ವಸಂತರಾಜ ಎನ್.ಕೆ
ಅಲಾಸ್ಕಾ ಶೃಂಗಸಭೆ ನಡೆದ ನಂತರ “ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ”, “ಶಂಗಸಭೆ ವಿಫಲವಾಗಿದೆ”, “ಪುಟಿನ್ ಜತೆ ಯಾವುದೇ ಒಪ್ಪಂದ ಸಾಧ್ಯವಿಲ್ಲ”, “ಟ್ರಂಪ್ ಪುಟಿನ್ ಗೆ ಮಣಿದಿದ್ದಾರೆ”. – ಎಂದೆಲ್ಲಾ ಯು.ಎಸ್ ಮತ್ತು ಯುರೋಪ್ ನ ಸಾಮೂಹಿಕ ಮಾಧ್ಯಮಗಳು ಹೇಳಿದವು. ಆದರೆ ಶೃಂಗಸಭೆಯನ್ನು ಮತ್ತು ಅದು ಅತ್ಯಂತ ಸೌಹಾರ್ದ ರೀತಿಯಲ್ಲಿ ನಡೆದದ್ದನ್ನು, ಇಡೀ ಜಗತ್ತಿನ ಜನತೆ ಮತ್ತು ಜಾಗತಿಕ ದಕ್ಷಿಣದ ಸರಕಾರಗಳು ಸ್ವಾಗತಿಸಿವೆ ಮತ್ತು ಅದನ್ನು ಆಶಾಭಾವನೆಯಿಂದಲೇ ನೋಡಿವೆ. ಉಕ್ರೇನಿನಲ್ಲಿ ಶಾಂತಿ ಸ್ಥಾಪನೆಯ ಸಾಧ್ಯತೆಯನ್ನು ಇದು ತೆರೆದಿದೆ ಎಂದು ಭಾವಿಸಿವೆ. ಇದರರ್ಥ ಟ್ರಂಪ್ ಶಾಂತಿದೂತನೆಂದಲ್ಲ. ಅವರು ಬಹುಶಃ ವ್ಯೂಹಾತ್ಮಕ ಕಾರಣಗಳಿಗೆ ಉಕ್ರೇನ್ ಯುದ್ಧ ನಿಲ್ಲಿಸಲು ಹೊರಟಿದ್ದಾರೆ. ಆದರೆ ಶೃಂಗಸಭೆಯ ನಂತರದ ದಿನಗಳಲ್ಲಿ ಮಿಲಿಟರಿ-ಕೈಗಾರಿಕ ಸಂಕೀರ್ಣ ಮತ್ತು ಯುರೋ ಕೂಟದ ನಾಯಕರು ಇದಕ್ಕೆ ಅಡೆತಡೆ ಒಡ್ಡುವ ತೀವ್ರ ಪ್ರಯತ್ನದಲ್ಲಿ ತೊಡಗಿದ್ದಾರೆ. ಅಲಾಸ್ಕಾ
ಅಗಸ್ಟ್ 15ರಂದು ಅಲಾಸ್ಕಾದಲ್ಲಿ ನಡೆದ ಟ್ರಂಪ್-ಪುಟಿನ್ ಶೃಂಗಸಭೆ ಅನಿರೀಕ್ಷಿತ ಮತ್ತು ಆಶ್ಚರ್ಯಕರ ರೀತಿಯಲ್ಲಿ ಉಕ್ರೇನ್ ಯುದ್ಧ ನಿಲುಗಡೆ ಮತ್ತು ಶಾಂತಿಯತ್ತ ನಡೆ ಆರಂಭಿಸುತ್ತಿರುವ ಸೂಚನೆಗಳಿವೆ. ಜುಲೈ28ರಂದಷ್ಟೇ ಯು.