ರಾಜಕೀಯ ಭಾಷಣಗಳಿಂದ ಹೊಟ್ಟೆ ತುಂಬುವುದಿಲ್ಲ : ವಿರೋಧ ಪಕ್ಷಗಳಿಗೆ ಸಿಎಂ ಬೊಮ್ಮಾಯಿ ಟಾಂಗ್‌

ಬೆಂಗಳೂರು : ಸಮಯ ಬಂದಾಗ ನಿಮ್ಮ ಪರವಾದ ನಿಲುವು ತೆಗೆದುಕೊಳ್ಳುವವರೇ ನಿಜವಾದ ಹಿಂದುಳಿದ ನಾಯಕರು. ರಾಜಕೀಯ ಭಾಷಣಗಳಿಂದ ಹೊಟ್ಟೆ ತುಂಬುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.


ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.


ನಿಮ್ಮನ್ನು ಎಲ್ಲಿಟ್ಟಿದ್ದಾರೋ ಅಲ್ಲೇ ಇಟ್ಟರು: 
ಕಾಂಗ್ರೆಸ್‍ನಲ್ಲಿ 75 ವರ್ಷಗಳಿಂದ ಬರೀ ಭಾಷಣಗಳನ್ನೇ ಕೇಳಿದ್ದೇವೆ.ಸಂವಿಧಾನ ರಕ್ಷಣೆ ಎಂದು ಅದೇ ಸಂವಿಧಾನವನ್ನು ಉಲ್ಲಂಘಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿರುವುದನ್ನೇ ನೋಡಿದ್ದೇವೆ. ನಾವೂ ಇಂದು ಫಲಾನುಭವಿಗಳಿಗೆ ವಿತರಣೆ ಮಾಡುತ್ತಿದ್ದೇವೆ. ಇದನ್ನು 75 ವರ್ಷಗಳಿಂದ ಮಾಡಿದ್ದರೆ ಇಂದು ಈ ಅವಶ್ಯಕತೆ ಬರುತ್ತಿರಲಿಲ್ಲ ಎಂದರು.ಸೂರು ಸಿಕ್ಕಿದರೆ, ಸ್ವಯಂ ಉದ್ಯೋಗ ಸಿಕ್ಕಿದರೆ ಇತರಿಗೆ ಸಹಾಯ ಮಾಡಬಹುದಿತ್ತು. ಇದ್ಯಾವುದು ಅವರು ಮಾಡಲಿಲ್ಲ. ಹಿಂದುಳಿದ ಹೆಸರಲ್ಲಿ ಅವರು ಮುಂದೆ ಬಂದರು. ನಿಮ್ಮನ್ನು ಎಲ್ಲಿಟ್ಟಿದ್ದಾರೋ ಅಲ್ಲೇ ಇಟ್ಟರು ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.


ಭರವಸೆಯಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ :
ಜನರಿಂದ ಮಾಡಿರುವ ಸರ್ಕಾರ. ಬಹಳ ಉದ್ದುದ್ದ ಭಾಷಣಗಳನ್ನು ಮಾಡಿ ನಾವು ನಿಮಗೆ ಭರವಸೆಯನ್ನು ಕೊಡುವುದರಿಂದ ನ್ಯಾಯವನ್ನು ಒದಗಿಸಲು ಸಾಧ್ಯವಿಲ್ಲ. ಸ್ವಾಭಿಮಾನದಿಂದ ಬದಕುಲು ಸರ್ಕಾರ ಕಾರ್ಯಕ್ರಮ ಮೂಡಿಸಿದಾಗ ಮಾತ್ರ ಸಾಧ್ಯ. ನಿಮ್ಮ ಬದುಕು ಹಸನಾದಾಗ ಪ್ರಜಾಪ್ರಭುತ್ವದ ಗೆಲುವು ಆಗುತ್ತದೆ ಎಂದು ಹೇಳಿದರು. ಬಡಜನ ಹಳ್ಳಿಯಲ್ಲಿ ಸಮಸ್ಯೆಗಳ ಮಧ್ಯೆಯೇ ಜೀವನ ನಡೆಸುತ್ತಿದ್ದಾರೆ 1.16 ಲಕ್ಷ ಫಲಾನುಭವಿಗಳಿಗೆ ಸುಮಾರು 900 ಕೋಟಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ಗಂಗಕಲ್ಯಾಣ, 50 ಕನಕದಾಸ ಹಾಸ್ಟೆಲ್, ಸ್ವಯಂ ಉದ್ಯೋಗದ ಟೈಲರಿಂಗ್ ಮಿಷನ್ ಸೇರಿದಂತೆ ಹಲವು ವಿತರಣೆ, ವಿದ್ಯಾಸಿರಿ ಯೋಜನೆ ಹಾಗೂ ಹಾಸ್ಟೆಲ್ ಮೂಲಕ ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

