ಸಿಎಎ ಪ್ರತಿಭಟನಕಾರರಿಂದ ನಷ್ಟ ವಸೂಲಿ: ಸುಪ್ರೀಂ ಕೋರ್ಟ್‌ನಿಂದ ಯುಪಿ ಸಿಎಂ ಯೋಗಿ ಸರ್ಕಾರಕ್ಕೆ ತರಾಟೆ

ನವದೆಹಲಿ: 2019 ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿ ನಷ್ಟಕ್ಕೆ ಪರಿಹಾರವಾಗಿ ವಸೂಲು ಮಾಡಿದ್ದ ಕೋಟ್ಯಂತರ ರೂಪಾಯಿ ಹಿಂದಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.

ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಸುವಲ್ಲಿ ಉತ್ತರ ಪ್ರದೇಶ ಸರ್ಕಾರ “ತೀರ್ಪುಗಾರ ಮತ್ತು ಪ್ರಾಸಿಕ್ಯೂಟರ್” ನಂತೆ ವರ್ತಿಸಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠ ಹೇಳಿದೆ.

2019ರ ಪ್ರತಿಭಟನೆಗೆ ಸಂಬಂಧಿಸಿ ಆಸ್ತಿ ನಷ್ಟ ಭರಿಸಲು ಸಿಎಎ ವಿರೋಧಿ ಹೋರಾಟಗಾರರ ವಿರುದ್ಧದ ಕ್ರಮವು ಕಾನೂನಿಗೆ ವಿರುದ್ಧವಾದುದು ಎಂದು ಸುಪ್ರೀಂ ಕೋರ್ಟ್‌ ಫೆಬ್ರವರಿ 11ರಂದು ಅಭಿಪ್ರಾಯಪಟ್ಟಿದ್ದು, ತನಿಖೆಯನ್ನು ಕೈಬಿಡಬೇಕು ಎಂದು ತಾಕೀತು ಮಾಡಿತ್ತು.

“ಈ ಪ್ರಕ್ರಿಯೆಗಳನ್ನು ಹಿಂತೆಗೆದುಕೊಳ್ಳಿ ಅಥವಾ ಈ ನ್ಯಾಯಾಲಯವು ನಿಗದಿಪಡಿಸಿದ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ಅದನ್ನು ರದ್ದುಗೊಳಿಸುತ್ತೇವೆ. ನೀವು ಕಾನೂನಿನ ಅಡಿಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಬೇಕುʼʼ ಎಂದು ಅಂದು ನ್ಯಾಯಾಲಯ ಹೇಳಿತ್ತು.

ಪ್ರಕರಣದ ಇಂದಿನ ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರವು, ‘ಸಿಎಎ ವಿರೋಧಿ ಹೋರಾಟಗಾರರಿಗೆ ಆಸ್ತಿ ನಷ್ಟದ ವಸೂಲಿ ಕುರಿತಂತೆ ನೀಡಲಾಗಿದ್ದ ಒಟ್ಟು 274 ನೋಟಿಸ್‌ಗಳನ್ನು ಹಿಂಪಡೆಯಲಾಗಿದೆ’ ಎಂದೂ ನ್ಯಾಯಪೀಠಕ್ಕೆ ತಿಳಿಸಿತು. ವಸೂಲಾಗಿರುವ ಹಣದ ವಾಪಸಾತಿ ಬದಲಿಗೆ, ಕ್ಲೇಮು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲು ಪ್ರತಿಭಟನಕಾರರಿಗೆ ತಿಳಿಸಬಹುದು ಎಂದು ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಗರಿಮಾ ಪ್ರಸಾದ್ ಸಲಹೆ ಮಾಡಿದರು.

ಆದರೆ, ಇದನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಸೂರ್ಯಕಾಂತ್‌ ಅವರಿದ್ದ ಪೀಠವು ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿತು. ‘ಈ ತನಿಖೆಯು ಸುಪ್ರೀಂ ಕೋರ್ಟ್‌ ಜಾರಿಗೊಳಿಸಿದ್ದ ನಿಯಮಗಳಿಗೆ ವಿರುದ್ಧವಾದುದಾಗಿದೆ. ಇದು, ಸಿಂಧುವಾಗುವುದಿಲ್ಲ’ ಎಂದೂ ಪೀಠ ಹೇಳಿತ್ತು.