ಎಸ್ ಅಧ್ಯಕ್ಷ ಟ್ರಂಪ್ ರಶ್ಯನ್ ಅಧ್ಯಕ್ಷ ಪುಟಿನ್ ಅವರಿಗೆ 50 ದಿನಗಳ ಗಡುವು ಕೊಟ್ಟು ಅಷ್ಟರೊಳಗೆ ಕದನ ವಿರಾಮ ಆಗದಿದ್ದರೆ ಇನ್ನಷ್ಟು ಆರ್ಥಿಕ ದಿಗ್ಬಂಧನವನ್ನು ಹೇರುವುದಾಗಿ ಸಾರ್ವಜನಿಕವಾಗಿ ಬೆದರಿಸಿದ್ದರು. ಅದೇ ಸಮಯದಲ್ಲಿ ರಶ್ಯದಿಂದ ತೈಲ ಖರೀದಿಸಿ ಉಕ್ರೇನ್ ಯುದ್ಧವನ್ನು ದೀರ್ಘಗೊಳಿಸುತ್ತಿರುವ ಭಾರತ, ಚೀನಾ, ಬ್ರೆಜಿಲ್ ಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಘೋಷಿಸಿದ್ದರು. ಕೆಲವೇ ದಿನಗಳಲ್ಲಿ ಅಧ್ಯಕ್ಷ ಟ್ರಂಪ್ ಅವರ ವಿಶೇಷ ರಾಯಭಾರಿ ವಿಶೇಷ ಸಂದೇಶದೊಂದಿಗೆ ಮಾಸ್ಕೊಗೆ ತೆರಳಿ ಶೃಂಗಸಭೆಗೆ ತಯಾರಿ ಆರಂಭಿಸಿದರು. ಕೆಲವೇ ದಿನಗಳಲ್ಲಿ ಅನಿರೀಕ್ಷಿತ ಮತ್ತು ಆಶ್ಚರ್ಯಕರ ರೀತಿಯಲ್ಲಿ ಶೃಂಗಸಭೆಯ ದಿನಾಂಕ (ಅಗಸ್ಟ್ 15) ಮತ್ತು ಸ್ಥಳ (ಅದೂ ಯು.ಎಸ್ ನ ಅಲಾಸ್ಕಾ) ನಿಗದಿಯಾಗಿ ಬಿಟ್ಟಿತ್ತು. ಅಲಾಸ್ಕಾ
“ಏಕಕ್ಷೀಯವಾಗಿ” ಶೃಂಗಸಭೆಯ ಘೋಷಣೆ ಮತ್ತು ಶೃಂಗಸಭೆಗೆ ತಮ್ಮನ್ನು ಆಹ್ವಾನಿಸದ್ದು ಉಕ್ರೇನ್ ಅಧ್ಯಕ್ಷ ಝೇಲೆನ್ಸ್ಕಿ ಮತ್ತು ಯುರೋ ಕೂಟದ ನಾಯಕರಲ್ಲಿ ಆತಂಕ, ಗಾಬರಿ ಮೂಡಿಸಿತ್ತು. ಉಕ್ರೇನ್ ಶಾಂತಿಗಾಗಿ ಕೆಲವು ಭೂಪ್ರದೇಶಗಳನ್ನು ಬಿಟ್ಟು ಕೊಡಲು ತಯಾರಾಗಿರಬೇಕು ಎಂದು ಹೇಳಿದ್ದು ಇನ್ನಷ್ಟು ಆತಂಕ, ಗಾಬರಿಗಳಿಗೆ ಕಾರಣವಾಗಿತ್ತು. ಝೇಲೆನ್ಸ್ಕಿ ಲಂಡನ್ ಗೆ ತೆರಳಿ ಯು.ಕೆ ಪ್ರಧಾನಿ ಜತೆ ಪರಾಮರ್ಶೆ ನಡೆಸಿದರು. ಝೇಲೆನ್ಸ್ಕಿ ಮತ್ತು ಯುರೋ ನಾಯಕರು ತಮ್ಮೊಳಗೆ ಹಾಗೂ ಟ್ರಂಪ್ ಜತೆ ಕಾನ್ಫರೆನ್ಸ್ ಫೋನ್ ಕರೆ ಮಾಡಿದರು. ಅಲಾಸ್ಕಾ
ಇದನ್ನೂ ಓದಿ: ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗ ರಚಿಸಲು ಸರಕಾರ ತೀರ್ಮಾನ: ಸಿಎಂ ಸಿದ್ದರಾಮಯ್ಯ