10 ದಿನದೊಳಗೆ 1 ಲಕ್ಷ ಹಕ್ಕುಪತ್ರ ನೀಡುವ ಗುರಿ : 
ದೇವರಾಜ ಅರಸು ಹಿಂದುಳಿದ ಆಯೋಗ ಮಾಡಿ ಅವರಿಗೆ ಮೀಸಲಾತಿ ಮಾಡಿದ ನಾಯಕ ಅವರು. ಅವರ ಹೆಸರಲ್ಲಿ ಬಹಳ ಜನ ನಾಯಕರಾಗಿದ್ದಾರೆ. ನಾನು ಅವರ ಶಿಷ್ಯ ಹಂಗೇ ಹಿಂಗೇ ಎಂದು ಹೇಳಿಕೊಳ್ಳುತ್ತಾರೆ. ಅವರಲ್ಲಿ ಒಂದೇ ಒಂದು ಪರ್ಸೆಂಟ್ ಇದ್ದಿದ್ದರೆ ನಿಮ್ಮನ್ನ ಒಪ್ಪಿಕೊಳ್ಳುತ್ತಿದ್ದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಬೊಮ್ಮಾಯಿ ಟಾಂಗ್ ನೀಡಿದರು. ಪೌರಕಾರ್ಮಿಕರಿಗೆ ಖಾಯಂ ಮಾಡಿದ್ದೇವೆ. ಕುರಿಗಾಹಿಗಳಿಗೆ 350 ಕೋಟಿ ರೂ. ವೆಚ್ಚದಲ್ಲಿ ಸಹಾಯ ಮಾಡಿದ್ದೇವೆ. ಲಮಾಣಿ ಜನಾಂಗಕ್ಕೆ ಹಕ್ಕು ಪತ್ರ ನೀಡಿದ್ದೇವೆ. ಕುರುಬರಹಟ್ಟಿ ಗೊಲ್ಲರ ಹಟ್ಟಿ ಲಮಾಣಿ ಸಮುದಾಯಕ್ಕೆ ಇನ್ನು ಹತ್ತು ದಿನದೊಳಗೆ ಒಂದು ಲಕ್ಷ ಹಕ್ಕುಪತ್ರ ನೀಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ : ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ: ಭಿನ್ನ ತೀರ್ಪು ನೀಡಿದ ಸಂವಿಧಾನ ಪೀಠ

ಚುನಾವಣಾ ಪ್ರಚಾರದ ರೀತಿಯ ಭಾಷಣ : 
ನಮ್ಮ ಸರ್ಕಾರ ಸಾಕಷ್ಟು ನಿಗಮಗಳನ್ನು ಮಾಡಿದೆ. ಅವುಗಳಿಗೆ 850 ಕೋಟಿ ರೂ. ಕೊಟ್ಟಿದ್ದೇವೆ. ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡುತ್ತೇವೆ. ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 1 ಸಾವಿರ ರೂ. ಕೊಡುತ್ತೇವೆ. ವಿದ್ಯಾರ್ಥಿನಿಯರಿಗೆ ಉಚಿತ ಪಾಸ್ ವಿತರಣೆ, ಹೀಗೆ ತಮ್ಮ ಬಜೆಟ್ ಘೋಷಣೆಗಳ ಬಗ್ಗೆ ಹೇಳಿಕೊಳ್ಳುತ್ತ ಈ ಸಂದರ್ಭದಲ್ಲಿ ಸಿಎಂ ಚುನಾವಣಾ ಪ್ರಚಾರದ ರೀತಿ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯಕ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *