ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ಧರಾಮಯ್ಯ ಅವರು, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ 8 ಮಂದಿ ಸಚಿವರೊಂದಿಗೆ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಿದರು. ಈ ಬಳಿಕ ಪ್ರಣಾಣಿಕೆಯಲ್ಲಿ ಘೋಷಿಸಿದಂತ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ವಿಧಾನಸೌಧದದ ಸಂಪುಟ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಆದೇಶವನ್ನು ಹೊರಡಿಸಲಾಗುತ್ತದೆ ಎಂಬುದಾಗಿ ಘೋಷಿಸಿದರು.
ನಾವು ಪ್ರಮುಖವಾಗಿ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ಭರವಸೆಗಳನ್ನು ಕೊಟ್ಟಿದ್ದೇವೆ. ಆ ಎಲ್ಲಾ ಭರವಸೆಗಳು ಒಂದೇ ವರ್ಷದಲ್ಲಿ ಈಡೇರಿಸುವಂತದ್ದಲ್ಲ. ಐದು ವರ್ಷದ ನಮ್ಮ ಸರ್ಕಾರದ ಅವಧಿಯಲ್ಲಿ ಈಡೇರಿಸುವಂತವುಗಳು. ಅವುಗಳಲ್ಲಿ ಪ್ರಮುಖವಾಗಿ ಐದು ಗ್ಯಾರಂಟಿಗಳನ್ನು ಜನರಿಗೆ ವಾಗ್ಧಾನಗಳ ರೂಪದಲ್ಲಿ ಕೊಟ್ಟಿದ್ದೆವು. ನಾವು ಜನತೆಗೆ ಅವುಗಳನ್ನು ಹೇಳುವಾಗ ನಾವು ಮೊದಲ ಸಚಿವ ಸಂಪುಟ ಸಭೆಯಲ್ಲೇ ಆ ಎಲ್ಲಾ ಗ್ಯಾರಂಟಿಗಳಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆಯನ್ನು ಪಡೆದು, ಅದಕ್ಕೆ ಸಂಬಂಧಪಟ್ಟಂತ ಆದೇಶವನ್ನು ಹೊರಡಿಸುವುದಾಗಿ ಹೇಳಿದ್ದೆವು ಎಂದರು. ನಮ್ಮ ಗ್ಯಾರಂಟಿಗಳನ್ನು ನಾನು, ಖರ್ಗೆ ಎಲ್ಲರೂ ಹೇಳಿದ್ದೇವೆ. ನಮ್ಮ ಸರ್ಕಾರ ಗೌರವಾನ್ವಿತವಾಗಿರುವಂತ ಸರ್ಕಾರವಾಗಿದೆ. ನಾವು ಈ ಹಿಂದೆ ಸರ್ಕಾರವಿದ್ದಾಗ ಭರವಸೆಗಳನ್ನು ಈಡೇರಿಸಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಅದನ್ನು ಬಿಟ್ಟು 30 ನೂತನ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 165 ಭರವಸೆಗಳಲ್ಲಿ 158 ಈಡೇರಿಸಿದ್ದೇವೆ. ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ. ಆದರೇ ವಿರೋಧಪಕ್ಷದವರು ಅದನ್ನು ಜನರಿಗೆ ದಾರಿ ತಪ್ಪಿಸಲು ಈಡೇರಿಸೋದಕ್ಕೆ ಆಗಲ್ಲ, ರಾಜ್ಯ ದಿವಾಳಿ ಆಗಲಿದೆ ಎಂಬುದಾಗಿ ಪ್ರಧಾನ ಮಂತ್ರಿಗಳೇ ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ. ಸಿಎಂ ಆಗಿದ್ದಂತ ಬೊಮ್ಮಾಯಿ, ಬಿಜೆಪಿ ನಾಯಕರು ಇದು ಆಗಲ್ಲ, ಸುಳ್ಳು ಹೇಳುತ್ತಿದ್ದಾರೆ. ಇವೆಲ್ಲಾ ಸುಳ್ಳು ಭರವಸೆಗಳು ಅಂತೆಲ್ಲ ಹೇಳಿದ್ದಾರೆ ಎಂದರು.
