ಮಂಗಳೂರು| ಕಂಬಳ ನಡೆಸುವವರಿಂದ ಕೃಷಿಭೂಮಿ ಉಳಿಸಲು ಸಾಧ್ಯವೇ? – ಮುನೀರ್ ಕಾಟಿಪಳ್ಳ ಪ್ರಶ್ನೆ

ಮಂಗಳೂರು: ಜಮೀನ್ದಾರಿಕೆ ಪದ್ದತಿಯ ವಿರುದ್ಧ ಗೇಣಿದಾರ ರೈತರು ದಶಕಗಳ ಕಾಲ ಸಂಘರ್ಷ ನಡೆಸಿ ಭೂಮಿಯ ಹಕ್ಕು ಪಡೆದ ಉಳ್ಳಾಲ ತಾಲೂಕಿನಲ್ಲಿ ನವ ಭೂಮಾಲಕ ಪದ್ದತಿ ತಲೆ ಎತ್ತಿದೆ. ರೈತರ ನೂರಾರು ಎಕರೆ ಜಮೀನು ಸದ್ದಿಲ್ಲದೆ ಬಲಾಢ್ಯ ವರ್ಗದ ಪಾಲಾಗುತ್ತಿದೆ. ಬಡ ರೈತರ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಗೂಂಡಾ ಪ್ರವೃತ್ತಿಯ ಏಜಂಟರನ್ನು ಮುಂದಿಟ್ಟು ಉಳ್ಳಾಲ ತಾಲೂಕಿನ ಅಂಬ್ಲಮೊಗರು, ಮುನ್ನೂರು, ಬೆಳ್ಮ, ಮಂಜನಾಡಿ ಗ್ರಾಮಗಳಲ್ಲಿ ಅತಿ ಕಡಿಮೆ ದರ ನೀಡಿ ಕೃಷಿ ಭೂಮಿ ಸ್ವಾಧೀನ ಪಡಿಸಲಾಗುತ್ತಿದೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರು

ಸುತ್ತಲಿನ ಜಮೀನು ಖರೀದಿ ಮಾಡಿ ಮಧ್ಯದಲ್ಲಿ ಇರುವ ಕೃಷಿ ಭೂಮಿಯ ಸಂಪರ್ಕ ರಸ್ತೆಗಳನ್ನು ಮುಚ್ಚಿ, ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳನ್ನೂ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವ ಈ ಭೂ ಮಾಪಿಯಾಗಳು ಹೊಸ ಸಾಮ್ರಾಜ್ಯವನ್ನು ಕಟ್ಟಿದ್ದು, ಉಳ್ಳಾಲ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಅಸಹನೀಯ ಪರಿಸ್ಥಿತಿ ಉಂಟಾಗಿದೆ. ಉಳ್ಳಾಲದ ಶಾಸಕರೂ ಸೇರಿದಂತೆ ಜಿಲ್ಲೆಯ ಶಾಸಕರುಗಳು ಕೃಷಿ ಪರಂಪರೆಯ ಉಳಿವಿನ ಹೆಸರಿನಲ್ಲಿ ಮುಂಡಾಸು ಕಟ್ಟಿ ಕಂಬಳ ಆಯೋಜಿಸುವ ಸಂಭ್ರಮದಲ್ಲಿ ಮುಳುಗಿದ್ದಾರೆ. ಮಂಗಳೂರು

