ಸಾವಿನ ಭಯ ಹುಟ್ಟಿಸಿ ಹಣ, ಚಿನ್ನ ದೋಚಿದ್ದ ಬುಡುಬುಡಿಕೆದಾಸ ಬಂಧನ

ಬೆಂಗಳೂರು : ಸಾವಿನ ಮನೆಯಲ್ಲಿ ಮತ್ತೆ ಸಾವಾಗುವ ಭಯ ಹುಟ್ಟಿಸಿ ದೋಷ ಪರಿಹಾರದ ನೆಪದಲ್ಲಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖತರ್ನಾಕ್‌ ವ್ಯಕ್ತಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆ ಹೆಗ್ಗನಹಳ್ಳಿ ಕ್ರಾಸ್‌ ನಿವಾಸಿ ಆನಂದ ಅಲಿಯಾಸ್‌ ಬುಡುಬುಡುಕೆ ಕೃಷ್ಣಪ್ಪ (36) ಬಂಧಿತ. ಈತನಿಂದ , 2 ಲಕ್ಷ ಮೌಲ್ಯದ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಆ.13 ರಂದು ಜ್ಞಾನಭಾರತಿ 2ನೇ ಹಂತ ಕೆಪಿಎಸ್‌ಸಿ ಲೇಔಟ್‌ನ ನಿವೃತ್ತ ಕೇಂದ್ರ ಸರ್ಕಾರಿ ನೌಕರ ವರದರಾಜು ಎಂಬುವವರ ಪತ್ನಿಗೆ ವಂಚಿಸಿ ಆನಂದ್ ಪರಾರಿ ಆಗಿದ್ದ. ಬುಡುಬುಡಿಕೆ ಹಿನ್ನೆಲೆಯ ಆರೋಪಿ ಆನಂದ್‌, ನಗರದ ವಿವಿಧೆಡೆ ಸುತ್ತಾಡುತ್ತಿದ್ದ. ದೂರುದಾರ ವರದರಾಜು ಅವರ ತಂದೆ ಆ.6ರಂದು ನಿಧನರಾಗಿದ್ದರು. ಸಾಂಪ್ರದಾಯದಂತೆ ಮನೆ ಎದುರು ದೀಪ ಹಚ್ಚಿದ್ದರು. ಆ.13ರ ಮುಂಜಾನೆ 4ಕ್ಕೆ ಬುಡಬುಡಿಕೆ ಆನಂದ್‌, ವರದರಾಜು ಮನೆ ಬಳಿ ಬಂದು ‘ಈ ಮನೆಯಲ್ಲಿ ಒಂದು ಸಾವು ಆಗಿದೆ. ಇನ್ನೂ ಮೂರು ಸಾವು ಆಗುತ್ತವೆ’ ಎಂದು ಕೂಗಿದ್ದ. ಬೆಳಗ್ಗೆ 9.30ಕ್ಕೆ ವರದರಾಜು ಮನೆ ಬಳಿ ಬಂದ ಆನಂದ, ವರದರಾಜು ಪತ್ನಿ ಒಬ್ಬರೇ ಇರುವುದನ್ನು ಗಮನಿಸಿ ಮನೆಯಲ್ಲಿ ಇನ್ನೂ ಮೂರು ಸಾವುಗಳಾಗಲಿವೆ ಎಂದು ಭಯಪಡಿಸಿದ್ದ. ಈ ಸಾವುಗಳನ್ನು ತಪ್ಪಿಸಲು ಒಂದು ಪೂಜೆ ಮಾಡಿಸಬೇಕು. ಅದಕ್ಕೆ .5 ಸಾವಿರ ಖರ್ಚಾಗಲಿದೆ ಎಂದಿದ್ದ.

ಈತನ ಮಾತು ನಂಬಿದ್ದ ವರದರಾಜು ಪತ್ನಿ, ಪೂಜೆ ಮಾಡಿಸಲು ಒಪ್ಪಿ, ಪೂಜೆಗೆ .5 ಸಾವಿರ ಕೊಟ್ಟಿದ್ದರು. ಈ ವೇಳೆ ಆಕೆ ಹಣೆಗೆ ಕಪ್ಪು ಬೊಟ್ಟು ಇರಿಸಿ, ಆಕೆಯಿಂದ ಚಿನ್ನದ ಓಲೆ, ಚಿನ್ನದ ಸರ ಪಡೆದು, ಆ.14ರಂದು ಮಧ್ಯಾಹ್ನ 12ಕ್ಕೆ ಪೂಜೆ ಮಾಡಿ ಆಭರಣ ವಾಪಾಸ್‌ ಕೊಡುವುದಾಗಿ ಹೇಳಿ ನಕಲಿ ಮೊಬೈಲ್‌ ಸಂಖ್ಯೆ ನೀಡಿ ತೆರಳಿದ್ದ. ಬಳಿಕ ವರದರಾಜು ಮನೆಗೆ ಬಂದಾಗ ಪತ್ನಿ ವಿಷಯ ಹೇಳಿದ್ದರು.

ದೂರು ಆಧರಿಸಿ ತನಿಖೆಗೆ ಇಳಿದ ಪೊಲೀಸರು, ಬುಡಬುಡಿಕೆ ಜನ ಎಲ್ಲಿ ಹೆಚ್ಚು ವಾಸ ಆಗಿದ್ದಾರೆ ಎಂದು ಸುತ್ತಮುತ್ತಲ ಪ್ರದೇಶದಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಹೆಗ್ಗನಹಳ್ಳಿ ಕ್ರಾಸ್‌ ನೀಲಗಿರಿ ತೋಪು ಬಳಿ ಕೆಲ ಬುಡುಬುಡಿಕೆ ಜನರು ವಾಸ ಆಗಿರುವ ಮಾಹಿತಿ ಸಿಕ್ಕಿದೆ. ಇದರಲ್ಲಿ ಹೆಚ್ಚು ಸಕ್ರಿಯ ಆಗಿರುವ ವ್ಯಕ್ತಿ ಯಾರೆಂದು ತಿಳಿದು ಆತನ ಫೋಟೋ ಮತ್ತು ಮೊಬೈಲ್‌ ನಂಬರ್‌ ಪಡೆದು ಪರಿಶೀಲಿಸಿದಾಗ, ಆ.13ರಂದು ಆರೋಪಿ ಆನಂದ್‌, ವರದರಾಜು ಮನೆಯ ಬಳಿ ಬಂದಿರುವ ಬಗ್ಗೆ ಮೊಬೈಲ್‌ ಸಿಗ್ನಲ್‌ ಲಭ್ಯವಾಗಿದೆ. ಇದರ ಆಧಾರದ ಮೇಲೆ ಆನಂದ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾನೆ.

Donate Janashakthi Media

Leave a Reply

Your email address will not be published. Required fields are marked *