ಇದನ್ನೂ ಓದಿ : 5 ಗ್ಯಾರಂಟಿ ಯೋಜನೆ’ಗಳನ್ನು ಜಾರಿ ಮಾಡುತ್ತೇವೆ : ರಾಹುಲ್ ಗಾಂಧಿ ಘೋಷಣೆ
ನಾನು ನೀಡಿರುವಂತ 5 ಗ್ಯಾರಂಟಿ ಯೋಜನೆಗಳನ್ನು ತತ್ಷಣದ ಲೆಕ್ಕಾಚಾರದಂತೆ 50 ಸಾವಿರ ಕೋಟಿ ರೂಪಾಯಿಗಳು ಬೇಕಾಗುತ್ತದೆ. ನಮ್ಮ ರಾಜ್ಯದ ಬಜೆಟ್ 3 ಲಕ್ಷದ 10 ಸಾವಿರ ಕೋಟಿ ರೂಪಾಯಿಗಳು. ಪ್ರತಿ ವರ್ಷ ಹತ್ತು ಪರ್ಸೆಂಟ್ ಗಿಂತ ಹೆಚ್ಚಾಗಿ ಬಜೆಟ್ ನ ಗಾತ್ರ ಜಾಸ್ತಿ ಆಗುತ್ತಾ ಹೋಗುತ್ತದೆ. ಜೊತೆಗೆ ತೆರಿಗೆಯನ್ನು ಕಟ್ಟು ನಿಟ್ಟಾಗಿ ವಸೂಲಿ ಮಾಡುವುದರಿಂದ ಇನ್ನಷ್ಟು ಆದಾಯ ಹೆಚ್ಚಿಸಲು ಸಾಧ್ಯವಾಗುತ್ತದೆ. ಕೆಲವು ಇಲಾಖೆಗಳಲ್ಲಿ ತೆರಿಗೆ ಹೆಚ್ಚಾಗಿ ಮಾಡವುದುಕ್ಕೆ ಆಗದಿದ್ದರೂ, ನಮ್ಮ ಟಾರ್ಗೆಟ್ ರೀಚ್ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು. ನಮ್ಮ ತೆರಿಗೆ ಪಾಲು 7 ಸಾವಿರ ಕೋಟಿ, 13 ಸಾವಿರ ಕೋಟಿ ಕೇಂದ್ರ ಸರ್ಕಾರದ ಸಹಾಯಧನ, ಎರಡು ಸೇರಿಸಿದ್ರೇ 50 ಸಾವಿರ ಕೋಟಿ. ನಮಗೆ ಬಹಳ ದೊಡ್ಡ ಮೋಸವಾಗಿದೆ. ಇಲ್ಲಿದ್ದಂತ ಬೇಜವಾಬ್ದಾರಿ ಸರ್ಕಾರ 15ನೇ ಹಣಕಾಸು ಯೋಜನೆಯ ವೇಳೆ ಸಮರ್ಥವಾಗಿ ವಾದ ಮಂಡಿಸಲಾಗದೇ, ನಾವು ಕಟ್ಟುತ್ತಿರುವಂತ ನಮ್ಮ ಪಾಲು ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿಗಳಾಗಿವೆ. ಆದ್ರೇ ನಮಗೆ ಬರಬೇಕಾದಂತ ಹಣವನ್ನು ಕೇಂದ್ರ ಸರ್ಕಾರ ನೀಡದೆ ಅನ್ಯಾಯ ಮಾಡಿದೆ ಎಂದರು.