ಉಕ್ರೇನ್ ಮತ್ತು ಯುರೋ ನಾಯಕರಿಲ್ಲದೆ ಉಕ್ರೇನ್ ಶಾಂತಿ ಮಾತುಕತೆ ಹೇಗೆ ಸಾಧ್ಯ? ತಕ್ಷಣದ ಕದನ ವಿರಾಮ ಆಗಬೇಕು. ಉಕ್ರೇನಿನ ಭೂಪ್ರದೇಶ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದೆಲ್ಲ ಸಾರ್ವಜನಿಕವಾಗಿಯೂ ಹೇಳಿಕೆ ನೀಡಿದರು. ಈ ಶೃಂಗಸಭೆ ಉಕ್ರೇನಿನಲ್ಲಿ ಶಾಂತಿ ಹಾದಿ ಮಾಡಿಕೊಡುತ್ತದಾ? ಅಯ್ಯೋ ಹಾಗಿದ್ದರೆ ನಮ್ಮ ಗತಿಯೇನು? ಎಂಬಂತಿತ್ತು ಅವರ ಪ್ರಲಾಪ! ಇತ್ತೀಚಿನ ಗ್ಯಾಲಪ್ ಸಮೀಕ್ಷೆಯ ಪ್ರಕಾರ ಶೇಕಡಾ 69% ಜನ ಯುದ್ಧ ಆದಷ್ಟು ಬೇಗ ನಿಲ್ಲಬೇಕು ಎಂದು ಬಯಸುತ್ತಾರೆ. ಕೇವಲ ಶೇ.24 ಜನ ಮಾತ್ರ ಉಕ್ರೇನ್ ಭೂ ಪ್ರದೇಶಗಳನ್ನು ವಾಪಸು ಪಡೆಯುವವರೆಗೆ ಯುದ್ಧ ಮುಂದುವರೆಸಬೇಕು ಎನ್ನುತ್ತಾರೆ. ಯುದ್ಧ ಆರಂಭವಾದಾಗ 2022ರಲ್ಲಿ ಈ ಸಂಖ್ಯೆ ಶೇ.73 ಇತ್ತು. ಅಲಾಸ್ಕಾ
ತರಾತುರಿಯಲ್ಲಿ ಶೃಂಗಸಭೆ ಯಾಕೆ?

ಇದಕ್ಕೆ ಅನುಗುಣವಾಗಿಯೇ ಯು.ಎಸ್ ಮತ್ತು ಯುರೋಪ್ ನ ಸಾಮೂಹಿಕ ಮಾಧ್ಯಮಗಳು ಅಲಾಸ್ಕಾ ಶೃಂಗಸಭೆಯ ವಿರುದ್ಧ ಪ್ರಚಾರ ಆರಂಭಿಸಿದವು. ‘ಸರ್ವಾಧಿಕಾರಿ ಪುಟಿನ್ ನಂಬಲರ್ಹನಲ್ಲ’. ಯು.ಎಸ್ ಗೆ ಆಹ್ವಾನ ನೀಡಿ, ‘ಯುದ್ಧ ಅಪರಾಧಿ ಪುಟಿನ್’ ಗೆ ಯಾಕೆ ಕುಮ್ಮಕ್ಕು ಕೊಡುತ್ತಿದ್ದೀರಿ’, ‘ಉಕ್ರೇನ್ ಜನ ಶಾಂತಿಗಾಗಿ ಭೂಪ್ರದೇಶ ಬಿಡುವುದಿಲ್ಲ”, “ಈ ಶೃಂಗಸಭೆ ವಿಫಲವಾಗಲಿದೆ”, “ಇದು ಬರಿಯ ಟ್ರಂಪ್ ನೊಬೆಲ್ ಪ್ರಶಸ್ತಿ ಖುಶಿಗೆ” – ಎಂದೆಲ್ಲ ಪ್ರಚಾರ ನಡೆಯಿತು. ‘ಈ ಶೃಂಗಸಭೆ ಆರಂಭವಷ್ಟೇ’, ‘ಅಗತ್ಯವಿದ್ದರೆ ಎರಡನೆ ಶೃಂಗಸಭೆ ಏರ್ಪಡಿಸಬಹುದು. ಅದರಲ್ಲಿ ಝೇಲೆನ್ಸ್ಕಿ ಭಾಗವಹಿಸಬಹುದು” ಎಂದೆಲ್ಲ ತಮ್ಮ ಎಂದಿನ ಧಿಮಾಕಿನ ಮಾತು ಬಿಟ್ಟು ನಯವಾದ ಮಾತುಗಳಲ್ಲಿ ಟ್ರಂಪ್ ಹೇಳಿದರೂ ಈ ಪ್ರಚಾರ ನಿಲ್ಲಲಿಲ್ಲ. ಅಲಾಸ್ಕಾ
