ಬೆಂಗಳೂರು: ಅವಧಿ ಮೀರಿದ್ದರಿಂದ 1000 ರೂ. ದಂಡ ಶುಲ್ಕ ಕಟ್ಟಿ ಆಧಾರ್ ಕಾರ್ಡ್ಗೆ ಪಾನ್ ಕಾರ್ಡ್ ಜೋಡಣೆ ಮಾಡಿದ ಕುಟುಂಬಗಳನ್ನು ಆದಾಯತೆರಿಗೆ ಪಾವತಿದಾರರು ಎಂದು ಪರಿಗಣಿಸಿ ಬಿಪಿಎಲ್ ಕಾರ್ಡ್ ರದ್ದು ಮಾಡಿದ ಘಟನೆಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಆಹಾರ ಇಲಾಖೆಯು ವಾರ್ಷಿಕ 1.2 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು, ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂಬ ಕಾರಣದಿಂದ ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿದೆ.
ಆದರೆ ಇದರ ಹಿಂದಿರುವ ಅಸಲಿ ಸತ್ಯವೇ ಬೇರೆ. ಸರ್ಕಾರಿ ಸೌಲಭ್ಯ ಬೇಕೆಂದರೆ ಆಧಾ ಕಾರ್ಡ್ಗೆ ಪಾನ್ ನಂಬರ್ ಜೋಡಣೆ ಮಾಡಿರಬೇಕು. ಇಲ್ಲದಿದ್ದರೆ ಬ್ಯಾಂಕ್ ಖಾತೆಗಳು ರದ್ದಾಗುತ್ತವೆ ಎಂದು ಹೇಳಿದ್ದ ಸರ್ಕಾರ, ಪಾನ್ ಜೋಡಣೆಗೆ ವಿಳಂಬ ಮಾಡಿದವರಿಂದ ದಂಡದ ರೂಪದಲ್ಲಿ 1 ಸಾವಿರ ರೂ. ವಸೂಲಿ ಮಾಡಿತ್ತು. ಈ ದಂಡದ ಹಣ ಆದಾಯ ತೆರಿಗೆ ಇಲಾಖೆಗೆ ಜಮೆ ಆಗಿರುವುದೇ ಬಿಪಿಎಲ್ ಕಾರ್ಡ್ ರದ್ದಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ: ಉಡುಪಿ| ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಪೇಸ್ಬುಕ್ ಖಾತೆ ತರೆದ ಕಿಡಿಗೇಡಿಗಳು
ಇದೇ ಕಾರಣಕ್ಕೆ ಕಾರ್ಡ್ ರದ್ದುಪಡಿಸಿರುವುದನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಸರ್ಕಾರ, ಇದು ನಿಯಮಾನುಸಾರ ನಡೆದಿದೆ. ಯಾವುದೇ ಅರ್ಹರಿಗೆ ಅನ್ಯಾಯವಾಗಿಲ್ಲ ಎಂದು ಹೇಳುತ್ತಿದೆ. ಆದರೆ, ಆದಾಯ ತೆರಿಗೆ ಇಲಾಖೆ ಮತ್ತು ಆದಾಯ ಪ್ರಮಾಣ ಪತ್ರ ನೀಡುವ ಇ- ಗವರ್ನೆನ್ಸ್ ಇಲಾಖೆಯ ತಪ್ಪಿನಿಂದ ಸಾವಿರಾರು ಮಂದಿಯ ಬಿಪಿಎಲ್ ಕಾರ್ಡ್ ರದ್ದಾಗಿವೆ.