ಅಂಬ್ಲಮೊಗರು, ಬೆಳ್ಮ, ಮುನ್ನೂರು ಗ್ರಾಮದ ಅತ್ತ ಕಡೆ ನರಿಂಗಾನದಲ್ಲಿ ಕಾಂಗ್ರೆಸಿಗರು, ಇತ್ತ ಕಡೆ ಜಪ್ಪಿನಮೊಗರಿನಲ್ಲಿ ಬಿಜೆಪಿಗರು ಆಡಂಬರದ ಕಂಬಳಗಳನ್ನು ಆಯೋಜಿಸಿದ್ದಾರೆ. ಆದರೆ, ಈ ಎರಡು ಕಂಬಳ ಕೇಂದ್ರಗಳ ನಡುವಿನ ಗ್ರಾಮಗಳಲ್ಲಿ ನೈಜ ರೈತಾಪಿಗಳು ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದರೂ, ಈ ಶಾಸಕರುಗಳು ಕನಿಷ್ಟ ಸಮಸ್ಯೆಗಳನ್ನೂ ಆಲಿಸುತ್ತಿಲ್ಲ‌. ಬದಲಿಗೆ, ಭೂಮಾಫಿಯಾಗಳಿಂದಲೇ ಕಂಬಳದ ಪ್ರಾಯೋಜಕತ್ವ ಪಡೆಯುತ್ತಿದ್ದಾರೆ, ಕಂಬಳದ ಕುರಿತಾದ ಕಾಳಜಿ ನೈಜ ರೈತರು, ಕೃಷಿ ಭೂಮಿಯ ಉಳಿವಿನ ಕುರಿತು ಶಾಸಕರುಗಳಿಗೆ ಇರದಿರುವುದು ವಿಷಾದನೀಯ, ಇಂತಹ ಬೂಟಾಟಿಕೆಯ ಜನಪ್ರತಿನಿಧಿಗಳನ್ನು ನಂಬಿ ಕೂರದೆ, ಬಲಿಷ್ಟ ಹೋರಾಟಕ್ಕೆ ಜನತೆ ಮುಂದಾಗಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರು

ಇದನ್ನೂ ಓದಿ: ಇನ್ವೆಸ್ಟ್ ಕರ್ನಾಟಕದ ಬಹುಪಾಲು ಲಾಭ ಕನ್ನಡಿಗರಿಗೆ ದೊರೆಯುವಂತಾಗಬೇಕು – ಟಿ.ಎ.ನಾರಾಯಣಗೌಡ

ಅವರು ಇಂದು(11-02-2025) ನಗರದ ಕ್ಲಾಕ್ ಟವರ್ ಬಳಿಯಲ್ಲಿ ಅಂಬ್ಲಮೊಗರು ಗ್ರಾಮದ ಕ್ರಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಅವರು ಹೇಳಿದರು. ಮಂಗಳೂರು

ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಗೌರವ ಸಲಹೆಗಾರರಾದ ಸುನಿಲ್ ಕುಮಾರ್ ಬಜಾಲ್ ರವರು, ಬಲಾಢ್ಯ ಭೂಮಾಫಿಯಾ ಶಕ್ತಿಯೊಂದು ಕಳೆದ ಹಲವು ವರ್ಷಗಳಿಂದ ಅಂಬ್ಲಮೊಗರು ಗ್ರಾಮದ ಕ್ರಷಿಯೋಗ್ಯ ಭೂಮಿಯನ್ನು ಅತ್ಯಂತ ಕಡಿಮೆ ಕ್ರಯಕ್ಕೆ ಅನುಮಾನಾಸ್ಪದ ರೀತಿಯಲ್ಲಿ ಖರೀದಿಸತೊಡಗಿದ್ದಾರೆ.ಮುಂದಿನ ಯೋಜನೆಗಳು ಏನೆಂಬುದು ಕನಿಷ್ಟ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗೊತ್ತಿಲ್ಲ. ಸರಕಾರಿ ಭೂಮಿಯನ್ನು ಕೂಡ ನುಂಗಿ ಹಾಕಿದ ಖದೀಮರು ಪಂಚಾಯತ್ ನಿಂದ ನಿರ್ಮಿಸಲ್ಪಟ್ಟಿದ್ದ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಸೇತುವೆಗಳನ್ನು, ಕಾಲು ಸಂಕಗಳನ್ನು ಕೆಡವಿ ಹಾಕಿದ್ದಾರೆ.ಇಂತಹ ಗಂಭೀರ ಸಮಸ್ಯೆ ಅಂಬ್ಲಮೊಗರು ಗ್ರಾಮದಲ್ಲಿ ತಲೆದೋರಿದ್ದರೂ ಸ್ಥಳೀಯ ಶಾಸಕರಾಗಿರುವ ಸ್ಪೀಕರ್ ಸಾಹೇಬರು ತುಟಿಪಿಟಿಕೆನ್ನದೆ ದಿವ್ಯ ಮೌನ ವಹಿಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘಟನೆಯ ಜಿಲ್ಲಾ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್ ಹಾಗೂ ಕೆ ಯಾದವ ಶೆಟ್ಟಿಯವರು ಮಾತನಾಡುತ್ತಾ, ಅಂದು ಭೂಮಾಲಕರ ಅತ್ಯಂತ ಕ್ರೌರ್ಯದ ವಿರುದ್ಧ ಸಮರಶೀಲ ಹೋರಾಟ ನಡೆಸಿದ ಅಂಬ್ಲಮೊಗರು ಗ್ರಾಮದ ರೈತಾಪಿ ಜನತೆ ಇಂದು ಆಧುನಿಕ ಭೂಮಾಲಕರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಾಗಿದೆ. ಜಿಲ್ಲಾಡಳಿತ ಹಾಗೂ ಸರಕಾರದ ಗಮನಕ್ಕೆ ತಾರದೆ ನೂರಾರು ಎಕರೆ ಭೂಮಿಯನ್ನು ಖರೀದಿಸುವ ಪ್ರಕ್ರಿಯೆ ಅತ್ಯಂತ ಮೋಸದ ಜಾಲವಾಗಿದೆ. ಅಂಬ್ಲಮೊಗರು ಗ್ರಾಮಸ್ಥರು ನಡೆಸುವ ನ್ಯಾಯಯುತ ಹೋರಾಟಕ್ಕೆ ಜಿಲ್ಲೆಯ ರೈತಾಪಿ ಜನತೆಯ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲೆಯ ರೈತ ಸಂಘಟನೆಯ ಮುಖಂಡರಾದ ಶೇಖರ್ ಕುಂದರ್,ವಿಶ್ವನಾಥ್ ತೇವುಲ, ಕಾರ್ಮಿಕ ಮುಖಂಡರಾದ ಸುಂದರ ಕುಂಪಲ, ವಿಲಾಸಿನಿ, ಪ್ರಮೋದಿನಿ,ಜನಾರ್ಧನ ಕುತ್ತಾರ್,ರಫೀಕ್ ಹರೇಕಳ, ಅನ್ಸಾರ್ ಬಜಾಲ್,ಜಯರಾಮ ತೇವುಲ,ಲೋಕೇಶ್ ಅಳಪೆ, ಯುವಜನ ನಾಯಕರಾದ ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ,ನವೀನ್ ಕೊಂಚಾಡಿ, ವಿದ್ಯಾರ್ಥಿ ನಾಯಕರಾದ ವಿನುಷ ರಮಣ,ಕೋಶಿನ್, ಮಹಿಳಾ ಮುಖಂಡರಾದ ಪ್ರಮಿಳಾ ಶಕ್ತಿನಗರ,ಶಶಿಕಲಾ ಕುತ್ತಾರ್,ಪ್ರಮೀಳಾ ದೇವಾಡಿಗ,ನಳಿನಾಕ್ಷಿ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶಾಲಿನಿ ಪೂಜಾರಿ,ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ದೆಪ್ಪಲಿಮಾರ್,ಪಂಚಾಯತ್ ಸದಸ್ಯರಾದ ರಾಜೇಶ್ವರಿಯವರು ಭಾಗವಹಿಸಿದ್ದರು.

ಹೋರಾಟದ ನೇತ್ರತ್ವವನ್ನು ಕ್ರಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನಾಯಕರಾದ ಇಬ್ರಾಹಿಂ ಮದಕ,ಸುಂದರ,ಹಿತೇಶ್, ಅಬ್ಬಾಸ್ ಮದಕ,ರವಿ ಕುಮಾರ್,ಕಿಶೋರ್ ಗಟ್ಟಿ, ಕೂಸಪ್ಪ,ಕಮರುನ್ನೀಸಾ, ಭಾರತಿ,ಹಸನ್ ಕುಂಞ, ಇಸುಬು,ಅಬ್ಬಾಸ್,ಜಯ ಕುಮಾರ್ ಮುಂತಾದವರು ವಹಿಸಿದ್ದರು.

ಬಳಿಕ ಹೋರಾಟ ಸಮಿತಿಯ ಉನ್ನತ ಮಟ್ಟದ ನಿಯೋಗವೊಂದು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರರ ಮೂಲಕ ಮನವಿಯನ್ನು ಅರ್ಪಿಸಲಾಯಿತು.

ಇದನ್ನೂ ನೋಡಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ 2020ರ ರದ್ದತಿ ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯ…. Janashakthi Media

Donate Janashakthi Media

Leave a Reply

Your email address will not be published. Required fields are marked *