ಅಲಾಸ್ಕಾ ಶೃಂಗಸಭೆಯನ್ನು ಯಾಕೆ ಇಷ್ಟು ತರಾತುರಿಯಲ್ಲಿ ವ್ಯವಸ್ಥೆ ಮಾಡಲಾಯಿತು? ಇದು ಕೆಲವು ಪಾಶ್ಚಿಮಾತ್ಯ ಮಾಧ್ಯಮಗಳು ಹೇಳಿದಂತೆ ಬರಿಯ ನೊಬೆಲ್ ಶಾಂತಿ ಪ್ರಶಸ್ತಿಗಾಗಿ, ಪುಟಿನ್ ಮೆಚ್ಚಿಸಲು ಟ್ರಂಪ್ ಪ್ರಯತ್ನದ ಭಾಗವಾಗಿ ನಡೆದದ್ದಲ್ಲ. ರಶ್ಯಾ ದಾಳಿಯ ವಿರುದ್ಧ ಉಕ್ರೇನ್ ಸೈನ್ಯದ ಪ್ರತಿರೋಧ ತೀವ್ರವಾಗಿ ಕುಸಿಯುತ್ತಿದೆ. ಸೈನಿಕರ, ಮದ್ದುಗುಂಡುಗಳ ಇತರ ಮಿಲಿಟರಿ ಅಗತ್ಯಗಳ ಪೂರೈಕೆಯ ತೀವ್ರ ಅಭಾವ ಕಂಡು ಬಂದಿದೆ. ಉಕ್ರೇನಿಯನ್ ಮತ್ತು ಯುರೊಪಿನ ಜನತೆಯ ಮನೋಬಲವೂ ಕುಸಿಯುತ್ತಿದೆ.
ಪೂರ್ವ ಉಕ್ರೇನಿನ ರಶ್ಯಾ ಬಹುಸಂಖ್ಯಾತ ಪ್ರಾಂತ್ಯಗಳ ಮೇಲೆ ಹೆಚ್ಚು ಕಡಿಮೆ ರಶ್ಯಾದ ಸೈನ್ಯ ಪೂರ್ಣ ಹಿಡಿತ ಸಾಧಿಸಿದ್ದು, ಪಶ್ಚಿಮದತ್ತ ಸಾಗುತ್ತಿವೆ. ಟ್ರಂಪ್ ಅವರ 50 ದಿನಗಳ ಗಡುವಿನ ಒಳಗೆ ಕೆಲವೇ ವಾರಗಳಲ್ಲಿ ರಶ್ಯಾದ ಸೈನ್ಯ ಪಶ್ಚಿಮದತ್ತ ತೀವ್ರ ಮುನ್ನಡೆ ಸಾಧಿಸಿ ಇನ್ನಷ್ಟು ಆಯಕಟ್ಟಿನ ಪಟ್ಟಣಗಳನ್ನು ವಶಪಡಿಸಿಕೊಳ್ಳಬಹುದು. ಉಕ್ರೇನ್ ಜತೆ ಯುದ್ಧದ ತಳಮಟ್ಟದ ಈ ವಾಸ್ತವದ ಬಗ್ಗೆ ಟ್ರಂಪ್ ಗೆ ನೀಡಲಾದ ವರದಿಯ ಆಧಾರದಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿಯೇ ಟ್ರಂಪ್ ತನ್ನ ವಿಶೇಷ ದೂತನನ್ನು ಕಳಿಸಿ ಈ ಶೃಂಗಸಭೆಯನ್ನು ತರಾತುರಿಲ್ಲಿ ವ್ಯವಸ್ಥೆ ಮಾಡಿದರು. ಅಲಾಸ್ಕಾ
ಅಲಾಸ್ಕಾ ಶೃಂಗಸಭೆ ನಡೆದ ನಂತರವೂ ಮತ್ತೆ “ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ”, “ಶಂಗಸಭೆ ವಿಫಲವಾಗಿದೆ”, “ಪುಟಿನ್ ಜತೆ ಯಾವುದೇ ಒಪ್ಪಂದ ಸಾಧ್ಯವಿಲ್ಲ”, “ಟ್ರಂಪ್ ಪುಟಿನ್ ಗೆ ಮಣಿದಿದ್ದಾರೆ”. – ಎಂದೆಲ್ಲಾ ಯು.