಯುವ ಜನರು ಈಗ ನಿರುದ್ಯೋಗದ ಮೂಲಕ ಇನ್ನೂ ಹೆಚ್ಚು ಬಲಿಯಾಗುತ್ತಾರೆ. ಹಾಗಾಗಿ, ಹೊಸ ವ್ಯವಸ್ಥೆಗೆ ಎದುರಾಗುವ ಬೆದರಿಕೆ ಹೆಚ್ಚುತ್ತದೆ.

ಈ ಬಿಕ್ಕಟ್ಟು ಅನೇಕ ದೇಶಗಳಲ್ಲಿ ಫ್ಯಾಸಿಸ್ಟ್ ಆಳ್ವಿಕೆಯನ್ನು ತಂದಿದೆ. ದುಡಿಯುವ ಜನರನ್ನು ದಮನ ಮಾಡಲು ಫ್ಯಾಸಿಸ್ಟ್ ಮತ್ತು ಫ್ಯಾಸಿಸ್ಟೇತರ ಬಂಡವಾಳಶಾಹಿ ಶಕ್ತಿಗಳೆರಡೂ ಸೇರಿಕೊಂಡು ದೇಶದಲ್ಲಿ ಮತ್ತು ವಿದೇಶಗಳಲ್ಲಿ ಒಂದು ತೀವ್ರ ಸ್ವರೂಪದ ದಮನಕಾರಿ ಆಳ್ವಿಕೆಯನ್ನು ಜಾಗತಿಕವಾಗಿಯೂ ಸಹ ತಂದಿವೆ. ಈ ದಮನದಲ್ಲಿ ನೈತಿಕತೆಗೆ ಅವಕಾಶವಿಲ್ಲ. ಅನಾಗರಿಕತೆ, ಬರ್ಬರತೆ ತಾಂಡವವಾಡುತ್ತಿದೆ. ಅನಾಗರಿಕ ಕೃತ್ಯಗಳನ್ನು ಯಾವುದೇ ನಿರ್ದಿಷ್ಟ ದೇಶ/ಸರ್ಕಾರ ಎಸಗಲಿ, ಈ ಅನಾಗರಿಕತೆಯನ್ನು ರಕ್ಷಿಸಲು ಬಂಡವಾಳಶಾಹಿ ದೇಶಗಳು ಒಟ್ಟಾಗಿ ನಿಲ್ಲುತ್ತವೆ.

ಇದನ್ನು ನೋಡಿ : ನಿರುದ್ಯೋಗ ಸಮಸ್ಯೆಗೂ ಕೋಮುವಾದಕ್ಕೂ ಲಿಂಕ್ ಇದೆ: ಜಸ್ಟೀಸ್ ಎಚ್.ಎನ್ ನಾಗಮೋಹನದಾಸ್ Janashakthi Media

Donate Janashakthi Media

Leave a Reply

Your email address will not be published. Required fields are marked *