ಹದಿನೈದನೇ ಹಣಕಾಸು ಆಯೋಗದಿಂದ 5,495 ಕೋಟಿಗಳನ್ನು ವಿಶೇಷವಾಗಿ ಕರ್ನಾಟಕಕ್ಕೆ ಕೊಡಬೇಕು ಎಂಬುದಾಗಿ ರೆಕಮೆಂಡ್ ಮಾಡಿದೆ. ಆದ್ರೇ ಈ ಸರ್ಕಾರ ಅದನ್ನು ತೆಗೆದುಕೊಳ್ಳಲಿಲ್ಲ. 25 ಜನ ಸಂಸದರಿರುವವರು ಕೇಳಲಿಲ್ಲ. ಕೇಂದ್ರ ಸಚಿವರು ಕೇಳಲಿಲ್ಲ. ಬಸವಾಜ ಬೊಮ್ಮಾಯಿ ಜಿಎಸ್ಟಿ ಕಮೀಷನ್ ಸದಸ್ಯರು. ಅವರು ಕೂಡ ಈ ಬಗ್ಗೆ ಮಾತನಾಡಲಿಲ್ಲ. ನಮಗೆ 4 ಲಕ್ಷ ಕೋಟಿ ರೂಪಾಯಿಗಳನ್ನು ಕಲೆಕ್ಟ್ ಮಾಡಿ. ನಾವು ಕಟ್ಟುವುದನ್ನು ನಮಗೆ ಸರಿಯಾಗಿ ಕೊಡುತ್ತಿಲ್ಲ ಎಂದು ಹೇಳಿದರು. ಕರ್ನಾಟಕದಲ್ಲಿ ನಾನು 2018 ಮಾರ್ಚ್ ವರೆಗೆ ಸಾ 2 ಲಕ್ಷದ 42 ಸಾವಿರ ಕೋಟಿ. ಈಗ 5 ಲಕ್ಷದ 44 ಸಾವಿರ ಕೋಟಿ ಸಾಲವಿದೆ. 2023-24ರಲ್ಲಿ 73 ಲಕ್ಷ ಸಾಲವನ್ನು ತೆಗೆದಿದ್ದಾರೆ. ಸಾಲ ಯಾರ ಅವಧಿಯಲ್ಲಿ ಹೆಚ್ಚು ಆಯ್ತಪ್ಪ ಎಂದರು ಪ್ರಶ್ನಿಸಿದರು.
ನಾಲ್ಕು ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿರುವುದು 3 ಲಕ್ಷ ಸಾವಿರ ಕೋಟಿಯಾಗಿದೆ. ನಾನು ಐದು ವರ್ಷದಲ್ಲಿ 1 ಲಕ್ಷದ 16 ಸಾವಿರ ಕೋಟಿ ಮಾಡಿದ್ದೇನೆ. ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಾರಲ್ಲ. ಈ ದೇಶ ಸಾಲದಲ್ಲಿ ಸುಳಿಯಲ್ಲಿ ಆಗಲಿದೆ ಎನ್ನುತ್ತಾರೆ. ನಾನು ಹೇಳುತ್ತೇನೆ ರಾಜ್ಯವಲ್ಲು ಸಾಲದ ಸುಳಿಯಲ್ಲಿ ಬಿಡದೆ ಈ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇನೆ ಎಂದರು. ಮೂರು ಲಕ್ಷದ 25 ಸಾವಿರ ಕೋಟಿ ಬಜೆಟ್ ಅನ್ನು ಜುಲೈನಲ್ಲಿ ನಮ್ಮ ಸರ್ಕಾರದಿಂದ ಮಂಡಿಸುತ್ತೇವೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ 50 ಸಾವಿರ ಕೋಟಿ ಬೇಕಾಗಿದೆ. ನಂ.1 ಗೃಹ ಜ್ಯೋತಿ 200 ಯೂನಿಟ್ ವಿದ್ಯುತ್ ಫ್ರೀಯಾಗಿ ಕೊಡುತ್ತೇವೆ. ಅದು ಸುಮಾರು ಒಂದು ತಿಂಗಳಿಗೆ ಸುಮಾರು ಸಾವಿರದ ಇನ್ನೂರು ಕೋಟಿ ಆಗಬಹುದು. ನಂ.2 ಗೃಹ ಲಕ್ಷ್ಮೀ ಗ್ಯಾರಂಟಿಯಡಿ ಪ್ರತಿ ಮನೆಯ ಒಡತಿಗೆ 2000 ರೂಪಾಯಿಗಳನ್ನು ಅವರ ಅಕೌಂಟ್ ಗೆ ಪ್ರತಿ ತಿಂಗಳು ಹಾಕುತ್ತೇವೆ. ನಂ.3 ಅನ್ನಭಾಗ್ಯ ಸ್ಕೀಮ್. ನಾವು ಹಿಂದೆ 7 ಕೆಜಿ ಅಕ್ಕಿ ಕೊಡುತ್ತಿದ್ದೆವು. 10 ಕೆಜಿ ಮಾಡುತ್ತೇವೆ ಅಂತ ಹೇಳಿದ್ದೆವು. ನಂ.4 ಈ ವರ್ಷ ಯಾರು ಪದವೀಧರ ನಿರುದ್ಯೋಗಿ ಯುವಕರು ಇರುತ್ತಾರೆ ಅವರಿಗೆ ಎರಡು ವರ್ಷದವರೆಗೆ ತಿಂಗಳಿಗೆ 3,000 ಕೊಡುತ್ತೇವೆ ಎಂದು ಘೋಷಿಸಿದರು.