ಎಸ್ ಮತ್ತು ಯುರೋಪ್ ನ ಸಾಮೂಹಿಕ ಮಾಧ್ಯಮಗಳು ಹೇಳಿದವು. ಆದರೆ ಶೃಂಗಸಭೆಯನ್ನು ಮತ್ತು ಅದು ಅತ್ಯಂತ ಸೌಹಾರ್ದ ರೀತಿಯಲ್ಲಿ ನಡೆದದ್ದನ್ನು, ಇಡೀ ಜಗತ್ತಿನ ಜನತೆ ಮತ್ತು ಜಾಗತಿಕ ದಕ್ಷಿಣದ ಸರಕಾರಗಳು ಸ್ವಾಗತಿಸಿವೆ ಮತ್ತು ಅದನ್ನು ಆಶಾಭಾವನೆಯಿಂದಲೇ ನೋಡಿವೆ. ಉಕ್ರೇನಿನಲ್ಲಿ ಶಾಂತಿ ಸ್ಥಾಪನೆಯ ಸಾಧ್ಯತೆಯನ್ನು ಇದು ತೆರೆದಿದೆ ಎಂದು ಭಾವಿಸಿವೆ. ಇದರರ್ಥ ಟ್ರಂಪ್ ಶಾಂತಿದೂತನೆಂದಲ್ಲ. ಗಾಜಾ, ವೆನೆಜುವೇಲಾ ಮತ್ತಿತರ ಪ್ರದೇಶಗಳಲ್ಲಿ ಸಾಮ್ರಾಜ್ಯಶಾಹಿ ಆಕ್ರಾಮತೆಗೆ, ಯುದ್ಧಕ್ಕೆ ಪೂರ್ಣ ಕುಮ್ಮಕ್ಕು ಕೊಡುತ್ತಿದ್ದಾರೆ. ಅವರು ಬಹುಶಃ ವ್ಯೂಹಾತ್ಮಕ ಕಾರಣಗಳಿಗೆ ಉಕ್ರೇನ್ ಯುದ್ಧ ನಿಲ್ಲಿಸಲು ಹೊರಟಿದ್ದಾರೆ. ಅಲಾಸ್ಕಾ
ಅಲಾಸ್ಕಾ ಶೃಂಗಸಭೆ ಏನು ಸಾಧಿಸಿತು ?
ಅಲಾಸ್ಕಾ ಶೃಂಗಸಭೆಯ ನಂತರ ಟ್ರಂಪ್ ಶೃಂಗಸಭೆಯ ಮಾತುಕತೆಗಳ ಬಗ್ಗೆ ತಿಳಿಸಲು ಝೇಲೆನ್ಸ್ಕಿ ಮತ್ತು ಯುರೋ ನಾಯಕರ ಜತೆ ಫೋನಿನಲ್ಲಿ ಮಾತನಾಡಿದರು. ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಝೇಲೆನ್ಸ್ಕಿ ಅವರನ್ನು ವಾಶಿಂಗ್ ಟನ್ ಗೆ ಕರೆದರು. ಯುರೋ ನಾಯಕರನ್ನು ಟ್ರಂಪ್ ಆಹ್ವಾನಿಸದಿದ್ದರೂ, ಯು.ಕೆ, ಜರ್ಮನಿ, ಇಟಲಿ ದೇಶಗಳ ಪ್ರಧಾನಿಗಳು, ಫ್ರಾನ್ಸ್ ಮತ್ತು ಯುರೋ ಕಮಿಶನ್ ಅಧ್ಯಕ್ಷ, ನಾಟೋ ಪ್ರಧಾನ ಕಾರ್ಯದರ್ಶಿ – ಇವರೆಲ್ಲ ತರಾತುರಿಯಲ್ಲಿ ವಾಶಿಂಗ್ ಟನ್ ಗೆ ಧಾವಿಸಿ ಈ ಸಭೆಯಲ್ಲಿ ಭಾಗವಹಿಸಿದರು. ಉಕ್ರೇನಿನಲ್ಲಿ ಶಾಂತಿಗಿಂತ ಹೆಚ್ಚಾಗಿ ಯುರೋಪಿನ ಭದ್ರತೆಯನ್ನೂ ಪರಿಗಣಿಸಬೇಕು ಎಂಬುದು ಅವರ ಕಾಳಜಿಯಂತೆ ಕಾಣುತ್ತಿತ್ತು. ಆದರೆ ಟ್ರಂಪ್ ಜತೆ ಮಾತುಕತೆಯ ನಂತರ ಭಾಗವಹಿಸಿದವರ ಹೇಳಿಕೆಗಳನ್ನು ನೋಡಿದರೆ, ಶೃಂಗಸಭೆಯಲ್ಲಿ ಈ ಕೆಳಗಿನ ಸ್ಥೂಲ ಅಂಶಗಳ ಬಗ್ಗೆ ಒಮ್ಮತ ಮೂಡಿದ ಹಾಗೆ ಕಾಣುತ್ತದೆ
*ತಕ್ಷಣ ಕದನವಿರಾಮದ ಬದಲು ಶಾಶ್ವತ ಶಾಂತಿ ಸ್ಥಾಪನೆಗೆ ಪ್ರಯತ್ನಿಸಬೇಕು
*ಶಾಂತಿ ಸ್ಥಾಪಿಸಲು ಭೂಪ್ರದೇಶದ ವಿನಿಮಯ ಆಗಬೇಕು
*ಉಕ್ರೇನ್ ನಾಟೋ ಸದಸ್ಯತ್ವದ ಪ್ರಯತ್ನ ಕೈಬಿಡಬೇಕು
*ಉಕ್ರೇನಿನ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡಬೇಕು
*ಇವನ್ನು ಚರ್ಚಿಸಲು ಝೇಲೆನ್ಸ್ಕಿ-ಪುಟಿನ್ ನೇರ ಮಾತುಕತೆ ಮತ್ತು ಅದರ ನಂತರ ಟ್ರಂಪ್-ಝೇಲೆನ್ಸ್ಕಿ-ಪುಟಿನ್ ತ್ರಿಪಕ್ಷೀಯ ಶೃಂಗಸಭೆ ನಡೆಸಬೇಕು

ಇದು ಶೃಂಗಸಭೆಯ ನಂತರದ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ. ತಕ್ಷಣ ಕದನವಿರಾಮದ ಜಪ ಮಾಡುತ್ತಿದ್ದ ಝೇಲೆನ್ಸ್ಕಿ ಮತ್ತು ಯುರೋ ನಾಯಕರು ಈ ಬಗ್ಗೆ ಮಾತಾಡುತ್ತಿಲ್ಲ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಶಾಂತಿಗಾಗಿ ಉಕ್ರೇನ್ ಕೆಲವು ಭೂಪ್ರದೇಶದ ಬಿಟ್ಟುಕೊಡಬೇಕಾಗಬಹುದು ಎಂದು ಟ್ರಂಪ್ ಜತೆ ದನಿಗೂಡಿಸಿದ್ದಾರೆ. ನಾಟೋ ಸದಸ್ಯತ್ವ ಬಗ್ಗೆಯೂ ಯಾರು ಪ್ರಸ್ತಾಪಿಸಿಲ್ಲ. ಈಗ ಹೆಚ್ಚಿನ ಹೇಳಿಕೆಗಳು, ಚರ್ಚೆಗಳು “ಉಕ್ರೇನಿನ ಭದ್ರತೆಗೆ ಸೂಕ್ತ ವ್ಯವಸ್ಥೆ” ಅಂದರೆ ಏನು ಎಂಬುದರ ಬಗ್ಗೆ ಇದೆ. ಮಿನ್ಸ್ಕ್ ಒಪ್ಪಂದದಲ್ಲಿ ಸೂಚಿಸಲಾಗಿದ್ದ ಶಾಶ್ವತ 5+ಜರ್ಮನಿ ದೇಶಗಳ ಜಂಟಿ ಆಶ್ವಾಸನೆ, ನಾಟೋ ಪಡೆಗಳು, ನಾಟೋದ ಕಲಮು 5 ಥರದ ವ್ಯವಸ್ಥೆ, ಅಂತರರಾಷ್ಟ್ರೀಯ ಶಾಂತಿಪಾಲನಾ ಪಡೆ – ಹೀಗೆ ಹಲವು ಮಾತುಗಳು ಕೇಳಿ ಬರುತ್ತಿವೆ.
ಬಹುಶಃ ಮುಂದಿನ ಮಾತುಕತೆಗಳಲ್ಲಿ ಇದು ಮುಖ್ಯ ವಿಷಯವಾಗಿರುತ್ತದೆ. ಇದಲ್ಲದೆ “ಶಾಂತಿಯ ಬದಲು ಭೂಪ್ರದೇಶದ ವಿನಿಮಯ ಆಗಬೇಕು” ಎಂಬುದರ ವಿವರಗಳು ಸಹ ಸ್ಪಷ್ಟವಿಲ್ಲ. ಪೂರ್ವ ಉಕ್ರೇನಿನ ಎಲ್ಲ 4 ಪ್ರಾಂತ್ಯಗಳು, ಈಗ ರಶ್ಯಾ ನಿಯಂತ್ರಣದಲ್ಲಿರುವ ಎಲ್ಲ ಪ್ರದೇಶಗಳು, ಡೊನ್ ಬಾಸ್ ಪ್ರದೇಶ ಮಾತ್ರ – ಹೀಗೆ ಈ ವಿಷಯದಲ್ಲೂ ಹಲವು ಸಾಧ್ಯತೆಗಳಿವೆ. ಇವಲ್ಲದೆ ರಶ್ಯದ ಮೇಲೆ ವಿಧಿಸಲಾದ ದಿಗ್ಬಂಧನಗಳನ್ನು ತೆಗೆಯುವುದು, ಪಾಶ್ಚಿಮಾತ್ಯ ಬ್ಯಾಂಕುಗಳು ಕಿತ್ತುಕೊಂಡ ರಶ್ಯನ್ ನಿಧಿ ಮತ್ತಿತರ ಆಸ್ತಿಗಳನ್ನು ಹಿಂತಿರುಗಿಸುವುದು ಮುಂತಾದ ವಿಷಯಗಳ ಇತ್ಯರ್ಥ ಸಹ ಆಗಬೇಕು.
ಯುರೋ ನಾಯಕರು ತಡೆಯೊಡ್ಡುವರೇ?
ಈ ಶಾಂತಿ ಮಾತುಕತೆಗಳು ಮುನ್ನಡೆಯುತ್ತಿದ್ದಂತೆ ಯುರೋ ನಾಯಕರು ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಈ ಮಾತುಕತೆಗಳ ಮೇಲೆ ಪ್ರಭಾವ ಬೀರಲು, ಉಕ್ರೇನ್ ಭದ್ರತೆ ಖಾತರಿ ಪಡಿಸುವಲ್ಲಿ ಮತ್ತು ಇಡೀ ಪ್ರಕ್ರಿಯೆಯಲ್ಲಿ ತಮ್ಮ ಪಾತ್ರವಿದೆ ಎಂದು ತೋರಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ. ಬಿಡೆನ್ ಅಧ್ಯಕ್ಷರಾಗಿದ್ದಾಗ ಯುರೋ ಕೂಟ ಮತ್ತು ನಾಟೋವನ್ನು ಉಕ್ರೇನ್ ಯದ್ಧಕ್ಕೆ ಬಲವಂತವಾಗಿ ಸೆಳೆಯಲಾಯಿತು. ವಿಶೇಷವಾಗಿ ಜರ್ಮನಿ ಮತ್ತು ಫ್ರಾನ್ಸ್ ನಾಯಕರು ಇದರ ಬಗ್ಗೆ ಉತ್ಸುಕರಾಗಿರಲಿಲ್ಲ ಮತ್ತು ಅದರ ಪರವಾಗಿರಲಿಲ್ಲ. ಇದು ರಶ್ಯದ ಪೆಟ್ರೋಲ್-ಗ್ಯಾಸ್ ಮೇಲೆ ಬಹುಪಾಲು ಅವಲಂಬಿತವಾಗಿರುವ ಯುರೋಪಿನ ಇಂಧನ ಭದ್ರತೆಯನ್ನು ಹಾಳುಗೆಡವುತ್ತದೆ ಮತ್ತು ರಶ್ಯವನ್ನು ಅನಗತ್ಯವಾಗಿ ಎದುರು ಹಾಕಿಕೊಂಡ ಹಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಆದರೆ ಯು.ಎಸ್ ನ ಮೇಲೆ ಮಿಲಿಟರಿ ಮತ್ತು ಆರ್ಥಿಕ ಅವಲಂಬನೆಯಿರುವ ಯುರೋ ಕೂಟ ಯು.ಎಸ್ ಹೇಳಿದಂತೆ ಉಕ್ರೇನ್ ಯುದ್ಧಕ್ಕೆ ಬೆಂಬಲ ಕಾರ್ಯಾಚರಣೆಗಳಲ್ಲಿ ಭಾಗವಹಿಸಬೇಕಾಯಿತು. ಇದರ ದುಷ್ಪರಿಣಾಮ ಯುರೋ ಕೂಟದ ಮತ್ತು ಜನತೆಯ ಮೇಲೆ ಆಗಿದೆ. ಯುರೋ ಕೂಟದ ದೇಶಗಳು ಮತ್ತು ಜನತೆ ಇಂಧನ ಕೊರತೆ, ದುಬಾರಿ ಬೆಲೆ ಮತ್ತು ತೀವ್ರ ಅಭದ್ರತೆಯಿಂದ ನರಳುತ್ತಿವೆ. ಯು.ಎಸ್ ದುಬಾರಿ ಇಂಧನ ಪೂರೈಕೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುತ್ತಿದೆ. ಇದರಿಂದಾಗಿ ಯುರೋಪಿನ ಕೈಗಾರಿಕಾ ಕೇಂದ್ರಗಳಾದ ಜರ್ಮನಿ ಮತ್ತು ಫ್ರಾನ್ಸ್ ಕೈಗಾರಿಕೆಗಳು ಬಿಕ್ಕಟ್ಟಿನಲ್ಲಿವೆ.
ಆದರೆ ಚೋದ್ಯದ ವಿಷಯವೆಂದರೆ ಈಗ ಯು.ಎಸ್ ಅಧ್ಯಕ್ಷ ಉಕ್ರೇನ್ ಶಾಂತಿ ಮಾತುಕತೆಗಳಲ್ಲಿ ಆಸಕ್ತಿ ವಹಿಸುತ್ತಿರುವಾಗ, ಯು.ಕೆ ಯುರೋ ನಾಯಕರು ಅಪಸ್ವರವೆತ್ತಿದ್ದಾರೆ, ಅಡ್ಡಗಾಲು ಹಾಕುತ್ತಿದ್ದಾರೆ ಎಂದೂ ಹೇಳಿದರೆ ತಪ್ಪಾಗಲಾರದು. ಉಕ್ರೇನ್ ಯುದ್ಧದ ಮುಂದುವರಿಕೆ ತಮ್ಮ ದೇಶ/ಜನಗಳ ಹಿತಾಸಕ್ತಿಗೆ ಮಾರಕವಾಗಿದ್ದರೂ, ಯು.ಎಸ್ ಮಿಲಿಟರಿ-ಆರ್ಥಿಕ ಬೆಂಬಲವಿಲ್ಲದೆ ಉಕ್ರೇನ್ ಒಂದು ದಿನವೂ ಯುದ್ಧ ಮುಂದುವರೆಸಲು ಸಾಧ್ಯವಿಲ್ಲವೆಂದು ಗೊತ್ತಿದ್ದರೂ, ಯುದ್ಧ ಮುಂದುವರಿಕೆ ಅನಿವಾರ್ಯವೆಂಬ ಸ್ಥಿತಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಈ ನಡುವೆ ಯುರೊಕೂಟದ ದೇಶಗಳಲ್ಲಿ ಚುನಾವಣೆಗಳು ನಡೆದು ಹೊಸ ನಾಯಕರು ಬಂದಿರುವುದು ಸಹಾ ಕಾರಣವಾಗಿದೆ,
ಝೇಲೆನ್ಸ್ಕಿ ಮತ್ತು ಯುರೋ ನಾಯಕರು ಯಾವುದೇ ಧೋರಣೆ ಅನುಸರಿಸಿದರೂ, ಟ್ರಂಪ್ ಮತ್ತು ಪುಟಿನ್ ಧೃಢ ನಿಲುವು ತಳೆದರೆ ಉಕ್ರೇನಿನಲ್ಲಿ ಶಾಂತಿ ಸಾಧ್ಯ. ಅದರತ್ತ ನಡೆ ಆರಂಭವಾಗಿರುವಂತೆ ಕಾಣುತ್ತದೆ. ಆದರೆ ಶೃಂಗಸಭೆಯ ನಂತರದ ದಿನಗಳಲ್ಲಿ ಮಿಲಿಟರಿ-ಕೈಗಾರಿಕ ಸಂಕೀರ್ಣ ಮತ್ತು ಯುರೋ ಕೂಟದ ನಾಯಕರು ಇದಕ್ಕೆ ಅಡೆತಡೆ ಒಡ್ಡುವ ತೀವ್ರ ಪ್ರಯತ್ನದಲ್ಲಿ ತೊಡಗಿದ್ದಾರೆ.
ಇದನ್ನೂ ನೋಡಿ: ʼಒಳಮೀಸಲಾತಿಯ ಕಿಚ್ಚು ನಿಮ್ಮ ಪಕ್ಷವನ್ನು ಸುಟ್ಟು ಹಾಕುತ್ತದೆʼ, ದಲಿತ ನಾಯಕರಿಂದ ಸರಕಾರಕ್ಕೆ ಎಚ್ಚರಿಕೆJanashakthi
