ಕಲಬುರಗಿ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಮೇಲೆ ದಾಳಿ ನಡೆಸುವ ರೀತಿಯಲ್ಲಿ ಜಾರಿಗೊಳಿಸಲಾಗುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು ಹಾಗೂ SIR ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮೇಲೆ ಪೊಲೀಸರು ನಡೆಸುತ್ತಿರುವ ದಮನವನ್ನು ನಿಲ್ಲಿಸಬೇಕು ಎಂದು ಕಲಬುರಗಿಯ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. SIR
ಈ ಕುರಿತು ರಾಷ್ಟ್ರಪತಿಗೆ ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ಅ.5ರಂದು ಸಲ್ಲಿಸಿರುವ ಮನವಿಯಲ್ಲಿ, SIR ಜಾರಿಯಿಂದ ಕೋಟ್ಯಂತರ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕ ಎದುರಾಗಿದೆ ಎಂದು ಸಂಘಟನೆಗಳು ತಿಳಿಸಿದ್ದಾರೆ. ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಕ್ರಮ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಇಂತಹ ಕ್ರಮಗಳ ವಿರುದ್ಧ ದೇಶದ ಯುವಜನತೆ ಮತ್ತು ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ ಎಂದು ಪ್ರತಿಭಟನೆಕಾರರು ವಿವರಿಸಿದರು.
ದೆಹಲಿಯ ಜಂತರ್ ಮಂತರ್ನಲ್ಲಿ SIR ವಿರೋಧಿಸಿ ನಡೆಯುತ್ತಿರುವ ಹೋರಾಟಗಾರರ ಮೇಲೆ ಪೊಲೀಸರು ದಮನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿರುವ ಯುವತಿಯರ ಮೇಲೆ ಪೊಲೀಸ್ ಸಿಬ್ಬಂದಿ ದೈಹಿಕ ಹಲ್ಲೆ ನಡೆಸುವುದರ ಜೊತೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಗಳೂ ಕೇಳಿಬಂದಿವೆ. ಮಹಿಳಾ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿಯೇ ಇಂತಹ ಕೃತ್ಯಗಳು ನಡೆದಿರುವುದು ಅತ್ಯಂತ ಖಂಡನೀಯ ಎಂದು ಸಂಘಟನೆಗಳ ನಾಯಕರು ತಿಳಿಸಿದ್ದಾರೆ. SIR
ಇದನ್ನೂ ಓದಿ : ಭಿಕ್ಷುಕರ ಮುಕ್ತ ಬೆಂಗಳೂರು ಯೋಜನೆಗೆ MGSP ತೀವ್ರ ವಿರೋಧ
ಮಹಿಳಾ ಪತ್ರಕರ್ತೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಕುರಿತು ದೂರು ನೀಡಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಆರೋಪಿತ ಪೊಲೀಸ್ ಅಧಿಕಾರಿ ಎಸಿಪಿ ವಿವೇಕ್ ಭಗತ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸಿ, ಅವರನ್ನು ಭಯಭೀತಗೊಳಿಸುವ ಮೂಲಕ ಜನಾಂದೋಲನವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟದ ಮೇಲಿನ ದಾಳಿಯಾಗಿದೆ ಎಂದು ಸಂಘಟನೆಗಳು ಟೀಕಿಸಿವೆ.
SIR ಪ್ರಕ್ರಿಯೆ ಕೂಡಲೇ ರದ್ದಾಗಬೇಕು, ಪ್ರತಿಭಟನಾನಿರತ ಯುವತಿಯರು ಮತ್ತು ಮಹಿಳಾ ಹೋರಾಟಗಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ನಿಲ್ಲಿಸಬೇಕು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಅಲ್ಲದೆ, SIR ಪ್ರಕ್ರಿಯೆಯ ಸಂದರ್ಭದಲ್ಲಿ ಫಾರಂ-7ರ ದುರ್ಬಳಕೆಯ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಇಂತಹ ದೂರುಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿರುವ ಕ್ರಮಗಳನ್ನೂ ಪರಿಶೀಲಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಕಾನೂನುಬದ್ಧವಾಗಿ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
SIR ರದ್ದತಿ ಹಾಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟ ಎಚ್ಚರಿಸಿದೆ.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಕೆ. ನೀಲಾ, ಮೀನಾಕ್ಷಿ ಬಾಳಿ, ಪದ್ಮಾವತಿ ಪಾಟೀಲ್, ಪದ್ಮಿನಿ ಕಿರಣಗಿ, ಚಂದಮ್ಮ ಗೋಳಾ, ಮೀನಾಕ್ಷಿ ಧನ್ನಿ, ಶೋಭಾ, ಜುಶ್ರೀ ಬೆಣ್ಣೂರ, ರೇನುಕಾ ಸರಡಗಿ, ಲವಿತ್ರ ವಸ್ತ್ರದ ಸೇರಿದಂತೆ ಅನೇಕರಿದ್ದರು. SIR
ಇದನ್ನೂ ನೋಡಿ : ಎಸ್ಐಆರ್ ಮೂಲಕ ಭಾರತವನ್ನು ಎರಡು ಭಾಗ ಮಾಡುವ ಪ್ರಯತ್ನv Janashakthi Media
