ಸಾರಿಗೆ ನೌಕರರು ಕೆಲಸಕ್ಕೆ ಬಾರದಿದ್ದರೆ ಪರ್ಯಾಯ ವ್ಯವಸ್ಥೆ ಸಿದ್ದವಿದೆ : ಲಕ್ಷ್ಮಣ ಸವದಿ
ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸಿನಂತೆ ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ ಒಂದು ತಾಸಿನಲ್ಲಿ ಮುಷ್ಕರ ಕೈ ಬಿಡುತ್ತೇವೆ ಎಂದು ಕೆಎಸ್‌ಆರ್ ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಆರ್. ಹೇಳಿದ್ದಾರೆ.
ಆದೇಶದ ಪತ್ರ ನಮ್ಮ ಕೈ ಸೇರುವವರೆಗೂ ನಾವು ಯಾವುದೇ ಕಾರಣಕ್ಕೂ ಈ ಸಲ ಪ್ರತಿಭಟನೆ ಕೈ ಬಿಡುವುದಿಲ್ಲ. ಸರ್ಕಾರದ ತಂತ್ರಗಳಿಗೆ ಮಣಿಯುವುದಿಲ್ಲ ಎಂದು ತಿಳಿಸಿರುವ ಚಂದ್ರಶೇಖರ್, ಸರ್ಕಾರದ ಮನವಿಗೆ ಸ್ಪಂದಿಸಿ ಈ ಹಿಂದೆ ಹೋರಾಟ ಕೈ ಬಿಟ್ಟಿದ್ದೆವು. ಸರ್ಕಾರ ಕೊಟ್ಟ ಭರವಸೆ ಈಡೇರಿಸಲಿಲ್ಲ. ಈ ಭಾರಿ ನಾವು ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಲೇಬೇಕು. ಅಲ್ಲಿಯ ವರೆಗೂ ಹೋರಾಟ ನಡೆಸುತ್ತೇವೆ. ನಮಗೂ ಹೋರಾಟ ನಡೆಸಿ ಜನರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಆದರೆ, ನೌಕರರ ಕಷ್ಟವನ್ನು ಇಲಾಖೆ ಅರ್ಥ ಮಾಡಿಕೊಳ್ಳುತ್ತಿಲ್ಲ, ರಾಜ್ಯ ಸರ್ಕಾರ ತಾರತಮ್ಯ ನೀತಿಯನ್ನು ಬಿಡಬೇಕು. ಆರನೇ ವೇತನ ಆಯೋಗದಂತೆ ವೇತನ ನೀಡಬೇಕು. ಇದು ನಮ್ಮ ಮುಖ್ಯ ಬೇಡಿಕೆ. ಎಸ್ಮಾ ಜಾರಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿಲ್ಲ, ಸರಕಾರ ಜಾರಿ ಮಾಡಿದರೂ ನಾವು ಜಗ್ಗುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಎಸ್ಮಾ ಎಂದರೇನು? ಜಾರಿಯಾದ್ರೆ ಏನಾಗುತ್ತೆ??
ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನಮ್ಮ ಹೋರಾಟ ಶಾಂತಿಯುತವಾಗಿ ಮುಂದುವರಿಯುತ್ತೆ. ಮುಷ್ಕರದ ವೇಳೆ ಕೊರೊನಾ ನಿಯಮ ಸಹ ಉಲ್ಲಂಘಿಸಿಲ್ಲ. ಇದೇ ರೀತಿ, ನಾಳೆಯೂ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸಲಾಗುತ್ತೆ ಎಂದು ಹೇಳಿದರು. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಕೊರೊನಾ ಆರ್ಥಿಕ ಸಂಕಷ್ಟ ಎಂದು ರಾಜ್ಯ ಸರ್ಕಾರ ಹೇಳುತ್ತೆ. ಕೊರೊನಾ ನಡುವೆಯೂ ಮಠ, ಮಂದಿರಕ್ಕೆ ಹಣ ನೀಡಿಲ್ಲವೇ? ಅರ್ಧ ಸಂಬಳ ನೀಡಿ ಕೆಲಸ ಮಾಡಿಸಿಕೊಳ್ಳುವುದು ಸರಿಯೇ? ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಾಲ್ಕು ನಿಗಮದ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಈಗಾಗಲೇ ಹೇಳಿದ್ದಾರೆ. ಏತನ್ಮಧ್ಯೆ ಮುಷ್ಕರಕ್ಕಿಳಿದಿರುವ ನೌಕರರಿಗೆ ಮಾರ್ಚ್ ತಿಂಗಳದ ವೇತನ ಕಡಿತ ಮಾಡುವುದಾಗಿ ಹೇಳುತ್ತಿದೆ. ಸರಕಾರಕ್ಕೆ ನೈತಿಕತೆ ಇಲ್ಲವೆ? ಬೇಡಿಕೆ ಈಡೇರಿಸುವ ಬದಲು ಬೆದರಿಸುವ ಕೆಲಸ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದ್ದಾರೆ.
ಬಸವಕಲ್ಯಾಣ : ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಲಕ್ಷ್ಮಣ ಸವದಿ.. ಇಲ್ಲಿವರೆಗೂ ನಾವು ಏನು ಹೇಳಬೇಕೋ ಹೇಳಿದ್ದೇವೆ. ಎಲ್ಲಿವರೆಗೂ ಅವರು ಕರ್ತವ್ಯಕ್ಕೆ ಬರೋದಿಲ್ಲವೋ ಅಲ್ಲಿವರೆಗೂ ನಾವು ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಸವಕಲ್ಯಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಟ್ರೇಡ್ ಯೂನಿಯನ್ ಅವರು ಮಾತುಕತೆಗೆ ಕೇಳಿದ್ದಾರೆ ಅವರ ಜೊತೆ ಮಾತಾಡುತ್ತೇನೆ. ಖಾಸಗಿ ಬಸ್ಗಳನ್ನ ತರುತ್ತಿದ್ದೇವೆ, ಖಾಸಗಿ ಬಸ್ಗಳನ್ನ ಪ್ರಾರಂಭ ಮಾಡಿದ್ದೇವೆ. ನಾಳೆ ಮತ್ತೆ 10 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ಗಳು ಸಂಚಾರ ಮಾಡುತ್ತವೆ. ಮುಷ್ಕರ ನಿರತ ಸಾರಿಗೆ ನೌಕರರು ಸಹ ಸಭೆ ಕರೆದಿಲ್ಲ, ಸಭೆ ನಾವು ಕರಿಯೋಣ ಎಂದರೆ ಅವರು ಬರಲು ಸಿದ್ಧರಿದ್ದೇವೆ ಅಂತಾ ಹೇಳಿಲ್ಲ, ಹೀಗಾಗಿ ಮಾತುಕತೆಯ ಪ್ರಮೇಯವೇ ಇಲ್ಲ. ಬಸ್ಗಳ ಮೇಲೆ ಕಲ್ಲು ತೂರಾಟ ಮಾಡಿದ್ರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ.
ಸಿಎಂ ಅವರು ಪ್ರವಾಸದಲ್ಲಿ ಇದ್ದಾರೆ, ನಾನೂ ಪ್ರವಾಸದಲ್ಲಿದ್ದೇನೆ. ಈ ಕುರಿತು ಸಭೆ ಮಾಡುವ ಬಗ್ಗೆ ಯಾವುದೇ ತಿರ್ಮಾನವೂ ಆಗಿಲ್ಲ.. ಎಲ್ಲಿವರೆಗೂ ಅವರು ಕರ್ತವ್ಯಕ್ಕೆ ಬರೋದಿಲ್ಲವೋ ಅಲ್ಲಿವರೆಗೂ ನಾವು ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದು ಸವದಿ ತಿಳಿಸಿದ್ದಾರೆ.