ನ್ಯಾಯಮೂರ್ತಿ ಸೂರ್ಯ ಕಾಂತ್, “ಈ ಮನವಿಯು ಡಿಸೆಂಬರ್ 2019 ರಲ್ಲಿ ಒಂದು ರೀತಿಯ ಆಂದೋಲನ ಅಥವಾ ಪ್ರತಿಭಟನೆಗೆ ಸಂಬಂಧಿಸಿದಂತೆ ಕಳುಹಿಸಲಾದ ನೋಟಿಸ್‌ಗಳಿಗೆ ಸಂಬಂಧಿಸಿದೆ. ಯುಪಿಯಂತಹ ದೊಡ್ಡ ರಾಜ್ಯದಲ್ಲಿ 274 ನೋಟಿಸ್‌ಗಳು ದೊಡ್ಡ ವಿಷಯವಲ್ಲ, ನೀವು ಇದಕ್ಕೆ ಉತ್ತರ ನೀಡದಿದ್ದರೆ. ನಂತರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ. ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಹೇಗೆ ಅನುಸರಿಸಬೇಕು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ” ಎಂದಿದ್ದಾರೆ.

ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಪರಿಹಾರ ವಸೂಲಿ ಕುರಿತು ಜಿಲ್ಲಾಡಳಿತವು ನೀಡಿದ್ದ ನೋಟಿಸ್‌ಗಳನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿ ಪರ್ವೇಜ್‌ ಆರೀಫ್ ಟಿಟು ಅವರು ಅರ್ಜಿ ಸಲ್ಲಿಸಿದ್ದರು. ನೋಟಿಸ್‌ಗಳನ್ನು ನೀಡಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಆರು ವರ್ಷಗಳ ಹಿಂದೆ 94 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಮತ್ತು 90 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ಸೇರಿದಂತೆ ಇತರ ಹಲವರಿಗೆ ನೋಟಿಸ್ ಕಳುಹಿಸಿರುವ ನಿದರ್ಶನಗಳನ್ನು ಉಲ್ಲೇಖಿಸಲಾಗಿದೆ.

833 ಗಲಭೆಕೋರರ ವಿರುದ್ಧ 106 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 274 ವಸೂಲಿ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಗರಿಮಾ ಪ್ರಸಾದ್ ಹೇಳಿದರು. “274 ನೋಟಿಸ್‌ಗಳಲ್ಲಿ 236 ರಲ್ಲಿ ವಸೂಲಾತಿ ಆದೇಶಗಳನ್ನು ರವಾನಿಸಲಾಗಿದೆ ಮತ್ತು 38 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ” ಎಂದು ಯುಪಿ ಸರ್ಕಾರದ ವಕೀಲರು ಹೇಳಿದ್ದಾರೆ.

ಉತ್ತರ ಪ್ರದೇಶದ ಬುಲಂದ್‌ ಶಹರ್‌ನ ಕೆಲವು ನಿವಾಸಿಗಳು ಜಿಲ್ಲಾಡಳಿತಕ್ಕೆ 6.27 ಲಕ್ಷ ರೂ. ದಂಡ ಪಾವತಿಸಿದ್ದಾರೆ. ಅಲ್ಲದೇ ಇನ್ನುಮುಂದೆ ಈ ರೀತಿಯ ಹಿಂಸಾತ್ಮಕ ಪ್ರತಿಭಟನೆ ನಡೆಸುವುದಿಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುವುದಿಲ್ಲ ಎಂದು ಮುಚ್ಚಳಿಕೆ ಕೂಡ ಬರೆದುಕೊಟ್ಟಿದ್ದಾರೆ. ಬುಲಂದ್‌ಶಹರ್‌ನ ಉಪ್ಪಿಕೊಟ್‌ ಬಡಾವಣೆಯಲ್ಲಿ ಅತಿ ಹಿಂಸಾತ್ಮಕ ಪ್ರತಿಭಟನೆ 2019 ಡಿಸೆಂಬರ್‌ 20ರಂದು ನಡೆದಿತ್ತು. ಈ ವೇಳೆ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಭಾರಿ ಹಾನಿಯಾಗಿತ್ತು.

ಆದರೆ, ಈ ಬಡಾವಣೆಯ ಜನರಿಗೆ ಸರಕಾರದಿಂದ ಯಾವುದೇ ನೋಟಿಸ್‌ ಬಂದಿರಲಿಲ್ಲ. ಇತರೆಡೆ ನೋಟಿಸ್‌ ಜಾರಿಯಾಗಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡು ಬಡಾವಣೆಯ ನಿವಾಸಿಗಳು ಸಭೆ ಸೇರಿದ್ದರು.

Donate Janashakthi Media

Leave a Reply

Your email address will not be published. Required fields are marked *