ಬೆಂಗಳೂರು : ಈ ಬಾರಿಯ ಬಜೆಟ್ ನಲ್ಲಿ ಏನೂ ಇಲ್ಲ. ತಿರುಗು ಮುರುಗು ಮಾಡಿ ಅದೇ 10 ವರ್ಷಗಳ ಬಜೆಟ್‌ನ ಮಂಡಿಸಿದ್ದಾರೆ. ಅದೇ ಯೋಜನೆ, ಅದೇ ಅನುದಾನ. ಹಣಕಾಸು ಇಲಾಖೆ ಅಧಿಕಾರವನ್ನು ತಾವೇ ಇಟ್ಟುಕೊಂಡಿದ್ದರು ಸಂತೃಪ್ತಿಯ ಬಜೆಟ್ ನೀಡುವಲ್ಲಿ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾಪರಿಷತ್ ವಿತ್ತೀಯ ಕಲಾಪದ ವೇಳೆ ಬುಧವಾರ ಅವರು, ‘ಹಣಕಾಸು ಖಾತೆ ನಿಭಾಯಿಸಿರುವ ಕುಮಾರಸ್ವಾಮಿ, ಯಡಿಯೂರಪ್ಪ ಹಲವು ಬಾರಿ ಬಜೆಟ್ ಮಂಡಿಸಿದ್ದಾರೆ. ಹಾಗಂತ, ಅವರು ಆರ್ಥಿಕ ತಜ್ಞರಲ್ಲ. ಆರ್ಥಿಕ ಖಾತೆಗೆಂದೇ ಪ್ರತ್ಯೇಕ ಸಚಿವರು ಬೇಕು’ ಎಂದು ಪ್ರತಿಪಾದಿಸಿದರು. 33 ಇಲಾಖೆಗಳಲ್ಲಿ ಹಣಕಾಸು, ಡಿಪಿಎಆರ್, ಕಾನೂನು ಈ ಮೂರು ಅತಿ ಮುಖ್ಯವಾದ ಖಾತೆಗಳು. ಆದರೆ ಈ ಮೂರರಲ್ಲಿ ಹಣಕಾಸು, ಡಿಪಿಎಆರ್ ಖಾತೆಗಳು ಮಯಖ್ಯೆಮಂತ್ರಿಗಳು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳನ್ನು ಮುಖ್ಯಮಂತ್ರಿ ಇಟ್ಟುಕೊಳ್ಳಬಾರದು, ಖಾತೆಗಳನ್ನು ಸರಿಯಾಗಿ ನಿಭಾಯಿಸಲು ಕಷ್ಟವಾಗುತ್ತದೆ. ಆದರೆ ನಮ್ಮ ಮುಖ್ಯಮಂತ್ರಿ ಏಕೆ ಇಷ್ಟೊಂದು ಖಾತೆ ಇಟ್ಟು-ಕೊಂಡಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು .
ಮೈತ್ರಿ ಸರ್ಕಾರ ಅವಧಿಯಲ್ಲಿ ಹಣಕಾಸು ಖಾತೆಯನ್ನು ಬೇರೆಯವರಿಗೆ ಕೊಡಿ ಎಂದು ಕುಮಾರಸ್ವಾಮಿಗೆ ಕೇಳಿದ್ದೆ. ಇದರಿಂದ ಅವರಿಗೂ ನನಗೂ ಭಿನ್ನಾಭಿಪ್ರಾಯ ಮೂಡಿತ್ತು. ಈ ಹಿಂದೆ ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರಿದ್ದರು. ಈಗ ಮುಖ್ಯಮಂತ್ರಿಯೇ ಅದನ್ನು ನಿಭಾಯಿಸುತ್ತಿದ್ದಾರೆ. ಅವರು ಅದನ್ನು ನಿಭಾಯಿಸಿದರೆ ಅದು ನಿರ್ಜೀವಿಯಾಗುತ್ತದೆ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.