ಬೆಂಗಳೂರು : 40% ಕಮೀಷನ್ ಆರೋಪ ಬಿಜೆಪಿ ಸರ್ಕಾರ ಪತನಗೊಳ್ಳಲು ಕಾರಣವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಆಡಳಿತದ ಅವಧಿಯಲ್ಲಿನ ಎಲ್ಲ ಹಗರಣಗಳನ್ನು ತನಿಖೆ ಮಾಡುವುದಾಗಿ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿತ್ತು.
40% ಕಮೀಷನ್ ನಡೆದಿದೆ ಎಂಬುದಕ್ಕೆ ಪುರಾವೆ ಸಮೇತ ತೋರಿಸಬೇಕು. ಕಾಂಗ್ರೆಸ್ ಸರ್ಕಾರ 40% ಆರೋಪ ಕುರಿತ ಎಲ್ಲ ದಾಖಲೆ ಕೊಡಲಿ. ನಾವು 40% ಕಮಿಷನ್ ತೆಗೆದುಕೊಂಡಿದ್ದೇವೆ ಎಂಬುದನ್ನು ದಾಖಲೆ ಸಹಿತ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದರು. 40% ಕಮೀಷನ್‌ಗೆ ಸಾಕ್ಷಿ ಎಂಬಂತೆ ಮಾಜಿ ನಗರಾಭಿವೃದ್ಧಿ ಸಚಿವರ ಕ್ಷೇತ್ರದಲ್ಲಿ ಎಲ್ಲಂದರಲ್ಲಿ ರಸ್ತೆ ಗುಂಡಿಗಳು ಕಂಡು ಬರುತ್ತಿವೆ.
ಇದನ್ನೂ ಓದಿ : ಕಾರ್ಮಿಕರ ಬದುಕಿನ ಜೊತೆ ಚಲ್ಲಾಟವಾಡಿದ ಡಬಲ್ ಎಂಜಿನ್ ಸರ್ಕಾರವನ್ನು ಕಿತ್ತೆಸೆಯಬೇಕು : ಬೃಂದಾ ಕಾರಟ್
ಹೌದು, ಕೆ.ಆರ್.ಪುರಂ ಶಾಸಕ, ಮಾಜಿ ಸಚಿವ ಬೈರತಿ ಬಸವರಾಜ್‌ರವರ ಕ್ಷೇತ್ರದಲ್ಲಿ ಈಗ ರಸ್ತೆ ಗುಂಡಿಗಳದ್ದೆ ಕಾರ್ಬಾರು. ಕೆ.ಆರ್.ಪುರಂನ ವಿನಾಯಕ ನಗರದ ಮಾರಿಯಮ್ಮ ದೇವಸ್ಥಾನದ ಸುತ್ತಮುತ್ತ ಇಂತಹ ರಸ್ತೆಗುಂಡಿಗಳನ್ನು ನೋಡಬಹುದಾಗಿದೆ. ಇದು ಮಳೆಗಾಲ ಆಗಿರುವ ಕಾರಣ ಈ ರಸ್ತೆಗುಂಡಿ ಅನಾಹುತವನ್ನು ಸೃಷ್ಟಿಸಲಿದೆ. ಶಾಸಕರ ಗಮನಕ್ಕೆ ತಂದಿದ್ದೇವೆ ಆದರೆ ಅವರು ಇತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಚುನಾವಣಾ ಸಮಯದಲ್ಲಿ ಮತದಾರರನ್ನು ಓಲೈಸುವುದಕ್ಕಾಗಿ ರಸ್ತೆ ನಿರ್ಮಾಣಕ್ಕೆ ತೇಪೆ ಹಚ್ಚುವ ಕೆಲಸ ನಡೆದಿತ್ತು, ಆಗಲೆ ಇದನ್ನು ವಿರೋಧಿಸಿದ್ದೇವು, ಅಭಿವೃದ್ಧಿ ಸಹಿಸದವರು ಹೀಗೆಲ್ಲ ಆರೋಪ ಮಾಡುತ್ತಾರೆ ಎಂದು ಮಾಜಿ ಸಚಿವರು ತಮ್ಮ ಬೆನ್ನನ್ನು ತಾವೆ ತಟ್ಟಿಕೊಂಡಿದ್ದರು. ಇವರ ಅಭಿವೃದ್ಧಿ ಕೆಲಸ ಎಂತದ್ದು ಎಂದು ಎರಡು ತಿಂಗಳಲ್ಲಿ ಬಹಿರಂಗ ಗೊಂಡಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಆರೋಪಿಸಿದ್ದಾರೆ.
ಶಾಸಕರು, ಇನ್ನಾದರೂ ಇತ್ತ ಗಮನ ಹರಿಸಿ ಅಪಾಯವನ್ನು ತಪ್ಪಿಸಲು ಮುಂದಾಗಬೇಕಿದೆ. ಇಲ್ಲವಾದಲ್ಲಿ ವಾಹನ ಸವಾರರು, ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗುವ ಸಾಧ್ಯತೆ ಇದೆ.