ಡಿಪ್ಲೋಮಾ ಪಾಸ್ ಮಾಡಿದಂತ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 1,500 ನೀಡುತ್ತೇವೆ. ನಂ.5 ಸರ್ಕಾರಿ ಬಸ್ಸಿನಲ್ಲಿ ಓಡಾಡುವಂತ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಅದು ಕರ್ನಾಟಕದ ಮಹಿಳೆಯರಿಗೆ ಮಾತ್ರವಾಗಿದೆ. ಬೇರೆ ರಾಜ್ಯದ ಮಹಿಳೆಯರಿಗೆ ಇದು ಅನ್ವಯವಾಗುವುದಿಲ್ಲ. ಈ ಎಲ್ಲಾ ಯೋಜನೆಗಳಿಗೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದೇವೆ. ಆದೇಶವನ್ನು ಹೊರಡಿಸಲು ಸೂಚಿಸಲಾಗಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಡೀಟೆಲ್ಸ್ ಮಾಹಿತಿಯನ್ನು ನೀಡಲಾಗುತ್ತದೆ. ಈ ಎಲ್ಲಾ ಗ್ಯಾರಂಟಿಗಳನ್ನು ಜನರಿಗೆ ನೀಡಿದ್ದೇವೆ.ಮಾಡೇ ಮಾಡುತ್ತೇವೆ ಎಂದರು.
ಮುಂದಿನವಾರ ಮತ್ತೊಂದು ಸಚಿವ ಸಂಪುಟ ಸಭೆಯನ್ನು ನಡೆಸಲಾಗುತ್ತದೆ. ಈಗ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗಾಗಿ ಇಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ತಾತ್ವಿಕ ಒಪ್ಪಿಗೆ ಸೂಚಿಸಲಾಗಿದೆ. ಎಷ್ಟೇ ದುಡ್ಡು ಆಗಲಿ ಈ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತದೆ. ಮುಂದಿನ ಕ್ಯಾಬಿನೆಟ್ ವೇಳೆಗೆ ಜಾರಿಗೊಳಿಸಲಾಗುತ್ತದೆ ಎಂದು ಘೋಷಿಸಿದರು. ಸೋಮವಾರ, ಮಂಗಳವಾರ, ಬುಧವಾರ ಮೂರು ದಿನ ಸಂಸತ್ ಅಧಿವೇಶನವನ್ನು ಕರೆಯಲಾಗುತ್ತಿದೆ. 24ನೇ ತಾರೀಕಿನ ಒಳಗಾಗಿ ಹೊಸ ಸಂಪುಟ ಅನುಮೋದನೆ ಪಡೆಯಲಾಗುತ್ತಿದೆ. ಈಗ ಹಂಗಾಮಿ ಸ್ಪೀಕರ್ ಆಗಿ ಆರ್ ವಿ ದೇಶಪಾಂಡೆ ಅವರನ್ನು ಕೋರಲಾಗಿದೆ ಎಂದರು.