ಆಧಾರ್ಗೆ ಪಾನ್ ನಂಬರ್ ಜೋಡಣೆ ಮಾಡಲು ಸರ್ಕಾರ 2020ರವರೆಗೂ ಕಾಲಾವಕಾಶ ನೀಡಿತ್ತು. ಆ ನಂತರ ಪಾನ್ ಜೋಡಣೆಗೆ 1 ಸಾವಿರ ರೂ. ದಂಡ ವಿಧಿಸಲಾಗಿತ್ತು. ಈ ಸಂದರ್ಭ ನೀಡಲಾದ ರಶೀದಿಗಳಲ್ಲಿ ಆದಾಯ ತೆರಿಗೆ ಕೋಟಾ ಎಂದು ನಮೂದಾಗಿದ್ದರೆ, ಇನ್ನೂ ಕೆಲವೆಡೆ ಪಾನ್ ನಂಬರ್ ಜೋಡಣೆ ವಿಳಂಬದ ಶುಲ್ಕ ಎಂದಿದೆ. ಈ ಎರಡೂ ರೂಪದಲ್ಲಿ ಪಾವತಿಸಲಾದ ಹಣ ಆದಾಯ ತೆರಿಗೆ ಇಲಾಖೆಗೆ ಜಮೆ ಆಗಿದೆ. ಈ ಸಂದರ್ಭ ಇ-ಗವರ್ನೆನ್ಸ್ ಕುಟುಂಬ ತಂತ್ರಾಂಶದಲ್ಲಿ ಸರಿಯಾಗಿ ಗುರುತಿಸಿ ಜೋಡಣೆ ಮಾಡದ ಪರಿಣಾಮ ದಂಡ ಕಟ್ಟಿದವರನ್ನು ಆದಾಯ ತೆರಿಗೆ ಪಾವತಿದಾರರ ಪಟ್ಟಿಗೆ ಸೇರಿಸಲಾಗಿದೆ. ಇಲಾಖೆಗಳ ಈ ತಪ್ಪಿನಿಂದ ದಂಡ ಕಟ್ಟಿದವರು ಆದಾಯ ತೆರಿಗೆ ಪಾವತಿದಾರರಾಗಿ ಮಾರ್ಪಟ್ಟಿದ್ದಾರೆ.
ಕಂದಾಯ ಇಲಾಖೆಯ ಇಗವರ್ನೆನ್ಸ್ನ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ನೀಡಿರುವ ಆದಾಯ ಪ್ರಮಾಣ ಪತ್ರದಲ್ಲೂ ವ್ಯಾಪಕ ಲೋಪದೋಷಗಳಿವೆ ಎನ್ನಲಾಗಿದೆ. ಮೇಲ್ನೋಟಕ್ಕೆ ಈತ ಕಡುಬಡವ ಎಂದು ಗುರುತಿಸಬಹುದಾದರೂ ಆತನ ಪೂರ್ವಾಪರ ವಿಚಾರಿಸದೆ, ಕೆಲ ಸಂದರ್ಭಗಳಲ್ಲಿ ಕಪ್ಪಿನಿಂದ 12,000 ರೂ. ಎಂದು ನಮೂದಿಸುವ ಕಡೆ 1,20,000 ರೂ., 36,000 ರೂ. ಎಂದು ನಮೂದಿಸುವ ಕಡೆ 3,60,000 ರೂ. ಎಂದು ಆದಾಯ ಪ್ರಮಾಣ ಪತ್ರ ನೀಡಿರುವುದು ಕಂಡು ಬಂದಿದೆ.
ಅಧಿಕಾರಿಗಳ ಇಂತಹ ಎಡವಟ್ಟಿನಿಂದ ಎಷ್ಟೋ ಮಂದಿಗೆ ಕಳೆದ 3 ತಿಂಗಳಿಂದ ಪಡಿತರ ವಿತರಿಸಿಲ್ಲ. ಕೇಳಿದರೆ ನಿಮ್ಮ ಆದಾಯ ಹೆಚ್ಚಾಗಿದೆ. ನೀವು ಆದಾಯ ತೆರಿಗೆ ಪಾವತಿಸಿದ್ದೀರಿ ಎಂಬ ಕಾರಣದಿಂದ ಕಾರ್ಡ್ ರದ್ದುಪಡಿಸಲಾಗಿದೆ. ಇದು ಸರ್ಕಾರದ ಆದೇಶ ನಾವೇನೂ ಮಾಡುವಂತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಾಕಷ್ಟು ಬವಡರು ಅಲವತ್ತುಕೊಂಡಿದ್ದಾರೆ.
ಇದನ್ನೂ ನೋಡಿ: ವಿಕ್ರಂಗೌಡ ಶೂಟೌಟ್ ಪ್ರಕರಣ – ನ್ಯಾಯಾಂಗ ತನಿಖೆಗೆ ಒಪ್ಪಿಸಿ – ಮಾಜಿ ನಕ್ಸಲರ ಆಗ್ರಹJanashakthi Media